ಚೌಬೆ ಕೈಗೆ ಭಾರತದ ಫುಟ್ಬಾಲ್‌ನ ಚುಕ್ಕಾಣಿ
ಭಾರತದ ಕ್ರೀಡೆಗಳ ಆಡಳಿತ ಸಮಿತಿಯಲ್ಲಿ ರಾಜಕಾರಣಿಗಳು ಸಕ್ರಿಯರಾಗಿದ್ದಾರೆ. ಹೀಗಾಗಿ ಕ್ರೀಡೆಯ ಅಭಿವೃದ್ಧಿಯಾಗುತ್ತಿಲ್ಲ ಎಂಬ ಅಪವಾದ ಬಹಳ ಹಿಂದಿನಿಂದಲೂ ಇತ್ತು. ಕ್ರೀಡೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲದವರು ಆಡಳಿತ ನಿರ್ವಹಿಸುವುದು ಭಾರತದಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಆದರೆ ಇದೀಗ ಸ್ವಲ್ಪ ಬದಲಾವಣೆ ಆಗಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳು ಕ್ರೀಡಾ ಆಡಳಿತದ ಚುಕ್ಕಾಣಿ ಹಿಡಿಯತೊಡಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಪ್ರಪಂಚದಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನಲಂಕರಿಸಿದ್ದಾರೆ. ಇದೀಗ ಭಾರತದ ಫುಟ್ಬಾಲ್ ಸಂಸ್ಥೆಯ ಚುಕ್ಕಾಣಿ ಮಾಜಿ ಗೋಲು ಕೀಪರ್ ಕಲ್ಯಾಣ್ ಚೌಬೆ ಕೈಗೆ ಬಂದಿದೆ. ಚೌಬೆಗೆ ಎದುರಾಳಿಯಾಗಿದ್ದವರು ಫುಟ್ಬಾಲ್ ದಂತಕಥೆ ಬೈಚುಂಗ್ ಭುಟಿಯಾ. ಇಬ್ಬರೂ ಕ್ರೀಡೆಯಿಂದ ನಿವೃತ್ತಿಯ ಬಳಿಕ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆ ನಡೆಸಿದ್ದರು. ಆದರೆ ಇವರಿಗೆ ಅದೃಷ್ಟ ಒಲಿದಿರಲಿಲ್ಲ.
ಫುಟ್ಬಾಲ್ ಅಧ್ಯಕ್ಷ ಚುನಾವಣೆಗೆ ಬೈಚುಂಗ್ ಭುಟಿಯಾ ಕೊನೆಯ ಕ್ಷಣದಲ್ಲಿ ಸ್ಪರ್ಧೆಗೆ ಧುಮುಕಿದ್ದರು. ಆದರೆ ಅಷ್ಟರವೇಳೆಗೆ ಚೌಬೆ ಗೆಲುವು ಬಹುತೇಕ ಖಚಿತವಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಎಐಎಫ್‌ಸಿ ಅಧ್ಯಕ್ಷರಾದರು. ಭುಟಿಯಾ ಕೇವಲ ಒಂದು ಮತ ಪಡೆದು ಮುಖಭಂಗ ಅನುಭವಿಸಬೇಕಾಯಿತು. 33-1 ಅಂತರದಲ್ಲಿ ಚೌಬೆ ಚುನಾಯಿತರಾದರು. ಈ ಚುನಾವಣೆಯಲ್ಲಿ ಮಾಜಿ ನಾಯಕ ಭುಟಿಯಾ ನಡೆಸಿದ ಗೋಲು ಪ್ರಯತ್ನವನ್ನು ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್‌ನ ಮಾಜಿ ಗೋಲು ಕೀಪರ್ ಕಲ್ಯಾಣ್ ಚೌಬೆ ವಿಫಲಗೊಳಿಸಿದ್ದಾರೆ.
ಕ್ರೀಡೆಗೆ ಸಂಬಂಧಿಸಿದಂತೆ ಭಾರತವು ಎಲ್ಲಿಯೂ ಅಗ್ರಸ್ಥಾನದಲ್ಲಿಲ್ಲ. ವಾಸ್ತವವಾಗಿ, ಒಲಿಂಪಿಕ್ಸ್‌ನಂತಹ ಜಾಗತಿಕ ಕ್ರೀಡಾಕೂಟಗಳಲ್ಲಿ ಹಲವಾರು ಸಣ್ಣ ರಾಷ್ಟ್ರಗಳು ನಮಗಿಂತ ಉತ್ತಮವಾಗಿ ಮಿಂಚುತ್ತಿವೆ. ಪ್ರತಿಭಾವಂತ ಕ್ರೀಡಾಪಟುಗಳ ಕೊರತೆ ಇದಕ್ಕೆ ಖಂಡಿತಾ ಕಾರಣವಾಗಲಾರದು. 138 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ಯಶಸ್ವಿಯಾಗಲು ಕ್ರೀಡಾ ಪ್ರತಿಭೆಗಳ ಕೊರತೆಯಿದೆ ಎಂದು ಒಪ್ಪಿಕೊಳ್ಳುವುದು ಕಷ್ಟ.
ಸಮಸ್ಯೆ ಇರುವುದು ಅತ್ಲೀಟ್‌ಗಳದ್ದಲ್ಲ. ಆದರೆ ಅವರನ್ನು ಆಳುವ ಒಕ್ಕೂಟಗಳದ್ದು. ದೇಶದ ಬಹುಪಾಲು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಅಧಿಕಾರದ ಹಸಿವಿನ ರಾಜಕಾರಣಿಗಳಿಂದ ಆಡಳಿತ ನಡೆಸಲ್ಪಡುತ್ತವೆ. ಅವರಲ್ಲಿ ಹೆಚ್ಚಿನವರು ಈ ಜಾಗವನ್ನು ಪ್ರವೇಶಿಸಿರುವುದು ನಿರ್ದಿಷ್ಟ ಕ್ರೀಡೆಯ ಮೇಲಿನ ಪ್ರೀತಿ ಯಿಂದಲ್ಲ ಆದರೆ ಅದರೊಂದಿಗೆ ಬರುವ ಪ್ರಭಾವದಿಂದಾಗಿ. ರಾಜಕಾರಣಿಗಳು ಮಾಡಲು ಇಷ್ಟಪಡದ ಒಂದು ಕೆಲಸವೆಂದರೆ ತಮ್ಮ ಸ್ಥಾನಗಳನ್ನು ಬೇಗ ಖಾಲಿ ಮಾಡದೆ ಇರುವುದು. ಈ ಸಮಸ್ಯೆಯು ದೇಶಾದ್ಯಂತ ವಿವಿಧ ಕ್ರೀಡಾ ಒಕ್ಕೂಟಗಳನ್ನು ಕಾಡಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಮಾಜಿ ಅಧ್ಯಕ್ಷ ಪ್ರಫುಲ್ ಪಟೇಲ್ ಅವರಿಗೆ ಸುಪ್ರೀಂ ಕೋರ್ಟ್ ಬಲವಂತವಾಗಿ ನಿರ್ಗಮನದ ಬಾಗಿಲನ್ನು ತೋರಿಸಿತು. ಬಳಿಕ ಸುಪ್ರೀಂ ಕೋರ್ಟ್ ಭಾರತದ ಫುಟ್ಬಾಲ್ ಸಂಸ್ಥೆಯ ಆಡಳಿತವನ್ನು ನೋಡಿಕೊಳ್ಳಲು ಆಡಳಿತಗಾರರ ಸಮಿತಿ ನೇಮಕ ಮಾಡಿದ್ದರೂ, ಇದು ಜಾಗತಿಕ ಫುಟ್ಬಾಲ್ ಒಕ್ಕೂಟ ಫಿಫಾ ರೂಪಿಸಿರುವ ನಿಯಮದ ಉಲ್ಲಂಘನೆಯಾಗಿದೆ. ಭಾರತದ ಫುಟ್ಬಾಲ್ ಆಡಳಿತ ಮೂರನೇ ವ್ಯಕ್ತಿಗಳ ಕೈಗೆ ರವಾನೆಯಾಗಿದೆ ಎಂಬುದನ್ನು ಗುರುತಿಸಿದ ಫಿಫಾ ಭಾರತದ ಫುಟ್ಬಾಲ್ ಸಂಸ್ಥೆಯನ್ನು ಅಮಾನತುಗೊಳಿಸಿತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ದೇಶದ ಕ್ರೀಡೆಯ ಹಿತದೃಷ್ಟಿಯಿಂದ ಆಡಳಿತಗಾರರ ಸಮಿತಿಯನ್ನು ವಿಸರ್ಜಿಸಿ ಚುನಾವಣೆಗೆ ಅವಕಾಶ ಮಾಡಿಕೊಟ್ಟಿತು. ಆ ಬಳಿಕ ಫಿಫಾ ಅಮಾನತನ್ನು ತೆರವುಗೊಳಿಸಿತು. ಬಹಳ ಬೇಗನೆ ಭಾರತದ ಫುಟ್ಬಾಲ್‌ಗೆ ಕವಿದಿದ್ದ ಕಾರ್ಮೋಡ ಕಣ್ಮರೆ ಆಗಿದೆ.
ಭಾರತದ ಫುಟ್ಬಾಲ್ ಸಂಸ್ಥೆ ಎಐಎಫ್‌ಎಫ್‌ನ 85 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಆಟಗಾರನ ಕೈಗೆ ಸಂಸ್ಥೆಯ ಆಡಳಿತದ ಚುಕ್ಕಾಣಿ ಬಂದಿದೆ. ಆದರೆ ಇವರ ಆಯ್ಕೆಯಲ್ಲೂ ಕೇಂದ್ರ ಸರಕಾರದ ಸಚಿವ ಕಿರಣ್ ರಿಜಿಜು ಪ್ರಭಾವ ಬೀರಿದ್ದಾರೆ ಎಂಬ ಆರೋಪವೂ ಇದೆ. ಕಾಂಗ್ರೆಸ್‌ನ ನಾಯಕ ಮತ್ತು ರಾಜಸ್ಥಾನದ ಫುಟ್ಬಾಲ್ ಸಂಸ್ಥೆಯ ಮುಖ್ಯಸ್ಥ ಮನ್ವೀಂದರ್ ಸಿಂಗ್ ಈ ಬಗ್ಗೆ ಆರೋಪಿಸಿದ್ದಾರೆ. ಯಾಕೆಂದರೆ ಚೌಬೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೈ ಸುಟ್ಟುಕೊಂಡಿದ್ದರು. 2015ರಲ್ಲಿ, ಚೌಬೆ ಬಿಜೆಪಿ ಸೇರ್ಪಡೆಗೊಂಡು 2019ರಲ್ಲಿ ಕೃಷ್ಣನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಮೊಹುವಾ ಮೊಯಿತ್ರಾ ವಿರುದ್ಧ ಸೋಲು ಅನುಭವಿಸಿದ್ದರು.
ಅದೇನೆ ಇರಲಿ ಇದೀಗ ಫಿಫಾ ರ್ಯಾಂಕಿಂಗ್‌ನಲ್ಲಿ 104ನೇ ಸ್ಥಾನದಲ್ಲಿರುವ ಭಾರತದ ಫುಟ್ಬಾಲ್‌ನ ಸುಧಾರಣೆಗೆ ಚೌಬೆ ಆದ್ಯತೆಯ ನೆಲೆಯಲ್ಲಿ ಗಮನ ಹರಿಸುತ್ತಾರೆ ಎನ್ನುವ ನಿರೀಕ್ಷೆಯನ್ನು ಫುಟ್ಬಾಲ್ ಅಭಿಮಾನಿಗಳು ಹೊಂದಿದ್ದಾರೆ.
ಮೂಲತ: ಕೋಲ್ಕತಾದ 45ರ ಹರೆಯದ ಕಲ್ಯಾಣ್ ಚೌಬೆ ಟಾಟಾ ಫುಟ್ಬಾಲ್ ಅಕಾಡಮಿ ಪದವೀಧರರಾಗಿದ್ದಾರೆ. ಚೌಬೆ ಹಲವಾರು ವಯೋಮಾನದ ರಾಷ್ಟ್ರೀಯ ತಂಡಗಳ ಸದಸ್ಯರಾಗಿದ್ದರು, ವಿಶೇಷವಾಗಿ ಯು-17 ಏಶ್ಯನ್ ಯೂತ್ ಚಾಂಪಿಯನ್‌ಶಿಪ್ 1994 (ಇರಾನ್) ಮತ್ತು ಯು-20 ಏಶ್ಯನ್ ಯೂತ್ ಚಾಂಪಿಯನ್‌ಶಿಪ್ 1996 (ದಕ್ಷಿಣ ಕೊರಿಯಾ)ತಂಡದಲ್ಲಿ ಆಡಿದ್ದರು. ಏಳು ವರ್ಷಗಳ ಕಾಲ ಹಿರಿಯ ಭಾರತೀಯ ರಾಷ್ಟ್ರೀಯ ತಂಡದ ಭಾಗವಾಗಿದ್ದರು - 1999ರಿಂದ 2006ರ ನಡುವೆ - ಮತ್ತು ಮೂರು ಬಾರಿ ಸ್ಯಾಫ್(ಎಸ್‌ಎಎಫ್‌ಎಫ್) ಚಾಂಪಿಯನ್‌ಶಿಪ್ ಜಯಿಸಿದ ತಂಡದ ಸದಸ್ಯರಾಗಿದ್ದರು. 1997-98 ಮತ್ತು 2001-02ರಲ್ಲಿ ಎರಡು ಬಾರಿ ವರ್ಷದ ಭಾರತೀಯ ಗೋಲ್‌ಕೀಪರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಐದು ವಿಭಿನ್ನ ರಾಜ್ಯಗಳಿಗಾಗಿ ಸಂತೋಷ್ ಟ್ರೋಫಿಯನ್ನು ಆಡಿದ್ದಾರೆ. ಗೋವಾ, ಜಾರ್ಖಂಡ್, ಮಹಾರಾಷ್ಟ್ರ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ತಂಡದ ಪರ ಆಡಿದ್ದರು ಎನ್ನುವುದು ವಿಶೇಷವಾಗಿದೆ. ಗೋಲ್‌ಕೀಪರ್ ಆಗಿ ಚೌಬೆ ಮೋಹನ್ ಬಗಾನ್ ಎಸಿ, ಈಸ್ಟ್ ಬೆಂಗಾಲ್ ಎಫ್‌ಸಿ, ಸಲ್ಗೋಕರ್ ಎಸ್‌ಸಿ, ಮಹೀಂದ್ರ ಯುನೈಟೆಡ್, ಜೆಸಿಟಿ ಫಗ್ವಾರಾ ಮತ್ತು ಮುಂಬೈ ಎಫ್‌ಸಿ ತಂಡದ ಪರ ಸೇವೆ ಸಲ್ಲಿಸಿದ್ದರು. ಅಲ್ಲದೆ 2010ರಿಂದ 2013ರವರೆಗೆ ಮೋಹನ್ ಬಗಾನ್ ಅಕಾಡಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.