ಅಂಬೇಡ್ಕರ್ ಮಹಾನದಿಗೆ ಮತ್ತೊಂದು ಮಾರ್ಗ
ಈ ಹೊತ್ತಿನ ಹೊತ್ತಿಗೆ
ಅಂಬೇಡ್ಕರ್ ಅವರನ್ನು ಕುರಿತು ಕನ್ನಡದಲ್ಲಿ ಹಲವು ಪುಸ್ತಕಗಳು ಈಗಾಗಲೇ ಬಂದಿವೆ. ಕರ್ನಾಟಕ ಸರಕಾರವು ಹಲವು ಇಲಾಖೆ ಮತ್ತು ಪ್ರಾಧಿಕಾರಗಳ ಮೂಲಕ ಬಹಳ ಕಡಿಮೆ ಬೆಲೆಗೆ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಕುರಿತ 22 ಸಂಪುಟಗಳನ್ನು ಪ್ರಕಟಿಸಿ ಸಾಮಾನ್ಯ ಜನರಿಗೆ ತಲುಪಿಸುವ ಕಾರ್ಯ ವನ್ನು ಮಾಡುತ್ತಾ ಬಂದಿದೆ. ನಾವು ಸರಿಯಾಗಿ ಅಂಬೇಡ್ಕರ್ ಅವರನ್ನು ಅರಿಯಲು 22 ಸಂಪುಟಗಳು ಅತ್ಯಮೂಲ್ಯವಾದ ಗ್ರಂಥಗಳು. ಈ ಪುಸ್ತಕದ ಲೇಖಕರು ಆ ಗ್ರಂಥಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಅರ್ಥಮಾಡಿಕೊಂಡು ‘ಅಂಬೇಡ್ಕರ್ ಮಾರ್ಗ’ ವನ್ನು ರೂಪಿಸಿರುವುದು ಅವರ ಅಧ್ಯಯನದ ಆಸಕ್ತಿ ಯನ್ನು ಸೂಚಿಸುತ್ತದೆ. ಅಂಬೇಡ್ಕರ್ ಎಂಬ ಪ್ರಜ್ಞೆ ಇಂದು ಎಲ್ಲಾ ಸ್ತರದ ಜನರನ್ನು ತಲುಪುತ್ತಿದೆ. ಸ್ವತಂತ್ರ ಭಾರತದ ಅತ್ಯಂತ ಮೇಧಾವಿ, ವಿಶ್ವಜ್ಞಾನಿ, ಬುದ್ಧಿಜೀವಿ ಹೀಗೆ ಹಲವು ಹೆಸರುಗಳಲ್ಲಿ ಕರೆಯಬಹುದಾದ ಅಂಬೇಡ್ಕರ್ ಎಲ್ಲಾ ಸಮುದಾಯದ ಅರಿವಿನ ಗುರು. ಅಷ್ಟೇ ಅಲ್ಲ ಸಕಲ ಜೀವಿಗಳಿಗೂ ತನ್ನದೇ ಆದ ಬದುಕುವ ಹಕ್ಕು ರೂಪಿಸಿಕೊಟ್ಟು ಕಾನೂನು ಕಟ್ಟಳೆ ತಂದ ಬೌದ್ಧಿಕ ಗುರು.
ಅಂಬೇಡ್ಕರ್ ಎಂಬ ಮಹಾನದಿಗೆ ಹೊಸ ಸೇರ್ಪಡೆಯಂತೆ ಇರುವ ಗ್ರಂಥವೇ ‘ಅಂಬೇಡ್ಕರ್ ಮಾರ್ಗ’. ಜೀವನ, ಹೋರಾಟ, ಸಾಧನೆ ಕುರಿತ ಈ ಪುಸ್ತಕದ ಲೇಖಕರು ಸೋಮಲಿಂಗ ಗೆಣ್ಣುರ. ನಲ್ವತ್ತು ಅಧ್ಯಾಯಗಳಲ್ಲಿ ರೂಪುಗೊಂಡಿರುವ ಈ ಗ್ರಂಥವು ಅಂಬೇಡ್ಕರ್ ಅವರ ಜೀವನ,ಹೋರಾಟ ಸಾಧನೆ ಕುರಿತ ಮುಖ್ಯ ಘಟನೆಗಳನ್ನು ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಈ ಗ್ರಂಥವು ಪರಿಸರ ಮತ್ತು ಬಾಲ್ಯದಿಂದ ಶುರುವಾಗಿ ಅಂಬೇಡ್ಕರ್ ನಿಧನರಾದ ಡಿಸೆಂಬರ್ 6ರ ವರೆಗಿನ ನಿಖರವಾದ ಮಾಹಿತಿಗಳು ಓದುಗರನ್ನು ಎಲ್ಲಿಯೂ ಬೇಸರ ಪಡಿಸದೆ ಕಥನ ಮಾದರಿಯಲ್ಲಿರುವುದರಿಂದ ಓದುಗರಿಗೆ ಆಸಕ್ತಿಯನ್ನು ಮೂಡಿಸುತ್ತದೆ.
‘ಪ್ರಾಚೀನ ಭಾರತದ ವಾಣಿಜ್ಯ’ ಎಂಬ ಅಧ್ಯಾಯದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಮತ್ತು ಅರ್ಥವ್ಯವಸ್ಥೆಯನ್ನು ಆಳವಾಗಿ ಅಧ್ಯಯನ ಮಾಡಿದ ಫಲಿತಗಳನ್ನು ನೀಡಿರುವ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಬಹು ಆಯಾಮದಲ್ಲಿ ಕಟ್ಟಿರುವುದು ಈ ಪುಸ್ತಕದ ವಿಶೇಷತೆಗಳಲ್ಲಿ ಒಂದು. ಪುರಾತನ ಭಾರತ ಮತ್ತು ಅದರೊಂದಿಗೆ ಇರುವ ವಾಣಿಜ್ಯ ಸಂಬಂಧವನ್ನು ಅಂಬೇಡ್ಕರ್ ಹೇಳಿರುವ ವಿಚಾರಗಳನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಹಾಗಾಗಿ ಈ ಕೃತಿಯ ಪ್ರತಿ ಅಧ್ಯಾಯಗಳು ಮಾಹಿತಿಯುಕ್ತವಾದ ಆಕರವನ್ನು ಒದಗಿಸುತ್ತದೆ.
ಭಾರತದಲ್ಲಿ ಅಂಬೇಡ್ಕರ್‌ರಂತೆ ಅಗಾಧಜ್ಞಾನವನ್ನು ಪಡೆದವರು ಅಂದು ವಿರಳವಾಗಿದ್ದರು. ಪ್ರಪಂಚದ ಬೇರೆ ಬೇರೆ ದೇಶಗಳನ್ನು ಸುತ್ತಿ ಉನ್ನತ ವ್ಯಾಸಂಗ ಮಾಡಿ ಬಂದು ಭಾರತದ ಮಣ್ಣಿಗೆ ಸೇವೆ ಮಾಡಿದ್ದು ಅಸಾಧಾರಣ ಕೆಲಸವೇ ಸರಿ. ಆಗಿನ ಕಾಲಕ್ಕೆ ಅಂಬೇಡ್ಕರ್ ತಿಳಿಯದ ವಿಷಯವೇ ಇರಲಿಲ್ಲ. ಭಾರತದ ಆರ್ಥಿಕ ವ್ಯವಸ್ಥೆ, ರಾಜಕೀಯ, ಕಾರ್ಮಿಕರ ಸಮಸ್ಯೆ, ರೂಪಾಯಿ ಸಮಸ್ಯೆ, ಮಹಿಳೆಯರ ಸಮಸ್ಯೆಗಳನ್ನು ಸಂಶೋಧನೆ ಮಾಡಿ ವಿಷಯವನ್ನು ಮಂಡಿಸುತ್ತಿದ್ದ ರೀತಿಯು ಅಚ್ಚರಿಯುಂಟು ಮಾಡುತ್ತದೆ. ಬರೋಡ ಸಂಸ್ಥಾನದ ಮಹಾರಾಜರು ನೀಡಿದ ವಿದ್ಯಾರ್ಥಿವೇತನ ಪಡೆದು ಅವರು ಮಾಡಿದ ಸಾಧನೆ ಈ ಕಾಲದ ಯುವಕ ಯುವತಿಯರಿಗೆ ಸ್ಫೂರ್ತಿಯಾಗಬೇಕಿದೆ. ಪತ್ರಕರ್ತರಾಗಿಯೂ ಮನ್ನಣೆಗಳಿಸಿದ್ದ ಅಂಬೇಡ್ಕರ್ ಓದದೆ, ಬರೆಯದೆ ಇದ್ದ ವಿಷಯಗಳು ಕಡಿಮೆಯೆಂದೇ ಹೇಳಬೇಕು. ಹೀಗೆ ಅಂಬೇಡ್ಕರ್ ಮಂಡಿಸಿದ್ದ ವಿಚಾರಗಳನ್ನು ಈ ಗ್ರಂಥದಲ್ಲಿ ವಿಶ್ಲೇಷಿಸಿದ್ದಾರೆ. ಪ್ರತಿ ಅಧ್ಯಾಯಕ್ಕೆ ಒಪ್ಪುವ ಕಪ್ಪುಬಿಳುಪು ಛಾಯಾಚಿತ್ರಗಳು ಇರುವುದರಿಂದ ಪುಸ್ತಕ ಆಕರ್ಷಕವಾಗಿ ಮೂಡಿಬಂದಿದೆ.
ಕನ್ನಡದಲ್ಲಿ ಈಗಾಗಲೇ ಅಂಬೇಡ್ಕರ್ ಕುರಿತ ಹಲವು ಪುಸ್ತಕಗಳು ಬಂದಿದ್ದರೂ ಈ ಗ್ರಂಥವೂ ವಿಶ್ಲೇಷಣೆ, ವಿಭಾಗಿಸಿರುವ ರೀತಿಯಿಂದಲೂ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಭಾರತದಲ್ಲಿ ಜಾತಿಗಳ ಉಗಮ ಮತ್ತು ವಿಕಾಸ, ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು, ಮೂಕನಾಯಕ, ಬಹಿಷ್ಕೃತ ಹಿತಕಾರಿಣಿ ಸಭಾ, ಸೈಮನ್ ಕಮಿಷನ್, ದುಂಡುಮೇಜಿನ ಪರಿಷತ್ತು, ಪೂನಾ ಒಪ್ಪಂದ ಇಂತಹ ಅಧ್ಯಾಯಗಳು ಚಾರಿತ್ರಿಕವಾಗಿ ಈಗಲೂ ಚರ್ಚಿತವಾಗುತ್ತ ಹೊಸ ಹೊಸ ವಿಶ್ಲೇಷಣೆಗಳು ಆಗುತ್ತಿರುವುದು ಅಂಬೇಡ್ಕರ್ ವಿಚಾರಗಳು ಸಮಕಾಲೀನಗೊಳ್ಳುತ್ತಿರುವುದೇ ಆಗಿದೆ.ಹಾಗಾಗಿ ಎಲ್ಲಕಾಲಕ್ಕೂ ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿಯೇ ನೋಡಬೇಕು. ಅವರು ರೂಪಿಸಿದ ಸಂವಿಧಾನವು ಶ್ರೇಷ್ಠವಾಗಿದೆ. ಅದರ ಅಡಿಯಲ್ಲಿಯೇ ನಾವೆಲ್ಲ ಬದುಕುತ್ತಿದ್ದೇವೆ.
ಹೀಗೆ ಅಂಬೇಡ್ಕರ್ ನಡೆದು ಬಂದ ದಾರಿಯ ಸಾಹಸಗಾಥೆಯನ್ನು ಹಿಡಿಯಾಗಿ ಕಟ್ಟಿರುವ ಈ ಗ್ರಂಥವು ಅಂಬೇಡ್ಕರ್ ಎಂಬ ಮಹಾನದಿಯನ್ನು ಅರಿಯಲು ಮತ್ತೊಂದು ಮಾರ್ಗ ಸಿಕ್ಕಂತೆ ಆಗುತ್ತದೆ. ಬುದ್ಧಿವಂತಿಕೆ, ಪ್ರತಿಭೆಯನ್ನು ಜಾತಿಯಲ್ಲಿ ಅಳೆಯುವ ಈ ರೋಗಗ್ರಸ್ತ ಸಮಾಜಕ್ಕೆ ಸಂವಿಧಾನವೇ ಅಡಿಪಾಯವೆಂದು ಭದ್ರಬುನಾದಿ ಹಾಕಿಕೊಟ್ಟ ಬಾಬಾ ಸಾಹೇಬರನ್ನು ಅರಿಯಲು ಈ ಪುಸ್ತಕವನ್ನು ಒಮ್ಮೆ ಓದಬೇಕು.