ಅನುಗಾಲ
ಅಜ್ಞಾನ ಪರಮ ಪುಣ್ಯ

ಎಲ್ಲ ಕಿಲುಬುಗಳನ್ನು ತೊಳೆದು ಸ್ವಚ್ಛಗೊಳಿಸುವುದು ಸುಲಭ ಸಾಧ್ಯವಲ್ಲ; ಮಾತ್ರವಲ್ಲ ಅದೀಗ ಅಸಾಧ್ಯದ ಹಂತಕ್ಕೆ ತಲುಪಿದೆ. ಇದಕ್ಕೆ ಕಾರಣವೆಂದರೆ ಈ ಅಜ್ಞಾನದ ಅಡಿಯಲ್ಲಿ ಮುಗ್ಧತನಕ್ಕೆ ಬದಲಾಗಿ ಮೂರ್ಖತನವಿದೆ. ಇಂತಹ ಅಜ್ಞಾನವನ್ನು ವಿದ್ಯೆಯ ಮೂಲಕ ಕಿತ್ತುಹಾಕುವುದು ಸಾಧ್ಯವಿಲ್ಲ. ವಿದ್ಯಾವಂತರೂ ಮೂರ್ಖರೇ ಆಗಿರಲು ಸಾಧ್ಯವೆಂಬುದಕ್ಕೆ ಹಗಲಸೂರ್ಯನಷ್ಟೇ ಪ್ರಖರ ಉದಾಹರಣೆಗಳಿವೆ. ರಾಕೆಟ್ ಉಡಾಯಿಸುವುದಕ್ಕೂ ಮುಹೂರ್ತ ಹುಡುಕಿ, ಪುರೋಹಿತರಿಂದ ಪೂಜೆ ಸಲ್ಲಿಸಿ ಕುಂಕುಮ-ಬೂದಿ ಹಚ್ಚಿ, ಹಣ್ಣುಕಾಯಿ ಮಾಡುವ ವಿದ್ಯಮಾನಗಳ ನಡುವೆ ಅಜ್ಞಾನವನ್ನು ವಿಜ್ಞಾನ ಪಲ್ಲಟಗೊಳಿಸುವುದಾದರೂ ಹೇಗೆ? ಸುಜ್ಞಾನವು ಉದಿಸುವುದಾದರೂ ಹೇಗೆ?
ಕುಡುಕನೊಬ್ಬನನ್ನು ಮದ್ಯದ ಚಟದಿಂದ ಪಾರು ಮಾಡಲು ಯೋಗಿಯೊಬ್ಬನ ಬಳಿ ಒಯ್ದರಂತೆ. ಆ ಯೋಗಿಯು ಆತನಿಗೆ ಸಾಕಷ್ಟು ಯೋಗಸಾಧನೆಯ ಮಾರ್ಗವನ್ನು ಸೂಚಿಸಿ ಶೀರ್ಷಾಸನ ಮಾಡಿದರೆ ಒಳ್ಳೆಯದು, ಮದ್ಯವ್ಯಸನದಿಂದ ಹೊರಗೆ ಬರಬಹುದು ಎಂದೆಲ್ಲ ಬುದ್ಧಿ ತಿಳಿ ಹೇಳಿದನಂತೆ. ಒಂದಷ್ಟು ದಿನಗಳು ಸಂದವು. ತನ್ನ ಈ ರೋಗಿಯ ಸ್ಥಿತಿಯೇನಾಗಿದೆಯೆಂಬ ಕುತೂಹಲ ಯೋಗಿಗೆ. ಆ ಮದ್ಯವ್ಯಸನಿಯ ಮನೆಯವರನ್ನು ವಿಚಾರಿಸಿದಾಗ ಅವರು ‘‘ಅವನೀಗ ಶೀರ್ಷಾಸನ ಮಾಡಿಕೊಂಡೇ ಮದ್ಯಪಾನ ಮಾಡಲು ಕಲಿತಿದ್ದಾನೆ’’ ಎಂದರಂತೆ. ನಮ್ಮ ದೇಶದ ಭಾರತೀಯತೆಯ ಕಥೆ ಹೆಚ್ಚು ಕಡಿಮೆ ಹೀಗಿದೆ. ನಾವು ಭಾರತೀಯರಾಗುವ ನಮ್ಮ ಹಠದಲ್ಲಿ ಧರ್ಮದ, ಪರಂಪರೆಯ ಮೌಲ್ಯಗಳನ್ನು ಕೈಬಿಟ್ಟು ಒಂದಿಷ್ಟು ಆಚಾರಗಳನ್ನು ವಿಕಾರವಾಗಿ ತಿರುಚಿ ನಮ್ಮ ಮೇಲ್ಮೆಯನ್ನು ಸಾಧಿಸಲು ಅನ್ನುವುದಕ್ಕಿಂತಲೂ ಪ್ರದರ್ಶಿಸಲು ಯತ್ನಿಸಿದ್ದೇವೆಯೇ ಹೊರತು ಅದರ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಈ ದೇಶಕ್ಕೊಂದು ‘ಭವ್ಯ’ ಪರಂಪರೆಯಿದೆ. ಭವ್ಯ ಎಂದರೇನೆಂದು ವಿವರಿಸುವ ಗೋಜಿಗೆ ಹೋಗಬಾರದು. ವಿಶ್ವದ ಎಲ್ಲ ದೇಶಗಳಿಗೂ ಸಮಾಜಗಳಿಗೂ, ಪಂಗಡಗಳಿಗೂ ವ್ಯಕ್ತಿಗಳಿಗೂ ಅವರವರ ಪರಂಪರೆಯೇ ಭವ್ಯ.
ನಮ್ಮಲ್ಲನೇಕ ವಿದ್ವಾಂಸರು ಪಾಶ್ಚಾತ್ಯರು ಕತ್ತಲಿನಲ್ಲಿದ್ದಾಗ ಭಾರತಭೂಖಂಡ ಬೆಳಕಿನಲ್ಲಿತ್ತು ಮಾತ್ರವಲ್ಲ, ಬೆಳಕು ತೋರಿತು ಎಂದು ಹೇಳುವುದಿದೆ. ಇದಕ್ಕೆ ಸ್ವಾಮಿ ವಿವೇಕಾನಂದರಿಂದ ಮೊದಲ್ಗೊಂಡು ಅನೇಕ ದಾರ್ಶನಿಕರನ್ನು ಉದಾಹರಿಸಿ ಅವರು ಯಾವ ಮತ್ತು ಎಂತಹ ಸಂದರ್ಭದಲ್ಲಿ ಹೇಳಿದರೆಂಬುದನ್ನು ಮರೆಮಾಚುತ್ತೇವೆ. ಪಶ್ಚಿಮದಿಂದ ಬಂದ ವಿದ್ವಾಂಸರಲ್ಲಿ ಕೆಲವರಾದರೂ ಇಲ್ಲಿನ ಜ್ಞಾನವನ್ನು, ಗ್ರಂಥಭಂಡಾರವನ್ನು ಕಲಿತರು, ಮೆಚ್ಚಿಕೊಂಡರು ಎಂದು ಮ್ಯಾಕ್ಸ್‌ಮುಲ್ಲರ್ ಮುಂತಾದವರನ್ನು ನಿದರ್ಶನವಾಗಿ ಹೇಳುತ್ತೇವೆ. ವಿಶ್ವದ ಯಾವುದೇ ಸಂಶೋಧನೆ, ವಿದ್ವತ್ತುಗಳನ್ನು ಅದು ನಮ್ಮಲ್ಲಿ ಮೊದಲೇ ಇತ್ತು ಎಂದು ಹೇಳಲು ಉತ್ಸುಕರಾಗಿದ್ದೇವೆ. ಇಂತಹ ವಾದಕ್ಕೆ, ಜಿಜ್ಞಾಸೆಗೆ ಬೇಕಾದ ಪರಿಕರಗಳು ಕಾಕತಾಳೀಯವಾಗಿ ನಾವು ಚರಿತ್ರೆಯೆಂದು ಭ್ರಮಿಸುವ ಪುರಾಣಗಳಲ್ಲಿವೆ. ನಮ್ಮ ಪುಷ್ಪಕ ವಿಮಾನವು ರೈಟ್ ಸೋದರರಿಗೆ ವಿಮಾನವನ್ನು ಕಂಡುಹಿಡಿಯಲು ನೆರವಾಯಿತೆಂದು, ಪ್ಲಾಸ್ಟಿಕ್ ಸರ್ಜರಿಯೂ ಸಾವಿರಾರು ವರ್ಷಗಳ ಹಿಂದೆಯೇ (ಅಂದರೆ ಗಣಪತಿಯ ಆನೆ-ಮನುಷ್ಯ ಬೆಸುಗೆಯ ಪುರಾಣಕಾಲದಲ್ಲಿ) ನಮ್ಮಲ್ಲಿತ್ತೆಂದು ವಿವರಿಸುತ್ತೇವೆ.
ವಿಷ್ಣುವು ಗರುಡವಾಹನನಾಗಿರುವುದರಿಂದ ಸಾವರ್ಕರ್ ಬುಲ್‌ಬುಲ್ ಹಕ್ಕಿಗಳ ಮೇಲೆ ಕುಳಿತು ಅಂಡಮಾನ್‌ನಿಂದ ತಾಯ್ನಿಡಿಗೆ ಬಂದುಹೋಗುವುದನ್ನು ಸತ್ಯವೆಂದು ನಿರೂಪಿಸಬಹುದು. ಕೋಣನ ಮೇಲೆ, ಎಮ್ಮೆಯ ಮೇಲೆ ಯಾರೇ ಕುಳಿತು ಹೋದರೂ ಆತನು ಯಮರಾಯನ ವಂಶಜನೆಂದು ಗೌರವಿಸಬಹುದು. ನಮ್ಮಲ್ಲೊಬ್ಬರು ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟನೆಂಬುದನ್ನು ನಂಬುತ್ತಿರಲಿಲ್ಲ. ಅವರ ವಾದ ಸರಳ: ‘‘ನಾವು ಆಕಾಶದಲ್ಲಿ ಚಂದ್ರನನ್ನು ನೋಡುತ್ತೇವೆ. ಒಂದು ವೇಳೆೆ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಿದ್ದರೆ ಅದು ನಮಗೆ ಕಾಣಬೇಕಿತ್ತಲ್ಲ!’’ ಈ ಅದ್ಭುತ ವಾದಸರಣಿಗೆ ತಲೆದೂಗುವುದಲ್ಲ, ತಲೆಸುತ್ತಬೇಕು. ಕೊನೆಗೆ ಅವರನ್ನು ಒಪ್ಪಿಸಲು ನಾವು ‘‘ಪ್ರಾಯಃ ಆತ ಹಗಲು ಕಾಲಿಟ್ಟಿರಬೇಕು, ಹಾಗಾಗಿ ನಮಗೆ ಕಾಣಲಿಲ್ಲ’’ ಎಂಬ ಕುತರ್ಕವನ್ನಿಟ್ಟೆವು. ಅವರು ನಂಬಿದರೋ ನಂಬಿದಂತೆ ನಟಿಸಿದರೋ ಗೊತ್ತಿಲ್ಲ. ಹಾಗೆಂದು ನಮ್ಮ ಕನ್ನಡದ್ದೇ ಆದ ಕವಿರಾಜಮಾರ್ಗವೇ ಮುಂತಾದ ಅನೇಕ ಗ್ರಂಥಗಳನ್ನು ಬೆಳಕಿಗೆ ತರಲು, (ಅಕ್ಷರಶಃ ‘ಸಂಪಾದಿಸಲು’) ಕಿಟ್ಟೆಲ್ ಮುಂತಾದ ಪಾಶ್ಚಾತ್ಯ ವಿದ್ವಾಂಸರು ಬೇಕಾಯಿತೆಂಬುದನ್ನು ಮರೆಯುತ್ತೇವೆ. ಧನ್ವಂತರಿಯನ್ನು, ಆಯುರ್ವೇದವನ್ನು, ಹೋಮಿಯೋಪತಿಯನ್ನು ಬಡಬಗ್ಗರಿಗೆ ಧರ್ಮಾರ್ಥ ಉಣಬಡಿಸುವ ಈ ದೇಶದಲ್ಲಿ ರಾಜಕಾರಣಿಗಳೂ ಹಿರಿಯ ಅಧಿಕಾರಿಗಳೂ ಸೇರಿದಂತೆ ನಮ್ಮ ಶ್ರೀಮಂತ ಜನರು ಇಂದಿಗೂ ಅಲೋಪತಿಯ, ವಿದೇಶೀ ವೈದ್ಯರ, ಆಸ್ಪತ್ರೆಗಳ ಕುರಿತು ಇಟ್ಟಷ್ಟು ನಂಬುಗೆಯನ್ನು ಭಾರತೀಯ ವೈದ್ಯಪದ್ಧತಿಯ ಬಗ್ಗೆ ಇಟ್ಟಿಲ್ಲವೆಂಬುದು ಸರ್ವವಿಧಿತ.
ಸರಕಾರವೇ ಭಾರತೀಯತೆಯ ಕುರಿತು ಪುಟಗಟ್ಟಲೆ ಜಾಹೀರಾತುಗಳನ್ನು ನೀಡುತ್ತಾ ಭಾರತೀಯತೆಯನ್ನು ಉದ್ಧರಿಸುತ್ತಾ ತಮ್ಮ ವೈಯಕ್ತಿಕ ಅಗತ್ಯಗಳಿಗೆ ವಿದೇಶೀ ಮೂಲಗಳನ್ನೇ ಆಶ್ರಯಿಸುತ್ತಾರೆ. ಸರಕಾರದ ಮುಖ್ಯರೆಲ್ಲ ಅವಲಂಬಿಸುವುದು ವಿದೇಶೀ ಸೌಕರ್ಯಗಳನ್ನು, ಕಾರುಗಳನ್ನು, ಕೊನೆಗೆ ಕನ್ನಡಕ, ವಾಚು, ಪೆನ್ನುಗಳನ್ನೂ! ನಮ್ಮ ವಿದ್ಯಾವಂತ ಶ್ರೀಮಂತರು ಅಥವಾ ಅವರ ಮಕ್ಕಳು ಓದುವುದು, ಉದ್ಯೋಗ ಹಿಡಿಯುವುದು ವಿದೇಶಗಳಲ್ಲೇ! ಅಂಬಾನಿ ಈ ದೇಶದ ಅತ್ಯಂತ ಶ್ರೀಮಂತರಲ್ಲೊಬ್ಬರಾದರೂ ತಮ್ಮ ಮಗನಿಗೆ ಮನೆ ಕೊಂಡುಕೊಂಡದ್ದು ಭವ್ಯ ಭಾರತವೆಂಬ ಪವಿತ್ರ ಭೂಮಿಯಲ್ಲಲ್ಲ, ದುಬೈಯಲ್ಲಿ! ವೇದೋಪನಿಷತ್ತನ್ನು, ಪತಂಜಲಿಯನ್ನು, ಸದಾ ಪಠಿಸುವ ಮಂದಿ ವಿದೇಶಗಳಲ್ಲಿ ನೆಲ, ಮನೆ, ವ್ಯವಹಾರವನ್ನು ಮಾತ್ರವಲ್ಲ, ದ್ವೀಪಗಳನ್ನೇ ಕೊಳ್ಳುತ್ತಾರೆ! ಇನ್ನೂ ಸರಳವಾಗಿ ನೀಡಬೇಕಾದ ಉದಾಹರಣೆಯೆಂದರೆ ಇಲ್ಲಿ ಬ್ಯಾಂಕ್‌ಬಡ್ಡಿ ಬೆಲೆಯೇರಿಕೆಗನುಗುಣವಾಗಿ ಏರುತ್ತಿರಬೇಕಾದರೆ ಭಾರತದ ಶ್ರೀಮಂತರ ಕಪ್ಪೋ ಬಿಳಿಯೋ ಅಂತೂ ಹಣವಿರುವುದು ಸ್ವಿಸ್ ಬ್ಯಾಂಕುಗಳಲ್ಲಿ! ಮೇಲೆ ಆರಂಭದಲ್ಲಿ ಹೇಳಿದ ಕತ್ತಲು-ಬೆಳಕಿನ ಪ್ರಶ್ನೆಯು ವಿಜ್ಞಾನದ ವಾಸ್ತವವಾಗಿದ್ದು ಆನಂತರ ರೂಪಕವಾಗಿ ಬೆಳೆದಿರಬೇಕು. ಸೌರವ್ಯೆಹದ ವಿನ್ಯಾಸವೇ ಹಾಗೆ.
ಭೂಮಿಯ ಪೂರ್ವಭಾಗವು ಕತ್ತಲಿನಲ್ಲಿದ್ದಾಗ ಪಶ್ಚಿಮಭಾಗವು ಬೆಳಕಿನಲ್ಲೂ, ಪೂರ್ವಭಾಗವು ಬೆಳಕಿನಲ್ಲಿದ್ದಾಗ ಪಶ್ಚಿಮ ಭಾಗವು ಕತ್ತಲಿನಲ್ಲೂ ಇರುತ್ತದೆ. ಇದನ್ನು ಬದಲಾಯಿಸುವ ವೈಜ್ಞಾನಿಕ ಬೆಳವಣಿಗೆ ಇನ್ನೂ ಆಗಿಲ್ಲ, ಆಗಲಾರದು; ಆಗುವುದು ಸಾಧುವೂ ಅಲ್ಲ. ಆದರೆ ಇದನ್ನೇ ನಿಮಿತ್ತವಾಗಿಸಿ ನಾವು ಸರ್ವಗುಣಸಂಪನ್ನರೆಂದುಕೊಂಡು ಇತರರ ವಿರುದ್ಧ ಯುದ್ಧ ಸಾರದಿದ್ದರೂ ಮೇಲ್ಮೆಯನ್ನು ಹೇಳಿಕೊಳ್ಳುವುದು ಕವಿಸಮಯವಾಗಿದೆ. ಇಷ್ಟೇ ಅಲ್ಲ, ಸೌರವ್ಯೆಹವೆಂಬ ಪಾಠವು ನಮಗೆ ನಾವೆಷ್ಟು ನಗಣ್ಯರೆಂಬ ವಿನಯವನ್ನು, ಸೌಜನ್ಯವನ್ನು ಹೇಳಿಕೊಡುತ್ತದೆ. ಭೂಮಿಯೇ ವಿಶ್ವದ ಕೇಂದ್ರವೆಂದು ತಿಳಿದು ನಮ್ಮ ಪಂಡಿತರು, ಶಕ್ತರು ವ್ಯವಹರಿಸುತ್ತಿದ್ದ ಕಾಲವೊಂದಿತ್ತು. ಇದು ಸತ್ಯವಲ್ಲವೆಂದು ಗೊತ್ತಾಗಬೇಕಾದರೆ ಕಾಪರ್ನಿಕಸ್, ಗೆಲಿಲಿಯೋ ಹುಟ್ಟಬೇಕಾಯಿತು. ಈಗ ನಾವು ನಮ್ಮಂತಹ ಜೀವಿಗಳು ಬ್ರಹ್ಮಾಂಡದ ಯಾವಭಾಗದಲ್ಲಿದ್ದಾರೆಂದು ಹುಡುಕಹೊರಟಿದ್ದೇವೆ. ಇದಕ್ಕೆ ವಿಜ್ಞಾನದ ನೆರವನ್ನು ಪಡೆಯುತ್ತಿದ್ದೇವೆಯೇ ಹೊರತು ಮಂತ್ರ-ಮಾಟಗಳನ್ನಲ್ಲ.
ಆದರೂ ನಾವು ಜನರಿಗೆ ನಮ್ಮ ಪೌರಾಣಿಕ ಕಲ್ಪನೆ ಮತ್ತು ನಂಬಿಕೆಗಳನ್ನು ಹೇಳುತ್ತೇವೆ. ಅವೇ ನಮ್ಮ ಕೈಹಿಡಿದು ಮುನ್ನಡೆಸುತ್ತವೆಂದು ಪ್ರಚಾರ ಮಾಡುತ್ತೇವೆ. ನಮ್ಮ ಬಹುಕೋಟಿ ಜನರು ಅದಾನಿ ವಿಶ್ವದ ಮೂರನೇ ಅತೀದೊಡ್ಡ ಶ್ರೀಮಂತನೆಂದು ಸಂತಸದಿಂದ ಕುಣಿಯುತ್ತಾರೆ. ಕೆಲವು ಸಮಯದ ಹಿಂದೆ ಸಾಮಾಜಿಕ ಜಾಲತಾಣದ ಮಾಧ್ಯಮವೊಂದು ಒಬ್ಬಾಕೆ ನಟಿ ಗರ್ಭಿಣಿಯಾಗಿದ್ದನ್ನು ಪ್ರಕಟಿಸಿ ‘ರಾಜ್ಯದ ಜನತೆ ಸಂತೋಷಪಡಬೇಕಾದ ಕ್ಷಣ ಇದು’ ಎಂದು ಪ್ರಚಾರಮಾಡಿತು. ಕೇಳಿ ನಲಿದವರೂ ಇರಬಹುದು! ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಯಜ್ಞಯಾಗಗಳು ಈಗಲೂ ನಡೆಯುತ್ತವೆ. ಎದುರಾಳಿಯನ್ನು ಸೋಲಿಸಲು ಮಾರಣಹೋಮವನ್ನು ಮಾಡುವ ರಾಜಕಾರಣಿಗಳಿದ್ದಾರೆ. ಚುನಾವಣೆ ಬರುತ್ತದೆಂದಾದರೆ ಪೂಜಾಕೇಂದ್ರಗಳ ದಿಗ್ವಿಜಯದ ಅಶ್ವಮೇಧ ನಡೆಯುತ್ತದೆ. ಜನರು ಇವನ್ನೆಲ್ಲ ಗಮನಿಸಿ ಅವೆಲ್ಲದಕ್ಕೂ ತಾವೇ ಕಾರಣಕರ್ತರೆಂದು ಬೀಗುತ್ತಾರೆ. ಇವೆಲ್ಲವು ತಮ್ಮ ಸುಕ್ಷೇಮಕ್ಕಾಗಿ ಎಂದು ಮಾತನಾಡುತ್ತಾರೆ. ಇಂತಹ ಅಪ್ರಸ್ತುತ ಪ್ರಚಾರಗಳು ಜನರನ್ನು ಮರುಳುಮಾಡಲು ಬೇಕಷ್ಟಿವೆ. ಈ ತಂತ್ರಗಳು ಹೇಗೆ ಸಾಧ್ಯ? ಭಾರತವೆಂಬ ಈ ಭೂಖಂಡದ ನೂರಾರು ಕೋಟಿ ಜನರಿಗೆಲ್ಲ ಇಲ್ಲಿ ನಡೆಯುವ ಎಲ್ಲ ಸಂಗತಿಗಳ, ಕುಟಿಲ ಕಾರಸ್ಥಾನಗಳ ಕುರಿತು ಗೊತ್ತಿರಲಾರದು. ತಾವು ಉಸಿರಾಡುವ ಗಾಳಿ ತಮ್ಮ ಸುತ್ತಮುತ್ತ, ಒಳ-ಹೊರಗೆ ಇದೆಯೆಂಬುದನ್ನೂ ಅರಿಯದವರು ಇರಬಹುದು. ನಾವು ಕಲಿಯುವ ವಿದ್ಯೆಗೂ, ನಮ್ಮ ಅರಿವಿಗೂ, ತರ್ಕಕ್ಕೂ ಸಂಬಂಧವಿರುವುದಿಲ್ಲ. ಅದಕ್ಕೆ ಸಂದರ್ಭಸಹಿತ ವಿವರಣೆ ಕೊಡಬೇಕಾದ ಪರೀಕ್ಷೆಯಿರುವುದಿಲ್ಲ. ಏಕೆಂದರೆ ಎಂಬುದನ್ನು ಅನೇಕರು ಸವಾಲಾಗಿ ಎದುರಿಸುವುದಿಲ್ಲ. ‘ನಮಗಿದು ಇಷ್ಟ’, ಅಷ್ಟೇ.
ಗೊತ್ತಿದ್ದವರೆಂದುಕೊಂಡವರಲ್ಲಿ ಕೆಲವರಿಗಾದರೂ ನಿಜ ಗೊತ್ತಿದೆ. ಅವರಿಗೆ ನಮ್ಮ ಸುತ್ತಮುತ್ತ ನಡೆಯುವ ಆಗುಹೋಗುಗಳ ಲಕ್ಷಣ ಮತ್ತು ಪರಿಣಾಮದ ಬಗ್ಗೆ ಅಂದಾಜಿಸುವ ಶಕ್ತಿಯಿದೆ. ಅವರ ಊಹೆಗಳು ಸರಕಾರದ ವಿವಿಧ ಇಲಾಖೆಗಳ ಅಂದಾಜಿನಂತಲ್ಲ. ಆಯವ್ಯಯದ, ಹವಾಮಾನದ ಕುರಿತು ಹೇಳುವ ಬಹಳಷ್ಟು ಅಧಿಕಾರಶಾಹಿಗಳು ತಮ್ಮ ಒಡೆಯರ ಮಾತಿಗೆ ಕಟ್ಟುಬಿದ್ದೋ ಅಥವಾ ಹೀಗೆ ಹೇಳಿದರೆ ತಮ್ಮನ್ನಾಳುವವರಿಗೆ ಸಂತೋಷವಾಗಬಹುದೆಂದೋ, ಇಲ್ಲವೇ ಹೀಗೆ ಹೇಳುವ ಮೂಲಕ ತಾವು ಜನಪ್ರಿಯರಾಗಬಹುದೆಂದೋ ತಿಳಿದುಹೇಳುತ್ತಾರೆಯೇ ವಿನಾ ಆ ಕುರಿತು ಆಮೂಲಾಗ್ರ ಅಧ್ಯಯನ, ಸಂಶೋಧನೆ ನಡೆಸಿ ಅಲ್ಲ. ಆದ್ದರಿಂದಲೇ ಇಂದು ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿದ್ದವರು ನಾಳೆ ಶಿಕ್ಷಣ ಇಲಾಖೆ, ನಾಡಿದ್ದು ಅರ್ಥ ಇಲಾಖೆಯ ಕಾರ್ಯದರ್ಶಿಯಾಗಬಲ್ಲರು. ಆದರೆ ಮುಗ್ಧರನ್ನು, ಮೂರ್ಖರನ್ನು ಮರುಳುಮಾಡುವಲ್ಲಿ ಕಲಿತ ವಿದ್ಯೆ, ಸಂಪಾದಿಸಿದ ಅನುಭವ ಇವೆಲ್ಲ ಉಪಯೋಗವಾಗುತ್ತವೆ. ಇದನ್ನು ಬಳಸಲು ಒಮ್ಮೆ ಸಿದ್ಧರಾದರೆ, ಶಕ್ತರಾದರೆ, ಉಳಿದಂತೆ ಬದುಕಿನ ಇತರ ಮೌಲ್ಯಗಳು- ಶಿಕ್ಷಣ, ವಿವೇಕ, ಪ್ರಾಮಾಣಿಕತೆ, ಬುದ್ಧಿಮತ್ತೆ, ಇವೆಲ್ಲ ಬೇಕಾಗುವುದೇ ಇಲ್ಲ. ಗಿಲಿಟು ಬದುಕಿನ ನಡುವೆ ನಿಜಸುವರ್ಣ ಯಾರಿಗೆ ಬೇಕು?
ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ವಿಜ್ಞಾನ- ಹೀಗೆ ಬದುಕಿನ ಯಾವುದೇ ಕ್ಷೇತ್ರವನ್ನು ಪರಿಗಣಿಸಿದರೂ ಅಲ್ಲಿ ಮೂಢನಂಬಿಕೆಗಳಿಗೆ ಗ್ರಾಸವಿದೆ. ವೈಚಾರಿಕತೆಯೂ ಮೋಸಕ್ಕೆ ಒಂದು ಹಾದಿ. ಜಾತೀಯತೆ, ಮತಾಂಧತೆ, ರಾಷ್ಟ್ರೀಯತೆ, ಕೊನೆಗೆ ಜಾತ್ಯತೀತತೆಯೂ ಜನರನ್ನು ಮರುಳುಮಾಡಬಲ್ಲುದು. ಇಡೀ ವಿಶ್ವಕ್ಕೆ ಸಲ್ಲುವವರನ್ನೂ ನಾವು ನಮ್ಮ ನಮ್ಮ ದೇಶದ, ಮತದ, ಜಾತಿಯ, ಪಕ್ಷದ, ಅಭ್ಯರ್ಥಿಯೆಂಬಂತೆ, ಪ್ರತಿನಿಧಿಯೆಂಬಂತೆ ಚಿತ್ರಿಸುತ್ತೇವೆ. ಮನೆಯೊಳಗಿರಬೇಕಾದ ಮೌಲ್ಯಗಳನ್ನು ಅಪಮೌಲ್ಯಗೊಳಿಸಿ ಬೀದಿಗೆ ತರುವ ಉದ್ದೇಶವೇ ನಂಬಿಕಸ್ಥರನ್ನು ತಯಾರುಮಾಡುವುದು. ವಿಶೇಷವೆಂದರೆ ಬುದ್ಧಿ ನೀಡಬೇಕಾದ ದೇವರುಗಳೂ ತಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ಹೆಚ್ಚುಹೆಚ್ಚು ಬುದ್ಧಿಹೀನರನ್ನೇ ಸಿದ್ಧಗೊಳಿಸುತ್ತಾರೆ. ಭಾರತೀಯತೆಯ ನಡುವೆ ನಮ್ಮ ಸಂಸಾರ ಮಾತ್ರವಲ್ಲ, ಸಾಮಾಜಿಕ ಸಂಬಂಧಗಳು ಶಿಥಿಲಗೊಂಡದ್ದನ್ನು ನಾವು ಅಲಕ್ಷಿಸುತ್ತೇವೆ. ವಿವಾಹ ವಿಚ್ಛೇದವೆಂಬುದು, ವೃದ್ಧಾಶ್ರಮವೆಂಬುದು ಇಂದು ಅಚ್ಚ ಭಾರತೀಯವಾಗಿದೆ. ನಿಜಕ್ಕೂ ಮುಗ್ಧರಾದವರನ್ನು ಸುಲಭವಾಗಿ ದಿಕ್ಕುತಪ್ಪಿಸಬಹುದು. ಅವರು ನಂಬುತ್ತಾರೆ. ನಂಬಿದ ವಿಚಾರಗಳನ್ನು ಭಾವಪೂರ್ಣವಾಗಿ ಗ್ರಹಿಸುತ್ತಾರೆ. ಅದನ್ನೇ ಸತ್ಯದ ತಳಹದಿಯೆಂದು ಒಪ್ಪಿಕೊಳ್ಳುತ್ತಾರೆ.
ಆನಂತರ ಅವರನ್ನು ಬದಲಾಯಿಸಬೇಕಾದರೆ ಅದಕ್ಕಿಂತಲೂ ಪ್ರಖರವಾದ ಸತ್ಯದ ಬೆಳಕು ಅವರೆದುರಿರಬೇಕು. ಆದರೆ ಈ ಮುಗ್ಧತನದೊಂದಿಗೆ ಮೂರ್ಖತನವೂ ಸೇರಿದಾಗ ಮತ್ತು ಇದರೊಂದಿಗೆ ಮನುಷ್ಯಸಹಜವಾದ ಒಳಗಿನ ಷಡ್ವೈರಿಗಳು ಕಾಡತೊಡಗಿದಾಗ ಸುಳ್ಳೇ ಒಪ್ಪಿತವಾಗುತ್ತದೆ ಮತ್ತು ಇಷ್ಟವಾಗುತ್ತದೆ. ಈ ವಿದ್ಯೆಯು ಇತರರನ್ನೂ ಮೋಸಗೊಳಿಸಬಹುದೆಂದು ಗೊತ್ತಾದಾಗ ಅದೊಂದು ಉದ್ದಿಮೆಯೂ ಆಗುತ್ತದೆ. ಬದುಕು ಸುಲಭವಾಗುತ್ತದೆ. ಆದ್ದರಿಂದಲೇ ಇಂದು ಬಹುಸಂಖ್ಯಾತರು ಸುಳ್ಳಿನ, ಕೇಡಿನ, ಮೊರೆಹೋಗಿದ್ದಾರೆ. ಈ ಎಲ್ಲ ಕಿಲುಬುಗಳನ್ನು ತೊಳೆದು ಸ್ವಚ್ಛಗೊಳಿಸುವುದು ಸುಲಭ ಸಾಧ್ಯವಲ್ಲ; ಮಾತ್ರವಲ್ಲ ಅದೀಗ ಅಸಾಧ್ಯದ ಹಂತಕ್ಕೆ ತಲುಪಿದೆ. ಇದಕ್ಕೆ ಕಾರಣವೆಂದರೆ ಈ ಅಜ್ಞಾನದ ಅಡಿಯಲ್ಲಿ ಮುಗ್ಧತನಕ್ಕೆ ಬದಲಾಗಿ ಮೂರ್ಖತನವಿದೆ. ಇಂತಹ ಅಜ್ಞಾನವನ್ನು ವಿದ್ಯೆಯ ಮೂಲಕ ಕಿತ್ತುಹಾಕುವುದು ಸಾಧ್ಯವಿಲ್ಲ. ವಿದ್ಯಾವಂತರೂ ಮೂರ್ಖರೇ ಆಗಿರಲು ಸಾಧ್ಯವೆಂಬುದಕ್ಕೆ ಹಗಲಸೂರ್ಯನಷ್ಟೇ ಪ್ರಖರ ಉದಾಹರಣೆಗಳಿವೆ.
ರಾಕೆಟ್ ಉಡಾಯಿಸುವುದಕ್ಕೂ ಮುಹೂರ್ತ ಹುಡುಕಿ, ಪುರೋಹಿತರಿಂದ ಪೂಜೆ ಸಲ್ಲಿಸಿ ಕುಂಕುಮ-ಬೂದಿ ಹಚ್ಚಿ, ಹಣ್ಣುಕಾಯಿ ಮಾಡುವ ವಿದ್ಯಮಾನಗಳ ನಡುವೆ ಅಜ್ಞಾನವನ್ನು ವಿಜ್ಞಾನ ಪಲ್ಲಟಗೊಳಿಸುವುದಾದರೂ ಹೇಗೆ? ಸುಜ್ಞಾನವು ಉದಿಸುವುದಾದರೂ ಹೇಗೆ? ಇವೆಲ್ಲದರ ಪರಿಣಾಮವಾಗಿ ನಾವು ಭಾರತೀಯತೆಯೆಂದು ಹೇಳುತ್ತಿರುವ ಸಾಮಾಜಿಕ ಮೌಲ್ಯಗಳು ಶಿಥಿಲವಾಗುತ್ತಿವೆ. ಪರಸ್ಪರ ಪ್ರೀತಿ, ಗೌರವಗಳು ಇಲ್ಲವಾಗುತ್ತಿವೆ. ದೇವಾಲಯಕ್ಕೆ ಹೋಗಿ ಪೂಜೆಮಾಡುವವನಿಗೂ ತನ್ನ ವ್ಯಾವಹಾರಿಕ ದುರ್ಬುದ್ಧಿಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಬದಲಾಗಿ ಹಿಂಸೆಯಲ್ಲೂ ಹೇಗೆ ಲಾಭ ಮಾಡಬಹುದೆಂದು ಯೋಚಿಸುತ್ತಾನೆ. ಆದ್ದರಿಂದಲೇ ದೇವದೇವತೆಗಳ ಚಿತ್ರಗಳು, ಪ್ರತಿಮೆಗಳು ಹಿಂಸೆಗೆ ಪ್ರತೀಕವಾಗುತ್ತದೆ. ಮಹಿಳೆಯರನ್ನು ಗೌರವಿಸಬೇಕೆಂಬ ಭಾರತೀಯ ಮೌಲ್ಯ ಹಾಗೆಯೇ ಪುಸ್ತಕದಲ್ಲಿ ಉಳಿದು ಅತ್ಯಾಚಾರ ನಡೆಯುತ್ತಲೇ ಇರುತ್ತದೆ. ಅತ್ಯಾಚಾರಿಗಳು ಜೈಲಿನಿಂದ ಹೊರಬಂದಾಗ ‘ಸಂಸ್ಕಾರಿ’ಗಳಾಗುತ್ತಾರೆ. ಭ್ರಷ್ಟಾಚಾರ ಭಾರತೀಯತೆಗೆ ಮಾತ್ರವಲ್ಲ ಮನುಷ್ಯತ್ವಕ್ಕೆ ವಿರುದ್ಧವೆಂದು ಅನ್ನಿಸುವುದೇ ಇಲ್ಲ. ಅದಕ್ಕೊಂದು ದೇಶೀತಳಿಯ ಗೌರವವನ್ನು ಹುಡುಕಿದರಾಯಿತು. ಕಾವಿಯನ್ನು ಪವಿತ್ರವೆಂದು ಹೇಳುತ್ತಲೇ ಕಾವಿಬಟ್ಟೆಯಿಂದ ಕಾಮದ ಕಲೆಗಳನ್ನು ಅಳಿಸಿ ಸ್ವಚ್ಛಗೊಳಿಸುವ ಸಾಂಸ್ಕೃತಿಕ ಸಾಬೂನು ಸಿದ್ಧವಾಗುತ್ತದೆ. ಕದ್ದವರೆಲ್ಲ ಕಳ್ಳರಾಗುವುದಿಲ್ಲ; ಕದ್ದು ಸಿಕ್ಕಿಹಾಕಿಕೊಂಡವರಷ್ಟೇ ಕಳ್ಳರಾಗುತ್ತಾರೆ. ಇವನ್ನು ಪ್ರತಿಭಟಿಸುವ, ವಿರೋಧಿಸುವ ಮನಸ್ಥಿತಿಯಿರುವುದಿಲ್ಲ. ಏಕೆಂದರೆ ಇವೆಲ್ಲ ತಪ್ಪೆಂದು ನಮ್ಮ ಜ್ಞಾನಚಕ್ಷುಗಳಿಗೆ ಕಾಣುವುದಿಲ್ಲ.
ಭೂಮಿಯನ್ನೆಲ್ಲ ಸುತ್ತಿ ಬಂದರೂ ಅರಿವೇ ಲಘುವಾಗಿ ಅಜ್ಞಾನವೇ ಪರಮಪುಣ್ಯವಾಗಿ ಗೋಚರಿಸುತ್ತದೆ. ಹೇಳುವ ಸುಖ, ಕೇಳುವ ಸುಖ ಬದುಕಿನ ಚರಮ ಮೌಲ್ಯವಾಗುತ್ತದೆ. ಶೀರ್ಷಾಸನ ಹಾಕಿಕೊಂಡೇ ಮದ್ಯಪಾನಮಾಡುವ ಯೋಗ ಸಿದ್ಧಿಸುತ್ತದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ