ಗೌರಿ ಬೆಂದು ಬೆಳಗಿದ ದಾರಿ
ಇಂದು ಗೌರಿ ಹತ್ಯೆಯಾದ ದಿನ
ಇಂದು ಸೆಪ್ಟಂಬರ್ 5. ಇಂದಿಗೆ ಐದು ವರ್ಷದ ಕೆಳಗೆ, 2017ರ ಸೆಪ್ಟಂಬರ್ 5ರ ರಾತ್ರಿ 8:30ರ ಸುಮಾರಿಗೆ, ಗೌರಿ ಎಂದರೆ ಯಾರೆಂದೇ ಗೊತ್ತಿರದ ಆದರೆ ಸನಾತನ ಸಂಸ್ಥೆಯು ಬಿತ್ತಿದ ದ್ವೇಷವನ್ನು ತಲೆಗೇರಿಸಿಕೊಂಡಿದ್ದ ಶೂದ್ರ ಬಡ ಕುಟುಂಬದ ಪರಶುರಾಮ್ ವಾಘ್ಮೋರೆ ಗೌರಿಯನ್ನು ಗುಂಡು ಹಾರಿಸಿ ಕೊಂದುಬಿಟ್ಟ.
ಇದು ಕ್ಷಾತ್ರ ಧರ್ಮ ಸಾಧನದ ಭಾಗವಾಗಿ ಸನಾತನ ಸಂಸ್ಥೆ ಮಾಡಿದ ಸರಣಿ ಕೊಲೆಯಲ್ಲಿ ನಾಲ್ಕನೆಯದು. ಆದರೆ ಗೌರಿ ಹತ್ಯೆಯ ತನಿಖೆಯು ಗೌರಿಯ ಜೊತೆಗೆ ಈ ಸಂಘಟಿತ ಕೊಲೆಗಡುಕ ಗುಂಪೇ ಕಲ್ಬುರ್ಗಿ, ದಾಭೋಲ್ಕರ್, ಪನ್ಸಾರೆ ಅವರ ಹತ್ಯೆಗಳನ್ನು ಮಾಡಿದೆ ಎಂದು ಪತ್ತೆ ಹಚ್ಚಿದೆ. ಹಾಗೂ ಸನಾತನ ಸಂಸ್ಥೆಯ ಕೊಲೆಗಡುಕ ತಂಡದ ಬಹುಪಾಲು ಸದಸ್ಯರನ್ನು ಹಿಡಿದು ಜೈಲಿಗೆ ದೂಡಿದೆ. ಹೀಗಾಗಿ ಜನಪರ ಕಾರ್ಯಕರ್ತರಿಗೆ ಸನಾತನ ಸಂಸ್ಥೆಯಿಂದ ಇದ್ದ ಅಪಾಯ ಸದ್ಯಕ್ಕೆ ದೂರವಾಗಿದೆ. ಆದರೆ ಗೌರಿಯ ಹತ್ಯೆಯಾದ ನಂತರದ ಕಳೆದ ಐದು ವರ್ಷಗಳಲ್ಲಿ ಭಾರತವು ಗೌರಿಯಂಥ ಜನಪರ ಪತ್ರಕರ್ತರಿಗೆ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಿಗೆ 2017ಕ್ಕಿಂತ ಅಪಾಯಕಾರಿಯಾಗಿರುವುದನ್ನು ಹಲವಾರು ವರದಿಗಳು ಸ್ಪಷ್ಟಪಡಿಸುತ್ತಿವೆ. ಏಕೆಂದರೆ ಹಿಂದುತ್ವ ಎಂಬುದು ಸಾವಿರ ಹೆಡೆಗಳ ಕಾಳಸರ್ಪ. 2019ರಲ್ಲಿ ಹಿಂದುತ್ವ ಫ್ಯಾಶಿಸ್ಟರು ಮತ್ತಷ್ಟು ಜನ ಮನ್ನಣೆಯೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಅದರ ಹಲವಾರು ಬಾಹುಗಳು ಇನ್ನೂ ಉಗ್ರವಾಗಿ, ಹಲವು ರೂಪ ಗಳಲ್ಲಿ ದಾಳಿ ಮಾಡುತ್ತಿರುವುದನ್ನು ಹಲವಾರು ವರದಿಗಳು ಸ್ಪಷ್ಟಪಡಿಸುತ್ತಿವೆ. ಅದರಲ್ಲಿ ಒಂದು India Press Freedom Report2022 ಒಂದು.
ಅದರ ಪ್ರಕಾರ 2021ರಲ್ಲಿ ಭಾರತದಾದ್ಯಂತ ಪೊಲೀಸರಿಂದ ಹಾಗೂ ಆಳುವ ಪಕ್ಷದ ಹತ್ಯಾ ಪಡೆಗಳಿಂದ: 6 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. 108 ಜನರ ಮೇಲೆ ಮಾರಣಾಂತಿಕ ದಾಳಿ ಮಾಡಲಾಗಿದೆ. 13 ಮೀಡಿಯಾ ಸಂಸ್ಥೆಗಳ ಮೇಲೂ ದಾಳಿ ಮಾಡಲಾಗಿದೆ. ಇದರಲ್ಲಿ ಬಹು ಪಾಲು ಎಲ್ಲವೂ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೇ ನಡೆದಿವೆೆ. ಇದರಲ್ಲಿ ಮೊದಲಸ್ಥಾನ ತ್ರಿಪುರ, ಎರಡನೆಯದು ಕಾಶ್ಮೀರ, ಮೂರನೆಯದು ಉತ್ತರ ಪ್ರದೇಶ, ನಾಲ್ಕನೆಯದುಮಧ್ಯಪ್ರದೇಶ. ಅದರ ವರದಿಯನ್ನು ಈ ವೆಬ್ ವಿಳಾಸದಲ್ಲಿ ಪಡೆದುಕೊಳ್ಳಬಹುದು:
http://www.rightsrisks.org/wp-content/uploads/ 2022/01/IndiaPressFreedomReport2022.pdf
ಮತ್ತೊಂದು ಅಂತರ್ರಾಷ್ಟ್ರೀಯ ಮಾಧ್ಯಮ ಹಕ್ಕು ರಕ್ಷಣಾ ಸಂಸ್ಥೆಯಾದ ಇಒ (Committee For Protection Of Jouranalists )ವರದಿ ಪ್ರಕಾರ, ಗೌರಿ ಹತ್ಯೆಯಾದ ಮರು ತಿಂಗಳಲ್ಲೇ ಕೊಲೆಯಾದ ಜಾರ್ಖಂಡ್ನ ಯುವ ಪತ್ರಕರ್ತ ಶಂತನು ಭೌಮಿಕ್ನಿಂದ ಮೊದಲ್ಗೊಂಡು 2022 ರ ಮೇ 20 ರಂದು ಕೊಲೆಯಾದ ಸುಭಾಷ್ ಕುಮಾರ್ ಮಹತೋವರೆಗೆ 2017-22ರ ನಡುವಿನ ಈ ಐದು ವರ್ಷಗಳಲ್ಲೇ 23 ಪತ್ರಕರ್ತರು ಹತ್ಯೆಯಾಗಿದ್ದಾರೆ. ಅದರ ಸಂಪೂರ್ಣ ವರದಿಯನ್ನು ಈ ವೆಬ್ ವಿಳಾಸದಲ್ಲಿ ಪಡೆಯಬಹುದು: https://cpj.org/data/killed/asia/india/.
ಇನ್ನು ಮಾನವ ಹಕ್ಕುಗಳ ಕಾರ್ಯಕರ್ತರ, ಹೋರಾಟಗಾರರ ಸಾವುಗಳನ್ನು ದಾಖಲಿಸುತ್ತಿದ್ದವರೂ ಕೂಡ ಯುಎಪಿಎ ಕೆಳಗೆ ಜೈಲಿನಲ್ಲಿದ್ದಾರೆ ಅಥವಾ ಕೊಲೆಗೀಡಾಗಿದ್ದಾರೆ.
ಭೀಮಾ ಕೋರೆಗಾಂವ ಬಂಧನಗಳಿಂದ ಪ್ರಾರಂಭವಾದ ಈ ಸರಕಾರ-ಹಾಗೂ ನ್ಯಾಯಾಂಗದ ಜಂಟಿ ದಾಳಿಗಳು
ಸಿಎಎ-ಎನ್ಆರ್ಸಿ ವಿರೋಧಿ ಹೋರಾಟಗಾರರ ಮೇಲಿನ ದಾಳಿ, ಸಿದ್ದೀಕ್ ಕಪ್ಪನ್, ದಿಲ್ಲಿಗಲಭೆಗಳಲ್ಲಿ ಸಂತ್ರಸ್ತರನ್ನೇ ತಳ್ಳುವುದು, ರೈತ ಹೋರಾಟದ ಮೇಲೆ ಬಗೆಬಗೆಯ ಕುತಂತ್ರಗಳು,ಕೊಲೆ ಹಾಗೂ ಇತ್ತೀಚಿನ ಝುಬೈರ್, ತೀಸ್ತಾ, ಬಂಧನದವರೆಗೆ.. ನಡೆಯುತ್ತಲೇ ಇದೆ. ತೀಸ್ತಾ ಮತ್ತು ಝುಬೈರ್ ಅವರಿಗೆ ಜಾಮೀನು ಸಿಕ್ಕಿದ್ದರೂ ತಲೆಯ ಮೇಲಿನ ಕತ್ತಿ ನಿವಾರಣೆಯಾಗಿಲ್ಲ. ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರ ಸಂವಿಧಾನದ ಮೇಲೆ ಮಾಡಿದ ದಾಳಿಗಳಾದ ಕಾಶ್ಮೀರ ವಿಭಜನೆ, ಯುಎಪಿಎ ತಿದ್ದುಪಡಿ, ಸಿಎಎ ಯಂಥ ಹಿಂದುತ್ವವಾದಿ, ಪ್ರಜಾತಂತ್ರ ವಿರೋಧಿ ನೀತಿಗಳನ್ನು ಸಂಸತ್ತಿನಲ್ಲಿ ಕಾಯ್ದೆಯನ್ನಾಗಿ ರೂಪಿಸಲು ಸಾಧ್ಯವಾಗಿದ್ದು ಕೇವಲ ಎನ್ಡಿಎ ಪಕ್ಷಗಳ ಬೆಂಬಲದಿಂದಲ್ಲ. ಬದಲಿಗೆ ಸೆಕ್ಯುಲರ್ ಎಂದು ಹೇಳಿಕೊಳ್ಳುವ ಆಪ್, ಬಿಎಸ್ಪಿ, ಟಿಡಿಪಿ, ಟಿಆರ್ಎಸ್, ಬಿಜೆಡಿ, ಜೆಡಿಯು ಪಕ್ಷಗಳ ಬೆಂಬಲದೊಂದಿಗೆ. ಯುಎಪಿಎ ಯನ್ನು ಕರಾಳಗೊಳಿಸಿದ್ದು ಹಾಗೂ ಸಿಎಎ-ಎನ್ಆರ್ಸಿ ಗೆ ಭೂಮಿಕೆಯನ್ನು ಸಿದ್ಧಪಡಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ.. ದೇಶದ ಮಟ್ಟದಲ್ಲಿ ಯುಎಪಿಎ ರದ್ದಾಗಬೇಕೆಂದು ಒತ್ತಾಯಿಸುತ್ತಿದ್ದರೂ ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಎಂ ನೇತೃತ್ವದ ಎಡರಂಗ ಸರಕಾರ ಮಾತ್ರ ಅದರ ಎಲ್ಲಾ ಕರಾಳತೆ ಯೊಂದಿಗೆ ಮುಂದುವರೆಸಲು ಬಯಸುತ್ತದೆ.. ಈ ಅಂಶಗಳನ್ನು ಮರೆತರೆ ಕಳೆದ ಐದು ವರ್ಷದ ಬೆಳವಣಿಗೆಗಳ ಸಾರಾಂಶ ಮತ್ತು ತಾತ್ಪರ್ಯ ಅರ್ಥವಾಗುವುದಿಲ್ಲ. ಸಾರಾಂಶವಿಷ್ಟೇ :
-ಗೌರಿಯ ಹತ್ಯೆಯಾದ ನಂತರದ ಈ ಐದು ವರ್ಷಗಳು ಇನ್ನಷ್ಟು ಗಂಭೀರವಾಗಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಸಮಾಜ ಮತ್ತು ಸರಕಾರ ಮತ್ತಷ್ಟು ಫ್ಯಾಶೀಕರಣಗೊಂಡಿರುವುದನ್ನು ಪ್ರತಿದಿನದ ವಿದ್ಯಮಾನಗಳು ಸಾಬೀತು ಪಡಿಸುತ್ತಿವೆ. -ಫ್ಯಾಶಿಸ್ಟ್ ಶಕ್ತಿಗಳು ಬೆಂಬಲಗಳೊಂದಿಗೆ ಯುದ್ಧವಿಲ್ಲದೆ ಸಂಸತ್ತನ್ನು ವಶಪಡಿಸಿಕೊಂಡಿದ್ದಾರೆ.
-ಮಾಧ್ಯಮಗಳು ವಿರೋಧಿಗಳ ಮೇಲೆ ದಾಳಿ ಮಾಡಲು ಸರಕಾರ ಸಾಕಿರುವ ಬೇಟೆನಾಯಿಗಳಾಗಿವೆ.
-ಕಳೆದ ಐದು ವರ್ಷಗಳಲ್ಲಿ ಈ ಫ್ಯಾಶಿಸ್ಟರ ಕೆಲವು ಕಾರ್ಪೊರೇಟ್ ಪರ ಮತ್ತು ಹಿಂದೂರಾಷ್ಟ್ರ ಪರ ನೀತಿಗಳ ವಿರುದ್ಧ ಅಭೂತಪೂರ್ವ ಪ್ರತಿರೋಧವನ್ನು ಭಾರತದ ಜನತೆ ತೋರಿದ್ದಾರೆ. ವಿಶೇಷವಾಗಿ ಕೇಂದ್ರ ಸರಕಾರ ಜಾರಿಗೆ ತಂದ ಸಿಎಎ-ಎನ್ಆರ್ಸಿ ನೀತಿಗಳ ವಿರುದ್ಧ ಹಾಗೂ ಮೂರು ಕೃಷಿ ನೀತಿಗಳ ವಿರುದ್ಧ ಒಂದು ವರ್ಷಕ್ಕೂ ಮೇಲ್ಪಟ್ಟು ನಡೆದ ರೈತ ಚಳವಳಿಗಳು. ಮೂರು ಕೃಷಿ ನೀತಿಗಳನ್ನು ಸರಕಾರ ವಾಪಸ್ ತೆಗೆದುಕೊಂಡಿದೆ. ಆದರೆ ಅದರ ಸಾರವನ್ನು ರಾಜ್ಯಗಳ ಮಟ್ಟದಲ್ಲಿ ಜಾರಿ ಮಾಡುವ ಯತ್ನ ನಡೆದಿದೆ. ಇದಲ್ಲದೆ ರೈತರಿಗೆ ಕೊಟ್ಟ ಇತರ ಭರವಸೆಗಳಾದ ಖ ಖಾತರಿ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರದೆ ಮೋದಿ ಸರಕಾರ ದ್ರೋಹ ಬಗೆದಿದೆ. ಮತ್ತೊಮ್ಮೆ ಅದರ ವಿರುದ್ಧ ಬೃಹತ್ ಹೋರಾಟ ಕಟ್ಟುವ ಪ್ರಯತ್ನಗಳಿಗೆ ಮೊದಲಿನ ಪ್ರತಿಕ್ರಿಯೆ ಸಿಗುತ್ತಿಲ್ಲ. ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣೆ ರೈತ ಸಂಘಟನೆಗಳಲ್ಲಿ ರಾಜಕೀಯ ಬಿರುಕನ್ನೂ ಹುಟ್ಟುಹಾಕಿತ್ತು. ಸಿಎಎ ಜಾರಿಗೆ ತಂದಿದ್ದರೂ ಈವರೆಗೆ ನಿಯಮಾವಳಿ ರೂಪಿಸಲಾಗಿಲ್ಲ. ಕೋವಿಡ್ ಇತ್ಯಾದಿ ಕಾರಣಗಳಿಂದ ಸೆನ್ಸಸ್ ಪ್ರಾರಂಭವಾಗಿಲ್ಲವಾದ್ದರಿಂದ ಎನ್ಪಿಆರ್
-ಎನ್ಆರ್ಸಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಆದರೆ ಅದಕ್ಕೇ ಬೇಕಾದ ಆಡಳಿತಾತ್ಮಕ ಸಿದ್ಧತೆಗಳು ಗುಟ್ಟಾಗಿ ನಡೆದಿವೆ.
-ಜನತೆ ತೋರಿದ ಈ ಪ್ರತಿರೋಧಗಳು ಫ್ಯಾಶಿಸ್ಟರ ಮುನ್ನಡೆಗೆ ಅಡ್ಡಿಯನ್ನುಂಟು ಮಾಡಿದ್ದು ನಿಜ. ಆದರೆ ಕ್ರಮೇಣ ಫ್ಯಾಶಿಸ್ಟ್ ಶಕ್ತಿಗಳು ತಮ್ಮ ಪಾರಂಪರಿಕ ಸಾಮ, ದಾನ, ಭೇದ ಮತ್ತು ದಂಡ ನೀತಿಗಳ ಮೂಲಕ ಅಡ್ಡಿಯನ್ನು ನಿವಾರಿಸಿಕೊಂಡು ತಮ್ಮ ಬಲವರ್ಧನೆ ಮಾಡಿಕೊಳ್ಳುತ್ತಿವೆ.
-ಉತ್ತರಪ್ರದೇಶ ಚುನಾವಣಾ ಫಲಿತಾಂಶ ತೋರಿಸಿದಂತೆ ಜನರ ಸಮಸ್ಯೆಗಳು ಮತ್ತದರ ವಿರುದ್ಧ ನಡೆದ ಧೀರೋದ್ಧಾತ ಹೋರಾಟಗಳು ಫ್ಯಾಶಿಸ್ಟರ ಮುನ್ನಡೆಗೆ ತಾತ್ಕಾಲಿಕ ಸ್ಪೀಡ್ ಬ್ರೇಕರ್ಗಳಾಗಿದ್ದವೇ ವಿನಃ ದ್ವೇಷದ ಆಧಾರದಲ್ಲಿ ಗೆದ್ದುಕೊಳ್ಳುವ ಫ್ಯಾಶಿಸ್ಟರ ತಂತ್ರಗಳಿಗೆ ದೊಡ್ಡ ತಡೆಯನ್ನೇನೂ ಒಡ್ಡಲಾಗಿಲ್ಲ. -ಆದರೆ ಆ ಹೋರಾಟಗಳು ಫ್ಯಾಸಿಸ್ಟರು ಅಜೇಯರಲ್ಲ ಎಂಬ ವಿಶ್ವಾಸವನ್ನಂತೂ ಮೂಡಿಸಿವೆ. ಬದಲಿಗೆ ಜನರು ಅತ್ಯಪೂರ್ವ ಒಗ್ಗಟ್ಟು, ಸಮರಶೀಲತೆ ಮತ್ತು ಬದ್ಧತೆಗಳಿಂದ ಬೀದಿ ಸಮರ ನಡೆಸಿದಾಗ ತಾತ್ಕಾಲಿಕವಾಗಿಯಾದರೂ ಅಡ್ಡಿಯಾಗಲು ಕಳೆದ ಐದು ವರ್ಷಗಳಲ್ಲಿ ಸಾಧ್ಯವಾಗಿದೆ. ಹೀಗಾಗಿ ಗೌರಿ ಹತ್ಯೆಯಾದ ಈ ಐದನೇ ವರ್ಷದಂದು ನಾವೆಲ್ಲರೂ ಗಳಿಸಿರುವ ತಾತ್ಕಾಲಿಕ ಜಯಗಳಿಂದ ಸ್ಫೂರ್ತಿಯನ್ನು ಪಡೆದುಕೊಂಡೇ ಕಡುಕಷ್ಟದ ದೀರ್ಘ ಹೋರಾಟಕ್ಕೆ ಸಿದ್ಧವಾಗ ಬೇಕಿದೆ. ಬಹುಸಂಖ್ಯಾತರ ಜನಮಾನಸದಲ್ಲಿ ದ್ವೇಷದ ಬದಲು ಪ್ರೀತಿಯನ್ನು, ಸ್ವಾರ್ಥದ ಬದಲು ಕಾಳಜಿಯನ್ನು ಬಿತ್ತುವ ಹಾಗೂ ಫ್ಯಾಶಿಸ್ಟ್ ಪ್ರಭುತ್ವವನ್ನು ಮಣಿಸಲು ದೀರ್ಘವಾದ, ಸಮರಶೀಲವಾದ ಹಾಗೂ ಭ್ರಾಂತಿರಹಿತವಾದ, ಜನಸಮರವನ್ನು ಕಟ್ಟಬೇಕಿದೆ.
ಬಿಕ್ಕಟ್ಟಿನ ಬೆಂಕಿಯಲ್ಲಿ ಬೇಯದೆ ಹೊಸಬೆಳಕು ಸಿಗುವುದೇ?
ಇದು ಭಾರತದ ನಾಗರಿಕತೆ ಎದುರಿಸುತ್ತಿರುವ ಮತ್ತೊಂದು ಬಿಕ್ಕಟ್ಟಿನ ಸಂದರ್ಭ.. ಹಳೆಯ ಮಾರ್ಗ ನಿರರ್ಥಕವಾಗಿ, ಹೊಸ ಮಾರ್ಗ ಸ್ಪಷ್ಟವಾಗದ ಸಂಕ್ರಮಣ ಕಾಲ... ಹೊರಗಿನ ಬೆಂಕಿ ಒಳಗನ್ನು ಬೇಯಿಸಿದಾಗ ಹುಟ್ಟುವ ಬೆಳಕು ಮಾತ್ರ ಈ ಕತ್ತಲಲ್ಲಿ ಬೆಳಕು ತೋರಿಸಬಹುದು. ಇಂಥ ಬಿಕ್ಕಟ್ಟಿನ ಸಂದರ್ಭಗಳಲ್ಲೇ ಮನುಷ್ಯರ ಮತ್ತು ಚಳವಳಿಗಳ ನಿಜವಾದ ವ್ಯಕ್ತಿತ್ವ ಹೊರಬರುತ್ತದೆ. ತಾವು ನಂಬಿಕೊಂಡ ಸತ್ಯಗಳು, ಇಟ್ಟುಕೊಂಡ ಭರವಸೆಗಳು, ನಡೆದ ದಾರಿಗಳು ಪರಿಹಾರದ ದಾರಿ ತೋರದಾಗ ಜನರ ಬಗ್ಗೆ ಪ್ರೀತಿ ಇರುವವರು, ಬದಲಾವಣೆಯನ್ನು ನಿಜವಾಗಿ ಬಯಸುವವರು ತಮ್ಮನ್ನು ಕಟುವಾದ ಆತ್ಮ ವಿಮರ್ಶೆಗೆ ಒಡ್ಡಿಕೊಳ್ಳುತ್ತಾರೆ. ಎಷ್ಟೇ ಕಷ್ಟವಾದರೂ ಹಳೆಯದರಿಂದ ಕಳಚಿಕೊಂಡು ಯಾರೂ ನಡೆಯದ, ಅನಿಶ್ಚಿತವಾದ, ಕಲ್ಲುಮುಳ್ಳಿನ ಆದರೆ ನಿಜ ಪರಿಹಾರದ ಹಾದಿಯಲ್ಲಿ ಹೊಸ ಪ್ರಯಾಣ ಪ್ರಾರಂಭಿಸುತ್ತಾರೆ. ಪರಿಹಾರದ ಮಾರ್ಗ ಬೇಡುವ ಬದಲಾವಣೆಗೆ ತಮ್ಮನ್ನು ತಾವು ಒಡ್ಡಿಕೊಳ್ಳದವರು, ತಾವು ಕಟ್ಟಿಕೊಂಡ ಕೋಟೆಗಳು ಹಾಗೂ ಕನ್ಫರ್ಟ್ ರೆನ್ ಗಳಿಂದ ಹೊರಬರಲು ಸಿದ್ಧರಿರದ ವ್ಯಕ್ತಿಗಳು ಮತ್ತು ಚಳವಳಿಗಳು ಇಂಥ ಸಂದರ್ಭಗಳಲ್ಲಿ ರಾಜಿ, ಅವಕಾಶವಾದಕ್ಕೆ ಬಲಿಯಾಗು ತ್ತಾರೆ ಅಥವಾ ಹತಾಶೆ, ಅಸಹಾಯಕತೆಯಿಂದ ಹಾವನ್ನು ಹಗ್ಗವೆಂದು ಭ್ರಮಿಸುವ ವಿಭ್ರಾಂತಿ ಗಳಿಗೂ ಗುರಿಯಾಗುತ್ತಾರೆ. ಆದರೆ ಬದ್ಧತೆ, ಪ್ರಾಮಾಣಿಕತೆ ಮತ್ತು ಜನರ ಬಗ್ಗೆ ಅಸೀಮ ಪ್ರೀತಿ ಕಾಳಜಿಯನ್ನೇ ಬದುಕಾಗಿಸಿಕೊಂಡವರು ಇಂಥ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲವನ್ನೂ ತೊರೆದು ತಾವು ನಂಬಿದ್ದನ್ನು ಉಳಿಸಿಕೊಳ್ಳಲು ಅಪಾಯಕ್ಕೆ ಮುಖಾಮುಖಿಯಾಗುತ್ತಾರೆ. ಆ ಮೂಲಕ ಕತ್ತಲಲ್ಲಿ ಹೊಸ ದಾರಿಯನ್ನು ತೋರುತ್ತಾರೆ. ಇತಿಹಾಸದಲ್ಲಿ, ಸಂಕ್ರಮಣ ಸಂದರ್ಭದಲ್ಲಿ ಹೊಸ ದಾರಿ ತೋರಿದ ಚಳವಳಿಗಳು, ವ್ಯಕ್ತಿಗಳೂ ಬದುಕಿದ್ದು, ಸಾಧಿಸಿದ್ದು ಈ ಮೌಲ್ಯಗಳನ್ನು ಅಳವಡಿಸಿಕೊಂಡೇ...
ಗೌರಿ : ಕತ್ತಲನ್ನು ಕರಗಿಸುವ ನೈತಿಕ ಧೈರ್ಯದ ಬೆಳಕು
ನಮ್ಮ ಗೌರಿ ಕೂಡಾ ಅಂಥ ಬದುಕನ್ನೇ ಬದುಕಿದವರು. ಮಡಿದವರು. ಬದುಕಿನ ಪಯಣ ದಲ್ಲಿ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳ ಬೆಂಕಿಯಲ್ಲಿ ಬಿದ್ದಾಗಲೆಲ್ಲಾ ಆಕೆ ಅಪ್ಪಟ ಚಿನ್ನವಾಗಿ ಹೊರಬಂದಿದ್ದಾಳೆ. ತಾನು ನಂಬಿದ ಮೌಲ್ಯಗಳಿಗಾಗಿ ತನ್ನ ಸ್ವಂತ ಸುಖ, ನೆಮ್ಮದಿಗಳಿಗೆ ಎರವಾಗಿದ್ದಾಳೆ. ಆ ಸಮಯದಲ್ಲಿ ಆಕೆಯ ಮುಂದೆ ಮುಂದಿನ ದಾರಿಯೇನೂ ಸ್ಪಷ್ಟವಾಗಿರಲಿಲ್ಲ.
ಆದರೆ ರಾಜಿ-ಅವಕಾಶವಾದಗಳ ಹಂಗಿನ ಅರಮನೆಗಿಂತ ಅನಿಶ್ಚಿತವಾದ ಆದರೆ ನ್ಯಾಯಯುತವಾದ, ತ್ಯಾಗ ಬಲಿದಾನ ಮತ್ತು ನಿತ್ಯ ಯಾತನೆಗಳಿಂದ ಕೂಡಿದ ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ. ಬೆಟ್ಟವೇರಿ ಕೂರದೆ ಅತ್ಯಂತ ಸಲೀಸಾಗಿ ತನ್ನನ್ನು ತಾನು ಆತ್ಮವಿಮರ್ಶೆಯ ನಿಕಷಕ್ಕೆ ಒಡ್ಡಿಕೊಂಡು ಜಗವೇ ಬೆರಗಾಗುವಂತೆ ಬದಲಾಗಿದ್ದಾಳೆ. ಆ ಕಾರಣಕ್ಕಾಗಿ ಚಳವಳಿಗಳಿಗೂ, ನಾಯಕರಿಗೂ ಸಹ ಗುರುವಾಗಿದ್ದಾಳೆ. ತಾನು ಕಟ್ಟಿಕೊಂಡಿರುವ ಕನ್ಫರ್ಟ್ ರೆನ್ ಒಳಗೆ ಕೂತುಕೊಂಡು ಸತ್ಯ ಮತ್ತು ನ್ಯಾಯದ ದಾರಿಯಲ್ಲಿ ನಡೆಯಲಾಗದು ಎಂದು ಗೊತ್ತಾದಾಗ ಅತ್ಯಂತ ಸಲೀಸಾಗಿ ಅದರಿಂದ ಹೊರ ಬಂದು ಕಷ್ಟದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಎಷ್ಟು ಜನರು ತಮ್ಮ ಬದುಕಿನಲ್ಲಿ ಇಂಥ ಆಯ್ಕೆ ಮಾಡಿಕೊಳ್ಳಬಲ್ಲರು? ಆದರೆ ಅಂಥ ಆಯ್ಕೆಗಳಿಗೆ ಸಿದ್ಧವಿರುವ ವ್ಯಕ್ತಿ ಮತ್ತು ಚಳವಳಿಗಳಿಂದ ಮಾತ್ರ ಫ್ಯಾಶಿಸಂ ಅನ್ನು ಸೋಲಿಸಲು ಸಾಧ್ಯ. ಪ್ರಾಯಶಃ ಗೌರಿಯನ್ನು ನೆನೆಯುವುದೆಂದರೆ, ಗೌರಿ ನಡೆದು ತೋರಿದಂತೆ -ನಮ್ಮ ನಮ್ಮ ಕನ್ಫರ್ಟ್ ರೆನ್ಗಳಿಂದ ಹೊರಬಂದು, -ನಮ್ಮ ನಮ್ಮ ಸಿದ್ಧತೆಗಳಿಗೆ ತಕ್ಕಂತೆ ಸಿದ್ಧಾಂತಗಳನ್ನು ರೂಪಿಸದೆ, ನಮ್ಮ ಮುಂದಿರುವ ಗಂಭೀರ ಸವಾಲನ್ನು ಅದಕ್ಕೆ ತಕ್ಕಂತೆ ವ್ಯಾಖ್ಯಾನಿಸದೆ
-ಮುಂದಿರುವ ಶತ್ರು ವಿನ ಸಮಗ್ರ ಸ್ವರೂಪವನ್ನು ಹೇಗಿದೆಯೋ ಹಾಗೆ ಅರ್ಥ ಮಾಡಿಕೊಳ್ಳುವುದು ಹಾಗೂ ಅದರ ವಿರುದ್ಧದ ಸಂಘರ್ಷ ಏನು ಕೇಳುತ್ತದೋ ಅದಕ್ಕೆ ತಕ್ಕಹಾಗೆ ಸಿದ್ಧವಾಗುವುದೇ ಆಗಿದೆ.. ಇದು ಕೇವಲ ಸಾಮಾಜಿಕ ನೆಲೆಯಲ್ಲಿ ಬಗೆಹರಿಸಿಕೊಳ್ಳಬೇಕಾದ ಸಮಸ್ಯೆಯಲ್ಲ. ಬಡತನದ ಬೆಂಕಿ, ಜಾತಿ ಅಪಮಾನದ ಬೆಂಕಿ, ಲಿಂಗ ತಾರತಮ್ಯದ ಬೆಂಕಿ, ಧಾರ್ಮಿಕ ಅಪಮಾನದ ಬೆಂಕಿ, ಅಸಮಾನತೆ-ಅಭದ್ರತೆಯ ಬೆಂಕಿ ಗೌರಿಯ ಅಂತರಂಗವನ್ನು ಬೇಯಿಸಿತ್ತು. ಆ ಬೆಂಕಿಗೆ ತನ್ನನ್ನು ತಾನು ಒಡ್ಡಿಕೊಂಡೇ ಗೌರಿ ಗೌರಿಯಾದಳು.. ಆ ಮೂಲಕ ಅಂತರಂಗ
-ಬಹಿರಂಗವೆಂಬ ಭಿನ್ನವಿಲ್ಲದೆ ಬದುಕಿದ್ದವಳು.. ನೊಂದವರ ನೋವಿನ ಬಗ್ಗೆ ದೂರದಿಂದ ಕರುಣೆ ತೋರದೆ ತಾನೇ ಅನುಭವಿಸಿದಳು. ಹೀಗಾಗಿ ನೋವಿನ ಕಾರಣಗಳನ್ನು ರಾಜಿ ಇಲ್ಲದೆ ದ್ವೇಷಿಸಿದಳು.. ಆದ್ದರಿಂದಲೇ ಅಂಥ ಬಿಕ್ಕಟ್ಟುಗಳು ಎದುರಾದರೂ... ಸುಡುಸತ್ಯಗಳಿಗೆ ಸಂಯಮದ ನೀರೆರ ಚಲಿಲ್ಲ.. ಬೆತ್ತಲೆಯ ಜಗತ್ತಿಗೆ ವಿದ್ವತ್ತಿನ ಬಟ್ಟೆ ತೊಡಿಸಲಿಲ್ಲ.. ಸತ್ಯೋತ್ತರ ಮಿಥ್ಯೆಗಳಿಗೆ ಮಾಹಿತಿ ಎಂಬ ಮುದ್ರೆಯೊತ್ತಲಿಲ್ಲ... ಕಂಡದ್ದನ್ನು ಕಂಡಹಾಗೆಯಲ್ಲದೆ ಮತ್ತೇನನ್ನೂ ಬರೆಯಲಿಲ್ಲ.. ತಾನು ನಂಬಿಕೊಂಡ ಮೌಲ್ಯಗಳಿಗಾಗಿ ತನ್ನ ಕನ್ಫರ್ಟ್ ರೆನ್ ಇಂದ ಹೊರಬಂದು
ಕರಗಿದಳು, ಕೊರಗಿದಳು, ಕಣ್ಣೀರಾದಳು ..ಕನಲಿದಳು ಕದನಕ್ಕಿಳಿದಳು, ಅಮ್ಮನಾದಳು, ಗುರುವಾದಳು, ಪದವಾದಳು,
ಅರ್ಥವಾದಳು.. ಅನ್ವರ್ಥವಾದಳು
ಕಪ್ಪಾದಳು, ಕೆಂಪಾದಳು, ನೀಲಿಯಾದಳು,
ಹಸಿರಾದಳು, ಬಿಳಿಯಾದಳು. ಕಾಮನಬಿಲ್ಲಾದಳು ಭರವಸೆಯಾದಳು, ಸಾಧ್ಯತೆಯಾದಳು, ಅಮರಳಾದಳು ಸಾವಿರದ ಗೌರಿಯಾದಳು ..
ಸಾವಿರಾರು ಗೌರಿಯಾದಳು..
ಕತ್ತಲು ಕಾರ್ಗತ್ತಲಾಗುತ್ತಿರುವ ಈ ಸಂದರ್ಭದಲ್ಲಿ, ಭರವಸೆಗಳು ಭ್ರಮನಿರಸನಗಳಾ ಗುತ್ತಿರುವ ಈ ಸಂದರ್ಭದಲ್ಲಿ ಹೊಸ ಭರವಸೆಗಳು ಬರಬೇಕಿರುವುದು ಹೊರಗಿನಿಂದಲ್ಲ. ನಮ್ಮಿಳಗಿನಿಂದಲೇ.. ಅದು ಸಾಧ್ಯವಾಗುವುದು ಚಳವಳಿಗಳು ಮತ್ತು ನಾಯಕರು ಗೌರಿ ಬದುಕಿದಂತೆ ಬದುಕಿದಾಗ.. ಮಾತ್ರ .. ಅಲ್ಲವೇ?