ಕಾಂಗ್ರೆಸ್‌ನೊಳಗಿನ ಸಮಯಸಾಧಕ ರಾಜಕಾರಣದ ಗುಲಾಮರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತನ್ನ ಹೆಸರಿನಲ್ಲಿ 'ಗುಲಾಮ್' ಮತ್ತು 'ಆಝಾದ್' ಎರಡನ್ನು ಏಕಕಾಲದಲ್ಲಿ ಹೊಂದಿರುವ ಗುಲಾಂ ನಬಿ ಆಝಾದ್ ಅವರಿಗೆ ರಾಜಕೀಯ ರಂಗದಲ್ಲಿ ಆಝಾದ್ ಪದಕ್ಕೆ ಅನ್ವರ್ಥವಾಗುವಂತೆ ಬದುಕುವುದಕ್ಕೆ ಎಂದಿಗೂ ಸಾಧ್ಯವಾಗಲಿಲ್ಲ. ರಾಜಕೀಯ ನಿರ್ಗಮನ ಸಂದರ್ಭದಲ್ಲಿ 'ಗುಲಾಮ'ನ ನಿಯತ್ತನ್ನೂ ಪ್ರದರ್ಶಿಸಲಿಲ್ಲ. ಇರುವಷ್ಟು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕಲ ಅಧಿಕಾರಗಳನ್ನು ಅನುಭವಿಸಿದ ಗುಲಾಂ ಅವರಿಗೆ, ಮುಸ್ಸಂಜೆಯ ಹೊತ್ತಿಗೆ ಕಾಂಗ್ರೆಸ್ ಕುರಿತಂತೆ ಜ್ಞಾನೋದಯವಾಗಿದೆ. ಹಾಗೆಂದು ಅವರು ರಾಜೀನಾಮೆ ನೀಡಿರುವುದು, ಕಾಂಗ್ರೆಸ್‌ನ ಸಿದ್ಧಾಂತ, ವೌಲ್ಯಗಳಲ್ಲಿ ಏರುಪೇರಾಗಿದೆ ಎನ್ನುವ ಕಾರಣಕ್ಕಲ್ಲ. ರಾಹುಲ್ ಗಾಂಧಿ 'ಹಗಲು, ರಾತ್ರಿ ಮೋದಿಯವರನ್ನು ಟೀಕಿಸುವುದು' ಅವರ ಅಸಮಾಧಾನಕ್ಕೆ ಮೊದಲ ಕಾರಣ. 'ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ' ಎನ್ನುವುದು ಅವರ ರಾಜೀನಾಮೆಯ ಮುಖ್ಯ ಕಾರಣ.
ಕಾಂಗ್ರೆಸ್ ಎನ್ನುವ ಮುದಿ ಆಕಳಿನಿಂದ ಗರಿಷ್ಠ ಹಾಲು ಕರೆದು ಕುಡಿದು ತೇಗಿದವರು ಗುಲಾಂ ನಬಿ ಆಝಾದ್. ಕಾಂಗ್ರೆಸ್ ಈಗ ಹಾಲುಕೊಡದ ಹಸು ಎನ್ನುವುದು ಅರಿವಿಗೆ ಬರುತ್ತಿದ್ದಂತೆಯೇ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲ, ಬಿಜೆಪಿಯ ದೊಡ್ಡಿಯ ಮುಂದೆ ಓಡಾಡುವುದಕ್ಕೆ ಶುರು ಹಚ್ಚಿದ್ದಾರೆ. ಈ ಹಿಂದೆ ಎಸ್. ಎಂ. ಕೃಷ್ಣ ಕೂಡ ಇದೇ ಕಾರಣ ಮುಂದೊಡ್ಡಿ ಕಾಂಗ್ರೆಸನ್ನು ತ್ಯಜಿಸಿದ್ದರು ಮಾತ್ರವಲ್ಲ, ಯಾವ ಸಂಕೋಚವೂ ಇಲ್ಲದೆ ಬಿಜೆಪಿಯನ್ನು ಸೇರಿದ್ದರು. ಐಟಿ ದಾಳಿಗೆ ಬೆದರಿ ಕೃಷ್ಣ ಅವರು ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ಸೇರಿದರು ಎನ್ನುವ ಆರೋಪವೂ ಅವರ ಮೇಲಿದೆ. ಜಾತ್ಯತೀತ ವೌಲ್ಯಗಳ ಬಗ್ಗೆ ಕಾಂಗ್ರೆಸ್‌ನೊಳಗಿರುವ ಹಿರಿಯ ನಾಯಕರಿಗೆ ಎಷ್ಟರಮಟ್ಟಿಗೆ ಬದ್ಧತೆಯಿದೆ ಎನ್ನುವುದು ಕೃಷ್ಣ ಅವರ ಸಮಯ ಸಾಧಕತನ ರಾಜಕಾರಣ ಬಯಲಾಗಿಸಿತು. ಆದರೆ ಇದು ಕೇವಲ ಎಸ್.ಎಂ. ಕೃಷ್ಣ ಅವರೊಂದಿಗೇ ಮುಗಿದಿಲ್ಲ. ಬಹುತೇಕ ನಾಯಕರು ಕಾಂಗ್ರೆಸನ್ನು ಅದರ ಜಾತ್ಯತೀತ ವೌಲ್ಯಗಳಿಗಾಗಿ ನೆಚ್ಚಿಕೊಂಡಿರಲಿಲ್ಲ. ಅದು ಅವರು ಹುಲುಸಾಗಿ ಮೇಯಬಹುದಾಗಿದ್ದ ಗೋಮಾಳವಾಗಿತ್ತು. ತಳಸ್ತರದಲ್ಲಿ ಪಕ್ಷವನ್ನು ಸಂಘಟಿಸಿ ಬೆಳೆಸುವ ಕಷ್ಟ ಅವರಿಗಿರಲಿಲ್ಲ. ಗಾಂಧಿ ಕುಟುಂಬದ ಹೆಸರಿನಲ್ಲಿ ಸುಲಭವಾಗಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷ ಅವರ ಮುಂದಿದ್ದ ಏಕೈಕ ಆಯ್ಕೆಯಾಗಿತ್ತು. ಪ್ರಣವ್ ಮುಖರ್ಜಿಯಂತಹ ಹಿರಿಯ ನಾಯಕರು, ಕಾಂಗ್ರೆಸ್‌ನ ಸಕಲ ಅಧಿಕಾರಗಳನ್ನು ಅನುಭವಿಸಿ, ರಾಜಕೀಯದ ಕೊನೆಯ ದಿನಗಳಲ್ಲಿ ಆರೆಸ್ಸೆಸ್‌ನ ವೇದಿಕೆ ಹಂಚಿಕೊಂಡರು.
ಕಾಂಗ್ರೆಸ್ ಆಡಳಿತದ 70 ವರ್ಷದಲ್ಲಿ ಆರೆಸ್ಸೆಸ್ ಭಾರತಾದ್ಯಂತ ಹೇಗೆ ಬೆಳೆಯಿತು ಎನ್ನುವುದಕ್ಕೂ ಉತ್ತರ ಇದರಲ್ಲಿದೆ. ಕಾಂಗ್ರೆಸ್‌ನೊಳಗಿದ್ದ ಬಹುತೇಕ ಹಿರಿಯರು ಮಾನಸಿಕವಾಗಿ ಆರೆಸ್ಸೆಸ್ ಜೊತೆಗಿದ್ದರು. ಕಾಂಗ್ರೆಸ್‌ನ ಉಪಯೋಗ ಮುಗಿಯಿತು ಎಂದಾಕ್ಷಣ ಇವರೆಲ್ಲ ನಿಧಾನಕ್ಕೆ ತಮ್ಮ ಮುಖವಾಡ ಕಳಚತೊಡಗಿದರು. ಕಾಂಗ್ರೆಸ್‌ನ ಇಂದಿನ ಈ ಸ್ಥಿತಿಗೆ ಸ್ವತಃ ಕಾಂಗ್ರೆಸ್‌ನೊಳಗಿರುವ ಈ ನಾಯಕರು ಕಾರಣರೇ ಹೊರತು, ಇತರ ಪಕ್ಷಗಳಲ್ಲ. ದೇಶದ ರಾಜಕೀಯ ಮಹತ್ತರ ತಿರುವು ಪಡೆದಿದೆ. ಬಿಜೆಪಿಯೇ ತನ್ನೊಳಗಿನ ಎಲ್ಲ ಹಿರಿಯರನ್ನು ಬದಿಗೆ ಸರಿಸಿ, ಹೊಸ ನಾಯಕತ್ವದ ಮೂಲಕ ಹೊಸ ದಾರಿಯನ್ನು ಕಂಡುಕೊಂಡಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕೂಡ ಇಂತಹದೇ ಬದಲಾವಣೆಯನ್ನು ಬಯಸಿತ್ತು. ಕಾಂಗ್ರೆಸ್‌ನಿಂದ ಸಕಲ ಪ್ರಯೋಜನಗಳನ್ನು, ಅಧಿಕಾರಗಳನ್ನು ಅನುಭವಿಸಿದ ಹಿರಿಯರು ಬದಿಗೆ ಸರಿದು, ಯುವಕರನ್ನು ಮುನ್ನೆಲೆಗೆ ತರಬೇಕಾಗಿತ್ತು. ಪಕ್ಷವನ್ನು ಪುನರ್ ಸಂಘಟಿಸುವ ನಿಟ್ಟಿನಲ್ಲಿ ಅವರು ಮಾರ್ಗದರ್ಶಕರಾಗಿ ಕೆಲಸ ಮಾಡಬೇಕಾಗಿತ್ತು. ಆದರೆ ಕಾಂಗ್ರೆಸ್‌ನ ಈ ಹಿರಿಯರ ಅಧಿಕಾರ ಲಾಲಸೆ ಇನ್ನೂ ಮುಗಿದಂತಿಲ್ಲ.
ಕಾಂಗ್ರೆಸನ್ನು ಸರ್ವನಾಶ ಮಾಡದೆ ಇವರು ಕಾಂಗ್ರೆಸ್‌ನಿಂದ ನಿರ್ಗಮಿಸುವುದಿಲ್ಲ ಎಂದು ಹಟ ಹಿಡಿದು ಕೂತಂತಿದೆ. ಕಾಂಗ್ರೆಸ್‌ನ ಹಿರಿಯರ ಒಂದು ಗುಂಪು ಈಗಾಗಲೇ ಕಾಂಗ್ರೆಸ್ ವಿರುದ್ಧ ತನ್ನ ಚಟುವಟಿಕೆಯಲ್ಲಿ ತೊಡಗಿದೆ. ಅವರಲ್ಲಿ ಪ್ರಮುಖವಾಗಿದ್ದವರು ಗುಲಾಂ ನಬಿ ಆಝಾದ್. ಇವರ ಅಸಮಾಧಾನಕ್ಕೆ ಕಾಂಗ್ರೆಸ್‌ನ ನಾಯಕತ್ವ ಕಾರಣವೇ ಆಗಿದ್ದರೆ ಅವರು ಕಾಂಗ್ರೆಸ್‌ನಿಂದ ದೂರ ಉಳಿದು ಬಿಡುವ ಎಲ್ಲ ಅವಕಾಶಗಳಿದ್ದವು. ಆದರೆ ಗುಲಾಂ ನಬಿಯಂಥವರು ಎಂತಹ ದೈನೇಸಿ ಸ್ಥಿತಿ ತಲುಪಿದ್ದಾರೆ ಎಂದರೆ, ಅವಕಾಶ ಸಿಕ್ಕಿದರೆ ಇವರೂ ಎಸ್.ಎಂ. ಕೃಷ್ಣ ಅವರಂತೆ ಬಿಜೆಪಿ ಸೇರಲಿದ್ದಾರೆ. ಸದ್ಯಕ್ಕೆ, ಅದರ ಮೊದಲ ಭಾಗವಾಗಿ ಪ್ರಧಾನಿ ಮೋದಿಯವರ ಓಲೈಕೆಗೆ ಬಹಿರಂಗವಾಗಿಯೇ ಇಳಿದಿದ್ದಾರೆ.
ಗುಲಾಂ ನಬಿ ಆಝಾದ್ ಅವರು ಹೊಸ ಪಕ್ಷ ಕಟ್ಟುವ ಬಗ್ಗೆ ಮಾತನಾಡಿದ್ದಾರೆ. ಆಝಾದ್ ಕಾಶ್ಮೀರದ ಧ್ವನಿಯೆನ್ನುವ ಕಾರಣಕ್ಕಾಗಿ ಕಾಂಗ್ರೆಸ್‌ನಲ್ಲಿ ಮಹತ್ವದ ಸ್ಥಾನಗಳನ್ನು ಪಡೆದರು. ಕಾಶ್ಮೀರದ ಹೆಸರಿನಲ್ಲೇ ತನ್ನ ರಾಜಕೀಯ ಅಭಿಲಾಷೆಗಳನ್ನು ಈಡೇರಿಸಿಕೊಂಡರು. ಆದರೆ ಅವರು ಎಂದಿಗೂ ಕಾಶ್ಮೀರದ ಜನರ ನೋವುನಲಿವಿನ ಜೊತೆಗೆ ಬಲವಾಗಿ ನಿಂತಿರಲಿಲ್ಲ. ತನ್ನ ರಾಜಕೀಯ ಏಳಿಗೆಗಾಗಿ ಕಾಶ್ಮೀರ ಮತ್ತು ಅಲ್ಲಿನ ಜನರು ಅವರಿಗೆ ಬೇಕಾಗಿತ್ತೇ ಹೊರತು, ಆ ಜನರ ಸಂಕಟಗಳಲ್ಲ. ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದು ಮಹಾರಾಷ್ಟ್ರದಲ್ಲಿ. ಬಳಿಕ, ಕಾಂಗ್ರೆಸ್ ಅವರನ್ನು ಮೇಲ್ಮನೆಗೆ ಆರಿಸಿ ಕಳುಹಿಸಿತು. ಅಳಿದುಳಿದ ರಾಜಕೀಯ ಬದುಕನ್ನು ನೇರವಾಗಿ ಚುನಾವಣೆ ಎದುರಿಸದೆ, ಮೇಲ್ಮನೆಯ ಮೂಲಕವೇ ಮುಂದುವರಿಸಿದರು. ರಾಜ್ಯಸಭೆಯಲ್ಲಿದ್ದು ಕೇಂದ್ರ ಸರಕಾರದಲ್ಲಿ ವಿವಿಧ ಸಚಿವ ಸ್ಥಾನಗಳನ್ನು ಅಲಂಕರಿಸಿದರು.
ಮುಖ್ಯಮಂತ್ರಿ ಸ್ಥಾನದಿಂದ ಹಿಡಿದು ವಿವಿಧ ಸಚಿವ ಸ್ಥಾನಗಳನ್ನು ಗುಲಾಂ ನಬಿ ಅನುಭವಿಸಿದ್ದು ಕಾಂಗ್ರೆಸ್‌ನ ಕೃಪೆಯಿಂದಲೇ ಹೊರತು, ತನ್ನ ಯಾವುದೇ ವೈಯಕ್ತಿಕ ವರ್ಚಸ್ಸಿನ ಬಲದಿಂದ ಅಲ್ಲ. ಅವರೆಂದಿಗೂ ಕಾಶ್ಮೀರದ ಜನರ ನಾಯಕರಾಗಿರಲೇ ಇಲ್ಲ. ಆದುದರಿಂದಲೇ, ಹೊಸ ಪಕ್ಷ ಕಟ್ಟುವ ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅವರಿಂದು ತನ್ನ ಕಾಶ್ಮೀರದ ಐಡೆಂಟಿಟಿಯನ್ನು ಬಳಸಿಕೊಂಡು ಬಿಜೆಪಿಯಲ್ಲಿ ಯಾವ ಲಾಭಗಳನ್ನು ಪಡೆಯಬಹುದು ಎನ್ನುವ ಹವಣಿಕೆಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ, ಕೇಂದ್ರ ಸರಕಾರ ಕಾಶ್ಮೀರದ ಜನರಿಗೆ ಎಸಗಿರುವ ಅನ್ಯಾಯಗಳ ಬಗ್ಗೆ ಅವರಿಗೆ ಏನೂ ಅನ್ನಿಸುತ್ತಿಲ್ಲ. ಒಂದು ರೀತಿಯಲ್ಲಿ ಗುಲಾಂ ನಬಿ ಆಝಾದ್ ಅವರ ರಾಜೀನಾಮೆಯಿಂದ ಕಾಂಗ್ರೆಸ್ ಕಳೆದುಕೊಳ್ಳುವುದು ಏನೂ ಇಲ್ಲ. ಕಾಂಗ್ರೆಸ್ ಎನ್ನುವ ಕೆಚ್ಚಲನ್ನು ಬರಿದು ಮಾಡಿ, ಇದೀಗ ಬಡಕಲಾಗಿರುವ ಈ ಹಸುವನ್ನು ಕಸಾಯಿ ಖಾನೆಗೆ ಒಪ್ಪಿಸಿದರೆ ಎಷ್ಟು ಸಿಗಬಹುದು? ಎಂದು ಲೆಕ್ಕ ಹಾಕುತ್ತಿರುವ ಹಿರಿಯರ ಒಂದು ಪಡೆಯೇ ಕಾಂಗ್ರೆಸ್‌ನಲ್ಲಿದೆ.
ಇವರೆಲ್ಲರೂ ಒಂದೇ ಸಲಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ತೊಲಗಿದರೆ, ಆ ಪಕ್ಷ ತನ್ನನ್ನು ತಾನು ಹೊಸದಾಗಿ ರೂಪಿಸಿಕೊಳ್ಳುವುದಕ್ಕೆ ಸಹಾಯವಾಗಬಹುದೇನೋ?. ವಿಪರ್ಯಾಸವೆಂದರೆ, ಇಂದು ಹಲವು ಹಿರಿಯರು ಕಾಂಗ್ರೆಸ್‌ನೊಳಗೆ ಇದ್ದುಕೊಂಡೇ ಅದಕ್ಕೆ ತಲೆನೋವಾಗಿದ್ದಾರೆ. ಕಾಂಗ್ರೆಸ್‌ಗೆ ಬಿಜೆಪಿಯನ್ನು ಎದುರಿಸುವುದಕ್ಕಿಂತಲೂ ಈ ತಲೆನೋವುಗಳನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. ಕಾಂಗ್ರೆಸ್‌ನೊಳಗಿದ್ದುಕೊಂಡೇ ಇವರು ಬಿಜೆಪಿಗೆ ಪರೋಕ್ಷವಾಗಿ ನೆರವಾಗುತ್ತಿದ್ದಾರೆ. ಕಾಂಗ್ರೆಸ್ ನಿಧಾನಕ್ಕೆ ಈ ಹಿರಿಯರನ್ನು ಗುರುತಿಸಿ, ಅವರಿಗೆ ಪ್ರತ್ಯೇಕ ವೃದ್ಧಾಶ್ರಮವೊಂದನ್ನು ವ್ಯವಸ್ಥೆ ಮಾಡಬೇಕು. ಸೈದ್ಧಾಂತಿಕ ತಳಹದಿಯ ಮೇಲೆ ಮತ್ತೆ ಪಕ್ಷವನ್ನು ಕಾರ್ಯಕರ್ತರ ಮಟ್ಟದಿಂದ ಪುನರ್ ಸಂಘಟಿಸುವ ಕೆಲಸ ಕಾಂಗ್ರೆಸ್‌ನಿಂದ ನಡೆಯಬೇಕಾಗಿದೆ.