ಕನ್ನಡ ಸಾಹಿತ್ಯ ಪರಿಷತ್‌ಗೆ ಸಂಪುಟ ದರ್ಜೆಯ ಹಂಗು ಬೇಕೆೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶವನ್ನು ಬದಲಿಸುವುದೆಂದರೆ, ದೇಶದೊಳಗಿರುವ ಗಲ್ಲಿಗಳು, ರಸ್ತೆಗಳು, ಊರುಗಳು, ಕಟ್ಟಡಗಳ ಹೆಸರುಗಳನ್ನು ಬದಲಿಸುವುದು ಎಂದು ಬಲವಾಗಿ ನಂಬಿರುವವರು ನಮ್ಮನ್ನಾಳುತ್ತಿದ್ದಾರೆ. ಈ ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆಗಳನ್ನು ಸಾರುವ ಎಲ್ಲ ಹೆಸರುಗಳನ್ನು ಅಳಿಸಿ, ಆ ಜಾಗಕ್ಕೆ ತಮ್ಮದೇ ಕಲ್ಪಿತ ಹೆಸರುಗಳನ್ನು ಛಾಪಿಸುವ ಕೆಲಸವೊಂದು ನಡೆಯುತ್ತಿದೆ. ಆತಂಕಕಾರಿ ವಿಷಯವೆಂದರೆ, ಈ ದೇಶದ ನೆಲಮೂಲ ಹೆಸರುಗಳನ್ನು ಅಳಿಸುತ್ತಿರುವುದು ಮಾತ್ರವಲ್ಲ, ಅದರ ಬದಲಿಗೆ ಈ ದೇಶವನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದಕ್ಕೆ ಕೊಂಡೊಯ್ಯಲು ಶ್ರಮಿಸಿದ ಹೆಡಗೆವಾರ್, ಸಾವರ್ಕರ್‌ರಂತಹ ಬ್ರಾಹ್ಮಣವಾದಿಗಳ ಹೆಸರುಗಳನ್ನು ಇಡಲು ಸರಕಾರದ ನೇತೃತ್ವದಲ್ಲಿ ಪ್ರಯತ್ನ ನಡೆಯುತ್ತಿದೆ. ಈ ದೇಶವನ್ನು ಕಟ್ಟಿದ ಅಂಬೇಡ್ಕರ್, ನೆಹರೂ, ಗಾಂಧಿ ಮೊದಲಾದವರ ಸಂಕೇತಗಳನ್ನು ಅಳಿಸಿ ಹಾಕಿ, ಹುಸಿ ಭ್ರಾಮಕತೆಯನ್ನೇ ಭಾರತದ ಹೊಸ ಇತಿಹಾಸವಾಗಿ ಹೊಸ ತಲೆಮಾರಿನ ತಲೆಗೆ ಕಟ್ಟುವುದಕ್ಕಾಗಿ ರಾಜಕೀಯ ನಾಯಕರು ಶ್ರಮಿಸುತ್ತಿದ್ದಾರೆ. ಇವರ ಮುಖ್ಯ ಉದ್ದೇಶವೇ, ಒಂದು ಕಾಲದಲ್ಲಿ ಈ ದೇಶವನ್ನು ಶೋಷಣೆಗೈದ ಮನುವಾದಿಗಳನ್ನು ಮತ್ತು ಬ್ರಿಟಿಷರ ಬೆನ್ನಿಗೆ ನಿಂತು ಭಾರತೀಯರ ಬೆನ್ನಿಗೆ ಇರಿದ ಆರೆಸ್ಸೆಸಿಗರನ್ನು ಮತ್ತೆ ಮುನ್ನೆಲೆಗೆ ತರುವುದು. ಈ ಕಾರಣದಿಂದ, ಇತಿಹಾಸವನ್ನು ತಿರುಚುವುದು ಇವರಿಗೆ ಅನಿವಾರ್ಯವಾಗಿದೆ. ಅದರ ಭಾಗವಾಗಿಯೇ, ಹೆಸರು ಬದಲಿಸುವ ಆಂದೋಲನಕ್ಕೆ ಸರಕಾರ ಕೈ ಹಾಕಿದೆ. ಈ ಆಂದೋಲನ ಹೀಗೆ ಮುಂದುವರಿದರೆ ಮಹಾತ್ಮಾ ಗಾಂಧಿ ರಸ್ತೆ, ಗೋಡ್ಸೆ ರಸ್ತೆಯಾಗಿ ಬದಲಾಗುವ ದಿನ ದೂರವಿಲ್ಲ.
ರಾಜಕಾರಣಿಗಳ ಈ ರಾಜಕೀಯ ಆಂದೋಲನಕ್ಕೆ ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೂಡ ಕೈಜೋಡಿಸಲು ಹೊರಟಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ ರಾಜಕಾರಣಿಗಳ ‘ಹೆಸರು ಬದಲಾವಣೆ’ಗಳಿಗೆ ನನ್ನದೂ ಒಂದು ಇರಲಿ ಎನ್ನುವಂತೆ ‘ಪಂಪ ಮಹಾಕವಿ ರಸ್ತೆ’ ಹೆಸರನ್ನು ಬದಲಿಸಲು ಪರಿಷತ್ ಸರಕಾರಕ್ಕೆ ಮನವಿ ಮಾಡಲು ಮುಂದಾಗಿದೆ ಎನ್ನುವ ಸುದ್ದಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಹಲವು ಕವಿಗಳು, ಲೇಖಕರು ಪರಿಷತ್‌ನ ಈ ನಿರ್ಧಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದೀಗ ಜೈನ ಸಮುದಾಯದ ತಂಡವೊಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರನ್ನು ಭೇಟಿಯಾಗಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇದರ ಬೆನ್ನಿಗೇ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ‘ಅಂತಹ ಯಾವುದೇ ಉದ್ದೇಶವಿಲ್ಲ’ ಎಂದು ಜೈನ ಧರ್ಮೀಯ ಮುಖಂಡರಿಗೆ ಮನವರಿಕೆ ಮಾಡಿದ್ದಾರೆ. ವಿಷಾದನೀಯ ಅಂಶವೆಂದರೆ, ಕುವೆಂಪು ಅವರನ್ನು ಒಕ್ಕಲಿಗ ಸಮುದಾಯಕ್ಕೆ ಸೀಮಿತಗೊಳಿಸಿದಂತೆಯೇ, ಪಂಪ ಮಹಾಕವಿಯನ್ನು ಜೈನ ಸಮುದಾಯಕ್ಕೆ ಸೀಮಿತ ಗೊಳಿಸಿರುವುದು. ಕನ್ನಡ ಸಾಹಿತ್ಯ ಪರಿಷತ್ ಅಂತಹದೊಂದು ಕನ್ನಡ ವಿರೋಧಿ ನಿರ್ಧಾರ ತೆಗೆದುಕೊಂಡಿದ್ದರೆ, ನಾಡಿನ ಎಲ್ಲ ಲೇಖಕರು, ಬರಹಗಾರರು ಒಂದಾಗಿ ಪರಿಷತ್ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಬೇಕಾಗಿತ್ತು. ದುರದೃಷ್ಟವಶಾತ್ ಇಂದು ಆದಿ ಕವಿ ಪಂಪನ ಪರವಾಗಿ ಜೈನ ಸಮುದಾಯ ಪರಿಷತ್‌ನ್ನು ಭೇಟಿ ಮಾಡಿದೆ. ಪಂಪ ಮೂಲತಃ ಜೈನ ಧರ್ಮೀಯನಾಗಿದ್ದರೂ, ಕನ್ನಡ ಇತಿಹಾಸದಲ್ಲಿ ಕನ್ನಡದ ಆದಿಕವಿಯಾಗಿ ಗುರುತಿಸಲ್ಪಡುವವನು. ಆತನು ಪ್ರತಿನಿಧಿಸುವುದು ಕನ್ನಡದ ಕಾವ್ಯ ಧರ್ಮವನ್ನು. ಇಂತಹ ಪಂಪ ಮಹಾಕವಿಯೂ ಇಂದು ವೈದಿಕ-ಜೈನರ ನಡುವಿನ ರಾಜಕೀಯಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ.
ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಮೂಲಕ ಚಾಲನೆಯನ್ನು ಪಡೆದಿದ್ದ ಕನ್ನಡ ಸಾಹಿತ್ಯ ಪರಿಷತ್‌ಗೆ ಸುದೀರ್ಘವಾದ ಒಂದು ಇತಿಹಾಸವಿದೆ. ಹಲವು ಹಿರಿಯ ಸಾಹಿತಿಗಳು, ಕನ್ನಡ ಹೋರಾಟಗಾರರು ಈ ಕನ್ನಡ ಸಾಹಿತ್ಯ ಪರಿಷತ್‌ನ ತೇರನ್ನು ಎಳೆದುಕೊಂಡು ಬಂದಿದ್ದಾರೆ. ಕನ್ನಡ ನಾಡು ನುಡಿಗೆ ಈ ಪರಿಷತ್ ನೀಡಿರುವ ಕೊಡುಗೆ ಅನನ್ಯವಾದುದು. ಕನ್ನಡ ಸಾಹಿತ್ಯ ಪರಿಷತ್‌ನ ಅತಿ ದೊಡ್ಡ ಹಿರಿಮೆಯೆಂದರೆ, ಇದು ಸರಕಾರದ ಅಧೀನದಲ್ಲಿರದೇ, ಸ್ವತಂತ್ರ ಸಂಸ್ಥೆಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು. ಇತ್ತೀಚಿನ ದಿನಗಳಲ್ಲಿ ಸಾಹಿತ್ಯೇತರ ವ್ಯಕ್ತಿಗಳು, ಉದ್ಯಮಿಗಳು ಮತ್ತು ವೈದಿಕ ಪುರೋಹಿತರ ಕೈಯಲ್ಲಿ ಈ ಸಂಸ್ಥೆ ನರಳುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿರುವ ಹೊತ್ತಿನಲ್ಲೇ ಪರಿಷತ್‌ನ ಅಧ್ಯಕ್ಷರು ‘ಹೆಸರು ಬದಲಿಸುವ’ ಅನಗತ್ಯ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡು ಆರೋಪಗಳಿಗೆ ಇನ್ನಷ್ಟು ಪುಷ್ಟಿಯನ್ನು ನೀಡಿದ್ದಾರೆ. ಕನ್ನಡದ ಜೊತೆಗಿರುವ ಬದ್ಧತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಇಂದು ಉಳಿಸಿಕೊಂಡಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ನ ಮೂಲಕ ಕನ್ನಡ ಪರಂಪರೆಯನ್ನು ಹರಡುವ ಬದಲಿಗೆ ವೈದಿಕ ಪರಂಪರೆಯನ್ನೇ ಕನ್ನಡ ಸಾಹಿತ್ಯದ ಹೆಸರಲ್ಲಿ ಹರಡುವ ಪ್ರಯತ್ನವೊಂದು ನಡೆಯುತ್ತಿದೆ. ಒಂದು ಕಾಲದಲ್ಲಿ ಶಾಲೆ, ಕಾಲೇಜುಗಳು ಸಾಹಿತ್ಯ ಸಮ್ಮೇಳನಗಳ ನೆಲೆವೀಡಾಗಿದ್ದರೆ, ಇಂದು ಸಾಹಿತ್ಯ ಸಮ್ಮೇಳನಗಳು ಆ ಜಾತ್ಯತೀತ ಅಸ್ಮಿತೆಯನ್ನು ಕಳಚಿಕೊಂಡು ವೈದಿಕರ ಊಳಿಗ ನಡೆಸುತ್ತಿವೆ. ಆದುದರಿಂದಲೇ, ಇಂದಿನ ಕನ್ನಡ ಸಾಹಿತ್ಯ ಪರಿಷತ್‌ಗೆ ಪಂಪ ಮಹಾಕವಿಯ ಹೆಸರು ಇರಿಸು ಮುರಿಸಾಗಿರಬೇಕು. ಪಂಪ ಮಹಾಕವಿ ಮಾರ್ಗದ ಹೆಸರನ್ನು ಬದಲಿಸುವುದೆಂದರೆ, ಕನ್ನಡ ಸಾಹಿತ್ಯ, ಪರಂಪರೆಯನ್ನೇ ತಪ್ಪು ಮಾರ್ಗದಲ್ಲಿ ಮುನ್ನಡೆಸಿದಂತೆ. ಕೊನೆಗೂ ಕನ್ನಡ ಸಾಹಿತ್ಯ ಪರಿಷತ್ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಆದರೆ, ಪಂಪ ಕವಿಯ ಹೆಸರನ್ನು ಬದಲಿಸುವುದರ ಹಿಂದಿರುವ ಅದರ ಮಾನಸಿಕತೆ ಸದಾ ಪ್ರಶ್ನಾರ್ಹವೇ ಆಗಿದೆ.
ಕನ್ನಡ ಸಾಹಿತ್ಯದ ದಿಕ್ಕು ದೆಸೆಗಳನ್ನು ಬದಲಿಸುವುದಕ್ಕೆ ತನ್ನ ಕೊಡುಗೆಗಳನ್ನು ನೀಡಬೇಕಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ರಸ್ತೆಯ ಹೆಸರು ಬದಲಿಸುವ ರಾಜಕೀಯಕ್ಕಿಳಿಯುವ ಮೂಲಕ ಕಸಾಪವನ್ನು ಅಧ್ಯಕ್ಷರು ರಾಜಕೀಯ ನಾಯಕರಿಗೆ ಒತ್ತೆಯಿಡಲು ಮುಂದಾಗಿದ್ದಾರೆಯೇ ಎನ್ನುವ ಅನುಮಾನ ಎದ್ದಿದೆ. ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ ಸೇವೆಗಾಗಿ ಸರಕಾರದಿಂದ ಅನುದಾನ ಪಡೆಯುತ್ತದೆಯಾದರೂ, ಅದನ್ನು ನಿಯಂತ್ರಿಸುವ ಯಾವ ಅಧಿಕಾರವೂ ಸರಕಾರಕ್ಕಿಲ್ಲ. ಸಾಹಿತ್ಯ ಪರಿಷತ್ ಸರಕಾರದ ಹಂಗಿನಲ್ಲಿದ್ದರೆ, ಕನ್ನಡಕ್ಕೆ ಧಕ್ಕೆ ಬಂದಾಗ ಸರಕಾರವನ್ನು ಟೀಕಿಸುವ ನೈತಿಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದುದರಿಂದಲೇ, ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರಿಂದ, ಕನ್ನಡಿಗರಿಗಾಗಿ ರೂಪುಗೊಂಡಿದೆ. ಆದರೆ ಇತ್ತೀಚೆಗೆ ಸರಕಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನವನ್ನು ಘೋಷಿಸಿ, ಕಸಾಪವನ್ನು ಸರಕಾರದ ಹಂಗಿಗೆ ಒಳಪಡಿಸಲಾಗಿದೆ. ಸರಕಾರದ ನಿರ್ಧಾರವನ್ನು ತಿರಸ್ಕರಿಸಿ, ಕನ್ನಡ ಸಾಹಿತ್ಯದ ಬಂಡಾಯ ಪರಂಪರೆಯನ್ನು ಎತ್ತಿ ಹಿಡಿಯಬೇಕಾಗಿದ್ದ ಅಧ್ಯಕ್ಷರು, ಸರಕಾರದ ಕೊಡುಗೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ‘ಸರಕಾರದ ಜೀತ ಮಾಡುವುದಕ್ಕೆ ಸಿದ್ಧ’ ಎಂದು ತಮ್ಮ ಸಮ್ಮತಿ ಸೂಚಿಸಿದ್ದಾರೆ. ಅಧ್ಯಕ್ಷರು ಒಮ್ಮೆ ಸರಕಾರದ ಹಂಗಿಗೆ ಒಳಪಟ್ಟರೆ, ಮುಂದೆ ಕನ್ನಡದ ಹಿತಾಸಕ್ತಿಗೆ ಧಕ್ಕೆ ಬಂದಾಗ ತನ್ನ ಕುರ್ಚಿಗಾಗಿ, ತನಗೆ ಸಿಕ್ಕಿದ ಗೂಟದ ಕಾರಿಗಾಗಿ ಸರಕಾರದ ಮುಂದೆ ಬಾಯಿ ಮುಚ್ಚಿ ಕೂರಬೇಕಾಗುತ್ತದೆ. ಹಾಗೆಯೇ ರಾಜಕಾರಣಿಗಳ ದುರುದ್ದೇಶಕ್ಕೆ ಕಸಾಪವನ್ನು ಬಲಿಕೊಡಬೇಕಾದ ಸಂದರ್ಭವೂ ಎದುರಾಗಬೇಕಾಗುತ್ತದೆ. ಆದುದರಿಂದ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸರಕಾರ ನೀಡಿರುವ ಸಂಪುಟ ದರ್ಜೆಯ ಸ್ಥಾನಮಾನವನ್ನು ತಕ್ಷಣ ತಿರಸ್ಕರಿಸಿ, ಕನ್ನಡ ಸಾಹಿತ್ಯ ಪರಿಷತ್ ಸರಕಾರದ ಊಳಿಗ ಮಾಡುವುದಕ್ಕಿರುವುದಲ್ಲ, ಕನ್ನಡದ ಊಳಿಗಕ್ಕಿರುವುದು ಎನ್ನುವುದನ್ನು ಸರಕಾರಕ್ಕೆ ಮನವರಿಕೆ ಮಾಡಬೇಕಾಗಿದೆ. ಆ ಮೂಲಕ ಈವರೆಗೆ ಕಾಪಾಡಿಕೊಂಡು ಬಂದ ಕಸಾಪದ ಸ್ವಂತಿಕೆ, ಸಾರ್ವಭೌಮತೆಯನ್ನು ಉಳಿಸಿಕೊಳ್ಳಬೇಕು.