ವಿದೇಶಗಳಲ್ಲಿ ಭಾರತೀಯರ ಮೇಲೆ ಹೆಚ್ಚುತ್ತಿರುವ ದಾಳಿ: ಯಾರು ಹೊಣೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗೆ ಪೋರ್ಚುಗಲ್ನಲ್ಲಿ ನಡೆದ ಒಂದು ರಾಜಕೀಯ ಬೆಳವಣಿಗೆ ಭಾರತದ ಮಾಧ್ಯಮಗಳಲ್ಲೂ ಚರ್ಚೆಗೊಳಗಾಯಿತು. ಪೋರ್ಚುಗಲ್ನ ಲಿಸ್ಬನ್ನ ಅತಿ ದೊಡ್ಡ ಆಸ್ಪತ್ರೆ ಸಂತ ಮರಿಯಾದಲ್ಲಿ ಹೆರಿಗೆಗೆ ಸಂಬಂಧಿಸಿದ ಸೇವಾ ಘಟಕ ಭರ್ತಿಯಾಗಿದ್ದ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ಸಾಗಿಸಬೇಕಾಯಿತು. ಈ ಸಂದರ್ಭದಲ್ಲಿ ಆಕೆ ಮೃತಪಟ್ಟಿದ್ದಾರೆ. ಇದು ಪೋರ್ಚುಗಲ್ ಸರಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತು. ಜನಸಾಮಾನ್ಯರು ಈ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮವಾಗಿ, ಪೋರ್ಚುಗಲ್ನ ಆರೋಗ್ಯ ಸಚಿವೆ ತನ್ನ ರಾಜೀನಾಮೆಯನ್ನು ನೀಡಬೇಕಾಯಿತು. ಗರ್ಭಿಣಿಯ ಸಾವಿಗೆ ಅಲ್ಲಿನ ಸರಕಾರ ಬೆಚ್ಚಿ ಬಿದ್ದಿದ್ದರೆ, ಸಚಿವೆಯ ರಾಜೀನಾಮೆಗೆ ಭಾರತದ ಸರಕಾರ ಬೆಚ್ಚಿ ಬಿದ್ದಿರುವ ಸಾಧ್ಯತೆಯಿದೆ. ಭಾರತದಲ್ಲಿ ಗರ್ಭಿಣಿಯರ ಇಂತಹ ಸಾವುಗಳು ದಿನ ನಿತ್ಯ ಸಂಭವಿಸುತ್ತಿರುತ್ತ್ತವೆ.
ಅಸುರಕ್ಷಿತ ಗರ್ಭಪಾತದ ಕಾರಣಕ್ಕಾಗಿ ಭಾರತದಲ್ಲಿ ಪ್ರತೀ ದಿನ ಹತ್ತು ಗರ್ಭಿಣಿಯರು ಮೃತಪಡುತ್ತಾರೆ ಎನ್ನುವುದನ್ನು ಅಂಕಿಅಂಶ ಹೇಳುತ್ತದೆ. ಅಪೌಷ್ಟಿಕತೆ, ರಕ್ತ ಹೀನತೆಯ ಕಾರಣದಿಂದ, ದೇಶಾದ್ಯಂತ ಸಂಭವಿಸುವ ಸಾವುಗಳ ಅಧಿಕೃತ ಲೆಕ್ಕ ಸರಕಾರದ ಬಳಿಯೇ ಇಲ್ಲ. ಉತ್ತರ ಭಾರತದಲ್ಲಿ ಗರ್ಭಿಣಿಯರನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸೇರಿಸುವ ಪ್ರಕರಣ, ನಡು ದಾರಿಯಲ್ಲೇ ಗರ್ಭಿಣಿಯರು ಮೃತಪಟ್ಟ ಘಟನೆಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಇದಕ್ಕಾಗಿ ರಾಜಕಾರಣಿಗಳು ಕನಿಷ್ಟ ತಮ್ಮ ಸಂತಾಪ ವ್ಯಕ್ತಪಡಿಸಿದ ಉದಾಹರಣೆಯೂ ಇಲ್ಲ. ಬದಲಿಗೆ ಘಟನೆಯನ್ನು ವರದಿ ಮಾಡಿದ ವರದಿಗಾರರ ಮೇಲೆಯೇ ಪ್ರಕರಣ ದಾಖಲಿಸಿ, ಅವರನ್ನು ಜೈಲಿಗೆ ಕಳುಹಿಸಿದ ಉದಾಹರಣೆಗಳಿವೆ. ಭಾರತೀಯ ಮೂಲದ ಗರ್ಭಿಣಿಯ ಸಾವಿಗಾಗಿ ಪೋರ್ಚುಗಲ್ನ ಸಚಿವೆಯ ರಾಜೀನಾಮೆಗೆ ಭಾರತ ಸಂಭ್ರಮಿಸುತ್ತಿರುವ ಹೊತ್ತಿನಲ್ಲೇ, ಭಾರತದಲ್ಲಿ ಇನ್ನೊಂದು ನಾಚಿಕೆಗೇಡಿನ ಪ್ರಕರಣ ಮಾಧ್ಯಮಗಳ ಮುಖಪುಟದಲ್ಲಿ ರಾರಾಜಿಸುತ್ತಿತ್ತು. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಗರ್ಭಿಣಿ ಬಿಲ್ಕಿಸ್ ಬಾನು ಎಂಬಾಕೆಯನ್ನು ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಗೈದು ಆಕೆಯ ಬಂಧುಗಳನ್ನು ಭೀಕರವಾಗಿ ಕೊಂದು ಹಾಕಿದ 11 ಮಂದಿ ಅಪರಾಧಿಗಳನ್ನು ಗುಜರಾತ್ ಸರಕಾರ ಬಿಡುಗಡೆ ಮಾಡಿತ್ತು. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಮಹಿಳೆಯರ ಮೇಲೆ ಭೀಕರ ದೌರ್ಜನ್ಯಗಳನ್ನು ಎಸಗುವುದಕ್ಕೆ ಪರೋಕ್ಷ ಕಾರಣರಾದ ಅಂದಿನ ಗುಜರಾತಿನ ರಾಜಕೀಯ ನಾಯಕರು ಇಂದು ಈ ರಾಷ್ಟ್ರ ಮಟ್ಟದ ನಾಯಕರಾಗಿ ಮಿಂಚುತ್ತಿದ್ದಾರೆ.
‘ಭಾರತವು ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶ’ ಎಂದು ವಿಶ್ವ ಗುರುತಿಸುತ್ತಿರುವುದರ ಕಾರಣ ಇಲ್ಲಿದೆ. ಆರೋಪಿಗಳು ಎಸಗಿದ ನೀಚ ಕೃತ್ಯ ನ್ಯಾಯಾಲಯದಲ್ಲಿ ಸಾಬೀತಾಗಿ ಅವರಿಗೆ ಶಿಕ್ಷೆ ವಿಧಿಸಲಾಗಿದೆಯಾದರೂ, ಇದೀಗ ರಾಜಕಾರಣಿಗಳು ಅವರನ್ನು ‘ಬ್ರಾಹ್ಮಣ ಜಾತಿ’ಗೆ ಸೇರಿದವರು ಎನ್ನುವ ಕಾರಣ ಮುಂದೊಡ್ಡಿ ‘ಕ್ಲೀನ್ ಚಿಟ್’ ನೀಡಿದ್ದಾರೆ. ತನ್ನನ್ನು ತಾನು ವಿಶ್ವ ಗುರು ಎಂದು ಕರೆದುಕೊಳ್ಳುತ್ತಿರುವ ಭಾರತ, ವಿಶ್ವ ಮಟ್ಟದಲ್ಲಿ ಛೀಮಾರಿಗೆ ಒಳಗಾಗುತ್ತಿದೆ. ಇದೇ ಸಂದರ್ಭದಲ್ಲಿ ಒಬ್ಬ ಮಹಿಳೆಯ ಸಾವಿನ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಪೋರ್ಚುಗಲ್ ಸಚಿವೆ, ಭಾರತಕ್ಕೆ ನೈತಿಕತೆಯ ಪಾಠವನ್ನು ಬೋಧಿಸಿದ್ದಾರೆ. ವಾರದ ಹಿಂದೆ ನ್ಯೂಯಾರ್ಕ್ನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಇನ್ನೋರ್ವ ಭಾರತೀಯ ಮೂಲದ ಅಮೆರಿಕನ್ ಪ್ರಜೆ ‘ಕೊಳಕ’ ‘ಗೋಮೂತ್ರ ಕುಡಿಯುವವ, ಸೆಗಣಿ ತಿನ್ನುವವ’ ಎಂಬಿತ್ಯಾದಿಯಾಗಿ ನಿಂದಿಸಿದ ಘಟನೆ ಬೆಳಕಿಗೆ ಬಂದಿದೆ. ಅಮೆರಿಕ ಬಿಟ್ಟು ತೊಲಗುವಂತೆಯೂ ಈತ ಬೆದರಿಕೆ ಒಡ್ಡಿದ್ದಾನೆ. ಪೋಲ್ಯಾಂಡ್ನಲ್ಲಿಯೂ ಇಂತಹದೇ ಘಟನೆ ನಡೆದಿದೆ. ಪೋಲ್ಯಾಂಡ್ನ ವ್ಯಕ್ತಿಯೊಬ್ಬ ಭಾರತೀಯ ವ್ಯಕ್ತಿಯೊಬ್ಬನಿಗೆ ಹೀನಾಯವಾಗಿ ನಿಂದಿಸುವ ವೀಡಿಯೊ ವೈರಲ್ ಆಗಿದೆ. ‘ಪೋಲ್ಯಾಂಡ್ನಲ್ಲಿ ಯಾಕಿದ್ದೀರಾ? ನಿಮಗೆ ನಿಮ್ಮದೇ ದೇಶವಿಲ್ಲವೆ? ಅಲ್ಲಿಗೆ ತೊಲಗಿ’ ಎಂಬಿತ್ಯಾದಿಯಾಗಿ ಬೆದರಿಕೆಯನ್ನು ಭಾರತೀಯ ಮೂಲದ ವ್ಯಕ್ತಿಗೆ ಒಡ್ಡಲಾಗಿದೆ. ಭಾರತೀಯನೆನ್ನುವ ಕಾರಣಕ್ಕಾಗಿಯೇ ಅಲ್ಲಲ್ಲಿ ಹಲ್ಲೆಗಳೂ ನಡೆಯುತ್ತಿವೆ. ಇದರ ವಿರುದ್ಧ ಭಾರತ ಹಲವು ಬಾರಿ ಖಂಡನಾ ಹೇಳಿಕೆಗಳನ್ನು ನೀಡಿದೆ. ವಿಪರ್ಯಾಸವೆಂದರೆ, ಇಂದು ಭಾರತೀಯರ ಮೇಲೆ ಜಾಗತಿಕವಾಗಿ ಜನಾಂಗೀಯ ಹಲ್ಲೆಗಳು ಹೆಚ್ಚಾಗುತ್ತಿವೆ.
ಭಾರತೀಯರನ್ನು ಅತ್ಯಂತ ನಿಕೃಷ್ಟವಾಗಿ ನೋಡುವ ಮನಸ್ಥಿತಿ ಜಾಗತಿಕವಾಗಿ ಸೃಷ್ಟಿಯಾಗಿದೆ. ಆದರೆ ಇದಕ್ಕೆ ಕಾರಣಗಳನ್ನು ನಾವು ವಿದೇಶಗಳಲ್ಲಿ ಹುಡುಕುವುದಕ್ಕಿಂತ ಭಾರತದಲ್ಲಿ ಹುಡುಕಿದರೇ ಶೀಘ್ರ ಪರಿಹಾರವನ್ನು ಕಂಡುಕೊಳ್ಳಬಹುದೇನೋ. ವಿದೇಶದಲ್ಲಿ ಭಾರತೀಯರ ಕುರಿತಂತೆ ಅಲ್ಲಿನ ಪ್ರಜೆಗಳು ನಿಂದನೆಗೆ ಯಾವ ಪದಗಳನ್ನು ಬಳಸುತ್ತಿದ್ದಾರೆಯೋ ಆ ಪದಗಳನ್ನು ಭಾರತದಲ್ಲಿ ಭಾರತೀಯರೇ ಭಾರತೀಯರ ವಿರುದ್ಧ ಶತಶತಮಾನಗಳಿಂದ ಬಳಸುತ್ತಾ ಬರುತ್ತಿದ್ದಾರೆ. ಅಷ್ಟೇ ಅಲ್ಲ, ಭಾರತ ಸ್ವಾತಂತ್ರದ 75ನೇ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲೂ ಈ ನಿಂದನೆಗಳಿಗಾಗಿಯೇ ಭಾರತ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಒಬ್ಬ ವಿದ್ಯಾರ್ಥಿ ಕುಡಿಯುವ ನೀರಿನ ಮಡಕೆಯನ್ನು ಮುಟ್ಟಿದ ಕಾರಣಕ್ಕಾಗಿ ಶಿಕ್ಷಕನಿಂದ ಹಲ್ಲೆಗೊಳಗಾಗಿ ಮೃತಪಟ್ಟ. ಈ ಘಟನೆಯ ಕುರಿತಂತೆ ಭಾರತ ಸರಕಾರ ಈವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇಲ್ಲಿ ಸಂತ್ರಸ್ತ ಹುಡುಗ ವಿದೇಶಿ ವಿದ್ಯಾರ್ಥಿಯಾಗಿರಲಿಲ್ಲ.
ಭಾರತೀಯರೇ ಭಾರತೀಯರ ವಿರುದ್ಧ ಅವರ ಜಾತಿ, ಕುಲ, ಧರ್ಮದ ಕಾರಣಕ್ಕಾಗಿ ಹಲ್ಲೆ ನಡೆಸುವ ವಾತಾವರಣ ಭಾರತದಲ್ಲಿರುವಾಗ, ಯಾವನೋ ಒಬ್ಬ ವಿದೇಶಿ ಪ್ರಜೆ ಭಾರತೀಯ ಮೂಲದ ವಿದ್ಯಾರ್ಥಿಯನ್ನು ನಿಂದಿಸಿದ ಕಾರಣಕ್ಕಾಗಿ ಖಂಡಿಸುವ ನೈತಿಕತೆಯನ್ನು ನಾವು ಹೊಂದಿದ್ದೇವೆಯೆ? ಒಂದು ಧರ್ಮಕ್ಕೆ ಸೇರಿದ ಗರ್ಭಿಣಿಯನ್ನು ಆಕೆಯ ಧರ್ಮದ ಕಾರಣಕ್ಕಾಗಿಯೇ ಸಾಮೂಹಿಕವಾಗಿ ಅತ್ಯಾಚಾರಗೈದ ಅಪರಾಧಿಗಳನ್ನು ಬಹಿರಂಗವಾಗಿ ಸಮರ್ಥಿಸುವ ದೇಶದ ವಿರುದ್ಧ ವಿದೇಶಿಯರು ಇನ್ನಾವ ರೀತಿಯಲ್ಲಿ ಪ್ರತಿಕ್ರಿಯೆ ಮಾಡಬಹುದು? ಭಾರತದಲ್ಲಿ ಕೆಳಜಾತಿಗಳ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ನಡೆಯುವ ಹಲ್ಲೆಗಳನ್ನು ವೌನವಾಗಿ ಸಮರ್ಥಿಸುವ ಮೇಲ್ಜಾತಿಯ ಜನರೇ, ವಿದೇಶದಲ್ಲಿ ನಡೆಯುವ ನಿಂದನೆಗಳಿಗೆ ಗೋಳಾಡಿದರೆ ಅದಕ್ಕೇನು ಅರ್ಥವಿದೆ?
ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ವಿದೇಶಗಳಲ್ಲಿ ಭಾರತೀಯರ ಕುರಿತಂತೆ ತೀರಾ ನಿಕೃಷ್ಟ ಭಾವನೆಗಳನ್ನು ಬಿತ್ತುತ್ತಿವೆ. ಗೋವುಗಳ ಹೆಸರಿನಲ್ಲಿ, ಆಹಾರದ ಹೆಸರಿನಲ್ಲಿ ಭಾರತದಲ್ಲಿ ತಮ್ಮದೇ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಪರೋಕ್ಷವಾಗಿ ವಿದೇಶದಲ್ಲಿರುವ ಭಾರತೀಯರ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿವೆ. ವಲಸೆ ಬಂದ ಭಾರತೀಯರ ಸಂಖ್ಯೆ ಬೆಳೆದು ಅವರು ತಮ್ಮ ಆಹಾರದ ಹಕ್ಕುಗಳ ಬಗ್ಗೆ ಪ್ರಶ್ನಿಸ ತೊಡಗಿದರೆ ಎನ್ನುವ ಅಭದ್ರತೆ ವಿದೇಶಿಯರನ್ನು ಕಾಡ ತೊಡಗಿದರೆ ಅದಕ್ಕೆ ಕಾರಣರು ಯಾರು? ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳೇ ಇಂದು ಅನಿವಾಸಿಗಳನ್ನು ‘ಕೊಳಕರು’ ‘ಗಂಜಲ ಸೇವಿಸುವವರು’ ಎಂದು ನಿಂದಿಸುತ್ತಿದ್ದಾರೆ ಎಂದರೆ, ಅದಕ್ಕೆ ಭಾರತದ ರಾಜಕಾರಣಿಗಳ ಕೊಡುಗೆಯೆಷ್ಟು ಎನ್ನುವುದರ ಆತ್ಮಾವಲೋಕನ ನಡೆಯಲೇಬೇಕಾಗಿದೆ.
ಇಂದು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ಭಾರತೀಯರನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿ ‘ನೀನು ಪಾಕಿಸ್ತಾನಕ್ಕೆ ಹೋಗು’ ಎಂದು ಹೇಳುವವರನ್ನು ಬಹಿರಂಗವಾಗಿ ಸಮರ್ಥಿಸುವ ನಾಯಕರು ಸರಕಾರದೊಳಗೆ ಇರುವಾಗ, ವಿದೇಶದಲ್ಲಿ ನಮ್ಮ ವಿದ್ಯಾರ್ಥಿಗಳನ್ನು ‘ನೀನು ಇಲ್ಲಿ ಯಾಕೆ ಬಂದಿದ್ದೀಯಾ?’ ಎಂದು ಯಾರಾದರೂ ತಡೆದು ಕೇಳಿದರೆ ಅದಕ್ಕೆ ಹೊಣೆ ಮಾಡಬೇಕಾದುದು ಯಾರನ್ನು? ಒಂದು ಕಾಲದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಗಾಂಧಿ, ನೆಹರೂ, ಅಂಬೇಡ್ಕರ್ ನೆಲದಿಂದ ಬಂದವರು ಎಂಬ ಗೌರವ ದೊರಕುತ್ತಿತ್ತು. ಆದರೆ ಇಂದು ಗುಜರಾತ್ ಹತ್ಯಾಕಾಂಡದ ಭಾರತ, ಗೋವುಗಳ ಹೆಸರಿನಲ್ಲಿ ಕೊಲೆಗಳು ನಡೆಯುವ ಭಾರತ, ಗೋಮೂತ್ರ ಸೇವಿಸುವ ಭಾರತ, ಆಹಾರದ ಹಕ್ಕುಗಳನ್ನು ನಿರಾಕರಿಸುವ ಭಾರತ, ದಲಿತರನ್ನು ಇನ್ನೂ ಅಸ್ಪಶ್ಯರನ್ನಾಗಿ ಕಾಣುವ ಭಾರತವೆಂದು ಗುರುತಿಸಲಾಗುತ್ತಿದೆ. ಅದರ ಪರಿಣಾಮವಾಗಿಯೇ ವಿದೇಶಗಳಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಅಲ್ಲಿನ ಸರಕಾರಗಳ ಮೇಲೆ ಒತ್ತಡ ಹೇರಬೇಕು ನಿಜ. ಆದರೆ ಅದಕ್ಕೆ ಮೊದಲು ಭಾರತದೊಳಗೆ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದೌರ್ಜನ್ಯಗಳ ವಿರುದ್ಧ ಸರಕಾರ ಧ್ವನಿಯೆತ್ತಬೇಕು. ಆಗ ಮಾತ್ರ ವಿದೇಶಗಳಲ್ಲಿ ನಡೆಯುವ ಜನಾಂಗೀಯ ನಿಂದನೆಗಳ ವಿರುದ್ಧ ಧ್ವನಿಯೆತ್ತುವ ನೈತಿಕತೆಯನ್ನು ಭಾರತ ತನ್ನದಾಗಿಸುತ್ತದೆ.