ಓ ಮೆಣಸೇ...
2024ರ ಲೋಕಸಭೆ ಚುನಾವಣೆಯು ಅರವಿಂದ ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ ನಡುವೆ ನಡೆಯುವ ಯುದ್ಧವಾಗಲಿದೆ.-ಮನೀಷ್ ಸಿಸೋಡಿಯ, ದಿಲ್ಲಿ ಡಿಸಿಎಂ
ದೇಶದ ಜನತೆಗೆ ಮತ್ತು ಅವರ ಆಶೋತ್ತರಗಳಿಗೆ ಅದರಲ್ಲೇನಾದರೂ ಪಾತ್ರ ಇದ್ದೀತೇ?
ಯಡಿಯೂರಪ್ಪರನ್ನು ಮೂಲೆ ಗುಂಪು ಮಾಡುವ ಪ್ರಶ್ನೆಯೇ ಇಲ್ಲ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮೂಲೆ ಗುಂಪು ಮಾಡಿ ಕಡೆಗಣಿಸುವುದಕ್ಕೆ ಅವರೇನು ಬೊಮ್ಮಾಯಿಯೇನು?
ಸಿಎಂ ಬೊಮ್ಮಾಯಿ ಮತ್ತು ನಾನು ಅಣ್ಣ-ತಮ್ಮ ಇದ್ದಂತೆ.-ಆರ್.ಅಶೋಕ್, ಸಚಿವ
ಯಾರು ಅಣ್ಣ ಯಾರು ತಮ್ಮ ಎಂಬುದನ್ನು ಈಗಲೇ ಇತ್ಯರ್ಥ ಮಾಡಿಕೊಳ್ಳಿ. ಯುದ್ಧ ಸ್ಫೋಟಕ್ಕೆ ಆ ಕಾರಣವೂ ಸಾಕಾಗಿ ಬಿಡುತ್ತದೆ.
ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಮುಕ್ಕಣ್ಣನಿಗೆ ಮೂರನೇ ಕಣ್ಣು ಇದ್ದಂತೆ -ಸಿ.ಎಂ.ಇಬ್ರಾಹೀಂ, ಜೆಡಿಎಸ್ ರಾಜ್ಯಾಧ್ಯಕ್ಷ
ತನ್ನನ್ನು ನಂಬಿದವರನ್ನು ಮಣ್ಣು ಮುಕ್ಕಿಸುವ ಮುಕ್ಕಣ್ಣನ ದಾಖಲೆಯನ್ನು ಜನ ಮರೆತಿಲ್ಲ.
ಜೀವನದಲ್ಲಿ ವೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಪ್ರತಿಯೊಬ್ಬರಿಗೂ ಗೊತ್ತಿರಬೇಕು -ಎಸ್.ಎಲ್.ಭೈರಪ್ಪ, ಸಾಹಿತಿ
ಅದಕ್ಕೆ ಮನುಸ್ಮತಿಯನ್ನು ಓದಬೇಕು ಅಂತೀರಾ?
ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಯುದ್ಧ ಎಂದಿಗೂ ಪರಿಹಾರವಲ್ಲ.
-ಶಹಬಾಝ್ ಶರೀಫ್, ಪಾಕ್ ಪ್ರಧಾನಿ
ಎಷ್ಟು ಯುದ್ಧಗಳಲ್ಲಿ ಸೋತ ಮೇಲೆ ಮೂಡಿದ ವಿವೇಕ ಇದು?
ಸಿದ್ದರಾಮಯ್ಯರ ಕಾರಿನ ಮೇಲೆ ಡಿಕೆಶಿಯೇ ಮೊಟ್ಟೆ ಹೊಡೆಸಿರಬಹುದು -ನಳಿನ್ ಕುಮಾರ್ ಕಟೀಲು, ಸಂಸದ
ಅವರಿಗೆ ಅವಕಾಶ ಸಿಕ್ಕಿದ್ದರೆ ಅವರೇನು ಕೇವಲ ಮೊಟ್ಟೆಯಲ್ಲಿ ತೃಪ್ತಿ ಪಡುತ್ತಿದ್ದರೇ?
ಕೊಡಗಿಗೆ ಟಿಪ್ಪುಸುಲ್ತಾನ್ ಬಂದಾಗಲೇ ಕೊಡವರು ಹೆದರಲಿಲ್ಲ, ಇನ್ನು ಸಿದ್ದರಾಮಯ್ಯ ಬಂದರೆ ಹೆದರುತ್ತೇವಾ? -ಪ್ರತಾಪಸಿಂಹ, ಸಂಸದ
ಮುದಿ ಟಗರಿಗೆ ಇಷ್ಟೊಂದು ಹೆದರಿದವರು ಯುವ ಹುಲಿಗೆ ಎಷ್ಟು ಹೆದರಿರಬಹುದು!
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವುದಕ್ಕೆ ಹತ್ತಾರು ಜನರಿಗೆ ಯೋಗ್ಯತೆ ಇದೆ. ನನಗೆ ಆ ಜವಾಬ್ದಾರಿ ಸಿಕ್ಕಿದರೆ ನಿಭಾಯಿಸುತ್ತೇನೆ
-ಸುನೀಲ್ ಕುಮಾರ್, ಸಚಿವ
ಅಷ್ಟೇಕೆ ಆತುರ? ಈಗ ಉಳ್ಳವರು ವಿರಮಿಸುವ ತನಕವಾದರೂ ಕಾಯಿರಿ.
ಚಿರತೆ ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಹೋಗಲು ನನಗೆ ಭಯವಾಗುತ್ತದೆ. ಹೀಗಾಗಿ ಅಲ್ಲಿಗೆ ನಾನು ಹೋಗುವುದಿಲ್ಲ. -ಉಮೇಶ್ ಕತ್ತಿ, ಸಚಿವ
ಧೈರ್ಯವಾಗಿ ಹೋಗಿ ಸಾರ್. ಚಿರತೆ ಕಾರ್ಯಾಚರಣೆಯ ವೇಳೆ ಕತ್ತೆಗಳಿಗೆ ಯಾವುದೇ ಅಪಾಯವಿಲ್ಲ.
ಹಿಂದೆಂದೂ ಇಲ್ಲದ ರೀತಿಯಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರಗಾಮಿ ಬಣಗಳು ಸಂಚು ರೂಪಿಸಿವೆ.
-ಅಮಿತ್ ಶಾ, ಕೇಂದ್ರ ಸಚಿವ
ನೀವು ದೇಶದೊಳಗಿನ ಚುನಾಯಿತ ಸರಕಾರಗಳನ್ನು ಬೀಳಿಸುತ್ತಿರುವುದು ಆ ಸಂಚಿನ ಭಾಗ ಅಲ್ಲತಾನೇ?
ಜನರಿಗೆ ಸ್ವಾತಂತ್ರ ಹೋರಾಟದ ಅರಿವೇ ಇಲ್ಲ. -ಯಡಿಯೂರಪ್ಪ, ಮಾಜಿ ಸಿಎಂ
ಇದ್ದಿದ್ದರೆ ಭ್ರಷ್ಟ ಫುಡಾರಿಗಳ ದಾಸ್ಯವನ್ನು ಸ್ವೀಕರಿಸುತ್ತಿರಲಿಲ್ಲ.
ಕೇಂದ್ರ ಸರಕಾರವು ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ -ನಿತಿನ್ ಗಡ್ಕರಿ, ಕೇಂದ್ರ ಸಚಿವ
ನೀವೂ ಅಷ್ಟೇ. ಯಾವಾಗಲೋ ಹೇಳಬೇಕಾಗಿದ್ದ ಇಂತಹ ಮಾತನ್ನು ಈಗ ಹೇಳುತ್ತಿದ್ದೀರಲ್ಲಾ!
ಮುಸ್ಲಿಮರನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ ಶೋಷಿಸುವುದೇ ಬಿಜೆಪಿಯ ನೀತಿ -ಅಸದುದ್ದೀನ್ ಉವೈಸಿ, ಸಂಸದ
ಅವರು ನಿಮ್ಮ ಬಗ್ಗೆ ಹೇಳಿದ್ದನ್ನೇ ನೀವು ಪುನರಾವರ್ತಿಸುತ್ತಿದ್ದೀರಿ. ನಿಮ್ಮ ಕಡೆಯಿಂದ ಏನಾದರೂ ಹೇಳಿ.
ದೈವ ಸಂಕಲ್ಪಇದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು
-ಕುಮಾರಸ್ವಾಮಿ, ಮಾಜಿ ಸಿಎಂ
ಈ ಹಿಂದೆ ನೀವು ಸಿಎಂ ಆಗಿದ್ದನ್ನು ನೆನಪಿಸಿಕೊಂಡಾಗಲೆಲ್ಲಾ ಜನರು ದೇವ ಸಂಕಲ್ಪವನ್ನು ಬಯ್ಯಲಾರಂಭಿಸ್ತಾರೆ.
ಆಂಧ್ರಪ್ರದೇಶದಲ್ಲಿ ಸಿಎಂ ಜಗನ್‌ಮೋಹನ್ ರೆಡ್ಡಿ ಗಢ ಗಢ ನಡುಗುವ ಕಾಲ ಸನ್ನಿಹಿತವಾಗಿದೆ
-ಸೋನು ವೀರಾಜು, ಆಂಧ್ರ ಬಿಜೆಪಿ ಅಧ್ಯಕ್ಷ
ಅಷ್ಟು ದೊಡ್ಡ ಸಂಖ್ಯೆಯಲ್ಲಿ ಸೂಟ್ ಕೇಸ್‌ಗಳು ಅಲ್ಲಿಗೆ ತಲುಪಿವೆಯೇ?
ಆರೆಸ್ಸೆಸ್ ಭಾರತವನ್ನು ಇಡೀ ವಿಶ್ವಕ್ಕೆ ಮಾದರಿಯಾಗಿಸಲು ಶ್ರಮಿಸುತ್ತಿದೆ -ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
ಶ್ರೀಲಂಕಾ ಮಾದರಿಯನ್ನು ಜಗತ್ತು ನೋಡಿದೆ. ಈಗ ಇನ್ನೊಂದು ಮಾದರಿಯ ಅಗತ್ಯವೇನಿದೆ?
ನನಗೆ ಹೊಂದಾಣಿಕೆ ರಾಜಕಾರಣ ಗೊತ್ತಿಲ್ಲ, ಆ ರೀತಿ ಮಾಡಿದ್ದರೆ ಇಂದು ನಾನು ಸಿಎಂ ಆಗಿರುತ್ತಿದ್ದೆ.
-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಗೊತ್ತಿಲ್ಲದೇ ಇಷ್ಟೆಲ್ಲಾ ಹೊಂದಾಣಿಕೆ ಮಾಡಿಕೊಂಡವರು, ಗೊತ್ತಿದ್ದರೆ ಏನೆಲ್ಲಾ ಮಾಡುತ್ತಿದ್ದಿರೋ!
ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಸಾವರ್ಕರ್ ಹೆಸರನ್ನು ಬಳಸುತ್ತಿದೆ.
-ಅಖಿಲ ಭಾರತ ಹಿಂದೂ ಮಹಾಸಭಾ
ಅವರ ಬತ್ತಳಿಕೆಯಲ್ಲಿ ಅಸ್ತ್ರಗಳ ಕೊರತೆ ಇಲ್ಲ. ಅವರು ಗೋಡ್ಸೆಯನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ.
ಮದ್ರಸಗಳಿಗೆ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ‘ಶಿಕ್ಷಣ ಹಕ್ಕು ಕಾಯ್ದೆ’ ಅನುಸಾರ ಶಿಕ್ಷಣ ದೊರೆಯುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುವುದು -ಬಿ.ಸಿ.ನಾಗೇಶ್, ಸಚಿವ
ಪ್ರಜ್ಞಾ ಠಾಕೂರ್ ಎಂಬ ಭಯೋತ್ಪಾದಕಿ ಈ ಪೈಕಿ ಯಾವ ಮದ್ರಸದಲ್ಲಿ ಕಲಿತದ್ದೆಂದು ಕಂಡು ಹಿಡಿಯಿರಿ.