40 ಎಕರೆ ಹೊಂದಿದ್ದರೂ ಮತ್ತೆ 35 ಎಕರೆ ಗೋಮಾಳ ಮಂಜೂರು ಮಾಡಿದ ಸರಕಾರ
ಜನಸೇವಾ ಟ್ರಸ್ಟ್ಗೆ ಗೋಮಾಳ
ಬೆಂಗಳೂರು: ಜನಸೇವಾ ಟ್ರಸ್ಟ್ ಈಗಾಗಲೇ ಚನ್ನೇನಹಳ್ಳಿಯಲ್ಲಿ ಅಂದಾಜು 80 ಕೋಟಿ ರೂ. ಬೆಲೆ ಬಾಳುವ 40.07 ಎಕರೆ ಜಮೀನು ಹೊಂದಿದ್ದರೂ ಚನ್ನೇನಹಳ್ಳಿಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿಯೂ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಇದೇ ಟ್ರಸ್ಟ್ಗೆ ರಾಜ್ಯ ಬಿಜೆಪಿ ಸರಕಾರ ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸರಕಾರಿ ಜಮೀನುಗಳ ಭೂ ಮಂಜೂರಾತಿಗಾಗಿ ಸಲ್ಲಿಸುವ ಪ್ರಸ್ತಾವಗಳ ಸಂಬಂಧ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಸಿ.ರಾಮಲಕ್ಷ್ಮಯ್ಯ ಎಂಬವರು ಸರಕಾರಕ್ಕೆ ಸಲ್ಲಿಸಿರುವ ಚೆಕ್ಲಿಸ್ಟ್ನಲ್ಲಿ ಈ ಮಾಹಿತಿ ಇದೆ. ಚೆಕ್ ಲಿಸ್ಟ್ ‘the-file.in’’ಗೆ ಲಭ್ಯವಾಗಿದೆ.
ಜನಸೇವಾ ಟ್ರಸ್ಟ್ನ ಭಾಗವಾಗಿರುವ ಜನಸೇವಾ ವಿಶ್ವಸ್ಥ ಮಂಡಳಿಯು ಚನ್ನೇನಹಳ್ಳಿ ಗ್ರಾಮದ ಸರ್ವೇ ನಂಬರ್ 16ರಲ್ಲಿ 14.13 ಎಕರೆ, ಸರ್ವೇನಂಬರ್ 17/1ರಲ್ಲಿ 2.28 ಎಕರೆ, ಸರ್ವೇ ನಂಬರ್ 17/2ರಲ್ಲಿ 4-08 ಎಕರೆ, ಸರ್ವೇ ನಂಬರ್ 18/1ರಲ್ಲಿ 11-30 ಎಕರೆ, ಸರ್ವೇ ನಂಬರ್ 52/1ರಲ್ಲಿ 1-08 ಎಕರೆ, ಸರ್ವೇ ನಂಬರ್ 19ರಲ್ಲಿ 6-00 ಎಕರೆ ಸೇರಿ ಒಟ್ಟು 40-07 ಎಕರೆ ಜಮೀನು ಹೊಂದಿರುವುದು ಚೆಕ್ಲಿಸ್ಟ್ ನಿಂದ ತಿಳಿದು ಬಂದಿದೆ.
ಚನ್ನೇನಹಳ್ಳಿ ಗ್ರಾಮದ ಸರ್ವೇ ನಂಬರ್ 16ರಲ್ಲಿ 14.13 ಎಕರೆಯು ಜನಸೇವಾ ಟ್ರಸ್ಟ್ನ ಭಾಗವಾಗಿರುವ ಜನಸೇವಾ ವಿಶ್ವಸ್ಥ ಮಂಡಳಿಯ ಹೆಸರಿನಲ್ಲಿದೆ ಎಂದು ಚೆಕ್ಕಿಸ್ಟ್ನಲ್ಲಿ ದಾಖಲೆ ಇದೆ. ಭೂಮಿ ತಂತ್ರಾಂಶದ ಮ್ಯುಟೇಷನ್ನಲ್ಲಿ ಇದೇ ಸರ್ವೇ ನಂಬರ್ನಲ್ಲಿರುವ 14.13 ಎಕರೆಯು ಜನಸೇವಾ ಕೇಂದ್ರದ ಹೆಸರಿನಲ್ಲಿದೆ.
ಹಾಗೆಯೇ ಸರ್ವೇ ನಂಬರ್ 18ರಲ್ಲಿ ಜನಸೇವಾ ಟ್ರಸ್ಟ್ ಹೆಸರಿನಲ್ಲಿಯೇ 11.30 ಎಕರೆ, ಸರ್ವೇ ನಂಬರ್ 19ರಲ್ಲಿ 9.13 ಎಕರೆ ಸರಕಾರಿ ಗೋಮಾಳವಿದ್ದರೆ ಇದಕ್ಕೆ ಹೊಂದಿಕೊಂಡಂತಿರುವ 6.00 ಎಕರೆಯು ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಜನಸೇವಾ ವಿಶ್ವಸ್ಥ ಮಂಡಳಿಯು ಹೊಂದಿರುವುದು ಭೂಮಿ ತಂತ್ರಾಂಶದಿಂದ
ಗೊತ್ತಾಗಿದೆ.
ಚನ್ನೇನಹಳ್ಳಿಯಲ್ಲಿ ಸರಕಾರಿ ಮಾರ್ಗಸೂಚಿ ಬೆಲೆ ಎಕರೆಗೆ 1.25 ಕೋಟಿ ರೂ. ಮೌಲ್ಯವಿದೆ. ಮಾರುಕಟ್ಟೆ ಮೌಲ್ಯ ಅಂದಾಜು 2 ಕೋಟಿ ರೂ. ಎಂದು ಪರಿಗಣಿಸಿದರೂ ಜನಸೇವಾ ಟ್ರಸ್ಟ್ನ ಜನವಿಶ್ವಸ್ಥ ಮಂಡಳಿಯು ಹೊಂದಿರುವ 40 ಎಕರೆಗೆ 80 ಕೋಟಿ ರೂ. ಮೌಲ್ಯವಾಗಲಿದೆ.
‘ಶೇ.80 ಜಾಗ ಬಳಕೆಯಾಗಿಲ್ಲ’
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಾಸಕಿಯಾಗಿದ್ದ ಅವಧಿಯಲ್ಲಿ(2011)ಯೂ ಜನಸೇವಾ ಟ್ರಸ್ಟ್ಗೆ ಚನ್ನೇನಹಳ್ಳಿಯ ಸರ್ವೇ ನಂಬರ್ 19ರಲ್ಲಿ 6 ಎಕರೆ ಜಮೀನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಿಸಿಕೊಂಡಿತ್ತಾದರೂ ಆ ಜಾಗವನ್ನು ಬಳಸಿಕೊಳ್ಳದೆಯೇ ಖಾಲಿ ಬಿಟ್ಟಿದೆ ಎಂದು ಮಾತೃ ಫೌಂಡೇಷನ್ ಸರಕಾರಕ್ಕೆ ದೂರನ್ನೂ ಸಲ್ಲಿಸಿತ್ತು. ತಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಈ ರೀತಿ ಒಳಗೊಳಗೇ ಗೋಮಾಳ ಜಮೀನನ್ನು ಮಂಜೂರು ಮಾಡಿಸಿಕೊಂಡು ಹಾಗೇ ಇಟ್ಟಿರುತ್ತಾರೆ. ಆದರೆ ಅದೇ ಉದ್ದೇಶಕ್ಕೆ ಬಳಸುವುದಿಲ್ಲ. ಈಗಾಗಲೇ ಅವರ ಟ್ರಸ್ಟ್ನಲ್ಲಿ 45 ಎಕರೆ ಜಾಗವಿದೆ. ಶೇ.80 ಜಾಗವನ್ನು ಬಳಸಿಕೊಂಡಿಲ್ಲ ಎಂದು ಫೌಂಡೇಷನ್ ಸರಕಾರಕ್ಕೆ ಸಲ್ಲಿಸಿದ್ದ ದೂರಿನಲ್ಲಿ ಪ್ರಸ್ತಾಪಿಸಿತ್ತು.