ಸಾವರ್ಕರ್‌ವಾದಿ ಮಹೇಶಣ್ಣನಿಗೆ...
40 ವರ್ಷಗಳಿಂದ ನೀವು ಯಾವ ಜಗಲಿಯನ್ನು ಜರಿಯುತ್ತಿದ್ದಿರೋ ಅದೇ ಜಗಲಿಯಲ್ಲಿ ನಿಂತು ಈಗ ನಿಮ್ಮ ನೆರಳಿಗೇ ಕಲ್ಲು ಬೀಸುತ್ತಿದ್ದೀರಿ. ಈ ಕಲ್ಲುಗಳು, ನಿಮ್ಮನ್ನು ವಿಧಾನಸೌಧದಲ್ಲಿ ಕಾಣಲೇಬೇಕು ಎನ್ನುವ ತವಕದಲ್ಲಿ ಕೈಯಿಂದ ಕಾಸು ಖರ್ಚು ಮಾಡಿಕೊಂಡು ಹೋರಾಡಿದವರ ತಲೆಗಳ ಮೇಲೆ ಬೀಳುತ್ತಿವೆ. ಇವರೆಲ್ಲರೂ ತಲೆಗೆ ಪೆಟ್ಟಾದವರಂತೆ ನಿಮ್ಮ ನೆರಳನ್ನೇ ಶಪಿಸುತ್ತಾ ನಿಮ್ಮ ಸಾವರ್ಕರ್‌ವಾದಿ ಪಲಾಯನಕ್ಕೆ ಬೆಚ್ಚಿ ಬಿದ್ದಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇ ‘ಆರತಿ ತಟ್ಟೆ’ ಮಾಡಿಕೊಂಡು ಸಾವರ್ಕರ್ ಅವರನ್ನು ಪೂಜಿಸಿದ ‘ಪೌರೋಹಿತ್ಯಕ್ಕೆ’ ನಿಮ್ಮ ನೆರಳೇ ಬೆಚ್ಚಿ ಬಿದ್ದಿದೆ. ನಿಮಗೀಗ ನಿಮ್ಮ ನೆರಳೇ ಮರೆತು ಹೋಗಿರಬಹುದು, ಸ್ವಲ್ಪನೆನಪಿಸಿಕೊಳ್ಳಿ.
ನಮ್ಮ ಕೈ ಬೆರಳುಗಳಿಂದಲೇ ನಮ್ಮ ಕಣ್ಣುಗಳಿಗೆ ತಿವಿಯುವ ಪಿತೂರಿ ಪಾಂಡಿತ್ಯದ ಬಗ್ಗೆ ನಿಮ್ಮ ನೆರಳು 40 ವರ್ಷಗಳಿಂದ ಯುವ ಕಾರ್ಯಕರ್ತರನ್ನು ಎಚ್ಚರಿಸುತ್ತಲೇ ಇತ್ತು. ಪ್ರತೀ ಇಬ್ಬರ ನಡುವೆ ಬಿರುಕು ಮೂಡಿಸಿ ಮೂರು ಗ್ಯಾಂಗ್ ಮಾಡುವ ಮನೆ ಮುರುಕ ಪಾಂಡಿತ್ಯದ ಬಗ್ಗೆ 40 ವರ್ಷಗಳ ಕಾಲ ನಿಮ್ಮ ನೆರಳು ಮಾತಾಡಿತ್ತು. ಸಹೋದರರಾಗಿದ್ದ ಕರ್ಣಾರ್ಜುನರನ್ನು ಕಾದಾಡಿಸಿದ್ದು ಯಾರು?
ಸಹೋದರರಾಗಿದ್ದ ಭೀಮ ದುರ್ಯೋಧನರನ್ನು ಬಡಿದಾಡಿಸಿದ್ದು ಯಾರು?
ಸಹೋದರರಾಗಿದ್ದ ವಾಲಿ-ಸುಗ್ರೀವರನ್ನು ಕಚ್ಚಾಡಿಸಿದ್ದು ಯಾರು?
ಸಹೋದರರಾಗಿದ್ದ ರಾವಣ-ವಿಭೀಷಣರನ್ನು ಶತ್ರುಗಳನ್ನಾಗಿಸಿದ್ದು ಯಾರು?
ಒಂದೇ ಮನೆಯಲ್ಲಿ, ಒಂದೇ ಕುಟುಂಬದಲ್ಲಿ ಇದ್ದವರನ್ನು ಕಚ್ಚಾಡಿಸಿ, ಕಾದಾಡಿಸಿದ ಇಂತಹ ಪುರಾಣದ ಸಂಗತಿಗಳನ್ನು ಅಂಗೈಯಲ್ಲಿಟ್ಟುಕೊಂಡು ಬಹುಜನರ, ದ್ರಾವಿಡರ ಚರಿತ್ರೆಗಳ ಪಾಠ ಮಾಡುತ್ತಿದ್ದ ನಿಮ್ಮ ನೆರಳು ಇವತ್ತು ನರಳುತ್ತಿದೆ. ಏಕೆಂದರೆ ನಿಮ್ಮ ನೆರಳಿಗೂ ಒಂದು ಚರಿತ್ರೆ ಇದೆ. ಸಮತಾ ಸೈನಿಕ ದಳ ಕಟ್ಟಿದ ದಿನಗಳಿಂದ ಮೊನ್ನೆ ನೀವು ಸಾವರ್ಕರ್‌ರನ್ನು ಪೂಜಿಸಿದ ಹಿಂದಿನ ದಿನದವರೆಗೂ ಈ ನೆರಳು ನಿಮಗೆ ಅಂಟಿಕೊಂಡೇ ಇತ್ತು. ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್ ಮುಂತಾದ ಮಹನೀಯರ ವಿಚಾರ-ಹೋರಾಟಗಳಿಂದ ರಕ್ತ ಮಾಂಸ ತುಂಬಿಕೊಂಡ ನಿಮ್ಮ ನೆರಳಿಗೆ ಒಂದು ವ್ಯಕ್ತಿತ್ವ ರೂಪುಗೊಂಡಿತ್ತು. ಈ ವ್ಯಕ್ತಿತ್ವದ ಕಾರಣಕ್ಕೆ ನೀವು ಸಾವಿರಾರು ಮಂದಿಗೆ ಮಹೇಶಣ್ಣ ಆಗಿದ್ದೀರಿ. ಇವರೆಲ್ಲರೂ ನಿಮ್ಮ ನೆರಳಿನ ಭಾಗವೇ ಆಗಿದ್ದರು. 40 ವರ್ಷಗಳಿಂದ ನೀವು ಯಾವ ಜಗಲಿಯನ್ನು ಜರಿಯುತ್ತಿದ್ದಿರೋ ಅದೇ ಜಗಲಿಯಲ್ಲಿ ನಿಂತು ಈಗ ನಿಮ್ಮ ನೆರಳಿಗೇ ಕಲ್ಲು ಬೀಸುತ್ತಿದ್ದೀರಿ. ಈ ಕಲ್ಲುಗಳು, ನಿಮ್ಮನ್ನು ವಿಧಾನಸೌಧದಲ್ಲಿ ಕಾಣಲೇಬೇಕು ಎನ್ನುವ ತವಕದಲ್ಲಿ ಕೈಯಿಂದ ಕಾಸು ಖರ್ಚು ಮಾಡಿಕೊಂಡು ಹೋರಾಡಿದವರ ತಲೆಗಳ ಮೇಲೆ ಬೀಳುತ್ತಿವೆ. ಇವರೆಲ್ಲರೂ ತಲೆಗೆ ಪೆಟ್ಟಾದವರಂತೆ ನಿಮ್ಮ ನೆರಳನ್ನೇ ಶಪಿಸುತ್ತಾ ನಿಮ್ಮ ಸಾವರ್ಕರ್‌ವಾದಿ ಪಲಾಯನಕ್ಕೆ ಬೆಚ್ಚಿ ಬಿದ್ದಿದ್ದಾರೆ. ಬಹುಜನ ರಾಜಕಾರಣದಿಂದ ನೀವೇ ಬಹುಜನ ವಿರೋಧಿ ಎಂದು ನಂಬಿದ್ದ ಬಿಜೆಪಿಗೆ ಜಾರಿದಾಗಲೂ ಇವರಲ್ಲಿ ಬಹಳ ಮಂದಿ ಶಪಿಸಿರಲಿಲ್ಲ. ಅಧಿಕಾರ-ಅವಕಾಶಕ್ಕಾಗಿ ನೀವು ಜಾರಿದ್ದೀರಿ. ಸಾಂಪ್ರದಾಯಿಕ ಅವಕಾಶವಾದಿಗಳ ಗರ್ಭಗುಡಿಯೊಳಗೆ ಹೊಸದಾಗಿ ಅವಕಾಶವಾದಿತನ ಕಲಿತ ನಿಮಗೆ ಪ್ರವೇಶ ಸಿಗುವುದಿಲ್ಲ ಎಂದೇ ತಮ್ಮನ್ನು ತಾವು ಸಮಾಧಾನ ಮಾಡಿಕೊಂಡಿದ್ದರು. ಆದರೆ, ನೀವು ಗರ್ಭಗುಡಿ ಪ್ರವೇಶಿಸುವ ಭ್ರಮೆಯಲ್ಲಿ ನಿಮ್ಮ ನೆರಳಿನ ಬೆನ್ನಿಗೇ ಚೂರಿ ಹಾಕುತ್ತೀರಿ ಎಂದು ಇವರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. 40 ವರ್ಷಗಳ ನಿಮ್ಮ ಬೀದಿ ಹೋರಾಟಗಳು, ಕಾರ್ಯಾಗಾರಗಳು, ವಿಚಾರ ಮಂಥನಗಳು, ಭಾಷಣಗಳು, ಮಾತು-ಕತೆಗಳೆಲ್ಲಾ ನಿಮ್ಮ ನೆರಳನ್ನು ಈಗ ಕಟಕಟೆಗೆ ಎಳೆದು ತಂದು ಪ್ರಶ್ನಿಸುತ್ತಿವೆ. ಹೇಳಿ, ಸಾವರ್ಕರ್ ಪ್ರತಿಪಾದಿಸಿದ ಜಾತಿ ವ್ಯವಸ್ಥೆಯನ್ನು ಅಂಬೇಡ್ಕರ್ ಅವರು ಕಟುವಾಗಿ ಟೀಕಿಸಿದ್ದರೋ ಇಲ್ಲವೋ? ಪರಿವಾರದ ಮಂದಿ ಪೋಷಿಸುತ್ತಿರುವ ಜಾತಿ ವ್ಯವಸ್ಥೆ-ವರ್ಣ ವ್ಯವಸ್ಥೆಯನ್ನು ಅಂಬೇಡ್ಕರ್ ವಿರೋಧಿಸಿದ್ದರೋ ಇಲ್ಲವೋ? ಪೆರಿಯಾರ್ ಅವರು ಈಗಲೂ ನಿಮ್ಮ ಎದೆಯ ಬೆಳಕಾಗಿದ್ದಾರೋ ಇಲ್ಲವೋ? ಪೆರಿಯಾರ್ ಅವರು ನಿಮ್ಮ ಎದೆಯಾಳದ ಬೆಳಕಾಗಿದ್ದರೆ ಆ ಬೆಳಕಲ್ಲಿ ಸಾವರ್ಕರ್ ನಿಮಗೆ ಇಷ್ಟು ಪ್ರಕಾಶಮಾನರಾಗಿ ಕಾಣಲು ಸಾಧ್ಯವೇ? ಅಂಬೇಡ್ಕರ್-ಸಾವರ್ಕರ್, ಪೆರಿಯಾರ್-ಸಾವರ್ಕರ್, ಬುದ್ಧ-ಸಾವರ್ಕರ್, ಬಸವಣ್ಣ-ಸಾವರ್ಕರ್, ಫುಲೆ-ಸಾವರ್ಕರ್ ಒಟ್ಟೊಟ್ಟಿಗೇ ಇರಲು ಸಾಧ್ಯವೇ? ನೀವು ಸಾವರ್ಕರ್ ಅವರನ್ನು ಪೂಜಿಸುತ್ತಲೇ ಬುದ್ಧನನ್ನು ಆರಾಧಿಸಲು-ಆಚರಿಸಲು ಸಾಧ್ಯವೇ? ದುರ್ಯೋಧನ ವರ್ಣ ವ್ಯವಸ್ಥೆಗೆ ವಿರುದ್ಧವಾಗಿ ಬೆಸ್ತ ಕರ್ಣನಿಗೆ ರಾಜಾಶ್ರಯ ನೀಡಿದ್ದರಿಂದಲೇ ಮಹಾಭಾರತ ಯುದ್ಧ ಶುರುವಾಗಿದ್ದು ಎನ್ನುವುದನ್ನು ಈಗಲೂ ಒಪ್ಪುತ್ತೀರಾ? ವರ್ಣ ವ್ಯವಸ್ಥೆಗೆ ವಿರುದ್ಧವಾಗಿ ಶೂದ್ರ ಶಂಬೂಕ ಮಹರ್ಷಿ ತಪಸ್ಸು ಮಾಡಿದ್ದರಿಂದಲೇ ರಾಮಾಯಣ ನಡೆಯಿತು ಎನ್ನುವುದನ್ನು ನೀವು ಈಗಲೂ ಒಪ್ಪುತ್ತೀರಾ? ನಿಮ್ಮ ನೆರಳಿನಿಂದಲೇ ಎದ್ದು ಬರುವ ಈ ಪ್ರಶ್ನೆಗಳಿಗೆ ನೀವು ಉತ್ತರಿಸುತ್ತಲೇ ಇರಬೇಕಾಗುತ್ತದೆ. ನೀವು ವರ್ತಮಾನದಲ್ಲಿ ನಡೆಸುವ ಹೋರಾಟಗಳೆಲ್ಲವೂ ನಿಮ್ಮ ಚರಿತ್ರೆಯ ವಿರುದ್ಧವೇ ಆಗಿರುತ್ತವೆ. ನಿಮ್ಮ ವಿರುದ್ಧವೇ ನೀವು ಯುದ್ಧ ನಡೆಸುವ ಗ್ರಹಚಾರಕ್ಕೆ ತುತ್ತಾಗಿದ್ದೀರಿ. ಹೀಗಾಗಿ ನಿಮ್ಮ ಕೈ ಬೆರಳುಗಳಿಂದಲೇ ನಿಮ್ಮ ಕಣ್ಣಿಗೆ ತಿವಿದುಕೊಳ್ಳುತ್ತಲೇ ಇರುತ್ತೀರಿ. ಹೀಗಾದಾಗ ನಿಮ್ಮ ಬಾಕಿ ರಾಜಕಾರಣದ ಪಾಡೇನು?
ಬಿಲ್ಕಿಸ್‌ಬಾನು ಅತ್ಯಾಚಾರಿಗಳನ್ನು ಜೈಲಿಂದ ರಾಜಮರ್ಯಾದೆಯಲ್ಲಿ ಬಿಡುಗಡೆಗೊಳಿಸಿ ಅವರಿಗೆ ಪೂಜಿಸಿದ್ದನ್ನು ನೀವು ಸಹಿಸಿಕೊಳ್ಳುತ್ತಲೇ ಬಹುಜನರ ಮಕ್ಕಳ ಅತ್ಯಾಚಾರವನ್ನೂ ಸಹಿಸಿಕೊಳ್ಳಬೇಕು. ಜಾತಿ ಶ್ರೇಷ್ಠತೆಯ ವ್ಯಸನದಿಂದಲೇ ಮನುಕುಲದ ಚೈತನ್ಯರನ್ನೆಲ್ಲಾ ಶಾಲಾ ಪಠ್ಯ ಪರಿಷ್ಕರಣೆ ನೆಪದಲ್ಲಿ ಅವಮಾನಿಸಿದ ಸರಕಾರ ಮತ್ತು ಸಚಿವರನ್ನು ನೀವು ಸಮರ್ಥಿಸಬೇಕು. ಇದರ ವಿರುದ್ಧ ಹೋರಾಡುತ್ತಿರುವವರನ್ನು ನೀವು ಟೀಕಿಸಬೇಕು. ಅಂಬೇಡ್ಕರ್ ಮತ್ತು ಸಂವಿಧಾನ ನೀಡಿದ ಬಹುಜನರ ಸವಲತ್ತುಗಳನ್ನು ನಿಮ್ಮದೇ ಸರಕಾರ ಕಿತ್ತುಕೊಳ್ಳುತ್ತಿರುವುದನ್ನು ನೀವು ಸಹಿಸಿಕೊಳ್ಳಬೇಕು. ಸಂವಿಧಾನ ಬದ್ದ ತಮ್ಮ ಹಕ್ಕುಗಳಿಗಾಗಿ ಹೋರಾಡುವವರ ವಿರುದ್ಧ ನೀವು ಧ್ವನಿ ಎತ್ತಬೇಕು. ‘‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು’’ ಎನ್ನುವವರನ್ನು ನೀವು ಪೂಜ್ಯ ಭಾವದಿಂದ ಕಾಣಬೇಕು. ನಿತ್ಯ ನಿಮ್ಮ ಆಹಾರ ಸಂಸ್ಕೃತಿಯನ್ನು ಅವಮಾನಿಸುವವರನ್ನು ನೀವು ಸಂಸ್ಕಾರವಂತರೆಂದು ಭಾವಿಸಬೇಕು. ...ಒಟ್ಟಿನಲ್ಲಿ ಬಾಕಿ ರಾಜಕಾರಣದುದ್ದಕ್ಕೂ ನೀವು ನಿಮ್ಮ ನೆರಳಿನ ವಿರುದ್ಧವೇ ಕಲ್ಲುಗಳನ್ನು ಬೀಸುತ್ತಿರಬೇಕು. ಈ ಕಲ್ಲುಗಳು ನಿಮ್ಮ ನೆರಳಲ್ಲಿ ನಿಂತವರ ತಲೆಯಾದರೂ ಒಡೆಯಲಿ, ಎದೆಯಾದರೂ ಒಡೆಯಲಿ