ಶೇ. 47ಕ್ಕೂ ಅಧಿಕ ಆ್ಯಂಟಿ ಬಯೋಟಿಕ್‌ಗಳಿಗೆ ಡಿಸಿಜಿಐ ಅನುಮೋದನೆ ಇರಲಿಲ್ಲ: ವರದಿ
ಹೊಸದಿಲ್ಲಿ, ಸೆ. 6: ಭಾರತದ ಖಾಸಗಿ ವಲಯದಲ್ಲಿ 2019ರಲ್ಲಿ ಬಳಸಿದ ಆ್ಯಂಟಿಬಯೋಟಿಕ್ (ಜೀವ ಪ್ರತಿರೋಧಕ) ಸಂಯೋಜನೆಗಳ ಪೈಕಿ ಶೇ. 47ಕ್ಕಿಂತ ಅಧಿಕ ಪ್ರಮಾಣದ ಔಷಧಗಳಿಗೆ ಭಾರತೀಯ ಔಷಧ ಮಹಾ ನಿಯಂತ್ರಕ (ಡಿಸಿಜಿಐ)ರ ಅನುಮೋದನೆ ಇರಲಿಲ್ಲ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್-ಸೌತ್‌ಈಸ್ಟ್ ಏಷಿಯಾದಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ.
ಹೊಸದಿಲ್ಲಿಯ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸೆಂಥಿಲ್ ಗಣೇಶ್ ಹಾಗೂ ಶಕ್ತಿವೇಲ್ ಸೆಲ್ವರಾಜ್ ಅವರೊಂದಿಗೆ ಬೋಸ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡಿಪಾರ್ಟ್‌ಮೆಂಟ್ ಆಫ್ ಎಪಿಡೆಮಿಯಾಲಜಿಯ ಶಫಿ ಫಝಲುದ್ದೀನ್ ಕೋಯಾ, ವೆರೋನಿಕಾ ಜೆ. ವಿರ್ಟ್ಜ್, ಸ್ಯಾಂಡ್ರೊ ಗಾಲಿಯಾ ಹಾಗೂ ಪೀಟರ್ ಸಿ. ರೋಕರ್ಸ್ಸ್ ಈ ಅಧ್ಯಯನ ನಡೆಸಿದ್ದಾರೆ.
ಈ ವರ್ಷ ಅಝಿತ್ರೋಮೈಸಿನ್-500 ಎಂಜಿ ಭಾರತದಲ್ಲಿ ಅತ್ಯಧಿಕ ಬಳಕೆಯಾದ ಆಂಟಿ ಬಯೋಟಿಕ್ ಸಂಯೋಜನೆ. ಅನಂತರ ಸೆಫಿಕ್ಸೈಮ್ 200 ಎಂಜಿ ಅತಿ ಹೆಚ್ಚು ಬಳಕೆಯಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಭಾರತದಲ್ಲಿ ಒಟ್ಟು ಬಳಕೆಯಾಗುವ ಆ್ಯಂಟಿ ಬಯೋಟಿಕ್‌ಗಳ ಪೈಕಿ ಶೇ. 80ರಿಂದ 90ರಷ್ಟು ಖಾಸಗಿ ವಲಯದಲ್ಲಿ ಬಳಕೆಯಾಗುತ್ತದೆ.
ಅಂದಾಜು ಐದು ಸಾವಿರ ಔಷಧ ತಯಾರಕ ಕಂಪೆನಿಗಳು ಹಾಗೂ 9 ಸಾವಿರ ದಾಸ್ತಾನಗಾರರಿಂದ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.