ಪ್ರಾದೇಶಿಕ ಅಸಮಾನತೆ ಎಂಬ ತಬ್ಬಲಿ ಕೂಗು
ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಇಡೀ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಿಸುವಲ್ಲಿ ವಿಫಲವಾಗಿರುವುದನ್ನು ಯಾರೂ ಅಲ್ಲಗಳೆಯಲಾಗದು. ಅಸಮತೋಲನ ಮತ್ತು ಹಿಂದುಳಿದಿರುವಿಕೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾದುದು ಅತ್ಯಗತ್ಯ. ಹಾಗೆ ನೋಡಿದರೆ ಇಂದಿಗೂ ಉತ್ತರ ಕರ್ನಾಟಕ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಿಷಯಗಳಲ್ಲಿ ದಕ್ಷಿಣ ಕರ್ನಾಟಕಕ್ಕಿಂತ ಬಹಳ ಹಿಂದೆ ಬಿದ್ದಿದೆ.
ಕರ್ನಾಟಕದ ಏಕೀಕರಣವಾದ ದಿನದಿಂದಲೂ ಉತ್ತರ ಕರ್ನಾಟಕದ ಕನ್ನಡಿಗರು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಕರ್ನಾಟಕದ ರಾಜಧಾನಿಯನ್ನಾಗಿ ಬೆಂಗಳೂರನ್ನು ಆಯ್ಕೆ ಮಾಡಿದ್ದು ವೈಜ್ಞಾನಿಕವಾಗಿ ಸರಿಯಿಲ್ಲ ಎಂಬ ಅವರ ಕೂಗಿಗೆ ನ್ಯಾಯ ಸಿಗಲೇ ಇಲ್ಲ. ಅಲ್ಲಿಂದ ಆರಂಭವಾದ ಅವರ ಕೂಗು ಇಂದಿಗೂ ಮುಂದುವರಿದುಕೊಂಡೇ ಬಂದಿದೆ. ಹೈದರಾಬಾದ್ ಕರ್ನಾಟಕಕ್ಕೆ 'ಕಲ್ಯಾಣ ಕರ್ನಾಟಕ' ಎಂದು ಹೆಸರೇನೋ ಬದಲಾವಣೆಯಾಯಿತು. ಆದರೆ ಆ ಭಾಗದ 'ಕಲ್ಯಾಣ' ಮಾತ್ರ ಕನಸಿನ ಮಾತಾಗಿಯೇ ಉಳಿದಿದೆ. ಅಭಿವೃದ್ಧಿಯ ಅಸಮಾನತೆಯ ಜೊತೆಗೆ ಸಾಮಾಜಿಕ ಅಸಮಾನತೆ ಕೂಡ ಉತ್ತರ ಕರ್ನಾಟಕದಲ್ಲಿ ಅಧಿಕವಾಗಿಯೇ ಇದೆ. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಪದ್ಧತಿ, ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿರುವಿಕೆ ಸೇರಿದಂತೆ ಹಲವು ಸಾಮಾಜಿಕ ಅನಿಷ್ಠಗಳು ಇಂದಿಗೂ ಕೊನೆಯಾಗಿಲ್ಲ. ಹಿಂದುಳಿದಿರುವಿಕೆಯನ್ನು ಕಡಿಮೆ ಮಾಡಿ ಅಭಿವೃದ್ಧಿ ಪ್ರಕ್ರಿಯೆಯನ್ನು ಸಮಾನತೆಯ ನ್ಯಾಯ ಹಾಗೂ ಸಾಮಾಜಿಕ ನ್ಯಾಯವನ್ನು ಸಾಧಿಸುವ ನಿಟ್ಟಿನಲ್ಲಿ ಭಾರತೀಯ ಸಂವಿಧಾನದಲ್ಲಿ ವ್ಯಕ್ತಿಗಳ ನಡುವಿನ ಅಸಮಾನತೆಯಲ್ಲದೆ ಬೇರೆ ಬೇರೆ ಪ್ರದೇಶಗಳಲ್ಲಿನ ಜನ ಸಮುದಾಯಗಳ ನಡುವಿನ ಅಸಮಾನತೆಯನ್ನು ನೀಗಿಸಬೇಕೆಂಬುದನ್ನು ಒತ್ತಿ ಹೇಳಲಾಗಿದೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅಗತ್ಯ ಶಿಫಾರಸುಗಳನ್ನು ಮಾಡುವುದಕ್ಕಾಗಿ ನಂಜುಂಡಪ್ಪ ಸಮಿತಿಯನ್ನು ಸರಕಾರ 2000ದಲ್ಲಿಯೇ ನೇಮಿಸಿತ್ತು. ಸಮಿತಿಯು 2003ರಿಂದ 2011ರವರೆಗೆ ಎಂಟು ವರ್ಷಗಳ ಕಾಲ ಹಿಂದುಳಿದ ತಾಲೂಕುಗಳೆಂದು ಗುರುತಿಸಿದ 114 ತಾಲೂಕುಗಳಿಗೆ ಸರಕಾರವು ಅಂದಿನ ಬಜೆಟ್ ಪ್ರಮಾಣಕ್ಕೆ ಅನುಗುಣವಾಗಿ ರೂ. 16,000 ಕೋಟಿ ವಿಶೇಷ ಅನುದಾನ ನೀಡಬೇಕು, ಇದನ್ನು ಸರಿಯಾಗಿ ಬಳಸಿಕೊಂಡಲ್ಲಿ ರಾಜ್ಯದಲ್ಲಿ ಇರುವ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಬಹುದು ಎಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿತ್ತು. ಈ ವರದಿಯ ಮಾನದಂಡಗಳಿಗೆ ಅನುಗುಣವಾಗಿಯೇ ರಾಜ್ಯ ಸರಕಾರ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ರೂ. 35,000 ಕೋಟಿಗೂ ಆಧಿಕ ಮೊತ್ತವನ್ನು ವಿನಿಯೋಗಿಸಿದೆ. ಆದರೆ ಇದುವರೆಗೂ ಪ್ರಾದೇಶಿಕ ಅಸಮತೋಲನವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿಲ್ಲ. ಕಲ್ಯಾಣ ಕರ್ನಾಟಕದ ಅತೀ ಹಿಂದುಳಿದ 41 ತಾಲೂಕುಗಳ ಅಭಿವೃದ್ಧಿಗಾಗಿ ಮಾರ್ಚ್ 2022ರವರೆಗೂ ವಿಶೇಷಾಭಿವೃದ್ಧಿ ಯೋಜನೆಯಡಿ ರೂ.24,429 ಕೋಟಿ ವೆಚ್ಚ ಮಾಡಲಾಗಿದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಪ್ರತಿ ವರ್ಷ ಸರಾಸರಿ 1,200 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದಲ್ಲದೆ ಬೇರೆ ಬೇರೆ ಅನುದಾನದ ಮತ್ತು ಯೋಜನೆಗಳಡಿಯಲ್ಲಿ ಕೋಟಿ ಕೋಟಿ ರೂ. ಹರಿದು ಬರುತ್ತಿದ್ದರೂ ಆ ಹಣವೆಲ್ಲಾ ಎಲ್ಲಿ ಹೋಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಈ ಕೋಟಿಗಳ ಲೆಕ್ಕಾಚಾರದ ಅನುದಾನಗಳಿಗೆ ಪ್ರಾದೇಶಿಕ ಅಸಮಾನತೆಯನ್ನು ಎದುರಿಸಲು ಸಾಧ್ಯವೇ ಆಗಲಿಲ್ಲ. ತಲಾ ಆದಾಯದಲ್ಲಿಯೂ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳು ರಾಜ್ಯದ ಇತರ ಜಿಲ್ಲೆಗಳಿಗಿಂತ ಕೊನೆಯ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯವೇ ಸರಿ. ತಲಾ ಆದಾಯದಲ್ಲಿ ರಾಜ್ಯದಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಕಲಬುರಗಿ ಜಿಲ್ಲೆ ಕಡೆಯ ಸ್ಥಾನದಲ್ಲಿದೆ.
ಹಾಗೆ ನೋಡಿದರೆ ಪ್ರಾದೇಶಿಕ ಅಸಮಾನತೆ ಎಂಬುದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಮಹಾರಾಷ್ಟ್ರದ ಮರಾಠಾವಾಡ, ಗುಜರಾತಿನ ಕಚ್ ಪ್ರದೇಶ, ಒಡಿಶಾದ ಪಶ್ಚಿಮ ಭಾಗ ಸೇರಿದಂತೆ ಭಾರತದ ಹಲವು ರಾಜ್ಯಗಳು ಪ್ರಾದೇಶಿಕ ಅಸಮಾನತೆಯೆಂಬ ದಳ್ಳುರಿಯನ್ನು ಎದುರಿಸುತ್ತಿವೆ. ಇದೇ ಕಾರಣಕ್ಕಾಗಿ ಆಂಧ್ರಪ್ರದೇಶದಿಂದ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಹೊರಹೊಮ್ಮಿದ್ದು. ಕರ್ನಾಟಕದ ಏಕೀಕರಣವಾದಂದಿನಿಂದ ಪ್ರಾದೇಶಿಕ ಅಸಮಾನತೆಯ ಧ್ವನಿ ಕೇಳಿಬರುತ್ತಲೇ ಇದೆ. ಪ್ರಾದೇಶಿಕ ಅಸಮತೋಲನ ಇನ್ನೂ ಜೀವಂತವಾಗಿದೆ ಎಂಬುದನ್ನು ಕರ್ನಾಟಕ ಸರಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ಕೂಡ ದೃಢಪಡಿಸಿದೆ. ಅಭಿವೃದ್ಧಿಯ ನೆಪದಲ್ಲಿ ಅನುದಾನವೇನೋ ಕೋಟಿಗಳ ಲೆಕ್ಕದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹರಿದು ಬರುತ್ತಿದೆ. ಆದರೆ ಇಂದಿಗೂ ಕಲಬುರಗಿ, ಕೊಪ್ಪಳ, ಬೀದರ್, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳು ಅಭಿವೃದ್ಧಿಯ ವಿಷಯದಲ್ಲಿ ತೀರಾ ಹಿಂದುಳಿದಿವೆ. ಉದ್ದಿಮೆಗಳು ಬರುವುದು ಬಿಡಿ, ಮೂಲ ಸೌಕರ್ಯಗಳ ಕೊರತೆಯನ್ನು ಕೂಡ ಇಂದಿಗೂ ನೀಗಿಸಲಾಗಿಲ್ಲ. ಈ ರೀತಿಯ ಅಸಮಾನತೆಯ ವಿರುದ್ಧ ಮೂಡಿ ಬಂದ ಉತ್ತರ ಕರ್ನಾಟಕದ ಜನರ ಕೂಗಿಗೆ ಕರ್ನಾಟಕದ ಸರಕಾರ 1956ರಿಂದಲೂ ವಿವಿಧ ರೀತಿಯಲ್ಲಿ ಪ್ರತಿಧ್ವನಿ ನೀಡುತ್ತಲೇ ಬಂದಿದೆ. ಆದರೆ ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಮಗ್ರವಾದ ನಿಲುವು ಕಂಡುಬಂದದ್ದು ಎಸ್.ಎಂ. ಕೃಷ್ಣರವರು ರಾಜ್ಯದ ಚುಕ್ಕಾಣಿ ಹಿಡಿದ ಮೇಲೆಯೇ.
ದಕ್ಷಿಣ ಕರ್ನಾಟಕ ಮೊದಲಿನಿಂದಲೂ ರಾಜರ ಆಳ್ವಿಕೆಗೆ ಒಳಪಟ್ಟು ಮೈಸೂರು ಪ್ರಾಂತವಾಗಿ ಅಭಿವೃದ್ಧಿಯ ಪಥದಲ್ಲಿತ್ತು. ಹಿಂದಿನ ಮೈಸೂರು ರಾಜ್ಯವು ಹಣಕಾಸು(ಬ್ಯಾಂಕಿಂಗ್), ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದಲ್ಲಿತ್ತು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನವು ಗಡಿ ಪ್ರದೇಶಗಳಾದುದರಿಂದ ಅಲ್ಲಿನ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು. ಕರ್ನಾಟಕದಲ್ಲಿ ಕರ್ನಾಟಕದ ಏಕೀಕರಣದ ಆನಂತರ ಈ ಗಡಿ ಪ್ರದೇಶದ ಜನರು ಹಳೆಯ ಮೈಸೂರು ಭಾಗದಷ್ಟೇ ಅಭಿವೃದ್ಧಿ ತಮ್ಮ ಭಾಗದಲ್ಲಿಯೂ ಆಗಬೇಕೆಂದು ಬಯಸಿದರು. ಯಾವಾಗ ತಾವು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂಬುದು ಅರಿವಿಗೆ ಬಂತೋ ಅಂದಿನಿಂದ ಪ್ರಾದೇಶಿಕ ಅಸಮಾನತೆಯ ಕೂಗು ಕೇಳಿ ಬರಲು ಆರಂಭವಾಯಿತು. ಇದು ಸಹಜ ಕೂಡ. ಉತ್ತರ-ದಕ್ಷಿಣ ಕರ್ನಾಟಕ ಭೇದ ಭಾವವಿಲ್ಲದೆ ರಾಜ್ಯದ ಅಭಿವೃದ್ಧಿಯಾದಾಗ ಮಾತ್ರ ರಾಜ್ಯದ ಸಮತೋಲಿತ ಅಭಿವೃದ್ಧಿ ಸಾಧ್ಯ. ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಯ ಮೇಲೆ ಮಾಡಬಹುದಾದ ಹೂಡಿಕೆ ಹಾಗೂ ಸೌಕರ್ಯಗಳ ಹಂಚಿಕೆಯಲ್ಲಿ ಕಂಡುಬರುವ ಅಸಮತೋಲನವನ್ನು ಒಂದೇ ಬಾರಿಗೆ ನಿವಾರಿಸಲು ಸಾಧ್ಯವಿಲ್ಲ ಎಂಬುದು ನಿಜ, ಏಕೆಂದರೆ ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ಆದರೆ ಕರ್ನಾಟಕ ಏಕೀಕರಣವಾಗಿ ಅರ್ಧ ಶತಮಾನ ಕಳೆದರೂ ಇಡೀ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಿಸುವಲ್ಲಿ ವಿಫಲವಾಗಿರುವುದನ್ನು ಯಾರೂ ಅಲ್ಲಗಳೆಯಲಾಗದು.
ಅಸಮತೋಲನ ಮತ್ತು ಹಿಂದುಳಿದಿರುವಿಕೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾದುದು ಅತ್ಯಗತ್ಯ. ಹಾಗೆ ನೋಡಿದರೆ ಇಂದಿಗೂ ಉತ್ತರ ಕರ್ನಾಟಕ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಿಷಯಗಳಲ್ಲಿ ದಕ್ಷಿಣ ಕರ್ನಾಟಕಕ್ಕಿಂತ ಬಹಳ ಹಿಂದೆ ಬಿದ್ದಿದೆ. ಕರ್ನಾಟಕ ರಾಜ್ಯದಲ್ಲಿ ಮಾನವಾಭಿವೃದ್ಧಿ ಸೂಚ್ಯಂಕವು 1991ರಲ್ಲಿ 0.47ರಷ್ಟು ಇತ್ತು. ಇದು ಅಲ್ಪಮಟ್ಟಿಗೆ ಸುಧಾರಣೆ ಕಂಡು 1998ರಲ್ಲಿ 0.63ರ ಮಟ್ಟಕ್ಕೆ ಏರಿತು. ಈ ಹಂತದಲ್ಲಿ ಹೆಚ್ಚಿನ ಜಿಲ್ಲೆಗಳ ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ಸುಧಾರಣೆ ಕಂಡು ಬಂದರೂ ಉತ್ತರ ಕರ್ನಾಟಕದ ಕಲಬುರ್ಗಿ, ವಿಜಯಪುರ, ಬೀದರ್, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಾನವಾಭಿವೃದ್ಧಿ ಸೂಚ್ಯಂಕವು ರಾಜ್ಯದ ಸರಾಸರಿಗಿಂತ ಕಡಿಮೆ ಇರುವುದು ಕಂಡುಬಂತು. ಹಲವು ಅಭಿವೃದ್ಧಿ ಸೂಚ್ಯಂಕಗಳನ್ನು ಪರಿಶೀಲಿಸಿದಾಗ ಪ್ರಾದೇಶಿಕ ಅಸಮಾನತೆ ಎಡೆಬಿಡದೆ ಮುಂದುವರಿದುಕೊಂಡು ಬಂದಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿ ನೋಡಿದರೆ ಉತ್ತರ ಕರ್ನಾಟಕದ ಜಿಲ್ಲೆಗಳು ರಾಜ್ಯದ ಸರಾಸರಿ ಪ್ರಗತಿಯಲ್ಲಿ ಹಿಂದೆ ಬಿದ್ದಿರುವುದನ್ನು ಕಾಣಬಹುದು. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ಬಹಳ ದೊಡ್ಡ ಮಟ್ಟದಲ್ಲಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಒಟ್ಟು 17,397ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ.
ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಬೀದರ್ನಲ್ಲಿ ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯ ಕ್ರಮವಾಗಿದೆ. ಈಗಾಗಲೇ ರಾಜ್ಯದ ಏಕೈಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವನ್ನು ಬೀದರ್ನಲ್ಲಿ ಸ್ಥಾಪಿಸಲಾಗಿದೆ. 1974-79ರ ನಡುವಿನ ಪಂಚವಾರ್ಷಿಕ ಯೋಜನೆಯಲ್ಲಿ ಜಿಲ್ಲೆಗಳ ನಡುವಿನ ಅಸಮತೋಲನವನ್ನು ಕಡಿಮೆ ಮಾಡಬೇಕಾದರೆ ಪ್ರಾದೇಶಿಕ ಯೋಜನೆಗಳು ಅತ್ಯಗತ್ಯ ಎಂದು ಅಭಿಪ್ರಾಯಪಡಲಾಯಿತು. ಕರ್ನಾಟಕದಲ್ಲಿ ಐದು ಮತ್ತು ಆರನೇ ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡಲು ಅಗತ್ಯವಾದ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವ ಧ್ಯೇಯೋದ್ದೇಶಗಳನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ನಂತರದ ಪಂಚವಾರ್ಷಿಕ ಯೋಜನೆಗಳಲ್ಲಿ ಈ ಅಂಶಗಳಿಗೆ ಒತ್ತು ನೀಡಲಿಲ್ಲ. ಯೋಜನಾ ಆಯೋಗವು 1967ರಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಅಸಮಾನತೆಯ ಸಮಸ್ಯೆಗಳನ್ನು ಅಂಕಿ-ಸಂಖ್ಯೆಗಳ ಸಹಾಯದಿಂದ ಕಡಿಮೆ ಮಾಡಲು ಮುಂದಾಯಿತು. ಪ್ರಾದೇಶಿಕ ಅಸಮಾನತೆಗೆ ಆರ್ಥಿಕ ಕಾರಣಗಳಲ್ಲದೆ, ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ ಕಾರಣಗಳು ಸಹ ಕಾರಣಗಳಾಗಿದ್ದು ಅವುಗಳ ಕಡೆಯೂ ಗಮನ ನೀಡಲು ಸೂಚಿಸಲಾಯಿತು. ಯೋಜನಾ ಆಯೋಗ ಮತ್ತು ಹಣಕಾಸು ಆಯೋಗಗಳು ಸಂಪನ್ಮೂಲಗಳನ್ನು ಹಂಚಿಕೆ ಮಾಡಲು ಬಡತನ, ಅಭಿವೃದ್ಧಿಯ ಅಸಮಾನತೆ, ತಲಾ ಆದಾಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಪ್ರಮಾಣ ಇವುಗಳನ್ನು ಪರಿಗಣಿಸಲಾಯಿತು. ಆದರೆ ಇದರಿಂದ ಹೊರಬಂದ ಫಲಿತಾಂಶ ಮಾತ್ರ ವಿಫಲ.
ಈ ಅಸಮಾನತೆಗಳ ನಡುವೆಯೂ ಕೆಲವು ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳನ್ನು ದಕ್ಷಿಣ ಕರ್ನಾಟಕದ ಜಿಲ್ಲೆಗಳೊಡನೆ ಹೋಲಿಸಿ ನೋಡಬಹುದು. ಸಾಕ್ಷರತೆಯನ್ನು ತೆಗೆದುಕೊಂಡರೆ ಉತ್ತರ ಕನ್ನಡ ಮತ್ತು ಧಾರವಾಡ, ಆರೋಗ್ಯದ ವಿಷಯದಲ್ಲಿ ಉತ್ತರ ಕನ್ನಡ ಮತ್ತು ಬಳ್ಳಾರಿ, ನೀರಾವರಿಯಲ್ಲಿ ಬೆಳಗಾವಿ, ರಾಯಚೂರು ಮತ್ತು ಬಳ್ಳಾರಿ, ಕೈಗಾರಿಕಾ ಕ್ಷೇತ್ರದಲ್ಲಿ ಬೆಳಗಾವಿ ಹಾಗೂ ಧಾರವಾಡ ಮುಂದಿದೆ. ಇದೇ ರೀತಿ ಹಿಂದುಳಿದಿರುವಿಕೆಯಲ್ಲಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳೊಡನೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಹೋಲಿಸಬಹುದು. ಆರೋಗ್ಯದಲ್ಲಿ ತುಮಕೂರು ಮತ್ತು ಚಾಮರಾಜನಗರ, ಸಾಕ್ಷರತೆಯ ವಿಷಯದಲ್ಲಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಹಿಂದುಳಿದಿರುವುದನ್ನು ಗಮನಿಸಬಹುದು. ಇಲ್ಲಿ ಪ್ರಮುಖವಾದ ವಿಚಾರವೆಂದರೆ ಯಾವ ಭಾಗದ ಜಿಲ್ಲೆಗಳಾದರೂ ಆಗಿರಲಿ ಯಾವ ಪ್ರದೇಶಕ್ಕಾದರೂ ಸೇರಿರಲಿ ಸಾಮರ್ಥ್ಯ ವಂಚಿತರು ಮತ್ತು ಸೌಲಭ್ಯ ವಂಚಿತರು ಎಲ್ಲಾ ಕಡೆ ಕಂಡು ಬರುತ್ತಾರೆ. ಈ ವಂಚನೆಯ ಪ್ರಮಾಣ ದಕ್ಷಿಣ ಕರ್ನಾಟಕ ಭಾಗಕ್ಕಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಕಾರಣಕ್ಕಾಗಿ ಗದಗ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ದೃಷ್ಟಿಯಿಂದ ಬಳ್ಳಾರಿ, ಅಸುರಕ್ಷಿತ ಹೆರಿಗೆ ಕಾರಣಕ್ಕಾಗಿ ಕಲಬುರಗಿ, ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಕಾರಣಕ್ಕಾಗಿ ರಾಯಚೂರು, ಮಹಿಳೆ ಮತ್ತು ಪುರುಷರ ಸಾಕ್ಷರತೆಯ ಅಂತರದ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಗಳು ಕರ್ನಾಟಕ ರಾಜ್ಯದ ತೀರಾ ವಂಚಿತ ಜಿಲ್ಲೆಗಳು ಎಂಬ ನಿರ್ಧಾರಕ್ಕೆ ಬರಬಹುದು.
ಕರ್ನಾಟಕ ರಾಜ್ಯದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಈ ಪ್ರಾದೇಶಿಕ ಅಸಮಾನತೆಯ ನಿವಾರಣೆ ಅತ್ಯಗತ್ಯ. ಈ ದೃಷ್ಟಿಯಿಂದ ನೋಡುವುದಾದರೆ ಈ ಭಾಗಕ್ಕೆ ಆಕರ್ಷಕವಾದ ಹೆಸರಿಗಿಂತ ನೈಜ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿರುವುದು ಮತ್ತು ಇಂತಹ ಯೋಜನೆಗಳು ಅನುಷ್ಠಾನದ ಹಂತದಲ್ಲಿ ಸೋಲದಂತೆ ನೋಡಿಕೊಳ್ಳಬೇಕಾಗಿರುವುದು ಮುಖ್ಯ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಹರಿದು ಬರುತ್ತಿರುವ ಅನುದಾನವನ್ನು ಪಾರದರ್ಶಕವಾಗಿ ಬಳಸಿಕೊಳ್ಳುವುದೂ ಅಷ್ಟೇ ಮುಖ್ಯ.