ಬೆಳಗಾವಿಯ ಬ್ರಾಂಡ್ ರಾಜಕಾರಣಿ ಉಮೇಶ್ ಕತ್ತಿ
ತಂದೆಯಿಂದ ತೆರವಾದ ಸ್ಥಾನಕ್ಕೆ, 25ರ ಹರೆಯದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿ ವಿಧಾನಸೌಧದ ಮೆಟ್ಟಿಲು ಹತ್ತಿದ ಉಮೇಶ್ ಕತ್ತಿ, ಸತತವಾಗಿ 9 ಚುನಾವಣೆಗಳನ್ನು ಎದುರಿಸಿ, 8 ಸಲ ಗೆದ್ದು ಶಾಸಕರಾಗಿ, 4 ಸಲ ಸಚಿವರಾಗಿ, 37 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಹಾಗೂ ಬೆಳಗಾವಿ ಬ್ರಾಂಡ್ ರಾಜಕಾರಣವನ್ನು ಉಳಿಸಿಹೋಗಿದ್ದಾರೆ.
‘‘ಉಮೇಶ್ ಕತ್ತಿ ಅವರ ತಂದೆ ವಿಶ್ವನಾಥ ಕತ್ತಿಯವರಿಗೆ ನಮ್ಮ ತಂದೆಯವರೊಂದಿಗೆ ಆತ್ಮೀಯತೆ ಇತ್ತು. ನಮ್ಮ-ಅವರ ಕುಟುಂಬದೊಂದಿಗೆ 4 ದಶಕಗಳಿಗೂ ಹೆಚ್ಚು ಕಾಲದ ಒಡನಾಟವಿತ್ತು. ನನ್ನೊಂದಿಗೆ ಸಹೋದರ ಸಂಬಂಧವಿತ್ತು..’’ ಎನ್ನುತ್ತ ಕತ್ತಿಯವರ ಮೃತದೇಹ ನೋಡಿ ಕಣ್ಣೀರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 4 ದಶಕಗಳ ಹಿಂದಕ್ಕೆ ಹೋಗಿ ಎಲ್ಲವನ್ನು ನೆನಪು ಮಾಡಿಕೊಂಡರು, ಭಾವುಕರಾದರು. ತಂದೆ ವಿಶ್ವನಾಥ್ ಕತ್ತಿಯವರ ಅಕಾಲಿಕ ನಿಧನದಿಂದ ರಾಜಕಾರಣಕ್ಕೆ ಅಡಿ ಇಟ್ಟ ಉಮೇಶ್ ಕತ್ತಿಯವರು, 1985ರಲ್ಲಿಯೇ, 25ರ ಹರೆಯದಲ್ಲಿಯೇ ಜನತಾ ಪಕ್ಷದಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಮುಂದೆ 1989 ಮತ್ತು 1994ರಲ್ಲಿ, ಜನತಾ ದಳದಿಂದ ಶಾಸಕರಾಗಿ ಆಯ್ಕೆಯಾದಾಗ, 1996ರಲ್ಲಿ ಮೊದಲ ಬಾರಿಗೆ ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಸಕ್ಕರೆ ಖಾತೆ ಸಚಿವರಾದರು. ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಮೊದಲಿಗೆ ಜನತಾ ಪರಿವಾರ, ನಂತರ ಎರಡು ಕುಟುಂಬಗಳ ಒಡನಾಟ, ಮುಂದುವರಿದು ಬಸವರಾಜ ಬೊಮ್ಮಾಯಿ ಮತ್ತು ಉಮೇಶ್ ಕತ್ತಿಯವರ ರಾಜಕಾರಣ, ಸ್ನೇಹ ಮತ್ತು ಒಡನಾಟವೆಲ್ಲ ನೆನಪಾಗಿ ಭಾವುಕರಾದ ಬೊಮ್ಮಾಯಿ ಕಣ್ಣೀರಾದರು. ಬೊಮ್ಮಾಯಿಯವರದು ಹಾವೇರಿ, ಕತ್ತಿಯವರದು ಹುಕ್ಕೇರಿ. ಎರಡೂ ಉತ್ತರ ಕರ್ನಾಟಕಕ್ಕೆ ಸೇರಿದ ಕ್ಷೇತ್ರಗಳು. ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅಪ್ಪಂದಿರ ನೆರಳಿನಲ್ಲಿಯೇ ಬೆಳೆದು ಪರಂಪರಾಗತ ರಾಜಕಾರಣದಲ್ಲಿ ಬೇರೂರಿದವರು. ಆದರೆ ಗುಣಸ್ವಭಾವ ಭಿನ್ನ. ಬೊಮ್ಮಾಯಿಯವರದು ಸ್ವಲ್ಪಸಂಯಮದ ನಡವಳಿಕೆಯಾದರೆ, ಕತ್ತಿಯವರದು ಇದ್ದುದನ್ನು ಇದ್ದ ಹಾಗೆ ನೇರವಾಗಿ ಹೇಳಿಬಿಡುವ, ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ, ಅವುಗಳೊಂದಿಗೇ ಬದುಕುವ ಒರಟು ಗುಣವನ್ನು ಮೈಗೂಡಿಸಿಕೊಂಡವರು. ಇತ್ತೀಚೆಗೆ, ಮಂಡ್ಯದಲ್ಲಿ ಮಾತನಾಡುತ್ತಾ, ‘‘2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಆ ವೇಳೆ ನಾನು ಸಹ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ’’ ಎಂದಿದ್ದರು. ಸ್ವಲ್ಪಹಿಂದಕ್ಕೆ, 2021ರ ಜುಲೈನಲ್ಲಿ, ತಮ್ಮನ್ನು ಬಿಜೆಪಿಗೆ ಬರಮಾಡಿಕೊಂಡಿದ್ದ, ಮಂತ್ರಿ ಮಾಡಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವಾಗಲೇ, ಯಡಿಯೂರಪ್ಪಬದಲಾವಣೆಗಾಗಿ ರಾಜ್ಯ ಬಿಜೆಪಿಯಲ್ಲಿ ಗುಸುಗುಸು ನಡೆಯುತ್ತಿರುವಾಗಲೇ, ‘‘ಸಿಎಂ ಬದಲಾವಣೆ ಮಾಡಿದರೆ ಮುಂದಿನ ಅಭ್ಯರ್ಥಿ ನಾನೇ’’ ಎಂದು ಬಿಜೆಪಿಗೂ, ಬಿಎಸ್‌ವೈಗೂ ಶಾಕ್‌ಕೊಟ್ಟಿದ್ದರು. ಇನ್ನು ಪ್ರತ್ಯೇಕ ಕರ್ನಾಟಕದ ಕೂಗನ್ನು ಪುನರುಚ್ಚರಿಸುತ್ತಲೇ ಇದ್ದರು. ಕರ್ನಾಟಕ ಇಬ್ಭಾಗವಾದರೆ, ಉತ್ತರ ಕರ್ನಾಟಕದ ಮೊದಲ ಮುಖ್ಯಮಂತ್ರಿ ನಾನೇ ಎಂದು ರಾಜಾರೋಷವಾಗಿ ಹೇಳುತ್ತಿದ್ದರು. ಯಾರಾದರೂ ಪ್ರಶ್ನಿಸಿದರೆ, ‘‘ನಾನು ಕೂಡಾ ರಾಜಕಾರಣಿ ಸನ್ಯಾಸಿಯಲ್ಲ. ಸಿಎಂ ಸ್ಥಾನ ಬೇಕೆಂದು ಬಯಸುವುದರಲ್ಲಿ ತಪ್ಪೇನು’’ ಎಂದು ಸಮರ್ಥಿಸಿಕೊಳ್ಳುತ್ತಿದ್ದರು.
ಹಾಗೆಯೇ ಇತ್ತೀಚೆಗೆ ಆಗಸ್ಟ್ 2022ರಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಅಧಿಕಾರಿಗೆ ಸೂಚನೆ ನೀಡುತ್ತಾ, ‘‘ಬೇಗ ಕಾಮಗಾರಿ ಮಾಡಿ ಮುಗಿಸಿದರೆ ಹೂಮಾಲೆ ಹಾಕ್ತೇನೆ, ಇಲ್ಲದಿದ್ದರೆ ಬೂಟಿನಲ್ಲಿ ಹೊಡಿತೀನಿ’’ ಎಂದು ಬಹಿರಂಗವಾಗಿಯೇ ಹೇಳಿದ್ದು ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಇನ್ನು ಒಂದು ವರ್ಷದ ಹಿಂದೆ, ಕೊರೋನದಿಂದಾಗಿ ಜನ ದಿಕ್ಕೆಟ್ಟು ಕೂತಿದ್ದಾಗ, ಪಡಿತರ ಅಕ್ಕಿಗಾಗಿ ಬಡವರು ಆಹಾರ ಸಚಿವರಾದ ಉಮೇಶ್ ಕತ್ತಿಯವರನ್ನು ಕೇಳಿದಾಗ, ‘‘ಬಡವರು ಸತ್ತೋದ್ರೆ ಒಳ್ಳೆಯದು’’ ಎಂದು ಹೇಳಿದ್ದು ಕೂಡ ಭಾರೀ ಕೋಲಾಹಲವನ್ನೇ ಉಂಟುಮಾಡಿತ್ತು. ಉಮೇಶ್ ಕತ್ತಿಯವರ ಈ ನಡವಳಿಕೆ, ಉತ್ತರ ಕರ್ನಾಟಕದಲ್ಲಿ ಬೇರುಬಿಟ್ಟಿರುವ ಫ್ಯೂಡಲ್ ಗುಣಧರ್ಮಕ್ಕೆ ತಕ್ಕಂತೆಯೇ ಇದೆ. ಹಾಗೆಯೇ ಮುಂಬೈಗೆ ಹತ್ತಿರವಿರುವ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರು ಮತ್ತು ಕನ್ನಡಿಗರ ನಡುವಿನ ತಿಕ್ಕಾಟ, ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಹಿಂದುಳಿದ ವರ್ಗದ ನಡುವೆ ತಾರತಮ್ಯವೂ ತಳುಕು ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯನ್ನು ಆಳಿದ ರಾಜಕಾರಣಿಗಳಾದ ಶಂಕರಾನಂದ, ಪಾಟೀಲ್, ಸಿದ್ನಾಳ್, ಹುಕ್ಕೇರಿ, ಕೋರೆ, ಅಂಗಡಿ, ಕತ್ತಿ, ಜಾರಕಿಹೊಳಿ ಕುಟುಂಬ ರಾಜಕಾರಣದ ಮೇಲಾಟವೂ ಮಿಳಿತಗೊಂಡಿದೆ. ಜೊತೆಗೆ ಸಹಕಾರಿ ಕ್ಷೇತ್ರ, ಪತ್ತಿನ ಸೊಸೈಟಿಗಳು, ಸಕ್ಕರೆ ಕಾರ್ಖಾನೆಗಳ ಪ್ರಭಾವವೂ ಸಾಕಷ್ಟಿದೆ. ಇಂತಹ ಪರಿಸರದಿಂದ ಬಂದ ಉಮೇಶ್ ಕತ್ತಿ, ಬಹುಸಂಖ್ಯಾತರಾದ ಲಿಂಗಾಯತ ಕೋಮಿಗೆ ಸೇರಿದವರು. ಶ್ರೀಮಂತ ಭೂ ಮಾಲಕರು. ಇದಕ್ಕೆ ಕುಮ್ಮಕ್ಕು ಕೊಡುವಂತೆ ರಾಜಕಾರಣ, ಅಧಿಕಾರ, ಹಣದ ಹರಿವು. ಜೊತೆಗೆ 8 ಬಾರಿ ಶಾಸಕರಾಗಿ ಆಯ್ಕೆಯಾದವರು. ರಾಜ ಕಾರಣದ ಘಟಾನುಘಟಿಗಳಾದ ಜೆ.ಎಚ್. ಪಟೇಲ್, ಎಚ್. ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪನವರ ನಿಕಟ ಸಂಪರ್ಕದಲ್ಲಿದ್ದವರು. ಕರ್ನಾಟಕದ ಮಟ್ಟಿಗೆ ಚಾಲ್ತಿಯಲ್ಲಿರುವ- ಜನತಾ ಪಕ್ಷ, ಜನತಾ ದಳ, ಜೆಡಿಯು, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ- ಅಷ್ಟೂ ಪಕ್ಷಗಳನ್ನು ಎಡತಾಕಿ ಬಂದವರು. ಸಕ್ಕರೆ, ಬಂದಿಖಾನೆ, ತೋಟಗಾರಿಕೆ, ಲೋಕೋಪಯೋಗಿ, ಕೃಷಿ, ಆಹಾರ, ಅರಣ್ಯ ಖಾತೆಗಳ ಸಚಿವರಾಗಿ ಎಲ್ಲವನ್ನು ಬಹಳ ಹತ್ತಿರದಿಂದ ಬಲ್ಲವರು. ಇವರು ಬೆಳೆದುಬಂದ ರೀತಿಗೆ ಒರಟು ಸ್ವಭಾವ ಸಹಜ ಎಂದುಕೊಂಡರೂ, ಸಾರ್ವಜನಿಕ ಬದುಕಿನಲ್ಲಿ ಸಂಯಮದ ನಡೆ, ನುಡಿಯನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗೆಯೇ ತನ್ನನ್ನು ಗೆಲ್ಲಿಸಿದ ಜನರಿಗಾಗಿ ಏನಾದರೂ ಮಾಡಬೇಕೆಂಬ ಕನಸನ್ನೂ ಇಟ್ಟುಕೊಳ್ಳಬೇಕಾದ್ದಿದೆ. ಅದನ್ನು ಬಹಳ ಹತ್ತಿರದಿಂದ ಕಂಡಿದ್ದ ಮುಖ್ಯಮಂತ್ರಿ ಬೊಮ್ಮಾಯಿಯವರು, ‘‘ಆಹಾರ ಮತ್ತು ಅರಣ್ಯ ಸಚಿವರಾಗಿ ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದರು. ಯಾವುದೇ ಖಾತೆ ನೀಡಿದರೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದರು. ಅವರು ಆಹಾರ ಸಚಿವರಾದ ನಂತರ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಜೋಳ, ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಪಿಡಿಎಸ್‌ನಲ್ಲಿ ತರಲು, ಗಟ್ಟಿಯಾಗಿ ನಿಂತು ರೈತರ ಬೆಳೆಗೆ ಯೋಗ್ಯ ಬೆಲೆ ದೊರೆಯಲು ಮತ್ತು ರಾಜ್ಯದ ಆಹಾರ ಜನರಿಗೂ ತಲುಪಿಸಿದಂತಾಗುತ್ತದೆ ಎಂದು ಮಾಡಿದ ಕಾರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದು ಅವರ ಸಾಮಾಜಿಕ ಕಳಕಳಿ ಮತ್ತು ಸ್ಥಿತಪ್ರಜ್ಞೆ. ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಪರಿಣಿತರಿದ್ದರು. 3 ದಶಕಗಳ ಕಾಲ ಶಾಸಕರಾಗಿ, ಮಂತ್ರಿಯಾಗಿ ವಿದ್ಯುತ್, ಸಹಕಾರಿ, ನೀರಾವರಿ ಕ್ಷೇತ್ರಗಳಲ್ಲಿ ಜನಮೆಚ್ಚುವ ಕೆಲಸಗಳನ್ನು ಮಾಡಿದ್ದರು. ಘಟಪ್ರಭಾ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಹಿಡಕಲ್ ಜಲಾಶಯದ ತೋಟವನ್ನು ಆಲಮಟ್ಟಿ ಮಾದರಿಯಲ್ಲಿ ಮತ್ತು ಬೃಂದಾವನ ಮಾಡಲು, ಹಿಡಕಲ್ ಜಲಾಶಯದ ಹಿನ್ನೀರಿನ ನಡುಗಡ್ಡೆಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಅದನ್ನು ಬಜೆಟ್ ನಲ್ಲಿ ಘೋಷಿಸಿ, ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಾಗ, ಅವರ ಕನಸನ್ನು ನನಸು ಮಾಡಿದ್ದಕ್ಕಾಗಿ ನನ್ನನ್ನು ಅಭಿನಂದಿಸಿದ್ದರು’’ ಎಂದು ನೆನಪು ಮಾಡಿಕೊಳ್ಳುತ್ತಾರೆ.
ಹಾಗೆಯೇ ಉಮೇಶ್ ಕತ್ತಿಯವರು ಸಹಕಾರಿ ಕ್ಷೇತ್ರದಲ್ಲಿ, ವಿದ್ಯುತ್ ವಿಸ್ತರಣೆ, ಸಹಕಾರಿ ಸೊಸೈಟಿಯಲ್ಲಿ, ಸಕ್ಕರೆ ಕಾರ್ಖಾನೆಯಲ್ಲಿ ಸಾಕಷ್ಟು ಸಾಧನೆಗೈದವರು. ಕೃಷಿ ಮತ್ತು ಕೃಷಿಕನ ಬಗ್ಗೆ ವಿಶೇಷ ಆಸಕ್ತಿಯುಳ್ಳವರು. ಅದರ ಫಲವಾಗಿ, 2010ರಲ್ಲಿ ಕೃಷಿ ಸಚಿವರಾಗಿದ್ದಾಗ, ಯಡಿಯೂರಪ್ಪನವರ ಮನವೊಲಿಸಿ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ಮಾಡಿ, ರಾಜ್ಯಕ್ಕೆ ಹೆಸರು ತಂದಿದ್ದರು. ಅದರಿಂದ ಕೃಷಿ ಕ್ಷೇತ್ರಕ್ಕಾದ ಅನುಕೂಲಗಳೇನು ಎನ್ನುವುದು ಬೇರೆಯ ವಿಚಾರವಾದರೂ, ಪ್ರತ್ಯೇಕ ಬಜೆಟ್ ಮಂಡನೆ ಕಡೆಗಣಿಸಲ್ಪಟ್ಟ ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬುವ ಶ್ಲಾಘನೀಯ ಕಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂದೆಯಿಂದ ತೆರವಾದ ಸ್ಥಾನಕ್ಕೆ, 25ರ ಹರೆಯದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿ ವಿಧಾನಸೌಧದ ಮೆಟ್ಟಿಲು ಹತ್ತಿದ ಉಮೇಶ್ ಕತ್ತಿ, ಸತತವಾಗಿ 9 ಚುನಾವಣೆಗಳನ್ನು ಎದುರಿಸಿ, 8 ಸಲ ಗೆದ್ದು ಶಾಸಕರಾಗಿ, 4 ಸಲ ಸಚಿವರಾಗಿ, 37 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಹಾಗೂ ಬೆಳಗಾವಿ ಬ್ರಾಂಡ್ ರಾಜಕಾರಣವನ್ನು ಉಳಿಸಿಹೋಗಿದ್ದಾರೆ. ಹಾಗೆ ನೋಡಿದರೆ, 61 ರಾಜಕಾರಣದಲ್ಲಿ ಉತ್ತುಂಗಕ್ಕೇರಲು ವೇದಿಕೆ ಸಜ್ಜುಗೊಳಿಸುವ ವಯಸ್ಸು ಎಂಬ ಮಾತಿದೆ. ಅಂತಹ ವಯಸ್ಸಿನಲ್ಲಿ ಹೋಗಿದ್ದು, ಬೇಸರದ ಸಂಗತಿ.