ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ?
►ಉನ್ನತ ಶಿಕ್ಷಣ ಇಲಾಖೆಗೆ ದೂರು ►ವರದಿ ನೀಡಲು ಬೆಂಗಳೂರು ವಿವಿ ಕುಲಸಚಿವರಿಗೆ ನಿರ್ದೇಶನ
ಬೆಂಗಳೂರು, ಸೆ.14: ಪಿಎಸ್ಸೈ ಪರೀಕ್ಷೆಯಲ್ಲಿ ಒಎಂಆರ್ ಶೀಟ್‌ಗಳನ್ನು ತಿದ್ದಿದ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವ ಬೆನ್ನಲ್ಲೇ ವಿವಿಧ ವಿಶ್ವವಿದ್ಯಾನಿಲಯಗಳ ಪಿಎಚ್.ಡಿ. ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಒಎಂಆರ್ ಉತ್ತರ ಪತ್ರಿಕೆಗಳನ್ನು ಖರೀದಿಸಿ ಅಕ್ರಮ ನಡೆದಿರುವ ಬಲವಾದ ಆರೋಪ ಕೇಳಿ ಬಂದಿದೆ.
ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರು, ಗುಪ್ತವಾಗಿ ಕಾರ್ಯಾಚರಿಸುತ್ತಿರುವ ಪರೀಕ್ಷಾ ಅವ್ಯವಹಾರಗಳ ಜಾಲವನ್ನು ಬಹಿರಂಗಗೊಳಿಸಿದಂತಾಗಿದೆಯಲ್ಲದೆ ಇದೇ ಜಾಲವು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪರೀಕ್ಷಾ ಅಕ್ರಮದಲ್ಲಿಯೂ ಭಾಗಿಯಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಈ ಕುರಿತು ಎಂ.ಆರ್. ಉಮಾಮಹೇಶ್ವರಿ ಎಂಬವರು ಬೆಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರು ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಕುಮಾರ್ ಟಿ.ಎಸ್. ಎಂಬವರ ವಿರುದ್ಧ ನೀಡಿದ್ದ ದೂರನ್ನಾಧರಿಸಿ ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯು ವರದಿ ನೀಡಲು ಬೆಂಗಳೂರು ವಿವಿ ಕುಲಸಚಿವರಿಗೆ ನಿರ್ದೇಶನ ನೀಡಿದ್ದಾರೆ.
ಎಂ.ಆರ್. ಉಮಾಮಹೇಶ್ವರಿ ಅವರು ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ 2022ರ ಜೂನ್ 30ರಂದು ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ವರದಿ ಕೇಳಿ 2022ರ ಸೆ.5ರಂದು ನಿರ್ದೇಶನ ನೀಡಿದ್ದಾರೆ. ದೂರು ಮತ್ತು ಇಲಾಖೆಯು ಬರೆದಿರುವ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಕುಮಾರ್ ಟಿ.ಎಸ್. ಇವರ ವಿರುದ್ಧ ಪಿಎಸ್ಸೈ ನೇಮಕಾತಿಯ ಒಎಂಆರ್ ಪರೀಕ್ಷೆ ಹಗರಣದ ತನಿಖೆ ನಡೆಸುವ ಕುರಿತು ಸಲ್ಲಿಕೆಯಾಗಿರುವ ಸ್ವಯಂ ವೇದ್ಯ ಮನವಿ ಕುರಿತು ನಿಯಮಾನುಸಾರ ಪರಿಶೀಲಿಸಿ ಒಂದು ವಾರದೊಳಗೆ ವರದಿ/ಮಾಹಿತಿಯನ್ನು ಒದಗಿಸಬೇಕು ಎಂದು ಸರಕಾರದ ಪ್ರಧಾನ ಕಾರ್ಯದರ್ಶಿ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಿಗೆ 2022ರ ಸೆ.9ರಂದು ನಿರ್ದೇಶಿಸಿದ್ದಾರೆ.
2019ರ ಡಿಸೆಂಬರ್‌ನಲ್ಲಿ ನಡೆದ ಪಿಎಚ್.ಡಿ. ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಅಕ್ರಮವಾಗಿ ಒಎಂಆರ್ ಶೀಟ್‌ಗಳನ್ನು ಧಾರವಾಡ ವಿಶ್ವವಿದ್ಯಾನಿಲಯದ ಡಾ.ಆರ್. ಆರ್. ಮದನಕರ್ ಅವರಿಂದ ಖರೀದಿಸಿದ್ದರು. ಇದಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಡಾ.ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡಾ.ಎನ್. ಲಕ್ಷ್ಮೀ ಇವರು ನೆರವಾಗಿದ್ದಾರೆ ಎಂದು ಉಮಾಮಹೇಶ್ವರಿ ಅವರು ದೂರಿನಲ್ಲಿ ಪ್ರಸ್ತಾಪಿಸಿದ್ಧಾರೆ.
ಪಿಎಚ್.ಡಿ. ಪ್ರವೇಶ ಪತ್ರಿಕೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಯನ್ನು ಡಾ.ಆರ್.ಆರ್. ಮದನಕರ್ ಅವರಿಂದ ಖರೀದಿಸಿರುವ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿರುವ ಉಮಾಮಹೇಶ್ವರಿ ಅವರು ಈ ಕುರಿತು ಕುಮಾರ್ ಟಿ.ಎಸ್. ಮತ್ತು ಮದನಕರ್ ಅವರ ಕರೆಗಳ ಮಾಹಿತಿ (ಸಿಡಿಆರ್) ಪಡೆದು ವಿಸ್ತೃತವಾಗಿ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ಅಲ್ಲದೆ, ಕುಮಾರ್ ಟಿ.ಎಸ್. ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ. ನೂರಾರು ವಿದ್ಯಾರ್ಥಿಗಳನ್ನು ಮನೆಗೆ ಕರೆತಂದು ಬಿಎ, ಎಂಎ, ಎಂಎಡ್ ಪದವಿ ಕೊಡಿಸುವುದಾಗಿ ನಂಬಿಸುತ್ತಿದ್ದಾರೆ. ಗಣೇಶ್ ಎಂಬಾತನನ್ನು ಬಳಸಿಕೊಂಡು ಮನೆಯಲ್ಲಿಯೇ ಈ ಎಲ್ಲಾ ಪರೀಕ್ಷೆಗಳನ್ನು ಬರೆಸುತ್ತಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪಡೆದಿರುವ ಹಣದ ವಿಚಾರಗಳನ್ನು ಡೈರಿಯಲ್ಲಿ ಬರೆದಿಟ್ಟಿದ್ದಾರೆ ಎಂದು ಉಮಾಮಹೇಶ್ವರಿ ದೂರಿನೊಂದಿಗೆ ಡೈರಿಯ ಹಾಳೆಗಳನ್ನೂ ಸಲ್ಲಿಸಿದ್ದಾರೆ.
ಇಂತಹ ನೂರಾರು ಪರೀಕ್ಷಾ ಅವ್ಯವಹಾರಗಳನ್ನು ಮಾಡಿದ್ದಾರೆ. ಈತನ ವಿರುದ್ಧ ಕರ್ನಾಟಕ ಎಜ್ಯುಕೇಶನ್ ಕಾಯ್ದೆ ಮತ್ತು ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ(ಕೋಕಾ), ಐಪಿಸಿ 120(ಬಿ) ಸೇರಿ ಐಪಿಸಿ ಇತರ ಕಲಂಗಡಿಯಲ್ಲಿ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.