ಗೋಮಾಳ ಜಮೀನನ್ನು ಜನಸೇವಾ ಟ್ರಸ್ಟ್‌ಗೆ ಮಂಜೂರಾತಿಗೆ ಸರಕಾರದ ತರಾತುರಿ
ಬೆಂಗಳೂರು: ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿರುವ ಗೋಮಾಳ ಜಮೀನಿನಲ್ಲಿ ಗೋ ಶಾಲೆ ತೆರೆಯಲು ಹಲವು ಸಂಘ ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವಗಳನ್ನು ತಿರಸ್ಕರಿಸಿದ್ದ ಸ್ಥಳೀಯ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಸಂಘಪರಿವಾರ ಹಿನ್ನೆಲೆಯ ಜನ ಸೇವಾ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.
ಕುರುಬರಹಳ್ಳಿಯಲ್ಲಿ ರೈತರು ಜಾನುವಾರುಗಳನ್ನು ಮನೆಯಲ್ಲಿಯೇ ಕಟ್ಟಿ ಹಾಕಿ ಮೇವು ನೀಡುತ್ತಿದ್ದಾರೆ. ಹೀಗಾಗಿ ಮೇವಿಗಾಗಿ ಜಾಗದ ಅವಶ್ಯಕತೆ ಇರುವ ಕಾರಣ ಗೋಮಾಳ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ವರದಿ ನೀಡಿ ಸಂಘ ಸಂಸ್ಥೆಗಳ ಪ್ರಸ್ತಾವಗಳನ್ನು ತಿರಸ್ಕರಿಸಿದ್ದ ಅಧಿಕಾರಿಗಳೇ ಇದೀಗ ಜನಸೇವಾ ಟ್ರಸ್ಟ್‌ಗೆ ಮಾತ್ರ ಗೋಮಾಳ ಜಮೀನನ್ನು ಹಂಚಿಕೆ ಮಾಡಲು ಪರೋಕ್ಷವಾಗಿ ಸಹಕರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಕೆಲ ದಾಖಲೆಗಳು ''the-file.in''ಗೆ ಲಭ್ಯವಾಗಿವೆ.
ಗೋಮಾಳ ಜಮೀನು ಖಾಯಂ ಮಂಜೂರಾತಿಗಾಗಿ ಜನಸೇವಾ ಟ್ರಸ್ಟ್ ಪ್ರಸ್ತಾವ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪ್ರಕ್ರಿಯೆಗಳನ್ನು ಪಾಲಿಸದೆಯೇ ತಾಲೂಕು ಮೋಜಣಿದಾರರು ಪೂರಕವಾದ ವರದಿ ಸಲ್ಲಿಸಿದ್ದರು.
ಅಷ್ಟೇ ಕ್ಷಿಪ್ರಗತಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಕೂಡ ಸ್ಕೆಚ್ ವರದಿಯನ್ನು 2021ರ ಜುಲೈ 9ರಂದು ಜಿಲ್ಲಾಧಿಕಾರಿ ಗಳಿಗೆ ಸಲ್ಲಿಸಿದ್ದಾರೆ.
ಜನಸೇವಾ ಟ್ರಸ್ಟ್‌ಗೆ ಗೋಮಾಳ ಜಮೀನು ಮಂಜೂರು ಮಾಡುವ ಉದ್ದೇಶದಿಂದಲೇ 2021ರ ಜುಲೈ 15ರಂದು ಚೆಕ್ ಲಿಸ್ಟ್‌ಗೆ ಸಹಿ ಮಾಡಿದ್ದಾರೆ. ಕೇವಲ ಒಂಬತ್ತು ದಿನದೊಳಗೆ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿರುವುದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ.
ನಾಡಕಚೇರಿ, ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯು ಜನಸೇವಾ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಲು ತೋರಿಸಿದ್ದ ಅತ್ಯುತ್ಸಾಹವನ್ನು ಮಾತೃ ಫೌಂಡೇಷನ್ ದಾಖಲೆ ಸಮೇತ ಸರಕಾರದ ಗಮನಕ್ಕೆ ತಂದಿದ್ದರು. ‘ಕುರುಬರಹಳ್ಳಿಯಲ್ಲಿ ರೈತರು ಮನೆಯಲ್ಲಿಯೇ ಜಾನುವಾರುಗಳನ್ನು ಕಟ್ಟಿಹಾಕಿ ಮೇವು ನೀಡುತ್ತಿದ್ದಾರೆ. ಹೀಗಾಗಿ ಗೋಮಾಳ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಮಾತೃ ಫೌಂಡೇಷನ್‌ಗೆ ಹಿಂಬರಹ ನೀಡಿದ್ದಾರೆ. ಆದರೆ ಈ ನಿಯಮ ಜನಸೇವಾ ಟ್ರಸ್ಟ್‌ಗೆ ಅನ್ವಯವಾಗುವುದಿಲ್ಲವೇ,? ಎಂದು ಫೌಂಡೇಷನ್ ಸರಕಾರಕ್ಕೆ ಪತ್ರವನ್ನೂ ಬರೆದಿತ್ತು.
ಅಷ್ಟೇ ಅಲ್ಲ, ಮಾತೃ ಫೌಂಡೇಷನ್ ಹೆಸರಿನಲ್ಲಿ ಸರ್ವೇಯಾಗಿದ್ದ ಜಾಗವನ್ನು ಸೇರಿಸಿ ಸರ್ವೇ ಸ್ಕೆಚ್ ಮಾಡಿ ರಾಜಸ್ವ ನಿರೀಕ್ಷರು ವರದಿ ಸಲ್ಲಿಸಿದ್ದರು. ಜನಸೇವಾ ಟ್ರಸ್ಟ್ ಅರ್ಜಿ ಸಲ್ಲಿಸುವ ಮುನ್ನವೇ ಸರ್ವೇ ಸ್ಕೆಚ್ ಮಾಡಿದ್ದ ರಾಜಸ್ವ ನಿರೀಕ್ಷಕರು ತಹಶೀಲ್ದಾರ್‌ಗೆ ಖುದ್ದು ವರದಿ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯನ್ನು ನೋಡಿದರೆ ಜನಸೇವಾ ಟ್ರಸ್ಟ್‌ಗೆ ಗೋಮಾಳ ಜಮೀನನ್ನು ಮಂಜೂರು ಮಾಡಲು ಸರಕಾರವು ಎಷ್ಟೊಂದು ತರಾತುರಿ ವಹಿಸಿದೆ ಎಂಬುದು ಗೋಚರವಾಗುತ್ತದೆ ಎಂದೂ ಮಾತೃ ಫೌಂಡೇಷನ್ ತನ್ನ ದೂರಿನಲ್ಲಿ ಪ್ರಸ್ತಾಪಿಸಿದೆ.
‘ಮಾತೃ ಫೌಂಡೇಷನ್‌ಗೆ ಗೋಮಾಳ ಜಮೀನು ಮಂಜೂರು ಮಾಡದ ಕಂದಾಯ ಇಲಾಖೆ ಅಧಿಕಾರಿ ಗಳ ವಿರುದ್ಧ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ಮತ್ತು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆ. ಹೀಗಾಗಿ ಜನಸೇವಾ ಟ್ರಸ್ಟ್ ಒಂದಕ್ಕೇ 24 ಎಕರೆ ಜಮೀನು ಮಂಜೂರು ಮಾಡ ಬಾರದು. ಇದೊಂದೇ ಟ್ರಸ್ಟ್‌ಗೆ ಇಷ್ಟೊಂದು ಜಾಗ ನೀಡಬಾರದು, ಎಂದು ಮಾತೃ ಫೌಂಡೇಷನ್ ರಾಜ್ಯದ ಅಡ್ವೋಕೇಟ್ ಜನರಲ್‌ಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿತ್ತು.