ಅಸೈ ಮದಕ: ಸರಕಾರಿ ಮುಸ್ಲಿಮ್ ವಸತಿ ಶಾಲೆಗೆ ವಿದ್ಯಾರ್ಥಿಗಳದ್ದೇ ಕೊರತೆ
► 6ರಿಂದ 10ರವರೆಗೆ ಆಂಗ್ಲ ಮಾಧ್ಯಮ ಉಚಿತ ಶಿಕ್ಷಣವಿದ್ದರೂ ನಿರ್ಲಕ್ಷ್ಯ ►ಪ್ರಸಕ್ತ ಶೈಕ್ಷಣಿಕ ವರ್ಷ 9 ವಿದ್ಯಾರ್ಥಿಗಳಷ್ಟೇ ದಾಖಲು
ಮಂಗಳೂರು, ಸೆ.5: ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಸಾಕಷ್ಟು ಶಿಕ್ಷಕರಿಲ್ಲದಿರುವುದು, ಸೂಕ್ತ ಕಟ್ಟಡ ಸೌಲಭ್ಯ ಇಲ್ಲದಿರುವುದು ಇತ್ಯಾದಿ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿರುವುದು ಸಾಮಾನ್ಯವಾಗಿದೆ. ಆದರೆ ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಪಂ ವ್ಯಾಪ್ತಿಯ ಅಸೈಗೋಳಿ ಸಮೀಪದ ಅಸೈ ಮದಕದಲ್ಲಿರುವ ಸರಕಾರಿ ಮುಸ್ಲಿಮ್ ವಸತಿ ಶಾಲೆ(Government Muslim Residential School)ಯಲ್ಲಿ ಸಕಲ ಸೌಲಭ್ಯಗಳಿದ್ದರೂ ಅದರ ಪ್ರಯೋಜನ ಪಡೆಯಲು ಸಾಕಷ್ಟು ವಿದ್ಯಾರ್ಥಿಗಳೇ ಇಲ್ಲ.!
ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಈ ಸರಕಾರಿ ಮುಸ್ಲಿಮ್ ವಸತಿ ಶಾಲೆಯು ರಾಜ್ಯದಲ್ಲಿರುವ ಐದು ಸರಕಾರಿ ಮುಸ್ಲಿಮ್ ವಸತಿ ಶಾಲೆಗಳಲ್ಲಿ ಒಂದಾಗಿದೆ. ಈ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಮುಸ್ಲಿಮ್ ಬಾಲಕರಿಗೆ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ. ಅದೂ ಎಲ್ಲಾ ಸೌಲಭ್ಯಗಳೊಂದಿಗೆ ಉಚಿತವಾಗಿ. ಅಂದರೆ ಇಲ್ಲಿ ವಿದ್ಯಾರ್ಥಿಗಳಿಗೆ ಮೂರು ಜೊತೆ ಸಮವಸ್ತ್ರ, ಪುಸ್ತಕ, ಶೂ, ಟೋಪಿ, ಊಟ ಉಪಾಹಾರ, ಸೋಪ್, ಬ್ರಶ್ ಕೂಡಾ ಸರಕಾರವೇ ನೀಡುತ್ತದೆ.
1996ರಲ್ಲಿ ಅಂದಿನ ರಾಜ್ಯ ಸರಕಾರ ಪ್ರಾಯೋಗಿಕ ನೆಲೆಯಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ 6ರಿಂದ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುವ ಮುಸ್ಲಿಮ್ ವಸತಿ ಶಾಲೆಗಳನ್ನು ಆರಂಭಿಸಿತು. ಅದರಂತೆ ದ.ಕ., ರಾಮನಗರ, ಮಂಡ್ಯ (ಶ್ರೀರಂಗಪಟ್ಟಣ), ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಈ ವಸತಿ ಶಾಲೆಗಳು ಕಾರ್ಯಾಚರಿಸುತ್ತಿವೆ. 2011ರವರೆಗೆ ಈ ಶಾಲೆಗಳು ಕನ್ನಡ ಮಾಧ್ಯಮದಲ್ಲಿದ್ದವು. ಬಳಿಕ ಇದನ್ನು ಆಂಗ್ಲ ಮಾಧ್ಯಮ ವಸತಿ ಶಾಲೆಗಳನ್ನಾಗಿ ಪರಿವರ್ತಿಸಲಾಯಿತು. ದ.ಕ. ಜಿಲ್ಲೆಗೆ ಮಂಜೂರಾಗಿದ್ದ ಈ ಮುಸ್ಲಿಮ್ ವಸತಿ ಶಾಲೆಯು ಕಳೆದ ಸುಮಾರು 24 ವರ್ಷಗಳಲ್ಲಿ ಬಾಡಿಗೆ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿತ್ತು. ಇತ್ತೀಚಿನವರೆಗೆ ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ನಾಟೆಕಲ್‌ನ ಬಾಡಿಗೆ ಕಟ್ಟಡದಲ್ಲಿದ್ದ ಈ ಶಾಲೆ ಒಂದೂವರೆ ವರ್ಷಗಳ ಹಿಂದೆ ಅಸೈ ಮದಕದಲ್ಲಿರುವ ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಸುಂದರ ಪ್ರಕೃತಿಯ ನಡುವೆ ಸುಮಾರು ಐದು ಎಕರೆ ವಿಶಾಲ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತ ಈ ಮುಸ್ಲಿಮ್ ವಸತಿ ಶಾಲೆಯು ಸುಸಜ್ಜಿತ ಹಾಸ್ಟೆಲ್‌ನ್ನೂ ಒಳಗೊಂಡಿದೆ.
ಎರಡು ಅಂತಸ್ತುಗಳ ಸುಸಜ್ಜಿತ ಶಾಲಾ ಕಟ್ಟಡದಲ್ಲಿ ಅತ್ಯುತ್ತಮ ತರಗತಿ ಕೊಠಡಿ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯಗಳಿವೆ. ಎಲ್ಲೆಡೆ ಸಿಸಿಟಿವಿ ಕ್ಯಾಮರಾ ಕಣ್ಗಾವಲಿದ್ದು, ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಪ್ರಾಂಶುಪಾಲರು ತನ್ನ ಕಚೇರಿಯಲ್ಲಿ ವೀಕ್ಷಿಸುವ ವ್ಯವಸ್ಥೆಯಿದೆ.
ಶಾಲೆಯ ಅಂಗಣದಲ್ಲೇ ಎರಡು ಅಂತಸ್ತುಗಳ ಭೋಜನ ಶಾಲೆಯಿದೆ. ಇದರ ಮೇಲಿನ ಅಂತಸ್ತಿನಲ್ಲಿ ವಿದ್ಯಾರ್ಥಿಗಳ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಪೂರಕವಾದ ವಿಶಾಲವಾದ ಸಭಾಂಗಣವಿದೆ. ಪಕ್ಕದಲ್ಲೇ ನಾಲ್ಕು ಅಂತಸ್ತಿನ ಹಾಸ್ಟೆಲ್ ಕಟ್ಟಡವಿದೆ. 150 ವಿದ್ಯಾರ್ಥಿಗಳು ಉಳಿದುಕೊಳ್ಳಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಇದು ಹೊಂದಿದೆ. ಊಟ-ಉಪಾಹಾರಕ್ಕಾಗಿ ಪ್ರತೀ ವಿದ್ಯಾರ್ಥಿಗೆ ತಲಾ 1,700 ರೂ.ನಂತೆ ಸರಕಾರ ವೆಚ್ಚ ಮಾಡುತ್ತದೆ. ಅಡುಗೆಗೆ ಮೂವರು ಸಿಬ್ಬಂದಿಯಿದ್ದಾರೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಉಪಾಹಾರ ಹಾಗೂ ರಾತ್ರಿಯ ಊಟವನ್ನು ನೀಡಲಾಗುತ್ತದೆ. ವಾರಕ್ಕೊಮ್ಮೆ ಮಾಂಸದೂಟ, ಎರಡು ಬಾರಿ ಮೊಟ್ಟೆ ನೀಡಲಾಗುತ್ತದೆ.
ಇಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಕೂಡ ನೀಡಲಾಗುತ್ತಿದೆ. ಅದಕ್ಕಾಗಿ ಧಾರ್ಮಿಕ ಗುರುವೊಬ್ಬರನ್ನು ನಿಯೋಜಿಸಲಾಗಿದೆ. ಈ ಹಿಂದೆ ಧಾರ್ಮಿಕ ಶಿಕ್ಷಣಕ್ಕೆ ಸರಕಾರದಿಂದ ವ್ಯವಸ್ಥೆ ಇತ್ತು. ಬಳಿಕ ಸರಕಾರ ಅದನ್ನು ಸ್ಥಗಿತಗೊಳಿಸಿತು. ಆದರೆ ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾಳಜಿಯಿಂದ ಪ್ರಾಂಶುಪಾಲರು ಮುತುವರ್ಜಿ ವಹಿಸಿ ಅದಕ್ಕೂ ವ್ಯವಸ್ಥೆ ಕಲ್ಪಿಸಿದ್ದಾರೆ.
ಸಾಮಾನ್ಯವಾಗಿ 5ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಇಲ್ಲಿ 6ನೇ ತರಗತಿಗೆ ಸೇರುತ್ತಾರೆ. ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಕ್ರಮ ಇರುವುದರಿಂದ ಅಂತಹ ವಿದ್ಯಾರ್ಥಿಗಳನ್ನು ಇಲ್ಲಿನ ಶಿಕ್ಷಕರು ತಿದ್ದಿ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಉತ್ತಮವೆನ್ನಬಹುದಾದ ಫಲಿತಾಂಶ ಕೂಡಾ ದಾಖಲಿಸುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದು, ಕೆಲವರು ರಾಷ್ಟ್ರಮಟ್ಟದ ಕ್ರೀಡೆಯಲ್ಲೂ ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ಪ್ರಾಂಶುಪಾಲ ಉಮರಬ್ಬ ಮಾಹಿತಿ ನೀಡಿದ್ದಾರೆ.
ಇಷ್ಟೆಲ್ಲಾ ಸೌಲಭ್ಯಗಳು ಈ ಮುಸ್ಲಿಮ್ ವಸತಿ ಶಾಲೆಯಲ್ಲಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಇದರ ಸದುಪಯೋಗ ಆಗುತ್ತಿಲ್ಲವೆಂಬುದು ಸದ್ಯ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಿದರೆ ತಿಳಿಯಬಹುದಾಗಿದೆ. ಸುಮಾರು 150 ವಿದ್ಯಾರ್ಥಿಗಳು ಕಲಿಯಬಹುದಾದ ಈ ಶಾಲೆಯಲ್ಲಿ ಪ್ರಸಕ್ತ 68 ವಿದ್ಯಾರ್ಥಿಗಳು ಮಾತ್ರ ಕಲಿಯುತ್ತಿದ್ದಾರೆ. 6ನೇ ತರಗತಿಗೆ 50 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶವಿದ್ದರೂ ಈ ಬಾರಿ ಕೇವಲ 9 ವಿದ್ಯಾರ್ಥಿಗಳಷ್ಟೇ ಪ್ರವೇಶಾತಿ ಪಡೆದಿದ್ದಾರೆ. ನಾಟೆಕಲ್‌ನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾ ಚರಿಸುತ್ತಿದ್ದ ಸಂದರ್ಭ ಅಂದರೆ 2017-18ರಲ್ಲಿ 142 ಮಕ್ಕಳು ಇಲ್ಲಿ ಕಲಿಯುತ್ತಿದ್ದರು. ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಾ ಸಾಗಿದೆ.
ಸದ್ಯ ಆರನೇ ತರಗತಿಯಲ್ಲಿ 9, ಏಳನೇ ತರಗತಿಯಲ್ಲಿ 13, ಎಂಟನೇ ತರಗತಿಯಲ್ಲಿ 18, ಒಂಭತ್ತನೇ ತರಗತಿಯಲ್ಲಿ 9 ಮತ್ತು 10ನೇ ತರಗತಿಯಲ್ಲಿ 19 ವಿದ್ಯಾರ್ಥಿಗಳ ಸಹಿತ ಒಟ್ಟು 68 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ ಉಳಿದ ನಾಲ್ಕು ವಸತಿ ಶಾಲೆಗಳಲ್ಲಿ ಈ ಸಮಸ್ಯೆ ಇಲ್ಲ. ಅಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಈ ಸರಕಾರಿ ಮುಸ್ಲಿಮ್ ವಸತಿ ಶಾಲೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದು ಉಮರಬ್ಬ ಮಾಹಿತಿ ನೀಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯ ಮಾತ್ರ ಸಕಲ ಸೌಲಭ್ಯಗಳನ್ನು ಒಳಗೊಂಡ ಈ ವಸತಿ ಶಾಲೆಯತ್ತ ಗಮನ ಹರಿಸದಿರುವುದು ವಿಪರ್ಯಾಸ.
ಸರಕಾರವೇ ನಡೆಸುತ್ತಿರುವ ಈ ಸುಸಜ್ಜಿತ ಮುಸ್ಲಿಮ್ ವಸತಿ ಶಾಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಸಮಾನವಾಗಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಕಳೆದ 26 ವರ್ಷಗಳಿಂದ ಇಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಹಲವರು ಇಂದು ವೈದ್ಯ, ಇಂಜಿನಿಯರ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಲ್ಲಿ 6ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿ 10ನೇ ತರಗತಿಯ ವರೆಗೆ ಒಂದು ರೂ. ಕೂಡಾ ನೀಡಬೇಕಿಲ್ಲ. ಅಲ್ಲದೆ ಬಟ್ಟೆಬರೆ, ಪುಸ್ತಕ, ಸಮವಸ್ತ್ರ, ಊಟೋಪಚಾರ ಎಲ್ಲವೂ ಉಚಿತವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇಲ್ಲೇ ವಾಸ್ತವ್ಯವಿದ್ದು ಕಲಿಯುವುದರಿಂದ ಅದಕ್ಕೆ ಪೂರಕವಾದ ಸುಸಜ್ಜಿತ ಹಾಸ್ಟೆಲ್, ಭೋಜನ ಶಾಲೆ, ಪ್ರಾರ್ಥನಾ ಹಾಲ್ ಎಲ್ಲವೂ ಇದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಮುಸ್ಲಿಮ್ ಸಮುದಾಯ ಈ ಸರಕಾರಿ ಯೋಜನೆಯ ಪ್ರಯೋಜನ ಪಡೆಯಲು ಹಿಂಜರಿಯುತ್ತಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಸಮುದಾಯದ ಸಂಘಸಂಸ್ಥೆಗಳು ಗಮನಹರಿಸಬೇಕು.
-ಉಮರಬ್ಬ
ಪ್ರಾಂಶುಪಾಲ, ಸರಕಾರಿ ಮುಸ್ಲಿಮ್ ವಸತಿ ಶಾಲೆ, ಅಸೈ, ಮದಕ
ಕಳೆದ 10 ವರ್ಷಗಳ ದಾಖಲಾತಿ ವಿವರ
2013-14ರ ಶೈಕ್ಷಣಿಕ ಸಾಲಿನಲ್ಲಿ 81, 2014-15ರಲ್ಲಿ 107, 2015-16ರಲ್ಲಿ 118, 2016-17ರಲ್ಲಿ 67, 2017-18ರಲ್ಲಿ 142, 2018-19ರಲ್ಲಿ 101, 2019-20ರಲ್ಲಿ 65, 2020-21ರಲ್ಲಿ 88, 2021-22ರಲ್ಲಿ 74 ವಿದ್ಯಾರ್ಥಿಗಳಿದ್ದರು. ಪ್ರಸಕ್ತ ವರ್ಷ (2022-23) 67 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.