"ಮುರುಘಾಶ್ರೀ ವಿರುದ್ಧದ ಪ್ರಕರಣ" ನ್ಯಾಯಾಂಗ ತನಿಖೆಯೇ ಏಕಾಗಬೇಕು?
ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಪೀಠಾಧಿಕಾರಿಗಳು ಸದ್ಯ ಗುರುತರ ಆರೋಪಕ್ಕೆ ಸಿಲುಕಿ ಬಂಧಿತರಾಗಿದ್ದಾರೆ! ತಮ್ಮದೇ ಮಠದ ಪ್ರೌಢಶಾಲೆಯಲ್ಲಿ ಓದುತ್ತಾ, ಅಲ್ಲಿನದೇ ಹೆಣ್ಣುಮಕ್ಕಳ ವಸತಿನಿಲಯದಲ್ಲಿದ್ದ ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಅವರು ನಿರಂತರವಾಗಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ, ಅದಕ್ಕೆ ಅವರ ನಾಲ್ವರು ಸಹಚರರು ಬೆಂಬಲ ನೀಡಿದ ಪ್ರಕರಣವು ನಾಗರಿಕ ಸಮಾಜವನ್ನು ಆಘಾತಕ್ಕೀಡುಮಾಡಿದೆ. ನಿಜಕ್ಕೂ ಇದೊಂದು ಅತ್ಯಂತ ಅಮಾನವೀಯ ಮತ್ತು ಕ್ರೂರ ಘಟನೆ. ಆದರೆ ಆರೋಪಿತರ ವಿರುದ್ಧ ಅತ್ಯಂತ ಪ್ರಬಲ ಪೊಕ್ಸೊ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿದ್ದರೂ, ಆರೋಪಿಗಳನ್ನು ತಕ್ಷಣವೇ ಬಂಧಿಸದೇ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಯಿತು. ಪೊಕ್ಸೊ ಪ್ರಕರಣವೆಂದರೆ ಅದೊಂದು ಸಂಜ್ಞೇಯ ಮತ್ತು ಜಾಮೀನುರಹಿತ ಅಪರಾಧ! ಹೀಗಾಗಿ ಆರೋಪಿಗಳು ಸಾಕ್ಷಿ ನಾಶ ಮಾಡುವ ಸಾಧ್ಯತೆಯಿರುವ ಕಾರಣದಿಂದಲೇ ಪ್ರಕರಣ ದಾಖಲಾದ ತಕ್ಷಣವೇ ಅವರನ್ನು ಬಂಧಿಸಬೇಕು. ಆದರೆ ಆರು ದಿನಗಳವರೆಗೆ ಬಂಧನ ನಡೆಯಲೇ ಇಲ್ಲ! ಇದು ಇಡೀ ಸರಕಾರಿ ವ್ಯವಸ್ಥೆಯ ಗುರುತರ ಲೋಪ. ಇಷ್ಟೇ ಸಾಲದೆಂಬಂತೆ ಪ್ರಕರಣದ ಪ್ರಮುಖ ಆರೋಪಿಯನ್ನು ತಮ್ಮ ವಾಸಸ್ಥಳ ಬಿಟ್ಟು ಇತರ ಜಿಲ್ಲೆಗಳ ಅಜ್ಞಾತ ಸ್ಥಳಗಳಲ್ಲಿ ಅಡ್ಡಾಡಲು ಬಿಟ್ಟಿದ್ದು ಮತ್ತು ತಮ್ಮ ಸಾವಿರಾರು ಮಂದಿ ಭಕ್ತರೊಂದಿಗೆ ನಿರಂತರವಾಗಿ ಸಭೆ, ಸಂಧಾನ ಮಾತುಕತೆಗಳನ್ನು, ಬಹಿರಂಗ ಭಾಷಣಗಳನ್ನು ನಡೆಸಲು ಬಿಟ್ಟಿದ್ದು ಏನನ್ನು ಹೇಳುತ್ತದೆ? ಜೊತೆಗೆ ಆರೋಪಿಗಳು ತಮ್ಮ ಅಸಂಖ್ಯ ಬೆಂಬಲಿಗರೊಂದಿಗೆ ಮಠದಲ್ಲಿ ಇರುವ ಸಂದರ್ಭದಲ್ಲಿಯೇ ಸಂತ್ರಸ್ತ ಬಾಲೆಯರನ್ನು ಅಲ್ಲಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದು ಅಕ್ಷಮ್ಯ ಮತ್ತು ಪೊಕ್ಸೊ ಕಾಯ್ದೆಯ ಉಲ್ಲಂಘನೆ.
ಈ ಎಲ್ಲವೂ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತ ಬಾಲಕಿಯರಿಗೆ ಬೆಂಬಲವಾಗಿ ನಿಲ್ಲಬೇಕಾದ ಸರಕಾರಿ ವ್ಯವಸ್ಥೆಯು ಆರೋಪಿಗಳಿಗೆ ಬೆಂಬಲವಾಗಿ ನಿಂತಿರುವುದರ ಸ್ಪಷ್ಟ ಸೂಚನೆಯಾಗಿದೆ. ಇವೆಲ್ಲದರ ವಿರುದ್ಧವಾಗಿ ರಾಜ್ಯಾದ್ಯಂತ ಜನಸಮುದಾಯ ಗಳು, ಸಂಘಟನೆಗಳು ಕ್ಷಿಪ್ರ ಮತ್ತು ನಿರಂತರ ಪ್ರತಿಭಟನೆಗಳನ್ನು ನಡೆಸಿದ್ದು ಗಮನಾರ್ಹ. ರಾಜ್ಯದ ಕೆಲ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಪ್ರಕರಣ ಸರಕಾರಿ ವ್ಯವಸ್ಥೆಯಲ್ಲಿ ದಿಕ್ಕು ತಪ್ಪುತ್ತಿರುವುದರಿಂದಾಗಿಯೇ ಪ್ರಮುಖ ಆರೋಪಿಯ ಬಂಧನ ಇದುವರೆಗೆ ಆಗಿಲ್ಲವೆಂದು ದೂರಿ, ನ್ಯಾಯಾಂಗದ ನಿಗಾದಲ್ಲಿ ಪ್ರಕರಣವನ್ನು ನಡೆಸಲು ಪತ್ರಗಳನ್ನು ಬರೆದರು. ಹಾಗೆಯೇ ಸಾಮಾಜಿಕ ಕಾರ್ಯಕರ್ತರೋರ್ವರು ಪೊಕ್ಸೊ ಕಾಯ್ದೆಯ ಅನುಷ್ಠಾನದಲ್ಲಿ ಆಗುತ್ತಿರುವ ಲೋಪವನ್ನು ನಮೂದಿಸಿ, ಬಾಲಕಿಯರ ಪರವಾಗಿ ಸುಪ್ರೀಂ ಕೋರ್ಟ್‌ಗೆ ದೂರು ಕೂಡ ದಾಖಲಿಸಿದರು. ಕೆಲವು ದೃಶ್ಯ ಮಾಧ್ಯಮಗಳೂ ನಿರಂತರ ಈ ಕುರಿತು ಸುದ್ದಿ ಪ್ರಸಾರ ಮಾಡಿದವು. ಚರ್ಚೆ ನಡೆಸಿದವು. ಇವೆಲ್ಲವೂ ಸರಕಾರದ ಮೇಲೆ ಒತ್ತಡವನ್ನು ಸೃಷ್ಟಿಸಿತ್ತು. ಇದರೊಂದಿಗೇ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ತನಿಖೆಯ ಕೂಲಂಕಷ ವಿವರ ಕೇಳಿ ಪತ್ರ ಬರೆದಿದ್ದು ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಇದೆಲ್ಲದರ ಪರಿಣಾಮವಾಗಿ ಪ್ರಕರಣ ದಾಖಲಾದ ಐದನೆಯ ದಿನಕ್ಕೆ ಪ್ರಮುಖ ಆರೋಪಿಗಳಾದ ಮುರುಘಾಮಠದ ಪೀಠಾಧ್ಯಕ್ಷರ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು! ಆರನೆಯ ದಿನ ಬೆಳಗ್ಗೆ ಪ್ರಕರಣದ ಎರಡನೆಯ ಆರೋಪಿಯನ್ನು ವಿಚಾರಣೆಗೆ ಕರೆದೊಯ್ದರು. ಅದೇ ದಿನ ತಡ ರಾತ್ರಿ ಅಂತೂಇಂತೂ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲಾಯಿತು! ಸರಕಾರಿ ವ್ಯವಸ್ಥೆಯ ಈ ಪರಿಯ ಲೋಪ ಮತ್ತು ಆರೋಪಿಗಳ ಬಂಧನದ ವಿಳಂಬ ಅಪ್ರಾಪ್ತ ವಯಸ್ಕ ಮಕ್ಕಳ ಲೈಂಗಿಕ ದುರ್ಬಳಕೆಯ ವಿರುದ್ಧವಾಗಿ ಪ್ರಾರಂಭದಿಂದಲೂ ಹೋರಾಟ ನಡೆಸಿದ್ದವರಿಗೆಲ್ಲರಿಗೂ ಹತಾಶೆಯನ್ನು ಮೂಡಿಸಿತ್ತು. ಹೀಗಾಗಿ ಪ್ರಮುಖ ಆರೋಪಿಯ ಬಂಧನ ತಕ್ಷಣಕ್ಕೆ ಅದ್ವಿತೀಯ ಜಯವೆಂದೇ ಭಾಸವಾಯಿತು! ಆದರೆ ಆ ಸಂತ್ರಸ್ತ ಹೆಣ್ಣುಮಕ್ಕಳ ನ್ಯಾಯದ ಹಿತದೃಷ್ಟಿಯಿಂದ ಇದೊಂದು ತಕ್ಷಣದ ಸಣ್ಣ ಸಮಾಧಾನವಷ್ಟೇ ಆಗಿತ್ತು. ಏಕೆಂದರೆ ಇಲ್ಲಿ ಪ್ರಕರಣ ದಾಖಲಿಸಿರುವುದು ಇಬ್ಬರು ಬಾಲೆಯರು ಮಾತ್ರವಾದರೂ, ಅವರೇ ತನಿಖೆಯ ಸಂದರ್ಭದಲ್ಲಿ ತಿಳಿಸಿರುವಂತೆ, ಇವರ ಹಿಂದೆ ಮಠದ ವಸತಿನಿಲಯದ ಹಲವು ಬಾಲಕಿಯರು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಕೃತ್ಯಕ್ಕೆ ಮಠದ ಇನ್ನಿತರರೂ ಜವಾಬ್ದಾರರಾಗಿರುವ ಸಾಧ್ಯತೆ ಕೂಡ ಇದೆ. ಹೀಗಾಗಿ ಇದು ಆರೋಪಿಗಳ ವಿರುದ್ಧವಾಗಿ ದಾಖಲಾದ ಒಂದೇ ಒಂದು ಲೈಂಗಿಕ ಪ್ರಕರಣ ಮಾತ್ರವಾಗಿ ಮೇಲ್ನೋಟಕ್ಕೆ ಕಂಡರೂ, ಇದೊಂದು ಮಠದ ವಸತಿನಿಲಯದಲ್ಲಿ ಉಚಿತ ವ್ಯವಸ್ಥೆಯ ಹೆಸರಲ್ಲಿ ಸ್ವಯಂ ಅನ್ನದಾತರು ಮತ್ತು ರಕ್ಷಕರಾದವರಿಂದಲೇ ಎಳೆಯ ಬಾಲೆಯರ ಮೇಲೆ ನಡೆದ ಅಮಾನುಷ ಮತ್ತು ಗಂಭೀರ ಲೈಂಗಿಕ ಹಗರಣ! ತಂದೆಯ ಸ್ಥಾನದಲ್ಲಿದ್ದು ಆ ಮಕ್ಕಳಿಗೆ ಆಶ್ರಯ, ಪೋಷಣೆ, ರಕ್ಷಣೆ ಕೊಡುವ ಭರವಸೆ ನೀಡಿದ್ದ ವ್ಯಕ್ತಿಯಿಂದಲೇ ನಡೆದ ಘೋರ ನಂಬಿಕೆ ದ್ರೋಹ! ಬಹುಶಃ ಈ ದ್ರೋಹಕ್ಕೆ ಕಾನೂನಿನ ಯಾವ ಶಿಕ್ಷೆಯೂ ಪರಿಹಾರವಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನದ ನಂತರವೇ ನಿಜವಾದ ಹೋರಾಟ ಪ್ರಾರಂಭವಾಗುತ್ತದೆ. ಹೀಗಾಗಿ ಮುಂದಿನ ತನಿಖೆ ಮತ್ತು ವಿಚಾರಣೆಯ ಬಗ್ಗೆ ಸಂತ್ರಸ್ತ ಮಕ್ಕಳ ಪರವಾಗಿರುವವರೆಲ್ಲರೂ ಇನ್ನಷ್ಟು ಆಳವಾಗಿ ಯೋಚಿಸಬೇಕು ಮತ್ತದರ ಅನುಷ್ಠಾನಕ್ಕೆ ಸರಕಾರದ ಮೇಲೆ ಒತ್ತಡ ಹೇರಲೇಬೇಕು.
ಈ ಪ್ರಕರಣದ ಪ್ರಮುಖ ಆರೋಪಿಯು ಪ್ರತಿಷ್ಠಿತ ಮತ್ತು ಪ್ರಭಾವಶಾಲಿ ಆಗಿರುವುದರಿಂದ ವಿಚಾರಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರೋಪಿಗಳ ತನಿಖೆ ಹಾಗೂ ವಿಚಾರಣೆಯು ಸ್ಥಳೀಯ ಪೊಲೀಸ್ ವ್ಯಾಪ್ತಿಯಲ್ಲಿ ನಡೆಯದೆ ನ್ಯಾಯಾಂಗದ ಸುಪರ್ದಿಯಲ್ಲಿ, ಅದರ ಮುಂದೆಯೇ ನಡೆಯುವುದು ಅತ್ಯಂತ ಅವಶ್ಯಕ. ಸರಕಾರ ಇದಕ್ಕಾಗಿ ಪ್ರತ್ಯೇಕ ವಿಶೇಷ ತನಿಖಾ ಸಮಿತಿ ರಚನೆ ಮಾಡಬೇಕು ಅಥವಾ ಪ್ರಕರಣವನ್ನು ಪಕ್ಕದ ಕೇರಳ, ತೆಲಂಗಾಣ ಅಥವಾ ತಮಿಳುನಾಡು ರಾಜ್ಯಕ್ಕೆ ವರ್ಗಾವಣೆ ಮಾಡಬೇಕು. ಪ್ರಕರಣದ ಗಂಭೀರತೆಯನ್ನು, ಅದು ಪಡೆದುಕೊಳ್ಳುತ್ತಿರುವ ಹಲವು ಆಯಾಮಗಳನ್ನು ಉಚ್ಚನ್ಯಾಯಾಲಯವು ಖಂಡಿತಾ ಗಮನಿಸುತ್ತಿರುತ್ತದೆ. ಹೀಗಾಗಿ ಅದು ಹಗರಣದ ಕುರಿತು ವಿಶೇಷ ಮುತುವರ್ಜಿಯಿಂದ ತಕ್ಷಣವೇ ಮಧ್ಯ ಪ್ರವೇಶಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಕ್ಷಿಪ್ರ ಕಾರ್ಯಾಚರಣೆ ನಡೆಸಲು ಹೆಸರಾದ ನ್ಯಾಯಮೂರ್ತಿಗಳು ಮತ್ತು ಪೊಲೀಸ್ ಅಧಿಕಾರಿಗಳನ್ನೇ ನೇಮಿಸಿ, ಪ್ರಕರಣದ ತನಿಖೆ ಮತ್ತು ವಿಚಾರಣೆ ನ್ಯಾಯಯುತವಾಗಿ ನಡೆಸಲು ಮುಂದಾಗಬೇಕು. ಹಾಗೆಯೇ ವಿಚಾರಣೆ ಮತ್ತು ನ್ಯಾಯದಾನ ಪ್ರಕ್ರಿಯೆ ಕಡ್ಡಾಯವಾಗಿ ಒಂದು ವಾರದೊಳಗೆ ಮುಗಿಯುವಂತೆ ಕೂಡ ಕ್ರಮ ವಹಿಸಬೇಕು.
ಇದಲ್ಲದೆ ನಾವು ಸರಕಾರದ ಮೇಲೆ ತಕ್ಷಣಕ್ಕೆ ಒತ್ತಡ ಹೇರಬೇಕಿರುವ ಬಹಳಷ್ಟು ವಿಷಯಗಳಿವೆ. ಪ್ರಕರಣದ ಇನ್ನುಳಿದ ಮೂವರು ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಅದು ತಕ್ಷಣವೇ ಆಗಬೇಕು. ಆಗ ಮಾತ್ರ ಹಗರಣದ ಆಮೂಲಾಗ್ರ ತನಿಖೆ ಸಮಗ್ರವಾಗಿ ಮತ್ತು ಸಂಪೂರ್ಣವಾಗಿ ನಡೆಯಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಂತ್ರಸ್ತ ಬಾಲೆಯರು ಮತ್ತು ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಮತ್ತು ತಕ್ಷಣದ ಪರಿಹಾರವನ್ನು ದೊರಕಿಸಬೇಕಿದೆ. ಜೊತೆಗೆ ಅವರಿಗೆ ನಿರಂತರವಾದ ತಜ್ಞ ಆಪ್ತಸಲಹೆಯ ಅವಶ್ಯಕತೆಯನ್ನೂ ಪೂರೈಸಬೇಕು. ಇದರೊಂದಿಗೆ ಈ ಸಂತ್ರಸ್ತ ಬಾಲಕಿಯರ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮೊದಲು ಬೆಳಕಿಗೆ ತಂದು ಮೈಸೂರಿನಲ್ಲಿ ಪ್ರಕರಣ ದಾಖಲಿಸಿದ ಸರಕಾರೇತರ ಸಂಸ್ಥೆಯಾದ ಒಡನಾಡಿ ನಿರ್ದೇಶಕರಿಬ್ಬರೂ ಪ್ರಸಕ್ತ ಅನೇಕ ಆತಂಕಕಾರಿ ಸನ್ನಿವೇಶವನ್ನು ಎದುರಿಸುತ್ತಿದ್ದು, ಸಂಸ್ಥೆಗೆ ಮತ್ತು ಅವರಿಬ್ಬರಿಗೂ ರಕ್ಷಣೆಯನ್ನು ನೀಡುವ ಜವಾಬ್ದಾರಿಯನ್ನು ಕೂಡ ಸರಕಾರ ವಹಿಸಿಕೊಳ್ಳಬೇಕು.
ಮಠದ ವಸತಿನಿಲಯದ ಹಲವು ಬಾಲಕಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಸಂತ್ರಸ್ತ ಬಾಲಕಿಯರು ಹೇಳಿಕೆ ನೀಡಿರುವುದರಿಂದಾಗಿ, ಈ ಪ್ರಕರಣ ಈಗ ವಿಚಾರಣೆಯ ಹಂತದಲ್ಲಿ ಇರುವುದರಿಂದಲೂ ವಸತಿ ನಿಲಯದ ಇನ್ನಿತರ ಬಾಲಕಿಯರು ತೀವ್ರ ಆಘಾತಕ್ಕೆ ಈಡಾಗಿರುತ್ತಾರೆ. ಹೀಗಾಗಿ ಸರಕಾರವು ಮಠದ ಎಲ್ಲಾ ವಸತಿ ನಿಲಯಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಂಡು, ಅಲ್ಲಿನ ಮಕ್ಕಳ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ವಹಿಸಿಕೊಂಡು ಅವರ ಮುಂದಿನ ಸುರಕ್ಷಿತ ವಸತಿಯುತ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಆದೇಶಿಸಬೇಕು. ಸಂತ್ರಸ್ತ ಬಾಲೆಯರ ಗೌಪ್ಯತೆಯನ್ನು ಕಾಪಾಡುವುದು ಎಲ್ಲ ಮಾಧ್ಯಮಗಳ ಕಾನೂನಾತ್ಮಕ ಜವಾಬ್ದಾರಿ. ಆದರೆ ಈಗಾಗಲೇ ಕೆಲ ದೃಶ್ಯ ಮಾಧ್ಯಮಗಳು ಅದನ್ನು ಸಣ್ಣ ಪ್ರಮಾಣದಲ್ಲಿ ಉಲ್ಲಂಘಿಸಲು ಪ್ರಯತ್ನಿಸಿವೆ. ಹೀಗಾಗಿ ತಕ್ಷಣವೇ ಈ ಸಂಬಂಧವಾಗಿ ಅವರ ಮೇಲೆ ಸರಕಾರವು ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ಎಲ್ಲ ಮಾಧ್ಯಮದವರಿಗೆ ಮತ್ತೊಮ್ಮೆ ಕಡ್ಡಾಯವಾಗಿ ಎಚ್ಚರಿಕೆ ನೀಡಬೇಕು. ಒಟ್ಟಾರೆ ನ್ಯಾಯಯುತ ವಿಚಾರಣೆ ಹಾಗೂ ತನಿಖೆ ನಡೆಯಲು, ಪ್ರಕರಣವು ಪೊಲೀಸ್ ಕೈಗಳಿಂದ ನ್ಯಾಯಾಂಗದ ಸುಪರ್ದಿಗೆ ಬರುವುದು ಅತ್ಯಂತ ತುರ್ತು ಮತ್ತು ಮುಖ್ಯವಾದುದು.