ಮಾಂಸಾಹಾರ: ರಾಜಕೀಯವೇನು? ವಾಸ್ತವವೇನು?
ಮಾಂಸಾಹಾರ ಗದ್ದಲ ಕರ್ನಾಟಕದಲ್ಲಿ ತಾರಕಕ್ಕೇರಿದೆ. ವಿಧಾನಸಭೆ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆರೋಪ, ಅದಕ್ಕೆ ಕಾಂಗ್ರೆಸ್ ಪ್ರತಿಮಾತು ಇವೆಲ್ಲವೂ ನಡೆದಿವೆ. ಹಾಗೆ ನೋಡಿದರೆ ಮಂಸಾಹಾರದ ಮೇಲಿನ ವಾಗ್ದಾಳಿ ಇದು ಮೊದಲನೆಯದೂ ಅಲ್ಲ, ಕೊನೆಯದೂ ಆಗದು. ಮಾಂಸಾಹಾರ ಅಪವಿತ್ರ ಎಂದು ಎಗರಿಬೀಳುವವರು ಅದರ ಚರಿತ್ರೆಯನ್ನು ತಿಳಿದಿರುವರೇ? ಮಾಂಸಾಹಾರ ವಿಚಾರ ರಾಜಕೀಯಗೊಳ್ಳುತ್ತಿರುವುದೇಕೆ?
ಭಾರತದ ಮಟ್ಟಿಗೆ ಹೇಳುವುದಾದರೆ, ಪ್ರಾಚೀನ ಕಾಲದಿಂದಲೂ, ಉಷ್ಣವಲಯದ ಪ್ರಾಣಿಗಳು, ಪಕ್ಷಿಗಳು ಮತ್ತು ಮೀನುಗಳ ಸಮೃದ್ಧಿಯನ್ನು ಹೊಂದಿರುವ ಭಾರತದ ಸಮೃದ್ಧ ಅರಣ್ಯ ಭೂಮಿಯಲ್ಲಿ ಮಾಂಸಾಹಾರವು ಪ್ರಚಲಿತವಾಗಿತ್ತು. 5,000 ವರ್ಷಗಳಷ್ಟು ಹಳೆಯದಾದ ಹರಪ್ಪನಾಗರಿಕತೆಯ ಪುರಾತತ್ವ ಶಾಸ್ತ್ರದ ಪುರಾವೆಗಳು ವಿವಿಧ ರೀತಿಯ ಪ್ರಾಣಿಗಳ ಮಾಂಸವನ್ನು ಸೇವಿಸುತ್ತಿದ್ದುದನ್ನು ಸೂಚಿಸುತ್ತವೆ. 3,000 ವರ್ಷಗಳ ಹಿಂದೆ ಧಾರ್ಮಿಕ ಪ್ರಾಣಿ ಬಲಿಯು ವೈದಿಕ ಸಂಸ್ಕೃತಿಯ ಪ್ರಮುಖ ಭಾಗವಾಗಿತ್ತು. ವೇದಗಳು ಸುಮಾರು 250ಕ್ಕೂ ಹೆಚ್ಚು ಪ್ರಾಣಿಗಳನ್ನು ಉಲ್ಲೇಖಿಸುತ್ತವೆ ಮತ್ತು ಅವುಗಳಲ್ಲಿ ಸುಮಾರು 50 ಪ್ರಾಣಿಗಳನ್ನು ಬಲಿಗೂ, ತಿನ್ನುವುದಕ್ಕೂ ಯೋಗ್ಯವೆಂದು ಪರಿಗಣಿಸಲಾಗಿದೆ ಎನ್ನುತ್ತಾರೆ ವಿದ್ವಾಂಸರು. ವೇದಕಾಲದಲ್ಲಿ ದನ, ಮೇಕೆ, ಕುದುರೆ ಮೊದಲಾದ ಪ್ರಾಣಿಗಳನ್ನು ಬಲಿ ಕೊಡಲಾಗುತ್ತಿತ್ತು, ಬ್ರಾಹ್ಮಣರು ಅವುಗಳ ಮಾಂಸವನ್ನು ಸೇವಿಸುತ್ತಿದ್ದರು ಎಂಬುದನ್ನು ಹಿಂದುತ್ವವಾದಿ ಚಿಂತಕರೂ ಅಲ್ಲಗಳೆಯುವುದಿಲ್ಲ. ಪ್ರಾಚೀನ ಭಾರತದಲ್ಲಿ ದನದ ಮಾಂಸ ತಿನ್ನದೆ ಬ್ರಾಹ್ಮಣರಾಗಲು ಸಾಧ್ಯವಿರಲಿಲ್ಲ ಎಂದು ವಿವೇಕಾನಂದರು ಹೇಳಿದ್ದರ ಉಲ್ಲೇಖ ಕೂಡ ಬರುತ್ತದೆ. ವಚನಕಾರರು ಕೂಡ ವೇದಕಾಲದ ಮಾಂಸಾಹಾರ ಸೇವನೆಯ ಬಗ್ಗೆ ವಚನಗಳಲ್ಲಿ ಹೇಳಿದ್ದಾರೆ. ವರ್ಣ ವ್ಯವಸ್ಥೆ ಆಚರಣೆಗೆ ಬರತೊಡಗಿದ ಕಾಲಕ್ಕೆ ಕೆಲಸ ಮತ್ತು ಆಹಾರ ಪದ್ಧತಿಗಳು ಮೇಲು ಕೀಳನ್ನು ನಿರ್ಧರಿಸುವ ಅಂಶಗಳಾಗಿ ಪರಿಗಣಿತವಾದದ್ದು, ಸಸ್ಯಾಹಾರಿಗಳೆನ್ನಿಸಿಕೊಂಡವರು ಇತರರನ್ನು ಅಂದರೆ ಮಾಂಸ ಸೇವಿಸುವವರನ್ನು ಕೀಳಾಗಿ ಕಾಣತೊಡಗಿದ್ದು, ಅಕ್ಷರ ಸಂಸ್ಕೃತಿಯಿಂದ ಬಹುಕಾಲ ದೂರವೇ ಇದ್ದ ಆ ಇತರ ವರ್ಗದವರು ತಾವು ಮಾಂಸಾಹಾರ ಸೇವಿಸುವುದರ ಬಗ್ಗೆ ತಾವೇ ಕೀಳರಿಮೆಗೆ ಒಳಗಾದದ್ದು, ಕದ್ದುಮುಚ್ಚಿ ತಿನ್ನುವಂಥ ದಯನೀಯ ಸ್ಥಿತಿಯನ್ನು ಅನುಭವಿಸಿದ್ದು ಇದೆಲ್ಲವೂ ಚರಿತ್ರೆಯ ಭಾಗ. ಆದರೆ ವರ್ತಮಾನದಲ್ಲೂ ಆಹಾರ ಪದ್ಧತಿಯ ಮೇಲೆ ನಡೆದಿರುವ ದಾಳಿ ಸ್ಪಷ್ಟವಾಗಿ ರಾಜಕೀಯ ಬಲದ್ದಾಗಿದೆ.
ವಿಶ್ವದ ಜನಸಂಖ್ಯೆಯನ್ನು ನೋಡಿದರೆ, ಶೇ.91-92ರಷ್ಟು ಮಂದಿ ಮಾಂಸಾಹಾರ ಸೇವನೆ ಮಾಡುವವರೇ ಆಗಿದ್ದಾರೆ. ಇಪ್ಸಾಸ್ ಮೊರಿ ಎಂಬ ಲಂಡನ್ ಮೂಲದ ಮಾರುಕಟ್ಟೆ ಸಂಶೋಧನಾ ಕಂಪೆನಿಯ ಸಮೀಕ್ಷೆ ಪ್ರಕಾರ, ಜಗತ್ತಿನ ಶೇ.74ರಷ್ಟು ಜನರು ಪ್ರಾಣಿಜನ್ಯ ಮತ್ತು ಇತರ ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸುತ್ತಾರೆೆ. ಶೇ.14ರಷ್ಟು ಜನರು ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಮಾಂಸ ಇಲ್ಲವೇ ಮೀನನ್ನು ಸೇವಿಸುತ್ತಾರೆ. ಶೇ.3ರಷ್ಟು ಮಂದಿ ಮೀನನ್ನು ಮಾತ್ರ ಸೇವಿಸುತ್ತಾರೆ. ಇನ್ನು ಶುದ್ಧ ಸಸ್ಯಾಹಾರ ಸೇವನೆ ಮಾಡುವುದು ಶೇ.3ರಷ್ಟು ಜನರು ಮಾತ್ರ. ಈ ಸಮೀಕ್ಷೆಯು ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳು ಎಂದು ಗೆರೆ ಕೊರೆದು ಜನಸಂಖ್ಯೆಯನ್ನು ವಿಭಜಿಸಿಲ್ಲ ಎಂಬುದು ಗಮನಾರ್ಹ ವಿಚಾರ.
ಮಾಂಸಾಹಾರ ಸೇವನೆಯ ಟಾಪ್ ಟೆನ್ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, ಶೇ.94.2ರಷ್ಟು ಜನರು ಅಲ್ಲಿ ಮಾಂಸಾಹಾರ ಸೇವಿಸುತ್ತಾರೆ. ಎರಡನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ ಶೇ.92.6ರಷ್ಟು ಮಂದಿ ಮಾಂಸಾಹಾರಿಗಳು. ಜಪಾನ್ ಮೂರನೇ ಸ್ಥಾನದಲ್ಲಿದ್ದು, 91.5ರಷ್ಟು ಮಂದಿ ಮಾಂಸಾಹಾರಿಗಳಾಗಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವುದು ಭಾರತ. ಇಲ್ಲಿ ಒಟ್ಟು ಮಾಂಸಾಹಾರಿಗಳು ಶೇ.90.7ರಷ್ಟು. ಇಂಗ್ಲೆಂಡ್ ಐದನೇ ಸ್ಥಾನದಲ್ಲಿದ್ದು ಶೇ.88 ಮಂದಿ ಮಾಂಸಾಹಾರ ಸೇವನೆ ಮಾಡುತ್ತಾರೆ. ನಂತರದ ಸ್ಥಾನಗಳಲ್ಲಿ ಫ್ರಾನ್ಸ್ - ಶೇ.85, ಬ್ರೆಝಿಲ್, ಕೆನಡಾ - ಶೇ.84.8, ಇಟಲಿ - ಶೇ.84.2, ಸ್ಪೇನ್ - ಶೇ.83.6 ಬರುತ್ತವೆ.
ರೆಫರೆನ್ಸ್ ಪುಸ್ತಕಗಳಿಗಾಗಿ, ವಿಶೇಷವಾಗಿ ತನ್ನ ನಿಘಂಟುಗಳಿಗಾಗಿ ಹೆಸರಾಗಿರುವ, ಅಮೆರಿಕದ ಅತ್ಯಂತ ಹಳೆಯ ನಿಘಂಟು ಪ್ರಕಾಶನ ಸಂಸ್ಥೆಯಾದ ಮೆರಿಯಮ್ ವೆಬ್ಸ್ಟರ್ ಕಂಪೆನಿಯ ಪ್ರಕಾರ, ಮಾಂಸಾಹಾರಿ - ನಾನ್ ವೆಜಿಟೇರಿಯನ್ ಎಂಬ ಶಬ್ದ ಮೊದಲು ಬಳಕೆಗೆ ಬಂದಿರುವುದು 1883ರಲ್ಲಿ. ಜಾಗತಿಕ ನೆಲೆಯಲ್ಲಿ ಇಂಥದೊಂದು ಪದ ಬಳಕೆಯ ಅಗತ್ಯವೇ ಅಷ್ಟಾಗಿ ಕಂಡಿದ್ದಿಲ್ಲ. ಯಾಕೆಂದರೆ ಭಾರತವನ್ನು ಹೊರತುಪಡಿಸಿ ಜಗತ್ತಿನ ಇತರ ದೇಶಗಳಲ್ಲಿ ಮಾಂಸಾಹಾರ ಸೇವನೆ ಸರ್ವೇಸಾಮಾನ್ಯ ಮತ್ತು ಸಸ್ಯಾಹಾರವು ಅಪವಾದ. ಆದರೆ ಭಾರತದಲ್ಲಿ ಸಸ್ಯಾಹಾರ ಸಾಮಾನ್ಯವಾಗಿದ್ದು, ಇದಕ್ಕೆ ವಿರುದ್ಧವಾದ ಆಹಾರ ಪದ್ಧತಿಗೆ ಒಂದು ಪರಿಭಾಷೆಯ ಅಗತ್ಯ ಬಿದ್ದಿತು. 20ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ರೆಸ್ಟೋರೆಂಟ್‌ಗಳೇ ಅಸ್ತಿತ್ವದಲ್ಲಿರಲಿಲ್ಲ. ಆನಂತರವೂ ಹೆಚ್ಚಾಗಿ ಯುರೋಪಿಯನ್ನರನ್ನೇ ಗಮನದಲ್ಲಿಟ್ಟುಕೊಂಡವಾಗಿದ್ದವು. ಮುಂಬೈಯ ಇರಾನಿ ಕೆಫೆಗಳು ಎಲ್ಲ ಸಮುದಾಯದವರೂ ಸೇರುವುದಕ್ಕಾಗಿ ರೂಪಿಸಲಾಗಿದ್ದ ಆರಂಭಿಕ ಸ್ಥಳಗಳಾಗಿದ್ದವು. ಅಲ್ಲಿ ವರ್ಣಸಂಕೇತದ ಪಾತ್ರೆಗಳಿರುತ್ತಿದ್ದವು. ಹಿಂದೂಗಳಿಗೆ ಗುಲಾಬಿ, ಮುಸ್ಲಿಮರಿಗೆ ಹಸಿರು ಮತ್ತು ಎಲ್ಲರಿಗಾದರೆ ಹೂ. ಆಯಾ ಸಮುದಾಯದವರು ತಮಗೆಂದೇ ಇರುವ ಆಹಾರ ತೆಗೆದುಕೊಳ್ಳುತ್ತಿದ್ದರು ಇಲ್ಲವೆ ಹಣ್ಣುಗಳಂಥ ಸುರಕ್ಷಿತ ಆಹಾರದ ಮೊರೆಹೋಗುತ್ತಿದ್ದರು. ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಪ್ರತ್ಯೇಕ ಊಟದ ವ್ಯವಸ್ಥೆಯ ಮೊದಲ ಉಲ್ಲೇಖಗಳು ದಾಖಲಾಗಿರುವುದು ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳನ್ನು ಹೊಂದಿದ್ದ ಉನ್ನತ ಶಿಕ್ಷಣ ಸಂಸ್ಥೆಗಳು ಆರಂಭವಾಗುವುದರೊಂದಿಗೆ ಎನ್ನಲಾಗುತ್ತದೆ. ಬಹುದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕವಾಗಿ ಆಹಾರ ಸೇವನೆ ಮಾಡಬೇಕಿರುವ ರೈಲ್ವೆಯಲ್ಲಿ 1916ರಲ್ಲಿ ಸಮುದಾಯಗಳ ಅಗತ್ಯಕ್ಕೆ ತಕ್ಕಂತೆ ಆಹಾರ ಪೂರೈಸುವತ್ತ ಆಸಕ್ತಿ ವಹಿಸಲಾಯಿತು. 1922ರ ಹೊತ್ತಿಗೆ ಮಾಂಸಾಹಾರಿಗಳಿಗೂ ಬಾಡಿಗೆ ಮನೆ ಲಭ್ಯ ಎಂಬಂಥ ಜಾಹೀರಾತುಗಳು ಪ್ರಕಟವಾದದ್ದು, 1934ರ ಹೊತ್ತಿಗೆ ದಿಲ್ಲಿ ಅಥವಾ ಮೈಸೂರಿಗೆ ಕ್ರಿಸ್ಮಸ್ ಪ್ರವಾಸ ಕೈಗೊಳ್ಳುವವರಿಗೆ ಸಸ್ಯಾಹಾರಿ, ಮಾಂಸಾಹಾರಿ ಊಟದ ವ್ಯವಸ್ಥೆಯ ಬಗ್ಗೆ ಕಂಪೆನಿಯೊಂದು ಜಾಹೀರಾತು ನೀಡಿದ್ದು, ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗಾಗಿ ಹಡಗಿನಲ್ಲಿ ಸಸ್ಯಾಹಾರಿ ಮೆನು ನೀಡುವ ಪದ್ಧತಿ ಶುರುವಾದದ್ದು ಇವೆಲ್ಲದರ ಉಲ್ಲೇಖಗಳು ಸಿಗುತ್ತವೆ.
ಹೀಗೆ ಭಾರತದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಪರಸ್ಪರ ವಿರುದ್ಧ ವರ್ಗೀಕರಣವು ಆಹಾರ ಪದ್ಧತಿಯಲ್ಲಿ ಆಗಿಬಿಟ್ಟಿದೆ. ಭಾರತದಲ್ಲಿ ಮಾಂಸ ಸೇವನೆ ಮಾಡದೇ ಇರುವವರ ಪ್ರಮಾಣ ‘ಶೇ.10ರಷ್ಟು’ ಮಾತ್ರ. ಶೇ.75ರಷ್ಟು ಭಾರತೀಯರು ಸಸ್ಯಾಹಾರಿಗಳಲ್ಲ ಎಂಬುದನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಹೇಳುತ್ತದೆ. ಮೀನು, ಮಾಂಸ, ಮೊಟ್ಟೆ ಇವು ಮಾಂಸಾಹಾರ ಎಂದು ಪರಿಗಣಿತವಾಗುತ್ತವೆ. ಶೇ.78ರಷ್ಟು ಪುರುಷರು ಮತ್ತು ಶೇ.70ರಷ್ಟು ಮಹಿಳೆಯರು ಒಂದಿಲ್ಲೊಂದು ರೂಪದಲ್ಲಿ ಮಾಂಸಾಹಾರ ಸೇವನೆ ಮಾಡುತ್ತಾರೆ ಎಂಬುದನ್ನು ಕುಟುಂಬ ಆರೋಗ್ಯ ಸಮೀಕ್ಷೆ ಗುರುತಿಸುತ್ತದೆ. ಆಹಾರವನ್ನು, ಆಹಾರ ಪದ್ಧತಿಯನ್ನು ವೈದ್ಯಕೀಯ ದೃಷ್ಟಿಯಿಂದ ವಿಜ್ಞಾನದ ದೃಷ್ಟಿಯಿಂದ ನೋಡಬೇಕಾಗಿದ್ದ ಇಂದು ಅದನ್ನು ತೀರಾ ಧಾರ್ಮಿಕ ನೆಲೆಯಲ್ಲಿ ನೋಡುವ ಮನಃಸ್ಥಿತಿಯನ್ನು ಬೆಳೆಸಿಕೊಂಡಿರುವುದು ಹಲವಾರು ಗೊಂದಲಗಳಿಗೆ, ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿದೆ. ಇವತ್ತು ಭಾರತದಲ್ಲಿ ಮಾಂಸಾಹಾರ ಸೇವನೆ ಧಾರ್ಮಿಕವಾಗಿ ಮಹಾಪಾಪ ಎಂಬ ಮಟ್ಟಕ್ಕೆ ಟೀಕಿಸಲಾಗುತ್ತಿದೆ. ಜಗತ್ತಿನ ಯಾವುದೇ ಮೂಲೆಯ ಬುಡಕಟ್ಟಿನವರಿಗೂ ಮಾಂಸವೇ ಮೊದಲ ಆಹಾರ ಮೂಲ. ಬುಡಕಟ್ಟು ಅಥವಾ ಇನ್ನಾವುದೇ ಸಮುದಾಯ ಕೇವಲ ಸಸ್ಯಾಹಾರವನ್ನೇ ನೆಚ್ಚಿ ಉಳಿದುಕೊಂಡಿದೆ ಮತ್ತು ಪ್ರವರ್ಧಮಾನಕ್ಕೆ ಬಂದಿದೆ ಎಂಬುದಕ್ಕೆ ಯಾವುದೇ ಐತಿಹಾಸಿಕ ಸಾಕ್ಷಗಳಿಲ್ಲ ಎನ್ನುತ್ತಾರೆ ಪರಿಣಿತರು. ಆರೋಗ್ಯದ ದೃಷ್ಟಿಯಿಂದಲೂ ಮಾಂಸಾಹಾರ ಸೇವನೆ ಕೆಟ್ಟದ್ದಲ್ಲವೇ ಅಲ್ಲ.
ನಿಸರ್ಗವೇ ಕಟ್ಟಿದ ಆಹಾರ ಸರಪಳಿಯೊಂದಿದ್ದು, ಮನುಷ್ಯ ಕೂಡ ಅದರ ಭಾಗವೇ ಆಗಿದ್ದಾನೆ. ಮಾಂಸಾಹಾರ ಸೇವನೆ ಈ ಭೂಮಿಯ ಮೇಲಿನ ಬಹುಪಾಲು ಜನರ ಪ್ರಾಣದ ಪ್ರಶ್ನೆಯೂ ಹೌದು. ಹೀಗಿರುವಾಗ ಮಾಂಸಾಹಾರವನ್ನು ಕೀಳೆಂದು ಕಾಣುವ ಪರಿಪಾಠ ಬೆಳೆದಿರುವುದರ ರಾಜಕಾರಣವೇ ವ್ಯವಸ್ಥಿತ ಸಂಚಿನ ಭಾಗದಂತಿದೆ ಎಂಬ ವಿಶ್ಲೇಷಣೆಗಳಿವೆ. ಮಾಂಸಾಹಾರವಾಗಲಿ ಸಸ್ಯಾಹಾರವಾಗಲಿ ಅದೊಂದು ಜೀವನಶೈಲಿ ಮಾತ್ರ. ಆಹಾರ ಪದ್ಧತಿಯ ಕಾರಣದಿಂದ ಜನರ ಬಗ್ಗೆ ತೀರ್ಮಾನ ಕೊಡಲು ಹೊರಡುವುದು ಸರಿಯಂತೂ ಅಲ್ಲ. ಕಡೆಗೂ ಆಹಾರ ಪದ್ಧತಿ ಎಂಬುದು ತೀರಾ ವೈಯಕ್ತಿಕ ವಿಚಾರ. ತಾನೇನು ಸೇವಿಸಬೇಕು ಎಂದು ತೀರ್ಮಾನಿಸುವುದು ಪ್ರತಿಯೊಬ್ಬನ ಹಕ್ಕು. ಬದುಕಿನಲ್ಲಿಯ ಅತ್ಯುತ್ತಮ ಸಂಗತಿಗಳಲ್ಲಿ ಒಂದಾದ ಆಹಾರದ ವಿಚಾರದಲ್ಲಿ ಯಾರದೋ ಒತ್ತಡಕ್ಕೆ ಮಣಿಯುವುದು ಅಥವಾ ರಾಜಿಯಾಗುವುದು ಕೂಡದು. ಆಹಾರ ಸೇವನೆ ವಿಚಾರದ ನಡುವೆ ಧರ್ಮವನ್ನು ತರುವ ವಿಚಾರವಂತೂ ಅಸಹನೀಯ ನೆಲೆಗೆ ಮುಟ್ಟಿರುವುದು ಇವತ್ತಿನ ತೀವ್ರ ಆತಂಕಕಾರಿ ವಿಚಾರವಾಗಿದೆ. ಗೋಮಾಂಸ ಸೇವಿಸಿದರೆಂಬ ಆರೋಪದ ಮೇಲೆ ಕೊಲ್ಲುವ ಘಟನೆಗಳು ನಡೆಯುತ್ತಿರುವುದರ ಬಗ್ಗೆ ಮತ್ತೆ ಮತ್ತೆ ಕೇಳುತ್ತಿದ್ದೇವೆ. 2014ರಿಂದೀಚೆಗೆ ಗೋ ಸಂರಕ್ಷಣೆ ಹೆಸರಲ್ಲಿ ನಡೆದ ದಾಳಿಗಳು ಹಲವಾರು ಜನರ ಸಾವಿಗೆ ಕಾರಣವಾಗಿವೆ. ಇಂಥ ದಾಳಿಗಳು ನಡೆಯುವುದು ದನಗಳ ಅಕ್ರಮ ಸಾಗಾಟ ಎಂಬ ಆರೋಪದ ಮೇಲೆ. ಆದರೆ ಇದು ಕೋಮುದ್ವೇಷವನ್ನು ತೀರಿಸಿಕೊಳ್ಳುವುದಕ್ಕೆ ಮತ್ತೊಂದು ಅಸ್ತ್ರವಾಗಿ ಒದಗಿದೆಯೆಂಬುದೂ ಗುಟ್ಟಾಗಿಯೇನೂ ಉಳಿದಿಲ್ಲ. ಒಂದು ಆಹಾರವು ಇಷ್ಟವಿಲ್ಲವೆಂಬ ಭಾವನೆಯೇ ಬೇರೆ, ಆ ಆಹಾರವನ್ನು ಸೇವಿಸುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ದ್ವೇಷಿಸುವುದೇ ಬೇರೆ. ಇದನ್ನು ಎಲ್ಲರೂ ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ತಲೆಕೆಡಿಸಿಕೊಳ್ಳಲು ಈ ದೇಶದಲ್ಲಿ ಬೇಕಾದಷ್ಟು ಸಂಗತಿಗಳಿವೆ. ಒಳ್ಳೆಯದಕ್ಕಾಗಿ ನಮ್ಮ ಶಕ್ತಿಯನ್ನು ವ್ಯಯಿಸಬೇಕೇ ಹೊರತು, ಇನ್ನೊಬ್ಬರ ತಟ್ಟೆಯಲ್ಲೇನಿದೆ ಎಂಬುದರ ಬಗ್ಗೆ ಚಿಂತಿಸುವ ಅಗತ್ಯ ಖಂಡಿತ ಇಲ್ಲ. ಸಂಸ್ಕೃತಿ, ಪ್ರಾದೇಶಿಕತೆ, ಸಂಪ್ರದಾಯ ಇವೆಲ್ಲವೂ ವಿಭಿನ್ನತೆಯ ಕಾರಣದಿಂದಾಗಿ ಆ ಸಿರಿವಂತಿಕೆಯ ಕಾರಣದಿಂದಾಗಿ ಭಾರತದ ಹೆಮ್ಮೆಯ ಸಂಗತಿಗಳಾಗಿ ಇದ್ದಂಥವು. ಆದರೆ ಜಾತಿ ಧರ್ಮಗಳ ಹೆಸರಿನಲ್ಲಿ ಶುರುವಾಗಿರುವ ಒಡಕು ಈ ವೈವಿಧ್ಯತೆಯ ಸಿರಿವಂತಿಕೆಯನ್ನೂ ಒಡೆದುಹಾಕುತ್ತಿದೆ. ಒಬ್ಬ ಮನುಷ್ಯನನ್ನು ಕೊಂದುಹಾಕುವ ಮಟ್ಟದವರೆಗೆ ಈ ಒಡಕಿನ ವೈಪರೀತ್ಯ ಬೆಳೆದುಬಿಟ್ಟಿದೆ. ಈ ಒಡಕಿನ ಸಾಲಿಗೆ ಆಹಾರದ್ವೇಷವೂ ಸೇರಿಕೊಂಡಿರುವುದು ಮತ್ತೊಂದು ದುರಂತ.
ಮಾಂಸಾಹಾರಿಗಳ ಮತವನ್ನು ದೊಡ್ಡ ಸಂಖ್ಯೆಯಲ್ಲಿ ಪಡೆದು ಅಧಿಕಾರಕ್ಕೇರಿ ಬಳಿಕ ಮಾಂಸಾಹಾರವನ್ನು ಕೀಳು ಹಾಗೂ ಸಸ್ಯಾಹಾರ ಶುದ್ಧ, ಮೇಲು ಎಂದು ವ್ಯವಸ್ಥಿತವಾಗಿ ಬಿಂಬಿಸುವ ಹಿಂದಿರುವ ರಾಜಕೀಯ ಷಡ್ಯಂತ್ರವನ್ನು ಮಾಂಸಾಹಾರಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. ತಮ್ಮ ಮೂಲ ಸಂಸ್ಕೃತಿಯನ್ನೇ ಕೀಳು ಎಂದು ತಮ್ಮನ್ನೇ ನಂಬಿಸುವ ಸಸ್ಯಾಹಾರಿ ರಾಜಕೀಯ ಕುತಂತ್ರವನ್ನು ಈ ದೇಶದ ಬಹುಸಂಖ್ಯಾತರು ತಿಳಿದುಕೊಂಡು ವಿಫಲ ಗೊಳಿಸಬೇಕಾಗಿದೆ.
ಗೋ ಸಂರಕ್ಷಣೆಯ ಹೆಸರಲ್ಲಿ ನಡೆದ ದಾಳಿಯೆಷ್ಟು? ಕೊಲ್ಲಲ್ಪಟ್ಟವರೆಷ್ಟು?
ರಾಯ್ಟರ್ಸ್ ವರದಿ ಪ್ರಕಾರ 2010ರಿಂದ 2017ರ ಅವಧಿಯಲ್ಲಿ ಭಾರತದಲ್ಲಿ ಗೋ ಸಂರಕ್ಷಣೆ ಹೆಸರಲ್ಲಿ 63 ದಾಳಿಗಳು ನಡೆದಿವೆ. ಹೆಚ್ಚಿನವು 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಡೆದವುಗಳೇ. ಇವಿಷ್ಟೂ ದಾಳಿಗಳ ಸಂದರ್ಭದಲ್ಲಿ 28 ಮಂದಿ ಕೊಲ್ಲಲ್ಪಟ್ಟಿದ್ದು, ಅವರಲ್ಲಿ 24 ಮಂದಿ ಮುಸ್ಲಿಮರೇ ಆಗಿದ್ದಾರೆ. ಗಾಯಗೊಂಡವರು 124 ಮಂದಿ. * ಗೋರಕ್ಷಕರೆನ್ನಿಸಿಕೊಂಡವರು ನಡೆಸುವ ಇಂಥ ದಾಳಿಗಳು 2015ರಿಂದ ಹೆಚ್ಚಾಗಿವೆ ಎನ್ನುತ್ತದೆ ನ್ಯೂಯಾರ್ಕ್ ಮೂಲದ ಅಂತರ್‌ರಾಷ್ಟ್ರೀಯ ಎನ್‌ಜಿಒ ಹ್ಯೂಮನ್ ರೈಟ್ಸ್ ವಾಚ್ ವರದಿ. 2012ರಿಂದ ನಡೆದ ಗೋಸಂರಕ್ಷಕರ ದಾಳಿಗಳತ್ತ ಒಮ್ಮೆ ಕಣ್ಣು ಹಾಯಿಸುವುದಾದರೆ, 2012ರಲ್ಲಿ ಇಂಥ ಒಂದು ಪ್ರಕರಣ ನಡೆದಿತ್ತು. ಇಬ್ಬರು ಗಾಯಗೊಂಡಿದ್ದರು. 2013ರಲ್ಲಿ ಎರಡು ಪ್ರಕರಣಗಳು 35 ಮಂದಿ ಗಾಯಾಳುಗಳು, 2014ರಲ್ಲಿ 5 ಪ್ರಕರಣಗಳು 13 ಗಾಯಾಳುಗಳು, 2015ರಲ್ಲಿ 6 ಪ್ರಕರಣಗಳು ನಡೆದು 8 ಮಂದಿ ಸಾವನ್ನಪ್ಪಿದರು. ಈ ಪ್ರಕರಣಗಳಲ್ಲಿ ಗಾಯಗೊಂಡಿದ್ದವರು ಐವರು. 2016ರಲ್ಲಿ 5 ಪ್ರಕರಣಗಳು - 2 ಸಾವು - 10 ಮಂದಿಗೆ ಗಾಯ. 2017ರ ಜನವರಿಯಿಂದ ಜೂನ್‌ವರೆಗಿನ ಆರೇ ತಿಂಗಳಲ್ಲಿ 11 ಪ್ರಕರಣಗಳು - 18 ಸಾವು - 20 ಮಂದಿ ಗಾಯಾಳುಗಳು. ಅನಂತರ 29 ಜೂನ್ 2017ರಿಂದ ಡಿಸೆಂಬರ್ 2017ರವರೆಗೆ 2 ಪ್ರಕರಣಗಳು -2 ಸಾವು - ಒಬ್ಬ ವ್ಯಕ್ತಿಗೆ ಗಾಯ. 2018ರಲ್ಲಿ 6 ಪ್ರಕರಣಗಳು - 7 ಸಾವು - ಒಬ್ಬ ವ್ಯಕ್ತಿಗೆ ಗಾಯ. 2019ರಲ್ಲಿ 10 ಪ್ರಕರಣಗಳು - 6 ಸಾವು - 18 ಮಂದಿಗೆ ಗಾಯ. 2020ರಲ್ಲಿ ಒಂದು ಪ್ರಕರಣ, ಒಬ್ಬ ವ್ಯಕ್ತಿಗೆ ಗಾಯ. ಅಂದರೆ 2020ರವರೆಗೆ ಒಟ್ಟು 82 ಇಂಥ ದಾಳಿಗಳು ನಡೆದಿದ್ದು, 43 ಮಂದಿಯನ್ನು ಬಲಿ ತೆಗೆದುಕೊಂಡಿದೆ. 145 ಮಂದಿ ಗಾಯಗೊಂಡಿದ್ದಾರೆ.
ಇವೆಲ್ಲ ಕೇವಲ ದಾಖಲಾದ ಪ್ರಕರಣಗಳು. ವರದಿಯೇ ಆಗದ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿದೆ ಎಂಬುದು ಸ್ಪಷ್ಟ. ಇಲ್ಲೆಲ್ಲ ಗೋರಕ್ಷಣೆಯೆಂಬುದು ಯಾವ್ಯಾವುದಕ್ಕೆ ನೆಪವಾಯಿತೋ ಗೊತ್ತಿಲ್ಲ.
ಮಾಂಸಾಹಾರದ ಆರೋಗ್ಯ ಲಾಭಗಳು
ಮಾಂಸಾಹಾರ ಸೇವಿಸುವವರು ಯಾವುದೇ ಆಹಾರಕ್ಕೂ ಹೊಂದಿಕೊಳ್ಳಬಲ್ಲವರಾಗುತ್ತಾರೆ. ಸಸ್ಯಾಹಾರವೂ ಅವರಿಗೆ ಇಷ್ಟವೇ ಆಗಿರುತ್ತದೆ. ಎರಡರ ಲಾಭವೂ ಅವರಿಗೆ ಸಿಗುತ್ತದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪ್ರೊಟೀನ್ ವಿಚಾರಕ್ಕೆ ಬಂದರೆ ಮಾಂಸಾಹಾರದಿಂದ ಹೆಚ್ಚು ಲಾಭವಿದೆ. ಪ್ರಾಣಿಮೂಲದಿಂದ ಸಿಗುವ ಪ್ರೊಟೀನ್ ಸಸ್ಯಮೂಲದಿಂದ ಸಿಗುವ ಪ್ರೊಟೀನ್‌ಗಿಂತಲೂ ತುಂಬಾ ಗುಣಮಟ್ಟದ್ದಾಗಿದೆ ಎಂಬುದು ವೈದ್ಯಕೀಯವಾಗಿ ಕೂಡ ಸಾಬೀತಾಗಿರುವ ಅಂಶ. ಹೃದಯಸಂಬಂಧಿ ಕಾಯಿಲೆಯಿಂದ ಸುರಕ್ಷಿತವಾಗಿರಲು ಮಾತ್ರವಲ್ಲದೆ ಕ್ಯಾನ್ಸರ್ ತಡೆಗೂ ಸಹಕಾರಿಯಾದ ಒಮೆಗಾ 3 ಹೇರಳವಾಗಿರುವುದು ಮೀನು ಮೊದಲಾದ ಸಮುದ್ರ ಆಹಾರ ಸೇರಿದಂತೆ ಮಾಂಸಾಹಾರದಲ್ಲಿಯೇ. ಪ್ರೊಟೀನ್, ಒಮೆಗಾ 3 ಮಾತ್ರವಲ್ಲದೆ ವಿಟಮಿನ್ ಎ ಕೂಡ ಮೀನಿನಂಥ ಆಹಾರದಲ್ಲಿ ಸಮೃದ್ಧವಾಗಿದ್ದು, ಮೆದುಳಿನ ಆರೋಗ್ಯಕ್ಕೆ ಇದು ಅತ್ಯಗತ್ಯ. ಮಾಂಸಾಹಾರವು ಉತ್ತಮ ಕೊಬ್ಬಿನ ಮೂಲವೂ ಹೌದು. ಮೊಟ್ಟೆಯ ಹಳದಿ ಭಾಗವು ದೇಹಕ್ಕೆ ಒಳ್ಳೆಯದೆನ್ನುತ್ತವೆ ಅಧ್ಯಯನಗಳು. ದೇಹದಲ್ಲಿ ಕಬ್ಬಿಣಾಂಶ ಮತ್ತು ವಿಟಮಿನ್ ಬಿ12 ಕಡಿಮೆಯಾದರೆ ನಿಶ್ಶಕ್ತಿ, ಆಯಾಸ ಕಾಡುವುದು. ಆದರೆ ಇವೆರಡರ ಉತ್ತಮ ಮೂಲವಾಗಿ ಮಾಂಸಾಹಾರ ಸಹಕಾರಿ. ಪ್ರಾಣಿಜನ್ಯವಾದ ಹಲವಾರು ಉತ್ಪನ್ನಗಳು ಕ್ಯಾಲ್ಸಿಯಂನ ಉತ್ತಮ ಮೂಲಗಳೂ ಆಗಿವೆ. ಮೂಳೆ, ಹಲ್ಲು, ಉಗುರುಗಳ ಆರೋಗ್ಯಕ್ಕೆ ತೀರಾ ಅಗತ್ಯವಾಗಿರುವ ಕ್ಯಾಲ್ಸಿಯಂ ಕೊರತೆ ಮಾಂಸಾಹಾರ ಸೇವಿಸುವವರಲ್ಲಿ ಕಾಣದು. ಹೀಗೆ ಮಾಂಸಾಹಾರದ ಕಾರಣದಿಂದಾಗಿಯೇ ಸಿಗುವ ಲಾಭಗಳ ಜೊತೆ ಸಸ್ಯಾಹಾರವನ್ನೂ ಸೇವಿಸುವ ಕಾರಣದಿಂದ ಇನ್ನಷ್ಟು ಆರೋಗ್ಯ ಲಾಭಗಳು ಮಾಂಸಾಹಾರ ಸೇವಿಸುವವರಿಗೆ ಸಿಗುತ್ತವೆ.
ಮಾಂಸಾಹಾರ ಎಲ್ಲೆಲ್ಲಿ? ಎಷ್ಟೆಷ್ಟು?
ದೇಶದಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಒಡಿಶಾ ಮತ್ತು ಜಾರ್ಖಂಡ್ ಅತಿ ಹೆಚ್ಚು ಮಾಂಸಾಹಾರ ಸೇವನೆ ಮಾಡುವವರಿರುವ ರಾಜ್ಯಗಳಾಗಿವೆ. ಈ ರಾಜ್ಯಗಳಲ್ಲಿ ಶೇ.97ಕ್ಕೂ ಹೆಚ್ಚು ಮಂದಿ ಮಾಂಸಾಹಾರ ಸೇವನೆ ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಪಂಜಾಬ್, ಹರ್ಯಾಣ, ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಅತಿ ಕಡಿಮೆ ಅಂದರೆ ಶೇ.40ಕ್ಕಿಂತಲೂ ಕಡಿಮೆ ಮಂದಿ ಮಾಂಸಾಹಾರ ತೆಗೆದುಕೊಳ್ಳುತ್ತಾರೆ. ಹೆಚ್ಚು ಮಾಂಸಾಹಾರ ಸೇವಿಸುವವರಿರುವ ರಾಜ್ಯಗಳನ್ನು ಗಮನಿಸುವುದಾದರೆ, ಕರ್ನಾಟಕದಲ್ಲಿ ಶೇ.79.1, ಕೇರಳದಲ್ಲಿ ಶೇ.97.4, ತಮಿಳುನಾಡಿನಲ್ಲಿ ಶೇ.97.8, ಆಂಧ್ರಪ್ರದೇಶದಲ್ಲಿ ಶೇ.98.4, ಪಶ್ಚಿಮ ಬಂಗಾಳದಲ್ಲಿ ಶೇ.98.7, ಅಸ್ಸಾಮಿನಲ್ಲಿ 78.6ರಷ್ಟು ಶೇ.50ರಷ್ಟು ಮಾಂಸಾಹಾರಿಗಳಿರುವುದು ಮುಖ್ಯವಾಗಿ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ.