ಅನುಗಾಲ
ಹಸ್ತಕ್ಷೇಪದ ಭಾರತೀಯ ನಡೆಗಳು

ಭಾರತೀಯನೊಬ್ಬ ಸಾಂಸ್ಕೃತಿಕ ಜಗತ್ತಿನ ವಿಶ್ವಮಾನ್ಯತೆಯನ್ನು ಪಡೆಯುವುದು ಎಲ್ಲರಿಗೂ ಹೆಮ್ಮೆ ತರುವ ವಿಚಾರ. ಆದರೆ ಒಂದು ದೇಶದ ಆಂತರಿಕ ವಿಚಾರ ನಮಗೆ ಏನೂ ಅನ್ನಿಸಬಾರದು. ಟಾಗೋರ್ ನೊಬೆಲ್ ಪ್ರಶಸ್ತಿ ಪಡೆಯುವುದು ಬೇರೆ; ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾಗುವುದು ಬೇರೆ. ಬ್ರಿಟನ್ ಪ್ರಧಾನಿಯಾಗುವುದು ಬ್ರಿಟನ್‌ನ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ. ಭಾರತದ ಮಾನ ಅಥವಾ ಹಿತವನ್ನು ಕಾಪಾಡುವುದಕ್ಕಲ್ಲ.
ಬ್ರಿಟಿಷ್ ಪ್ರಧಾನಿಯಾಗಿ ಲಿಝ್‌ಟ್ರಸ್ ಆಯ್ಕೆಯಾಗಿದ್ದಾರೆ. ಈಕೆ ಬ್ರಿಟನ್ ಸಂಸತ್ತಿನ ಮತ್ತು ಕಾರ್ಯಾಂಗದ ಅಪಾರ ಅನುಭವವಿರುವ ರಾಜಕಾರಣಿ. ಬಲಪಂಥೀಯ ಒಲವಿನವಳೆಂದು ಆಕೆಯನ್ನು ಬಣ್ಣಿಸಲಾಗುತ್ತಿದೆ. ಆಕೆ ಸೋಲಿಸಿದ್ದು ಭಾರತೀಯ ಮೂಲದಿಂದ ಆಫ್ರಿಕಾಕ್ಕೆ ವಲಸೆಹೋಗಿ ಅಲ್ಲಿಂದ ಬ್ರಿಟನ್‌ಗೆ ಬಂದು ನೆಲೆಸಿದ ಕುಟುಂಬದ ರಿಷಿ ಸುನಕ್ ಎಂಬ ಇನ್ನೊಬ್ಬ ರಾಜಕಾರಣಿಯನ್ನು. ಚುನಾವಣೆ ಮುಗಿದ ಬಳಿಕ ಅಲ್ಲಿ ಎಲ್ಲರೂ ಒಂದಾಗುತ್ತಾರೆ. ಸ್ವತಃ ರಿಷಿ ಸುನಕ್ ತನ್ನ ಪಕ್ಷದ ಎಲ್ಲರಿಗೂ ಪ್ರಧಾನಿಯನ್ನು ಒಗ್ಗಟ್ಟಾಗಿ ಬೆಂಬಲಿಸಬೇಕೆಂದು ಕರೆ ನೀಡಿದ್ದಾರೆ. ಅಲಿಖಿತ ಸಂವಿಧಾನ ಬ್ರಿಟನ್‌ನಲ್ಲಿ ಯಶಸ್ವಿಯಾಗಿದ್ದರೆ ಅದಕ್ಕೆ ಅಲ್ಲಿನ ಹೊಣೆಯರಿತ ರಾಜಕಾರಣ ಮತ್ತು ಮುಕ್ತ ಸ್ವಾತಂತ್ರ್ಯವೇ ಕಾರಣವೆಂಬುದು ಅಲ್ಲಿನ ವಿದ್ಯಮಾನಗಳಿಂದ ಗೊತ್ತಾಗುತ್ತದೆ. ಭಾರತೀಯರು ಇತರ ರಾಷ್ಟ್ರಗಳು ಭಾರತದ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದನ್ನು ಕಟುವಾಗಿ ವಿರೋಧಿಸುತ್ತಾರೆ. ವಿದೇಶಗಳು ಮಾತ್ರವಲ್ಲ, ಕೆಲವೊಮ್ಮೆ ವಿಶ್ವಸಂಸ್ಥೆಯ ನಿರ್ಣಯವೂ ಭಾರತಕ್ಕೆ ವಿರುದ್ಧವಾಗಿದ್ದರೆ ಅದನ್ನೂ ನಾವು ಖಂಡಿಸುತ್ತೇವೆ. ನಮ್ಮ ಪರವಾಗಿದ್ದಾಗ ಸ್ವಾಗತಿಸುತ್ತೇವೆ. ನಮ್ಮ ನಡೆಗಳೇ ನಮಗೆ ಸರಿಯೆಂಬ ನಮ್ಮ ಈ ವಿದೇಶಾಂಗ ಧೋರಣೆಯಿಂದಾಗಿ ಭಾರತದ ಸ್ಥಿರವಾದ ವಿದೇಶಾಂಗ ನಿಲುವಿನ ಬಗ್ಗೆ ನಂಬಿಕೆಯಿಲ್ಲದಂತಾಗಿದೆ. ವಿದೇಶಗಳು ಈ ವಿಚಾರದಲ್ಲಿ ಭಾರತದಷ್ಟೇ ಸಡಿಲ ನೀತಿಯವು ಅಥವಾ ಮುಕ್ತ ನೀತಿಯವು. ವ್ಯಾಪಾರಸ್ಥರಂತೆ ಯಾರೊಂದಿಗೂ ನಿಷ್ಠುರವಿಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆಯೂ ಸೇರಿದಂತೆ ಎಲ್ಲವೂ ಸರಿ ಎಂದು ಅಭಿನಂದನಾ ಭಾಷಣಗಳನ್ನು ಮಾಡುವವರೇ ಈಗ ಜನನಾಯಕರು. ಹಾಗೆಂದು ಇತರರ ವ್ಯವಹಾರದಲ್ಲಿ ಮೂಗು ತೂರಿಸುವುದನ್ನು ಎಲ್ಲ ದೇಶಗಳೂ ಪರೋಕ್ಷವಾಗಿ, ಕೆಲವೊಮ್ಮೆ ಪ್ರತ್ಯಕ್ಷವಾಗಿ, ಮಾಡುತ್ತಿವೆ. ಇದು ವಿಶ್ವಾತ್ಮಕವಾದ್ದರಿಂದ ಇಲ್ಲಿ ವಿವೇಕದ ವಿವೇಚನೆ ಅಸಾಧ್ಯ. ಒಂದಿಷ್ಟು ಪ್ರಜ್ಞಾವಂತರಷ್ಟೇ ಇದನ್ನು ವಿರೋಧಿಸಲು, ಪ್ರತಿಭಟಿಸಲು, ಖಂಡಿಸಲು ಸದ್ಯ ಸಾಧ್ಯ. ಈಗ ವಿಶ್ವಕ್ಕೊಬ್ಬನೇ ದೇವರೆಂಬವನಿದ್ದರೆ ಆತ ನಮ್ಮ ನಾರದ ಮಹರ್ಷಿ!
ಇವೆಲ್ಲದರ ನಡುವೆ ದೇಶದ ಪ್ರತಿನಿಧಿಯಾಗಿರುವವರು ಸಾಮಾನ್ಯವಾಗಿ ಇನ್ನೊಂದು ದೇಶದ ಚುನಾವಣೆಯಲ್ಲಿ ಪಕ್ಷವಹಿಸುವುದಿಲ್ಲ. ಇದಕ್ಕೆ ಅಪವಾದವಾಗಿ ಕೆಲವು ನಿರ್ಣಯಗಳು ಸಂಭವಿಸುವುದಿದೆ. ಗುಜರಾತಿಗೆ ಆಗಿನ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಬಂದಾಗಿನ ನಮ್ಮ ರಾಜನೀತಿ ಮತ್ತು ನಮ್ಮ ಪ್ರಧಾನಿ ಅಮೆರಿಕದ ಟೆಕ್ಸಾಸಿಗೆ ಹೋಗಿದ್ದಾಗ ಮಾಡಿದ ‘‘ಅಬ್ ಕೀ ಬಾರ್, ಟ್ರಂಪ್ ಸರ್ಕಾರ್’’ ಘೋಷಣೆ ಇವೆಲ್ಲ ಘನಸ್ತಿಕೆಯನ್ನು ಒಲ್ಲದ ರಾಜಕಾರಣ. ಆನಂತರ ಏನಾಯಿತು ಮತ್ತು ಅಂತಹ ಸ್ಥಿತಿಯಲ್ಲಿ ಭಾರತ ಎಂತಹ ಮುಖಭಂಗವನ್ನು ವಹಿಸಬೇಕಾಗುತ್ತದೆ ಎಂಬುದನ್ನು ರಾಜಕಾರಣ ಮರೆಸುತ್ತದೆ. ಅಮೆರಿಕದ ಹೊಸ ಅಧ್ಯಕ್ಷರು ಭಾರತವನ್ನು ಅಪ್ಪಿಕೊಂಡರು; ಒಪ್ಪಿಕೊಂಡರು. ನಾವು ಜಾಣತನದಿಂದ ಹಳೆಯದೆಲ್ಲವ ಮರೆತು ಹೊಸ ಸಂಸಾರ ಹೂಡಿದೆವು.
ಬ್ರಿಟನ್ ಪ್ರಧಾನಿಯ ಚುನಾವಣೆಯಲ್ಲಿ ಭಾರತವು ಒಕ್ಕೊರಲಿನಿಂದೆಂಬಂತೆ ರಿಷಿ ಸುನಕ್‌ರನ್ನು ಬೆಂಬಲಿಸಿತು. ಇದಕ್ಕಿದ್ದ ನೈತಿಕ ಸಮರ್ಥನೆಯೆಂದರೆ ಆತ ಭಾರತೀಯ ಸಂಜಾತನೆಂದಲ್ಲ. ಅದು ದೂರದ ಸಂಬಂಧ. ಆದರೆ ನಮ್ಮ ಬೆಂಬಲಕ್ಕೆ ಕಾರಣ ಆತ ನಮ್ಮ ಇನ್ಫೋಸಿಸ್ ದೈತ್ಯ ಎನ್.ಆರ್. ನಾರಾಯಣ ಮೂರ್ತಿಯವರ ಮಗಳ ಗಂಡ ಎಂಬುದೇ ಆಗಿತ್ತು. ಆತನೂ ಭಾರತಭೂಮಿಯ ಮಣ್ಣಿನ ಗುಣವೆಂಬಂತೆ ಮತದಾರರ ಮುಗ್ಧತೆಯನ್ನು ಬಳಸಿಕೊಂಡು ಗೋಪೂಜೆಯಂತಹ ಮೌಢ್ಯಪರಂಪರೆಯ ಚುನಾವಣಾ ಪ್ರಚಾರ ಮಾಡಿದ್ದೂ ವರದಿಯಾಗಿ ಭಾರತೀಯರು ರೋಮಾಂಚನದ ಪುಳಕವನ್ನನುಭವಿಸಿದರು. ಇನ್ನೇನು ಆತ ಪ್ರಧಾನಿಯಾಗಿಯೇಬಿಟ್ಟರು ಎಂಬ ವರದಿಗಳು ನಮ್ಮ ಗೋದಿ ಮಾಧ್ಯಮಗಳು ಬಿತ್ತರಿಸಿದ್ದೂ ಇತ್ತು. ಅವರ ಪರವಾಗಿ ಹೋಮ, ಹವನವನ್ನೂ ನಮ್ಮ ದೇಶದಲ್ಲಿ ನಡೆಸಿದರು. ‘ಡಾಲರ್ ಸೊಸೆ’ ಕೃತಿ ಬರೆದ ಸುಧಾಮೂರ್ತಿಯವರ ಕನಸು ಪೌಂಡ್‌ಅಳಿಯನನ್ನು ಪಡೆದು ಸಾರ್ಥಕವಾಯಿತು ಎಂದವರೂ ಇದ್ದರು. ಒಟ್ಟಿನಲ್ಲಿ ‘ನಮ್ಮವರು’ ಬ್ರಿಟನ್‌ನ ಪ್ರಧಾನಿಯಾದರೆ ಸುಮಾರು ಮೂರು ಶತಮಾನಗಳ ವಸಾಹತುಶಾಹಿ ದಾಸ್ಯದ ಕೊನೆಯ ಬೆಳಕಾದ ಸ್ವಾತಂತ್ರ್ಯೋತ್ಸವದ ಮುಕುಟಮಣಿ ಒಬ್ಬ ಭಾರತೀಯ ಮೂಲದ ವ್ಯಕ್ತಿಯೆಂಬ ಸಂತಸವನ್ನು ಪಟ್ಟದ್ದೂ ಆಯಿತು. ಬ್ರಿಟನ್‌ನ ಚುನಾವಣೆಯನ್ನು ಮೊದಲಬಾರಿಗೆ ಉತ್ತರಪ್ರದೇಶ ಅಥವಾ ಇನ್ಯಾವುದೋ ಭಾರತೀಯ ರಾಜ್ಯವೊಂದರ ಚುನಾವಣೆಯಂತೆ ಚಿತ್ರಿಸಿದೆವು; ಬಿತ್ತರಿಸಿದೆವು. ಭಾರತೀಯನೊಬ್ಬ ಸಾಂಸ್ಕೃತಿಕ ಜಗತ್ತಿನ ವಿಶ್ವಮಾನ್ಯತೆಯನ್ನು ಪಡೆಯುವುದು ಎಲ್ಲರಿಗೂ ಹೆಮ್ಮೆ ತರುವ ವಿಚಾರ. ಆದರೆ ಒಂದು ದೇಶದ ಆಂತರಿಕ ವಿಚಾರ ನಮಗೆ ಏನೂ ಅನ್ನಿಸಬಾರದು. ಟಾಗೋರ್ ನೊಬೆಲ್ ಪ್ರಶಸ್ತಿ ಪಡೆಯುವುದು ಬೇರೆ; ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾಗುವುದು ಬೇರೆ. ಬ್ರಿಟನ್ ಪ್ರಧಾನಿಯಾಗುವುದು ಬ್ರಿಟನ್‌ನ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ. ಭಾರತದ ಮಾನ ಅಥವಾ ಹಿತವನ್ನು ಕಾಪಾಡುವುದಕ್ಕಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಭಾರತದ ಮೇಲೇನೂ ಹೂಮಳೆಗರೆಯುವುದಿಲ್ಲ. ಪಾಕಿಸ್ತಾನದ ಯಾವೊಬ್ಬ ಅಧಿಕಾರಿಯಾಗಲೀ ರಾಜಕಾರಣಿಯಾಗಲೀ ಭಾರತ-ಪಾಕಿಸ್ತಾನದ ಯಾವುದೇ ವಿವಾದದಲ್ಲಿ ಭಾರತವನ್ನು ಬೆಂಬಲಿಸುತ್ತಾರೆಂದು ನಿರೀಕ್ಷಿಸುವುದು, ಅಪೇಕ್ಷಿಸುವುದು ಹುಂಬತನ. ರಾಜಕಾರಣದಲ್ಲಿ ಇದೊಂದು ತರ್ಕದ ಮಜಲಾದರೆ ಇದನ್ನು ಸ್ವಾಗತಿಸುವ ನಾವು ನಮ್ಮಲ್ಲಿ ವಿದೇಶೀಯರೊಬ್ಬರು ಮುಖ್ಯ ರಂಗಕ್ಕೆ ಅಥವಾ ಅಧಿಕಾರದ ಕೇಂದ್ರಕ್ಕೆ ಬರುವುದನ್ನು ತಾಳಿಕೊಳ್ಳುತ್ತೇವೆಯೇ? ಇದಕ್ಕೆ 2004ರ ಭಾರತೀಯ ರಾಜಕಾರಣವೇ ಸಾಕ್ಷಿ. ‘ಭಾರತ ಪ್ರಕಾಶಿಸುತ್ತಿದೆ’ (India shining) ಎಂಬ ಘೋಷಣೆಯೊಂದಿಗೆ ಚುನಾವಣೆಗಿಳಿದ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವನ್ನು ಆಮ್‌ಆದ್ಮಿ (ಜನಸಾಮಾನ್ಯ) ಘೋಷಣೆಯ ಕಾಂಗ್ರೆಸ್ ನೇತೃತ್ವದ ಯುಪಿಎ ರಂಗವು ಸೋಲಿಸಿ ಅಧಿಕಾರಕ್ಕೆ ಬಂದಿತು.
ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಯುಪಿಎ ರಂಗದ ನಾಯಕಿಯಾದರು. ಅವರು ಮುಂದಿನ ಪ್ರಧಾನಿಯೆಂದು ಎಲ್ಲೆಡೆ ಸದ್ದಾಯಿತು. ಅವರು ಪ್ರಧಾನಿಯಾಗುವ ಅರ್ಹತೆಯಿರುವವರೇ, ಅವರ ವಿದೇಶೀ ಮೂಲವು ಅವರು ಪ್ರಧಾನಿಯಾಗುವುದನ್ನು ನಮ್ಮ ಸಂವಿಧಾನ ಒಪ್ಪುತ್ತದೆಯೇ ಎಂಬ ವಿಚಾರ ಚರ್ಚೆಯಾಗಲೇ ಇಲ್ಲ. ಬದಲಾಗಿ ಗ್ಯಾಲರಿಗೆ ಮಾಡುವ ವಾದದಂತೆ ಸಾರ್ವಜನಿಕವಾಗಿ ಬೆಂಬಲ-ವಿರೋಧಗಳು ಪ್ರಕಟವಾದವು. ಈಗ ಕಾಂಗ್ರೆಸಿನೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಾಧ್ಯವಾಗಿರುವ ಶರದ್ ಪವಾರ್ ಸೇರಿದಂತೆ ಅನೇಕರು ಇದೇ ಕಾರಣ/ನೆಪವೆಂಬಂತೆ ಯುಪಿಎಯನ್ನು ತೊರೆದರು. ಆದರೆ ಇವೆಲ್ಲಕ್ಕಿಂತ ಹೆಚ್ಚು ಹೊಣೆರಹಿತ ಪ್ರತಿಕ್ರಿಯೆ, ಪ್ರತಿಭಟನೆಯನ್ನು ತೋರಿದವರು ಈಗ ದಿವಂಗತರಾಗಿರುವ ಬಿಜೆಪಿ ನಾಯಕಿ ಶ್ರೀಮತಿ ಸುಷ್ಮಾ ಸ್ವರಾಜ್. ಆಕೆ ಸ್ವತಃ ಸೋನಿಯಾ ವಿರುದ್ಧ ಚುನಾವಣೆಯನ್ನು ಸೋತವರು. ಸೋನಿಯಾ ಗಾಂಧಿ ಪ್ರಧಾನಿಯಾಗುವ ಸಾಧ್ಯತೆಯನ್ನು ಮನಗಂಡ ಅವರು ತಕ್ಷಣ ಇದು ಸಂಭವಿಸಿದಲ್ಲಿ ತಾನು ತನ್ನ ತಲೆಯನ್ನು ಬೋಳಿಸುವುದಾಗಿ ಮತ್ತು ಉರುಳು ಸೇವೆ (ಅಥವಾ ಇಂತಹ ಅದೇನೋ ಪ್ರತಿಭಟನೆ!) ಮಾಡುವುದಾಗಿ ಘೋಷಿಸಿದರು.
ಭಾರತದ ಮಹಿಳೆಯರ ಪುಣ್ಯ; ಇದು ಸಂಭವಿಸಲಿಲ್ಲ. ಸೋನಿಯಾ ಗಾಂಧಿ ತಾನು ಪ್ರಧಾನಿ ಪಟ್ಟದ ಅಪೇಕ್ಷೆಯನ್ನು ಹೊಂದಿಲ್ಲವೆಂದು ಘೋಷಿಸಿದರು. ಈ ಘೋಷಣೆ ನಿಜಕ್ಕೂ ಪ್ರಾಮಾಣಿಕವಾಗಿತ್ತೇ ಅಥವಾ ಸಾರ್ವಜನಿಕ ಮತ್ತು ರಾಜಕೀಯ (ತನ್ನದೇ ರಂಗದ ಸದಸ್ಯರನ್ನೂ ಸೇರಿ) ಪ್ರತಿರೋಧವನ್ನು ಶಮನಗೊಳಿಸಿ ತನ್ನ ರಂಗದ ಅಧಿಕಾರವನ್ನು ಸ್ಥಾಪಿಸುವುದಕ್ಕೆ ಎದುರಾಗಬಹುದಾದ ಎಡರುತೊಡರುಗಳನ್ನು ನಿವಾರಿಸುವ ತಂತ್ರವಾಗಿತ್ತೇ ಎಂಬುದು ಊಹೆಗೆ ಬಿಟ್ಟ ವಿಚಾರ. ಕೊನೆಗೆ ಅವರು ತಮ್ಮ ಪಕ್ಷದ ಕಟ್ಟಪ್ಪರಂತಿದ್ದ ಮನಮೋಹನಸಿಂಗ್ ಎಂಬ ಅರಾಜಕೀಯ ಆರ್ಥಿಕತಜ್ಞರನ್ನು ಪ್ರಧಾನಿಯಾಗಿ ಆಯ್ಕೆ ಮಾಡುವ ಮೂಲಕ ಪ್ರತಿಪಕ್ಷದವರನ್ನು ಮಾತ್ರವಲ್ಲ, ತಮ್ಮ ಬೆಂಬಲದ ಅಪಾರ ಸಂಖ್ಯೆಯ ಮತದಾರರನ್ನೂ ಮತ್ತು ಅಧಿಕಾರ ಲಾಲಸೆಯ ಅನೇಕ ಬೆಂಬಲಿಗ ನಾಯಕರನ್ನೂ ನಿರಾಶೆಗೊಳಿಸಿದರು. ಸೋನಿಯಾ ಗಾಂಧಿ ಪ್ರಧಾನಿಯಾಗುವುದು ಸಂವಿಧಾನ ವಿರೋಧಿಯೇ ಎಂಬ ಪ್ರಶ್ನೆಯು ಇತ್ಯರ್ಥಕ್ಕೆ ಬರಲಿಲ್ಲ. ಭಾರತದ ಸಂವಿಧಾನದಲ್ಲಿ ಪ್ರಧಾನ ಮಂತ್ರಿಯ ಉಲ್ಲೇಖ ಬರುವುದು 75ನೇ ವಿಧಿಯಲ್ಲಿ. ‘ಪ್ರಧಾನ ಮಂತ್ರಿಯ ನೇಮಕಾತಿಯನ್ನು ರಾಷ್ಟ್ರಪತಿಯು ಮಾಡತಕ್ಕದ್ದು ಮತ್ತು ಇತರ ಮಂತ್ರಿಗಳ ನೇಮಕಾತಿಯನ್ನು ಪ್ರಧಾನಮಂತ್ರಿಯ ಸಲಹೆಯ ಮೇರೆಗೆ ರಾಷ್ಟ್ರಪತಿಯು ಮಾಡತಕ್ಕುದು’ ಎಂದಿದೆ. ರಾಷ್ಟ್ರಪತಿಯ ಸ್ವಯಮಾಧಿಕಾರವು ಆಲಂಕಾರಿಕವಾಗಿರುವುದರಿಂದ ಅವರಿಗೆ ಸ್ವಯಂನಿರ್ಣಯವೆಂದಿರುವುದಿಲ್ಲ.
ಯಾವ ಪಕ್ಷವು (ಅಥವಾ ಸಾಂದರ್ಭಿಕವಾಗಿ ಅದನ್ನು ಬೆಂಬಲಿಸುವ ಇತರ ಪಕ್ಷಗಳನ್ನು ಸೇರಿಸಿ ರಚಿಸಲಾದ ರಂಗ) ಬಹುಮತವನ್ನು ಪಡೆಯುತ್ತದೆಯೋ ಅದರ ನಾಯಕರನ್ನು ಈ ಪದವಿಗೆ ಆಹ್ವಾನಿಸುವುದು ರಾಷ್ಟ್ರಪತಿಯ ಕರ್ತವ್ಯವಾಗಿರುತ್ತದೆ. ಸಂಸತ್ತಿನ ಎರಡು ಮನೆಗಳಲ್ಲಿ ಯಾವುದಾದರೊಂದು ಮನೆಯ ಸದಸ್ಯನಲ್ಲದವನು ಪ್ರಧಾನಿಯಾಗಿಯಾಗಲೀ ಇತರ ಮಂತ್ರಿಯಾಗಿಯಾಗಲೀ ಅಧಿಕಾರ ಹೊಂದುವಂತಿಲ್ಲ. ಒಂದು ವೇಳೆ ನೇಮಕವಾದರೂ ಅದಾದ ಆರು ತಿಂಗಳೊಳಗೆ ಆತ/ಆಕೆ ಸಂಸತ್ತಿಗೆ ಆಯ್ಕೆಯಾಗಬೇಕಾಗುತ್ತದೆ. ಆದ್ದರಿಂದ ಸಂಸತ್ತಿನ ಸದಸ್ಯನಾಗಲು ಅರ್ಹತೆಯಿಲ್ಲದವರು ಮಂತ್ರಿಯಾಗುವಂತಿಲ್ಲ; ಮತ್ತು ಇದನ್ನೇ ಅರ್ಥವಿಸಿದರೆ ಪ್ರಧಾನಮಂತ್ರಿಯಾಗುವಂತಿಲ್ಲ. ಸಂಸತ್ತಿನ ಸದಸ್ಯನಾಗುವುದಕ್ಕೆ ಸಂವಿಧಾನದ 102ನೆ ವಿಧಿಯು ಮತ್ತು ಅರ್ಹತೆಯ ನಿಯಮಗಳನ್ನು ರೂಪಿಸಿದೆ. ಇವುಗಳಲ್ಲಿ ವಿಶೇಷವೇನಿಲ್ಲ: ಯಾವುದೇ ಕಾನೂನಿನಡಿ ಅನರ್ಹನಾಗಿದ್ದರೆ, ಲಾಭದಾಯಕ ಪದವನ್ನು ಹೊಂದಿದ್ದರೆ, ಅಸ್ವಸ್ಥಚಿತ್ತನಾಗಿದ್ದರೆ, ಅವಿಮುಕ್ತ ದಿವಾಳಿಯಾಗಿದ್ದರೆ, ಭಾರತದ ನಾಗರಿಕನಾಗಿಲ್ಲದಿದ್ದರೆ ಅಥವಾ ವಿದೇಶೀ ನಾಗರಿಕತ್ವವನ್ನು ಸ್ವಇಚ್ಛೆಯಿಂದ ಪಡೆದಿದ್ದರೆ ಅಥವಾ ವಿದೇಶೀಯ ನಿಷ್ಠೆಯನ್ನು ಅಥವಾ ಹಿತಾಸಕ್ತಿಯನ್ನು ಹೊಂದಿರುವುದನ್ನು ಒಪ್ಪಿಕೊಂಡಿದ್ದರೆ, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಮೇರೆಗೆ ಅನರ್ಹಗೊಳಿಸಿದ್ದರೆ, ಸಂಸತ್ತಿನ ಸದಸ್ಯನಾಗುವಂತಿಲ್ಲ.
ಈ ಪ್ರಶ್ನೆಯ ಇತ್ಯರ್ಥದ ಅಧಿಕಾರವನ್ನು ರಾಷ್ಟ್ರಪತಿಗೆ ನೀಡಲಾಗಿದೆ; ಅಂದರೆ ಗೃಹ ಅಥವಾ ಸಂಸದೀಯ ಸಚಿವಾಲಯವು ಇದನ್ನು ಪರಿಶೀಲಿಸಿ ತನ್ನ ಶಿಫಾರಸನ್ನು ರಾಷ್ಟ್ರಪತಿಗೆ ರವಾನಿಸುತ್ತದೆ ಮತ್ತು ಅದರಂತೆ ರಾಷ್ಟ್ರಪತಿಯು ಆದೇಶಿಸಬೇಕಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಮ್ಮೆ ಒಬ್ಬ ವ್ಯಕ್ತಿ ಸಂಸತ್ತಿನ ಸದಸ್ಯನಾಗುವ ಅರ್ಹತೆಯನ್ನು ಪಡೆದಿದ್ದರೆ ಆತ/ಆಕೆ ಪ್ರಧಾನಮಂತ್ರಿ ಯಾಗುವುದನ್ನು ತಡೆಯುವ ಕಾನೂನು ಭಾರತದಲ್ಲಿಲ್ಲ. ಇದ್ದರೂ ಅದು ಸಂವಿಧಾನವಿರೋಧಿಯಾಗುತ್ತದೆ. ಭಾರತದ ಚರಿತ್ರೆ ಮತ್ತು ರಾಜಕೀಯದ ಈ ಭಾಗವನ್ನು ಸಾಂವಿಧಾನಿಕವಾಗಿ ಪರಿಶೀಲಿಸಿದರೆ, ಸೋನಿಯಾ ಗಾಂಧಿ ಸಂಸತ್ತಿನ ಸದಸ್ಯರಾಗುವ ಅರ್ಹತೆಯನ್ನು ಹೊಂದಿದ್ದರು ಮತ್ತು ಆ ಮೂಲಕ ಮಂತ್ರಿ/ಪ್ರಧಾನ ಮಂತ್ರಿಯಾಗುವ ಅರ್ಹತೆಯನ್ನು ಹೊಂದಿದ್ದರು. ಈ ಹಂತದಲ್ಲೇ ಯಾರನ್ನೂ ಉದ್ದೇಶಿಸದೆಯೂ ಒಂದು ವಿಚಾರವನ್ನು ಮನದಟ್ಟುಮಾಡಿಕೊಳ್ಳಬೇಕು. ‘ಅರ್ಹತೆ’ ಬೇರೆ; ‘ಯೋಗ್ಯತೆ’ ಬೇರೆ. ಯೋಗ್ಯರೆಲ್ಲರೂ ಅರ್ಹರಲ್ಲ; ಅರ್ಹರೆಲ್ಲರೂ ಯೋಗ್ಯರಲ್ಲ. ನಮ್ಮ ಮತದಾನದ ವಿಪರ್ಯಾಸವೆಂದರೆ ಯಾವುದೇ ಪಕ್ಷವೂ ಆಯ್ಕೆ ಮಾಡುವ ವ್ಯಕ್ತಿಗೆ ಸಾಮಾನ್ಯ ಕಾರಕೂನನಿಗೂ ವಿಧಿಸಬಹುದಾದಂತಹ ಯೋಗ್ಯತೆಯ ಪರೀಕ್ಷೆಯೂ ಇರುವುದಿಲ್ಲ.
ಪ್ರಾಯಃ ದೇಶದ ಇಂದಿನ ಸ್ಥಿತಿಗೆ ಇದೇ ಕಾರಣವೂ ಇರಬಹುದು! ಇದನ್ನು ಕೆಲವರು ಸುಸ್ಥಿತಿಯೆಂದರೆ ಇನ್ನು ಕೆಲವರು ದುಸ್ಥಿತಿಯೆನ್ನಬಹುದು. ಕೊಳಚೆಯನ್ನು ವಿಮರ್ಶಿಸಲು ಹಂದಿಯನ್ನು ಕೇಳಿದರೆ ಅದು ಏನನ್ನಬೇಕು! ಯಾವ ದೇಶವೂ ನಮ್ಮಲ್ಲಿ ನಡೆಯುವ ಈ ವಿದ್ಯಮಾನದ ಕುರಿತು ಹಸ್ತಕ್ಷೇಪ ಮಾಡಿರಲಿಲ್ಲ; ಮಾಡುತ್ತಿಲ್ಲ. ಯಾರೇ ನಾಯಕರಾಗಲಿ ಅವರೊಂದಿಗೆ ಹಾರ್ದಿಕ ಸಂಬಂಧವನ್ನು ಸ್ಥಾಪಿಸಲು ಹವಣಿಸುವುದು ಅಂತರ್‌ರಾಷ್ಟ್ರೀಯ ರಾಜಕಾರಣದ ಸಾಧುತ್ವ. ನಮ್ಮ ಮುಂದಿರುವ ಪ್ರತ್ಯಕ್ಷದರ್ಶನವೆಂದರೆ- ಮೋದಿ ಪ್ರಧಾನಿಯಾಗುವ ವರೆಗೂ ಅವರಿಗೆ ಅಮೆರಿಕ ಸರಕಾರವು ವೀಸಾವನ್ನು ನೀಡಿರಲಿಲ್ಲ; ನಿರಾಕರಿಸಿತ್ತು. ಗುಜರಾತಿನ ನರಮೇಧದ ಆರೋಪ ಸಿದ್ಧವಾಗಿರಲಿ, ಇಲ್ಲದಿರಲಿ, ಅವರೊಬ್ಬ ಅಪವಾದದ ವ್ಯಕ್ತಿ ಎಂಬ ಕಾರಣಕ್ಕೆ ಅಮೆರಿಕ ಸರಕಾರ ಅವರನ್ನು ತನ್ನೊಳಗೆ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಆದರೆ ಒಮ್ಮೆ ಅವರು ಪ್ರಧಾನಿಯಾದ ಮೇಲೆ ಸಾಂವಿಧಾನಿಕವಾಗಿ ಅವರು ದೇಶದ ನಾಯಕರೆಂಬ ನೆಲೆಯಲ್ಲಿ ಅವರಿಗೆ ವೀಸಾವನ್ನು ನೀಡಿತ್ತು. ಇದು ಹೊಣೆಯರಿತ ಅಂತರ್‌ರಾಷ್ಟ್ರೀಯ ರಾಜಕಾರಣ. ಇದನ್ನು ನಮ್ಮಲ್ಲೀಗ ದೇಶದೊಳಗಾದರೂ ಪಾಲಿಸುತ್ತಿದ್ದೇವೆಯೇ? ಪ್ರತಿಪಕ್ಷಗಳ ಯಾವನಾದರೂ ನಾಯಕರಿಗೆ ಅಥವಾ ತನಗೊಗ್ಗದ ಯಾವುದೇ ಪ್ರಜೆಗೆ ಯಾವುದೇ ವಿದೇಶವು ಆಮಂತ್ರಣ ನೀಡಿದರೆ ಅದನ್ನು ಕೇಂದ್ರ ಸರಕಾರವು ತನ್ನ ಅಧಿಕಾರವನ್ನು ಬಳಸಿ ತಡೆಯುತ್ತದೆ. ಈಚೆಗೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಿಂಗಾಪುರಕ್ಕೆ ಹೋಗುವುದನ್ನು ಕೇಂದ್ರ ಸರಕಾರವು ಸೇಡಿನ ಕ್ರಮವೆಂಬಂತೆ ತಡೆಯಿತು. ಇದು ಸಾಂವಿಧಾನಿಕವಲ್ಲವೆಂಬುದು ಸರಕಾರಕ್ಕೂ ಗೊತ್ತಿದೆಯಾದರೂ ನ್ಯಾಯಾಲಯದ ಮೂಲಕ ಪರಿಹಾರವನ್ನು ಪಡೆಯುವ ಹೊತ್ತಿಗೆ ಸಮಯ ಕಳೆದುಹೋಗಿರುತ್ತದೆ.
ಇದೊಂದು ನಿದರ್ಶನ ಮಾತ್ರ. ಇಂತಹ ಅನೇಕ ಪ್ರಸಂಗಗಳಿವೆ. ಮುಖ್ಯ ಬೇಕಾದದ್ದು ಪ್ರತಿಷ್ಠೆಯನ್ನು ಮರೆತು ವಿಚಾರವನ್ನು ಪ್ರಚೋದಿಸುವುದು. ಭಾವನಾತ್ಮಕವಾಗಿ ಏನನ್ನೇ ಮಾಡಿದರೂ ಅದು ಕಾಲಾತೀತವಾದ ನಡೆಯಾಗಿರುವುದಿಲ್ಲ. ಚರಿತ್ರೆ ಮೌನಿ. ಅದರ ಬಹುಭಾಗ ರಾಜರ ಕಥೆಯೇ ಆಗಿ ಜನಸಾಮಾನ್ಯರ ಜೀವನ ನಡೆ ಮತ್ತು ವಿವೇಕವು ಅಲಕ್ಷಿತವಾಗಿದೆ. ಪ್ರತಿಯೊಂದು ಸಾಧನೆಗೂ ಆಯಾಯ ಕಾಲದ ಅರಸರ ಹೆಸರನ್ನು ಉಲ್ಲೇಖಿಸಲಾಗುತ್ತಿದೆ; ಪ್ರಾಜ್ಞರನ್ನಲ್ಲ. ಶಿವಾಜಿಯ ಕಾಲದಲ್ಲಿ ರಾಮತೀರ್ಥರಿದ್ದರು ಎನ್ನುತ್ತಾರೆಯೇ ವಿನಾ ರಾಮತೀರ್ಥರ ಕಾಲದಲ್ಲಿ ಶಿವಾಜಿ ಇದ್ದನೆಂದು ರಾಜಕಾರಣಿಗಳು ಹೇಳುವುದಿಲ್ಲ. ಸಿಂಹ ಬರೆಯಲು ಶಕ್ತವಾಗುವವರೆಗೂ ಬೇಟೆಗಾರನೇ ನಾಯಕನಾಗಿರುತ್ತಾನೆ ಎಂಬ ಒಂದು ಹೇಳಿಕೆಯಿದೆ. ಚರಿತ್ರೆಯು ಕಾಲದ ಸುಪ್ತ ಘಟನಾವಳಿಗಳನ್ನು ಗಮನಿಸುತ್ತಲೇ ಹೋಗುತ್ತದೆ. ಸೂಕ್ತ ಕ್ಷಣ ಬಂದಾಗ ತನ್ನ ಸಂದೇಶವನ್ನು ರವಾನಿಸುತ್ತದೆ. ಇದರ ಅರಿವಿದ್ದವರನ್ನು ಪ್ರಜ್ಞಾವಂತರೆನ್ನಬಹುದು. ಉಳಿದವರು-ಯಥಾಪ್ರಕಾರ ಪ್ರಜ್ಞಾಹೀನರು, ಅಷ್ಟೇ. ಯಾರು ಬಹುಮತದಲ್ಲಿರುತ್ತಾರೆ ಎಂಬುದನ್ನು ಅನುಸರಿಸಿ ಒಂದು ದೇಶದ, ಅದರ ಸಂಸ್ಕೃತಿಯ, ನಾಗರಿಕತೆಯ, ವೈಚಾರಿಕ ಶಕ್ತಿಯನ್ನು ಅಳೆಯಬಹುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ