ಕಠಿಣ ಕ್ರಮ ಅಗತ್ಯ
ಮಾನ್ಯರೇ,
ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರಾಗಿದ್ದರೂ ತಪ್ಪುಮಾಹಿತಿ ನೀಡಿ, ಒತ್ತಡ ತಂತ್ರ, ಲಂಚ ಹೀಗೆ ನಾನಾ ವಾಮ ಮಾರ್ಗಗಳ ಮೂಲಕ ಬಡವರಿಗೆ ಸಿಗಬೇಕಾದ ಪಡಿತರ ಚೀಟಿಯನ್ನು ಉಳ್ಳವರು ಪಡೆದುಕೊಂಡು ಹಗಲು ದರೋಡೆ ಮಾಡಿರುವುದು ಇತ್ತೀಚೆಗೆ ಬಯಲಾಗುತ್ತಿದೆ. ನಿಗದಿತ ಮಾನದಂಡ ಉಲ್ಲಂಘಿಸಿದಂತಹ 3.30ಲಕ್ಷ ನಕಲಿ ಪಡಿತರ ಚೀಟಿಯನ್ನು ಸರಕಾರ ರದ್ದುಗೊಳಿಸಿರುವುದು ಸ್ವಾಗತಾರ್ಹ ಕ್ರಮ. ರಾಜ್ಯಾದ್ಯಂತ 21,679 ಅಂತ್ಯೋದಯ, 3,08,345 ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇನ್ನಷ್ಟು ಕಾರ್ಯಾಚರಣೆ ನಡೆಸಿ ಈ ರೀತಿಯ ಹಗಲು ದರೋಡೆಯನ್ನು ಮತ್ತಷ್ಟು ಬಯಲು ಮಾಡಬೇಕಾಗಿದೆ. ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರಾಗಿದ್ದರೂ ಅರ್ಹ ಕುಟುಂಬಕ್ಕೆ ಸಲ್ಲಬೇಕಾಗಿದ್ದನ್ನು ಕದ್ದಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಯಾಕೆಂದರೆ ಇದು ಉಳ್ಳವರು ಇಲ್ಲದವರ ಮೇಲೆ ಮಾಡಿದಂತಹ ದಾಳಿಯಾಗಿದೆ. ಸಮಾಜದಲ್ಲಿ ತಿನ್ನುವ ಆಹಾರಕ್ಕೂ ದಾಳಿ ಮಾಡಲಾಗುತ್ತಿದ್ದು ಹೀಗಾಗಿ ಹಸಿದವರು ಹಸಿದ ಹೊಟ್ಟೆಯಲ್ಲೇ ಜೀವನ ನಡೆಸಿ ನರಕಯಾತನೆ ಪಡಬೇಕಾದ ಪರಿಸ್ಥಿತಿ ಇದೆ. ತಿಂದುಂಡು ತೇಗಿದವನು ಆರಾಮವಾಗಿದ್ದಾನೆ. ಮುಂದಕ್ಕೆ ಪಂಚಾಯತ್, ಹೋಬಳಿ ಮಟ್ಟದಲ್ಲಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.