ರಣಮಳೆಗೆ ಕಾರಣವಾಗುವ ‘ಎಲ್ ನಿನೋ’
ಕಳೆದ ಐದಾರು ವರ್ಷಗಳಿಂದ ಜಗತ್ತಿನಾದ್ಯಂತ ಸುರಿಯುತ್ತಿರುವ ರಣಮಳೆಗೆ, ‘ಎಲ್ ನಿನೋ’ ಎಂಬ ಹವಾಮಾನ ವೈಪ್ಯರೀತ್ಯ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹವಾಮಾನ ಬದಲಾವಣೆಯ ಮೇಲೆ ಇದು ತೀವ್ರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಎಲ್ ನಿನೋ ಎಂದರೆ ಮೊದಲಿಗೆ ಸ್ಪ್ಯಾನಿಷ್ ಭಾಷೆಯಲ್ಲಿ ‘ಲಿಟಿಲ್ ಬಾಯ್’ ಎಂದು ಕರೆಯಲಾಯಿತು. ಇನ್ನು ‘ಲಾ ನಿನಾ’ ಎನ್ನುವುದು ಸ್ಪ್ಯಾನಿಷ್ ಭಾಷೆಯಲ್ಲಿ ‘ಲಿಟಿಲ್ ಗರ್ಲ್’ ಎನ್ನುವುದು. ವಿಶೇಷವೆಂದರೆ ಈ ಎರಡೂ ಹೆಸರುಗಳಿಗೆ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲ. 1600ನೇ ದಶಕದಲ್ಲಿ ಪೆಸಿಫಿಕ್ ಸಾಗರದಲ್ಲಿ ಅಸಾಮಾನ್ಯ ವಾದ ಬೆಚ್ಚಗಿನ ನೀರಿನ ಅಲೆಗಳನ್ನು ಕಂಡ ದಕ್ಷಿಣ ಅಮೆರಿಕದ ಮೀನುಗಾರರು ಮೊದಲ ಬಾರಿಗೆ, ‘ಎಲ್ ನಿನೋ ಡಿ ನವಿದಾದ್’ ಎಂದು ಕರೆದರು. ಜಗತ್ತಿನ ಯಾವುದೇ ಸಾಗರದಲ್ಲಿ ಸರಾಸರಿ ತಾಪಮಾನಕ್ಕಿಂತ ಬೆಚ್ಚಗಿನ ಅಥವಾ ತಂಪಾದ ತಾಪಮಾನ ಸೃಷ್ಟಿಯಾದರೆ ಜಗತ್ತಿನಾದ್ಯಂತ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಪೆಸಿಫಿಕ್ ಸಾಗರದ ಮೇಲಿನ ಸಾಮಾನ್ಯ ಪರಿಸ್ಥಿತಿಗಳಲ್ಲಿ ಬೀಸುವ ಮಾರುತಗಳು ಸಮಭಾಜಕ ವೃತ್ತದ ಉದ್ದಕ್ಕೂ ಪಶ್ಚಿಮಕ್ಕೆ ಬೀಸುತ್ತವೆ. ಪರಿಣಾಮ ದಕ್ಷಿಣ ಅಮೆರಿಕದಿಂದ ಏಶ್ಯದ ಕಡೆಗೆ ಬೆಚ್ಚಗಿನ ನೀರಿನ ಅಲೆಗಳು ಎದ್ದುಬರುತ್ತವೆ. ಈ ಬೆಚ್ಚಗಿನ ನೀರನ್ನು ತಂಪಾಗಿಸಲು ಸಾಗರ ಆಳದಿಂದ ತಣ್ಣೀರು ಮೇಲೇರಿ ಬರುತ್ತದೆ. ಇದನ್ನು ‘ಅಪ್-ವೆಲ್ಲಿಂಗ್’ ಪ್ರಕ್ರಿಯೆ ಎಂದು ಕರೆಯಲಾಗಿದೆ. ಇನ್ನು, ಎಲ್ ನಿನೋ ಮತ್ತು ಲಾ ನಿನಾ ಎನ್ನುವುದು ಎರಡು ವಿರುದ್ಧ ಹವಾಮಾನ ಮಾದರಿಗಳಾಗಿವೆ. ವಿಜ್ಞಾನಿಗಳು ಎಲ್ ನಿನೋ ಅನ್ನು ಪೃಥ್ವಿಯ ದಕ್ಷಿಣ ಭಾಗದ ‘ಆಸಿಲೇಷನ್ (ಅಲೆಗಳ ತೂಗಾಟ) ಚಕ್ರ’ ಎಂದು ಕರೆಯುತ್ತಾರೆ.
ಎಲ್ ನಿನೋ ಮತ್ತು ಲಾ ನಿನಾ ಎರಡೂ ಹವಾಮಾನ, ಕಾಡ್ಗಿಚ್ಚು, ಪರಿಸರ ವ್ಯವಸ್ಥೆಗಳು ಮತ್ತು ಜಗತ್ತಿನ ಆರ್ಥಿಕತೆಯ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ದುರದೃಷ್ಟವೆಂದರೆ ಈ ಎರಡೂ ಚಕ್ರಗಳು ಸಾಮಾನ್ಯವಾಗಿ ಒಮ್ಮೆ ಪ್ರಾರಂಭವಾದರೆ ಒಂಭತ್ತರಿಂದ ಹನ್ನೆರಡು ತಿಂಗಳುಗಳ ಕಾಲ ಇರುತ್ತವೆ. ಕೆಲವೊಮ್ಮೆ ವರ್ಷಗಳ ಕಾಲ ಮುಂದುವರಿಯುತ್ತವೆ. ಈಗ ನಡೆಯುತ್ತಿರುವ ಎಲ್ ನಿನೋ ಪ್ರಾರಂಭವಾಗಿದ್ದು 2018ರಲ್ಲಿ. ಎಲ್ ನಿನೋ ಮತ್ತು ಲಾ ನಿನಾ ಚಕ್ರಗಳು ಸರಾಸರಿ ಎರಡು ಅಥವಾ ಏಳು ವರ್ಷಗಳಿಗೆ ಒಮ್ಮೆ ಸಂಭವಿಸುತ್ತವೆ. ಆದರೆ ಅವು ನಿಯಮಿತ ವೇಳಾಪಟ್ಟಿಯಲ್ಲಿ ಸಂಭವಿಸುವುದಿಲ್ಲ. ಸಾಮಾನ್ಯವಾಗಿ ಎಲ್ ನಿನೋ, ಲಾ ನಿನಾಗಿಂತ ಹೆಚ್ಚಾಗಿ ಸಂಭವಿಸುತ್ತದೆ. ಎಲ್ ನಿನೋ, ಕಾಲದಲ್ಲಿ ವಾಣಿಜ್ಯ ಮಾರುತಗಳು ದುರ್ಬಲಗೊಳ್ಳುತ್ತವೆ. ಇವು ಸಮಭಾಜಕ ವೃತ್ತದಿಂದ ಉತ್ತರ ಅಕ್ಷಾಂಶ 30 ಡಿಗ್ರಿ ಮತ್ತು ದಕ್ಷಿಣ ಅಕ್ಷಾಂಶ 30 ಡಿಗ್ರಿಗಳ ಮಧ್ಯೆ ಉದ್ಭವಿಸುತ್ತವೆ. ಬೆಚ್ಚಗಿನ ನೀರನ್ನು ಅಮೆರಿಕ ಪಶ್ಚಿಮ ಕರಾವಳಿಯ ಕಡೆಗೆ ಅಂದರೆ ಪೂರ್ವ ದಿಕ್ಕಿಗೆ ಹಿಂದಕ್ಕೆ ತಳ್ಳುತ್ತವೆ. ಎಲ್ ನಿನೋ ವೈಪ್ಯರೀತ್ಯ ಕಾಲದಲ್ಲಿ ಬೆಚ್ಚಗಿನ ನೀರು ಪೆಸಿಫಿಕ್ ಜೆಟ್ ಸ್ಟ್ರೀಮ್ ಅನ್ನು ಅದರ ತಟಸ್ಥ ಸ್ಥಾನದಿಂದ ದಕ್ಷಿಣದ ಕಡೆಗೆ ಹರಿಯುವಂತೆ ಮಾಡುತ್ತದೆ. ಈ ಬದಲಾವಣೆಯೊಂದಿಗೆ ಉತ್ತರ ಅಮೆರಿಕ ಮತ್ತು ಕೆನಡದ ಪ್ರದೇಶಗಳು ಸಾಮಾನ್ಯಕ್ಕಿಂತ ಶುಷ್ಕ ಮತ್ತು ಬೆಚ್ಚಗಿನ ಪ್ರದೇಶಗಳಾಗಿ ಮಾರ್ಪಡುತ್ತವೆ. ಆದರೆ ಅಮೆರಿಕ ಕೊಲ್ಲಿ, ಕರಾವಳಿ ಮತ್ತು ಆಗ್ನೇಯದಲ್ಲಿ ಈ ಅವಧಿಗಳು ಸಾಮಾನ್ಯಕ್ಕಿಂತ ಹೆಚ್ಚು ತೇವವಾಗಿರುತ್ತವೆ ಮತ್ತು ಪ್ರವಾಹವನ್ನು ಹೆಚ್ಚಿಸುತ್ತವೆ. ಅಂದರೆ ಬೆಚ್ಚಗಿನ ಮತ್ತು ತಂಪಗಿನ ಎರಡೂ ರೀತಿಯ ಅಲೆಗಳು ಹವಾಮಾನ ವೈಪ್ಯರೀತ್ಯ ಉಂಟುಮಾಡುತ್ತವೆ. ಲಾ ನಿನಾ, ಏಶ್ಯ ದೇಶಗಳ ಕಡೆಗೆ ಹೆಚ್ಚು ಬೆಚ್ಚಗಿನ ನೀರನ್ನು ಒಯ್ಯತ್ತದೆ. ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ, ಮೇಲ್ಮುಖವಾಗಿ ನೀರಿನ ಹರಿವು ಹೆಚ್ಚಾಗುತ್ತದೆ. ಪೆಸಿಫಿಕ್ ಸಾಗರದಲ್ಲಿನ ಈ ತಂಪಾದ ಅಲೆಗಳ ಜೆಟ್ ಸ್ಟ್ರೀಮ್‌ಅನ್ನು ಉತ್ತರದ ಕಡೆಗೆ ತಳ್ಳುತ್ತದೆ. ಇದು ದಕ್ಷಿಣ ಅಮೆರಿಕದಲ್ಲಿ ಬರ ಮತ್ತು ಪೆಸಿಫಿಕ್ ವಾಯುವ್ಯ ಮತ್ತು ಕೆನಡದಲ್ಲಿ ಭಾರೀ ಮಳೆ ಮತ್ತು ಪ್ರವಾಹಕ್ಕೆ ಕಾರಣವಾಗುತ್ತದೆ. ಲಾ ನಿನಾ ಕಾಲದಲ್ಲಿ ಚಳಿಗಾಲದ ತಾಪಮಾನವು ದಕ್ಷಿಣದಲ್ಲಿ ಸಾಮಾನ್ಯಕ್ಕಿಂತ ಬೆಚ್ಚಗಿರುತ್ತದೆ ಮತ್ತು ಉತ್ತರದಲ್ಲಿ ಸಾಮಾನ್ಯಕ್ಕಿಂತ ತಂಪಾಗಿರುತ್ತದೆ. ಎಲ್ ನಿನೋ ಮಾರುತ ಚಕ್ರಗಳು ಸುಮಾರು ನಾಲ್ಕು ವರ್ಷಗಳ ಕಾಲ ಸಾಗುತ್ತವೆ ಎನ್ನಲಾಗಿದೆ. ಆದರೆ ಕೆಲವೊಮ್ಮೆ ಎರಡರಿಂದ ಏಳು ವರ್ಷಗಳ ಕಾಲ ನಡೆದಿರುವ ದಾಖಲೆಗಳು ಕಂಡುಬಂದಿವೆ. ಇದು ಸೆಪ್ಟಂಬರ್-ನವೆಂಬರ್ ಮಧ್ಯದಲ್ಲಿ ಅಪಾರ ಮಳೆಯನ್ನು ಸುರಿಸುತ್ತದೆ. ಎಲ್ ನಿನೋ ತಾಪಮಾನದ ಏರಿಕೆಯಿಂದ ಇಂಡೋನೇಶ್ಯದಿಂದ ಹಿಡಿದು ಭಾರತ ಮತ್ತು ಉತ್ತರ ಆಸ್ಟ್ರೇಲಿಯಾವರೆಗೂ ಇದರ ಪ್ರಭಾವ ಚಾಚಿಕೊಂಡಿರುತ್ತದೆ. ಭೂಮಧ್ಯ ರೇಖೆಯ ಉದ್ದಕ್ಕೂ ಸಾಮಾನ್ಯವಾಗಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಕೆಳಮಟ್ಟದ ಮೇಲ್ಮೈ ಮಾರುತಗಳು ದುರ್ಬಲಗೊಳ್ಳುತ್ತವೆ ಅಥವಾ ವಿರುದ್ಧ ದಿಕ್ಕಿನಿಂದ ಬೀಸಲು ಪ್ರಾರಂಭಿಸುತ್ತವೆ. ಎಲ್ ನಿನೋ ಸಾವಿರಾರು ವರ್ಷಗಳಿಂದ ಸಂಭವಿಸುತ್ತಿದೆ ಎನ್ನಲಾಗಿದೆ. ಇದರ ಪ್ರಭಾವವನ್ನು ಪೆರುವಿನ (ನಾಗರಿಕ ತೊಟ್ಟಿಲ) ‘ಮೋಚಿ’ (ಕ್ರಿ.ಶ.100-700) ಕೃಷಿಯ ಮೇಲೆ ಪರಿಣಾಮ ಬೀರಿರುವುದಾಗಿ ಉತ್ಖನಗಳಿಂದ ತಿಳಿದುಬಂದಿದೆ. ಸುಮಾರು 13 ಸಾವಿರ ವರ್ಷಗಳಷ್ಟು ಹಿಂದಿನ ಹಳೆಯ ಹವಳ ದಿಬ್ಬಗಳಲ್ಲಿ ಬೆಚ್ಚಗಿನ ಸಮುದ್ರ ಮೇಲ್ಮೈ ತಾಪಮಾನ ಮತ್ತು ಎಲ್ ನಿನೋದಿಂದ ಉಂಟಾದ ಹೆಚ್ಚಿನ ಮಳೆಯ ರಾಸಾಯನಿಕ ಗುರುತುಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಕ್ರಿ.ಶ.1525ರಲ್ಲಿ ಪೆರುವಿನ ಮರುಭೂಮಿಯಲ್ಲಿ ಎಲ್ ನಿನೋ ರೀತಿಯ ಮಳೆ ದಾಖಲೆಯಾಗಿದೆ. 1900 ರಿಂದ ಇಂದಿನವರೆಗೆ 26 ಎಲ್ ನಿನೋ ಘಟನೆಗಳು ಸಂಭವಿಸಿರುವುದಾಗಿ ಆಧುನಿಕ ಸಂಶೋಧನೆಗಳು ತೋರಿಸುತ್ತವೆ. ಪ್ರಸಕ್ತ ಪ್ರತಿಯೊಂದು ದೇಶವೂ ಎಲ್ ನಿನೋ ರಣಮಳೆಯಿಂದ ಜರ್ಜರಿತವಾಗಿವೆ. ಒಟ್ಟಿನಲ್ಲಿ ಎಲ್ ನಿನೋ ಉಂಟುಮಾಡುತ್ತಿರುವ ರಣಮಳೆ-ಪ್ರವಾಹಗಳಿಗೆ ಜಗತ್ತೇ ತತ್ತರಿಸಿಹೋಗುತ್ತಿದೆ. ನಮ್ಮ ಬೆಂಗಳೂರೂ ಇದಕ್ಕೆ ತತ್ತರಿಸಿದೆ.