varthabharthi


ಅನುಗಾಲ

ಪೂರ್ಣ ನ್ಯಾಯದ ಕಲ್ಪನೆ ಮತ್ತು ಅನುಷ್ಠಾನ

ವಾರ್ತಾ ಭಾರತಿ : 15 Sep, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ನಮ್ಮ ಪ್ರಜಾಪ್ರಭುತ್ವವು ವಿಚಿತ್ರ ವಿಪರ್ಯಾಸದ ಗಣಿ. ಅಲ್ಲಿ ಸಾಬೀತಾದ ತಪ್ಪೆಸಗಿದವರು ಜೈಲಿನಿಂದಲೇ ಸ್ಪರ್ಧಿಸಬಹುದು; ತೀರಾ ಅಯೋಗ್ಯತೆಯನ್ನು ಸಾಧಿಸಿದವರೂ ಮಂತ್ರಿಗಳಾಗಬಹುದು; ಭ್ರಷ್ಟಾಚಾರದ ಕೂಪಗಳು ಭಡ್ತಿಹೊಂದುತ್ತಲೇ ಇರಬಹುದು. ಅಕ್ರಮಗಳು ಮುಚ್ಚಿಹೋಗುವಷ್ಟು ಮಣ್ಣು ನಮ್ಮಲ್ಲಿದೆ; ಮರೆತುಹೋಗುವಷ್ಟು ಸಮಯವೂ ಇದೆ. ಹುತ್ತವ ಬಡಿದರೂ ಹಾವು ಸಾಯಲಿಲ್ಲ ಎಂಬಂತೆ ಸಂವಿಧಾನದ, ಮಾನವ ಹಕ್ಕುಗಳ, ನ್ಯಾಯಪಾಲನೆಯ ಪ್ರಶ್ನೆಗಳು ಪುಸ್ತಕದೊಳಗೇ ಉಳಿಯುತ್ತವೆ.


ಈಚೆಗೆ ಕಪಿಲ್ ಸಿಬಲ್ ಎಂಬ ಹಿರಿಯ ನ್ಯಾಯವಾದಿ ಸರ್ವೋಚ್ಚ ನ್ಯಾಯಾಲಯದ ಕುರಿತ ನಂಬಿಕೆಯು ಹುಸಿಯಾಗುತ್ತಿದೆ ಮತ್ತು ಕುಸಿಯುತ್ತಿದೆ ಎಂಬರ್ಥದ ಮಾತುಗಳನ್ನು ಹೇಳಿದರು. ಅವರು ರಾಜಕಾರಣಿಯೂ ಹೌದು. ಆದ್ದರಿಂದ ಅವರು ಗುಜರಾತ್ ಪೊಲೀಸ್ ಅಕ್ರಮಗಳ ಕುರಿತ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕುರಿತೇ ಹೀಗೆ ಹೇಳಿದರೆಂಬ ಟೀಕೆಗಳೂ ಬಂದವು. ರಾಜಕಾರಣಿಯೊಬ್ಬ ಸತ್ಯ ಹೇಳಬಾರದೆಂದೇನೂ ಇಲ್ಲ. ಮೇಲಾಗಿ ಆ ಹೊತ್ತಿಗೆ ಅವರು ತಮ್ಮ ಮಾತೃ ಪಕ್ಷವನ್ನು ಬಿಟ್ಟು ಸ್ವತಂತ್ರವಾಗಿ ಸ್ಪರ್ಧಿಸಿ ಬೇರೊಂದು ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈಗ ಪ್ರಶ್ನೆಯಿರುವುದು ಕಪಿಲ್ ಸಿಬಲ್ ಹೇಳಿದರೆಂಬುದರಿಂದಲ್ಲ. ಇತರರೂ ಹೇಳಿದ್ದಾರೆ. ಹಾಗೆ ಹೇಳಿದ್ದನ್ನು ರಾಜಕೀಯವಾಗಿಯೇ ನೋಡಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯ ಅಂತಲ್ಲ, ಒಟ್ಟಾರೆ ನ್ಯಾಯಾಂಗವು ತನ್ನ ಭರವಸೆಗಳನ್ನು ಈಡೇರಿಸುತ್ತಿದೆಯೇ? ತಾನು ಹೇಳುವ ‘ಸಂವಿಧಾನದ ರಕ್ಷಣೆ’ಯ ಹೊಣೆಯನ್ನು ನಿರ್ವಹಿಸುತ್ತಿದೆಯೇ? ಜನರಿಗೆ ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಏನೇನೂ ವಿಶ್ವಾಸವಿಲ್ಲದ ಹೊತ್ತಿನಲ್ಲಿ, ಮಾಧ್ಯಮ (ಇದನ್ನು ಪ್ರಸಾರಾಂಗ ಅಥವಾ ಪ್ರಚಾರಾಂಗವೆಂದು ಹೆಸರಿಡಬೇಕೇನೋ?)ವು ತನ್ನ ಸ್ವತಂತ್ರ ಅಸ್ತಿತ್ವವನ್ನು, ನಿರ್ಭೀತ ಅಭಿವ್ಯಕ್ತಿಯನ್ನು, ತಾನೇ ಸ್ವತಃ ತ್ಯಜಿಸಿ ಸರಕಾರದ ಗುಲಾಮಗಿರಿಯನ್ನು ಅಪ್ಪಿಕೊಂಡ ಸಂದರ್ಭದಲ್ಲಿ, ನ್ಯಾಯಾಂಗವೊಂದೇ ಈ ಕತ್ತಲನ್ನು ಸರಿಸಿ ಬೆಳಕನ್ನು ನೀಡಬಲ್ಲ ಅಂಗ. ಅದೂ ಊನವಾದರೆ? ದಂಗೆ ಸಹಜ ಅನಿವಾರ್ಯ.

ಒಂದೆರಡು ನಿದರ್ಶನಗಳನ್ನು ನೋಡೋಣ: ಸಿದ್ದೀಕ್ ಕಪ್ಪನ್ ಎಂಬ ಪತ್ರಕರ್ತನಿಗೆ ಕೊನೆಗೂ ಎಂಬಂತೆ ಸರ್ವೋಚ್ಚ ನ್ಯಾಯಾಲಯವು ಜಾಮೀನನ್ನು ನೀಡಿದೆ. ಆದರೆ ಈ ಜಾಮೀನು ನೀಡಿಕೆಯ ತೀರ್ಪಿನಲ್ಲಿ ಅದು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೂ ಅದು ನಡೆದುಕೊಂಡ ರೀತಿಗೂ ಅಜಗಜಾಂತರವಿದೆ. ಮೇಲ್ನೋಟಕ್ಕೆ ಅದು ಜಾಮೀನಿಗೆ ಅರ್ಹವಾದ ಪ್ರಕರಣವೆಂದು ಹೇಳಿದರೂ ಜಾಮೀನಿನ ಶರ್ತಗಳನ್ನು ಗಮನಿಸಿದರೆ ಹಾಗನ್ನಿಸುವುದಿಲ್ಲ. ಜಾಮೀನಿನಲ್ಲಿ ಬಿಡುಗಡೆಯಾದರೂ 6 ವಾರಗಳ ವರೆಗೆ ದಿಲ್ಲಿಯ ವ್ಯಾಪ್ತಿಯೊಳಗೇ ಇರಬೇಕಾದ, ಪೊಲೀಸ್ ಠಾಣೆಗೆ ಹೋಗಿ ಸಹಿಹಾಕಬೇಕಾದ, ಆನಂತರ ತನ್ನೂರಿಗೆ ಹೋದರೂ ಅಲ್ಲಿಯೂ ಪೊಲೀಸರ ಕಣ್ಗಾವಲಿನಲ್ಲೇ ಇರಬೇಕಾದ ಮತ್ತು ಪ್ರಕರಣವು ಮುಂದುವರಿಯುವ ಸಂದರ್ಭದಲ್ಲಿ ಅಂದರೆ ತನ್ನೂರಿಗೆ ಹೋದರೂ ಸಾವಿರಾರು ಕಿಲೋಮೀಟರ್ ಪಯಣಿಸಿ ನ್ಯಾಯಾಲಯದ ಕಲಾಪದಲ್ಲಿ ಹಾಜರಾಗಲೇಬೇಕಾದ ಶರ್ತಗಳು ಬಿಡುಗಡೆಯನ್ನು ಒಂದು ಅಪಹಾಸ್ಯದ, ವ್ಯಂಗ್ಯದ ಪ್ರಹಸನವಾಗಿಸಿದೆ. ಆದರೆ ಸಿದ್ದೀಕ್ ಕಪ್ಪನ್ ಅವರ ಅದೃಷ್ಟ ದೊಡ್ಡದು: ಜಾರಿ ನಿರ್ದೇಶನಾಲಯವು ದಾಖಲಿಸಿದ ಇನ್ನೊಂದು ಪ್ರಕರಣದಿಂದಾಗಿ ಅವರಿಗೆ ಬಿಡುಗಡೆಯ ದೌರ್ಭಾಗ್ಯವಿಲ್ಲ. ಸಾಯಿಬಾಬಾ, ವರವರರಾವ್, ಸುಧಾ ಭಾರದ್ವಾಜ್, ಅರ್ನಬ್ ಗೋಸ್ವಾಮಿ, ನೂಪುರ್ ಶರ್ಮ, ತ್ಯಾಗಿ ಮುಂತಾದ ಅಸಂಖ್ಯ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ನಡೆದುಕೊಂಡ ರೀತಿಯು ವಿರೋಧಾಭಾಸಗಳ ಗುಡ್ಡೆ. ನ್ಯಾಯಾಲಯಗಳು ಒಂದು ಕಡೆ ಸರಕಾರವನ್ನು ಟೀಕಿಸುತ್ತಲೇ ಇನ್ನೊಂದೆಡೆ ಅಕ್ರಮಗಳನ್ನು ಬೆಂಬಲಿಸುತ್ತವೆಯೇನೋ, ಪ್ರೋತ್ಸಾಹಿಸುತ್ತೇನೋ ಎಂಬಂತೆ ನಡೆದುಕೊಳ್ಳುತ್ತಿವೆ. ಮಾನವ ಹಕ್ಕುಗಳ ಕುರಿತು ಪುಟಗಟ್ಟಲೆ ವ್ಯಾಖ್ಯಾನ ಮಾಡುತ್ತಲೇ ತಮ್ಮ ಕೈಗಳನ್ನು ತಾವೇ ನಿರ್ಬಂಧಿಸಿಕೊಳ್ಳುವ ಚೋದ್ಯವು ನ್ಯಾಯಾಲಯಗಳಲ್ಲಿ ಮಾತ್ರ ಕಾಣಸಿಗುವ ವಿಸ್ಮಯ. ಮೇಲೆ ಹೇಳಿದ ಸಿದ್ದೀಕ್ ಕಪ್ಪನ್ ಪ್ರಕರಣವನ್ನೇ ಮತ್ತೆ ಗಮನಿಸಿದರೆ ಸರ್ವೋಚ್ಚ ನ್ಯಾಯಾಲಯವು ಆರೋಪಿಗೆ ಸಮಾಧಾನದ, ಸಾಂತ್ವನದ ನುಡಿಗಳನ್ನಾಡಿ ಆತ ನಿರಪರಾಧಿ ಎಂದೇ ಅನ್ನಿಸುವಂತೆ ವರ್ತಿಸಿದರೂ ಆ ಪ್ರಕರಣವನ್ನು ರದ್ದುಗೊಳಿಸುವ ಮನಸ್ಸು ಮಾಡಲಿಲ್ಲ. ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಬಾರದೆಂಬ ತನ್ನ ಘೋಷಣೆಗನುಗುಣವಾಗಿ ಅದು ಈ ವಿಶಾಲ ದೇಶದಲ್ಲಿ ಒಂದು ಮೂಲೆಯ ವ್ಯಕ್ತಿಗೆ ಇನ್ನೊಂದು ಮೂಲೆಯಲ್ಲಿ ಆಗುವ ಅನ್ಯಾಯಕ್ಕೆ ಏನು ಪರಿಹಾರ ನೀಡಿದೆ? ಸಂವಿಧಾನದ 142ನೇ ವಿಧಿಯಡಿ ಹೀಗೆ ಹೇಳಿದೆ:

‘‘(1) ಸರ್ವೋಚ್ಚ ನ್ಯಾಯಾಲಯವು, ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವಲ್ಲಿ ತನ್ನ ಮುಂದೆ ಇತ್ಯರ್ಥದಲ್ಲಿರುವ ಯಾವುದೇ ವ್ಯಾಜ್ಯ ಅಥವಾ ಇತರ ವಿಷಯದಲ್ಲಿ ಪೂರ್ಣ ನ್ಯಾಯವನ್ನು ದೊರಕಿಸುವುದಕ್ಕೆ ಅವಶ್ಯವಾದಂತಹ ಡಿಕ್ರಿಯನ್ನು ಮಾಡಬಹುದು ಅಥವಾ ಅಂತಹ ಆದೇಶವನ್ನು ಕೊಡಬಹುದು ಮತ್ತು ಹಾಗೆ ಮಾಡಿದ ಡಿಕ್ರಿ ಅಥವಾ ಹಾಗೆ ಕೊಟ್ಟ ಆದೇಶವು, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಮೇರೆಗೆ ವಿಧಾಯಕವಾಗಬಹುದಾದಂತಹ ರೀತಿಯಲ್ಲಿ ಭಾರತದ ರಾಜ್ಯಕ್ಷೇತ್ರದಾದ್ಯಂತ ಮತ್ತು ಹಾಗೆ ಉಪಬಂಧವನ್ನು ಮಾಡುವವರೆಗೆ ರಾಷ್ಟ್ರಪತಿಯು ಆದೇಶದ ಮೂಲಕ ನಿಯಮಿಸಬಹುದಾದಂತಹ ರೀತಿಯಲ್ಲಿ ಅದನ್ನು ಜಾರಿಗೊಳಿಸಬಹುದಾಗಿರತಕ್ಕದ್ದು.
(2) ಸಂಸತ್ತು ಈ ಬಗ್ಗೆ ಯಾವುದೇ ಕಾನೂನು ಮೂಲಕ ಮಾಡಿದ ಉಪಬಂಧಗಳಿಗೊಳಪಟ್ಟು, ಸರ್ವೋಚ್ಚ ನ್ಯಾಯಾಲಯವು, ಭಾರತದ ಸಮಸ್ತ ರಾಜ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವನೇ ವ್ಯಕ್ತಿಯ ಹಾಜರಾತಿಯನ್ನು, ಯಾವುದೇ ದಸ್ತಾವೇಜುಗಳ ಬಹಿರಂಗಪಡಿಸುವಿಕೆ ಅಥವಾ ಹಾಜರುಪಡಿಸುವುದನ್ನು ಸುನಿಶ್ಚಿತಗೊಳಿಸುವ ಉದ್ದೇಶಕ್ಕಾಗಿ ಅಥವಾ ತನಗೆ ಮಾಡಲಾದ ಯಾವುದೇ ನಿಂದನೆಯ ತನಿಖೆ ಮತ್ತು ದಂಡನೆಗಾಗಿ ಯಾವುದೇ ಆದೇಶವನ್ನು ಮಾಡಲು ಎಲ್ಲ ಮತ್ತು ಪ್ರತಿಯೊಂದು ಅಧಿಕಾರ ವನ್ನು ಹೊಂದಿರತಕ್ಕದು.’’
(ಕನ್ನಡ ಅನುವಾದವು ಸರಕಾರದ್ದು. ಅದರ ಅಸ್ಪಷ್ಟತೆಗೆ ನಾನು ಹೊಣೆಯಲ್ಲ!)

ಈ ವಿಧಿಯ ಆಶಯವು ದೊಡ್ಡದು ಮತ್ತು ಸಂವಿಧಾನದ ವ್ಯಾಪ್ತಿಯಡಿ ಅಪರಿಮಿತವಾದದ್ದು. ಸಂವಿಧಾನ ನಿರ್ಮಾಪಕರು ನ್ಯಾಯಾಂಗದ ಮೇಲಿಟ್ಟ ಬಹುದೊಡ್ಡ ಭರವಸೆ, ವಿಶ್ವಾಸ ಅದು. ಸರ್ವೋಚ್ಚ ನ್ಯಾಯಾಲಯಕ್ಕೆ ಕಾನೂನು ಮತ್ತು ಸಂವಿಧಾನದಡಿ ಪೂರ್ಣನ್ಯಾಯನಿರ್ಣಯದ ಅಧಿಕಾರವ್ಯಾಪ್ತಿಯಿದೆ. ಮೇಲೆ ಹೇಳಿದ ಇಂತಹ ಸಂದರ್ಭಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಮಾದರಿಯಾಗಿ ವರ್ತಿಸಿದೆಯೇ? ಅನುಕೂಲಕರ ಸಂದರ್ಭಗಳಲ್ಲಿ ಕೆಲವು ಬಾರಿ 142ನೇ ವಿಧಿಯ ಪ್ರಯೋಗವಾಗಿದೆಯಾದರೂ ಉಳಿದೆಡೆ ಕೈಕಟ್ಟಿ ಕುಳಿತ ಉದಾಹರಣೆಗಳೇ ಹೆಚ್ಚು. ಈಚೆಗೆ ಪೆಗಾಸಸ್ ಕುರಿತ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತಾನು ನೇಮಿಸಿದ ಸಮಿತಿಗೆ ಸರಕಾರವು ಸಹಕರಿಸಿಲ್ಲ ಎಂಬ ವಿಚಾರವು ಗೊತ್ತಾದರೂ ಕೈಚೆಲ್ಲಿತು; ಒಂದರ್ಥದಲ್ಲಿ ತನ್ನ ಅಸಹಾಯಕತೆಯನ್ನು ಹೇಳಿಕೊಂಡಿತು. 142ನೇ ವಿಧಿಯು ಅಳುತ್ತ ಕುಳಿತಿತು. ಇತರ ಅನೇಕ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಎಲ್ಲಿ ಅಗತ್ಯವೋ ಅಲ್ಲಿ ಏನನ್ನೂ ಮಾಡದೆ ಅನಗತ್ಯವಾದ ರೀತಿಯಲ್ಲಿ ಅವನ್ನು ನಿರ್ವಹಿಸಿದೆ. ಝಕಿಯಾ ಜಾಫ್ರಿ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಶ್ರೀಕುಮಾರ್ ಮತ್ತು ಈಗಾಗಲೇ ಜೈಲಿನಲ್ಲಿರುವ ಮತ್ತೊಬ್ಬ ಪೊಲೀಸ್ ಅಧಿಕಾರಿ ಸಂಜೀವ ಭಟ್ ಕುರಿತಂತೆ ತನ್ನ ತೀರ್ಪಿನಲ್ಲಿ ಪ್ರಕರಣಕ್ಕಿಂತ ಹೊರಗಿನ ವಿಚಾರಗಳನ್ನು ಉಲ್ಲೇಖಿಸಿತು. ಇವು ಅನಿವಾರ್ಯವಿತ್ತೇ ಎಂಬ ವಿವೇಕಯುತ ವಿವೇಚನೆಯನ್ನು ಸರ್ವೋಚ್ಚ ನ್ಯಾಯಾಲಯವು ಮಾಡಲಿಲ್ಲವೆಂಬುದು ಸ್ಪಷ್ಟ. ಇದರಿಂದಾಗಿ ಮೊದಲೇ ಅಧಿಕಾರದ ಅಮಲಿನಲ್ಲಿರುವ ಸರಕಾರದ ಮರ್ಕಟಮನಸ್ಸಿಗೆ ಅಮಾವಾಸ್ಯೆಯ ಕತ್ತಲನ್ನೂ ಭೂತಸಂಚಾರದ ವಾತಾವರಣವನ್ನೂ ದಯಪಾಲಿಸಿತು. ತೀರ್ಪಿನ ಮರುದಿನವೇ ತೀಸ್ತಾ ಸೆಟಲ್ವಾಡ್ ಮತ್ತು ಶ್ರೀಕುಮಾರ್ ಬಂಧನವಾಯಿತು. ತೀಸ್ತಾ ಸೆಟಲ್ವಾಡ್‌ಅವರಿಗೆ ಕೊನೆಗೂ ಎಂಬಂತೆ ಜಾಮೀನಿನಲ್ಲಿ ಬಿಡುಗಡೆಯಾಯಿತು. ತನ್ನ ತೀರ್ಪಿನ ಆಧಾರದಲ್ಲಿ 24 ಗಂಟೆಗಳೊಳಗೇ ದೂರು ದಾಖಲಿಸಿಕೊಂಡು ಬಂಧಿಸಿದ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯವು ಟೀಕಿಸಿತು. ಹೊಸ ಸಂಗತಿಗಳೇನೂ ಇಲ್ಲದಿದ್ದಾಗ ಈ ವರೆಗೂ ಬಂಧನವಾಗದಿದ್ದಾಗ ಈಗ ಬಂಧಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿತು. ಮುಂದಿನ ತನಿಖೆಯ ಸ್ವಾತಂತ್ರ್ಯ ತನಿಖಾತಂಡಕ್ಕೆ. ಸೃಷ್ಟಿ-ಸ್ಥಿತಿ-ಲಯಗಳ ಮೂರೂ ಭೂಮಿಕೆಗಳನ್ನು ನಿರ್ದೇಶಿಸಿತು.

ಆದರೆ ಜಾಮೀನನ್ನು ನಿರಾಕರಿಸಿದ ಕೆಳ ನ್ಯಾಯಾಲಯಗಳ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಲೇ ಇಲ್ಲ. ಹೋಗಲಿ, ಅಧೀನ ನ್ಯಾಯಾಲಯಗಳು ಇಂತಹ ಸಮಸ್ಯೆ ಎದುರಾದಾಗ ಕಡಿಮೆ ಪ್ರತಿರೋಧದ ಧೋರಣೆಯನ್ನು ಅನುಸರಿಸುವುದು ಈ ದೇಶದ ಎಲ್ಲ ವಕೀಲ ವೃತ್ತಿ ಬಾಂಧವರಿಗೆ ಮತ್ತು ನ್ಯಾಯಾಲಯಗಳನ್ನು ತೀರ ಹತ್ತಿರದಿಂದ ಗಮನಿಸಿದವರಿಗೆ ಗೊತ್ತಿದೆ. ಆದರೆ ಉಚ್ಚ ನ್ಯಾಯಾಲಯವೂ ಭಯಪಟ್ಟಿತೇ? ಅದಾದರೂ ಈ ಪ್ರಕರಣದ ಗಂಭೀರತೆಯನ್ನು ನೋಡಬೇಕಿತ್ತಲ್ಲ? ಎಲ್ಲವನ್ನೂ ಸರ್ವೋಚ್ಚ ನ್ಯಾಯಾಲಯದ ವರೆಗೆ ಒಯ್ಯಲು ಎಷ್ಟು ಮಂದಿಗೆ ಸಾಧ್ಯ? ಹತ್ತಾರು ಬಾರಿ ಉಲ್ಲೇಖಗೊಳ್ಳುವ ಲಾಗಾಯ್ತಿನ ‘ಕಾನೂನೆಂದರೆ ಶ್ರೀಮಂತರ ಆಯುಧ’ ಎಂಬ ಮಾತಿಗೆ ನಮ್ಮ ನ್ಯಾಯಾಲಯಗಳು ಇಂಬು ನೀಡುತ್ತಿರುವುದು ಸುಳ್ಳಲ್ಲ.

ಇಲ್ಲೇ ಅಧೀನ ನ್ಯಾಯಾಲಯಗಳ ಮತ್ತು ಉಚ್ಚ ನ್ಯಾಯಾಲಯಗಳ ಧೋರಣೆ ಬಗ್ಗೆ ಒಂದು ಮಾತನ್ನು ಹೇಳಬೇಕಾಗಿದೆ: ಅನೇಕ ಸಾಚಾ ಮತ್ತು ಸರಳ ಪ್ರಕರಣಗಳಲ್ಲಿಯೂ ಈ ನ್ಯಾಯಾಲಯಗಳು ಬಹಳಷ್ಟನ್ನು ಹೇಳುತ್ತ್ತವಾದರೂ ಪರಿಣಾಮ ಮತ್ತು ಫಲಿತಾಂಶದ ಪ್ರಶ್ನೆ ಬಂದಾಗ ರಕ್ಷಣಾತ್ಮಕವಾಗಿ ಏನಾದರೂ ಬರೆದು ನುಣುಚಿಕೊಳ್ಳುತ್ತವೆ. ತಾನು(ವು) ಆರೋಪಿಯ ನೆಲೆಯಲ್ಲಿ ನಿಂತು ಸಮಸ್ಯೆಯನ್ನು ನೋಡುವುದಿಲ್ಲ. ಹೀಗಾಗಿ ಶತಾಂಶ ನಿರ್ದೋಷಿಯೆಂದು ಅನ್ನಿಸುವ ಪ್ರಕರಣಗಳಲ್ಲೂ ಆರೋಪಿಯು ಹಲವಾರು ತಿಂಗಳು/ವರ್ಷಗಳನ್ನು ಜೈಲಿನಲ್ಲಿ ಕೊಳೆಯಬೇಕಾಗುತ್ತದೆ. ಆತನ ಬಿಡುಗಡೆಯ (ಜಾಮೀನಿನಲ್ಲೂ, ಅಂತಿಮ ಇತ್ಯರ್ಥದಲ್ಲೂ) ಸುವರ್ಣಯುಗ ಬಂದಾಗ ನ್ಯಾಯಾಲಯಗಳು ವೇದೋಪನಿಷತ್ತಿನಿಂದ ಆರಂಭಿಸಿ ಸಂವಿಧಾನ ಮತ್ತು ಹತ್ತಾರು ಇತರ ಸಂಶೋಧನಾ ಉಲ್ಲೇಖಗಳನ್ನು ಮಾಡಿ ಆತನಿಗೆ ಆದ ಅನ್ಯಾಯದ ಕುರಿತು ಮರುಕಪಡುತ್ತವೆ. ಆದರೆ ಈ ಅನ್ಯಾಯಕ್ಕೆ ಕಾರಣರಾದವರ ಕುರಿತು ಯಾವ ಹೊಣೆಯನ್ನೂ ನಿರ್ಧರಿಸುವುದಿಲ್ಲ. ಇದರಿಂದಾಗಿ ಎಳೆಯ ವಯಸ್ಸಿನಲ್ಲಿ ಜೈಲು ಸೇರಿ ವೃದ್ಧಾಪ್ಯದಲ್ಲಿ ಹೊರಬರುವ ಅನೇಕರಿಗೆ ಈ ಜಗತ್ತು ಭ್ರಮೆಯ ಪಂಜರವಾಗಿ ಕಂಡರೆ ಅಚ್ಚರಿಯಿಲ್ಲ. (ಸಿನೆಮಾಗಳಲ್ಲಿ ಆದಂತೆ ಆತ ಸೇಡು ತೀರಿಸಲು ಉದ್ಯುಕ್ತನಾಗುವ ಪ್ರಸಂಗಗಳು ಸಾಮಾನ್ಯವಾಗಿ ನಿಜಜೀವನದಲ್ಲಿರುವುದಿಲ್ಲ.) ಕರ್ಮಸಿದ್ಧಾಂತ ಪ್ರಯೋಗಕ್ಕೆ ಬರುವುದು ಇಲ್ಲೇ. ಇರದಿದ್ದ ಪೂರ್ವಜನ್ಮದ ಪಾಪಕ್ಕೆ ಈಗ ಪರಿತಪಿಸುವುದು ಅನಿವಾರ್ಯವೇನೋ?

ಇಷ್ಟೇ ಅಲ್ಲ, ಉಚ್ಚ ನ್ಯಾಯಾಲಯಗಳು ನೀಡಿದ, ನೀಡುವ ತೀರ್ಪುಗಳನ್ನು ಟೀಕಿಸುವ ಸರ್ವೋಚ್ಚ ನ್ಯಾಯಾಲಯವು ನಿರ್ದಿಷ್ಟ ನಿರ್ದೇಶನಗಳನ್ನು ನೀಡುವುದಿಲ್ಲ. ಆಯಾಯ ಪ್ರಸಂಗಗಳ ವ್ಯಾಖ್ಯಾನವೇನೋ ಸರಿ; ಆದರೆ ನಿತ್ಯ ನಡೆಯುವ ಇಂತಹ ಪ್ರಸಂಗಗಳ ಕಡೆಗೆ ಚಾಟಿಯೇಟು ಬೀಸಲು ಸರ್ವೋಚ್ಚ ನ್ಯಾಯಾಲಯವು ಎಷ್ಟು ಶಕ್ತವಾಗಿದೆ ಅಥವಾ ಮನಸ್ಸುಮಾಡಿದೆ? ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಮ್ 66-ಎ ರದ್ದಾಗಿ ವರ್ಷಗಳೇ ಕಳೆದರೂ ನಮ್ಮ ಘನ ಪೊಲೀಸರು ಅದೇ ಕಾನೂನಿನಡಿ ಈಗಲೂ ಪ್ರಕರಣಗಳನ್ನು ದಾಖಲಿಸುವ ದುರಂತ ಹಾಸ್ಯ ನಮ್ಮ ಕಣ್ಣಮುಂದಿದೆ.

ಅನೂರ್ಜಿತಗೊಂಡ ಕಾಯ್ದೆಯಡಿ ದಾಖಲಿಸುವ ಪ್ರತೀ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗೆ ಒಂದು ತಿಂಗಳ ಸಂಬಳವಾದರೂ ದಂಡರೂಪದಲ್ಲಿ ವಿಧಿಸಲಾಗುತ್ತದಾದರೆ ಅವರೂ ದೇಹದ ಹೃದಯಭಾಗವನ್ನು ತೆರೆಯದಿದ್ದರೂ ತಲೆಯೊಳಗಿರುವ ಮಿದುಳೆಂಬ ಸ್ವತ್ತನ್ನು ಸ್ವಲ್ಪಬಳಸಿಕೊಂಡಾರೆಂದು ಅನ್ನಿಸುತ್ತದೆ. ಆದರೆ ಅನೇಕ ಪರಮ ಅನ್ಯಾಯಗಳಲ್ಲೂ ಅಧಿಕಾರಿಗಳು ಕ್ಷಮಾಯಾಚನೆ ಮಾಡಿದ ತಕ್ಷಣ ಅವರ ತಪ್ಪುಗಳು ಆವಿಯಾಗಿ ಹೋಗುವ ಸಂದರ್ಭವನ್ನು ಗಮನಿಸುತ್ತೇವೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗಿರುವ ಸವಲತ್ತುಗಳು ನಿವೃತ್ತಿಯ ನಂತರವೂ ಇವೆ. ಆದರೆ ಅವರ ಅಧಿಕಾರ ಮಾತ್ರ ನಿವೃತ್ತಿಯ ವರೆಗೆ ಮಾತ್ರ. ಆದ್ದರಿಂದ ನಿವೃತ್ತಿಯ ನಂತರದ ಸ್ವರ್ಗಕ್ಕಾಗಿ ಕೆಲವರಾದರೂ ಹೀಗೆ ನಡೆದುಕೊಳ್ಳುತ್ತಾರೇನೋ ಎಂಬ ಸಂಶಯವು ಕಪಿಲ್ ಸಿಬಲ್ ಅವರಿಗೆ ಮಾತ್ರವಲ್ಲ ನಮಗೂ ಒದಗಬಹುದು. ಅದನ್ನು ನಿವಾರಿಸುವಷ್ಟು ಏಕಾಗ್ರತೆಯನ್ನು, ಇಚ್ಛಾಶಕ್ತಿಯನ್ನು ಸರ್ವೋಚ್ಚ ನ್ಯಾಯಾಲಯವು ಪ್ರದರ್ಶಿಸುತ್ತದೆಂದು ನಂಬುವುದು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಕಷ್ಟಕರವೇ.

ಇತರ ಅಂಗಗಳಲ್ಲಿ ಹೀಗಲ್ಲ. ನಮ್ಮ ಪ್ರಜಾಪ್ರಭುತ್ವವು ವಿಚಿತ್ರ ವಿಪರ್ಯಾಸದ ಗಣಿ. ಅಲ್ಲಿ ಸಾಬೀತಾದ ತಪ್ಪೆಸಗಿದವರು ಜೈಲಿನಿಂದಲೇ ಸ್ಪರ್ಧಿಸಬಹುದು; ತೀರಾ ಅಯೋಗ್ಯತೆಯನ್ನು ಸಾಧಿಸಿದವರೂ ಮಂತ್ರಿಗಳಾಗಬಹುದು; ಭ್ರಷ್ಟಾಚಾರದ ಕೂಪಗಳು ಭಡ್ತಿಹೊಂದುತ್ತಲೇ ಇರಬಹುದು. ಅಕ್ರಮಗಳು ಮುಚ್ಚಿಹೋಗುವಷ್ಟು ಮಣ್ಣು ನಮ್ಮಲ್ಲಿದೆ; ಮರೆತುಹೋಗುವಷ್ಟು ಸಮಯವೂ ಇದೆ. ಹುತ್ತವ ಬಡಿದರೂ ಹಾವು ಸಾಯಲಿಲ್ಲ ಎಂಬಂತೆ ಸಂವಿಧಾನದ, ಮಾನವ ಹಕ್ಕುಗಳ, ನ್ಯಾಯಪಾಲನೆಯ ಪ್ರಶ್ನೆಗಳು ಪುಸ್ತಕದೊಳಗೇ ಉಳಿಯುತ್ತವೆ. ಇದರಿಂದಾಗಿ ಜನರಿಗೆ ಒಳ್ಳೆಯ ದಿನಕ್ಕಾಗಿ ಕಾದುಕೂರುವ ಹಣೆಬರಹ ಅನಿವಾರ್ಯ. ಎಲ್ಲಿ ಬಂದವು ಆ ದಿನಗಳು ಎಂದು ಕೇಳಿದರೆ ಅದು ಗೋಡೋನಂತೆ ಆಗಲೇ ಬಂದು ಹೋಗಿದೆಯೆಂದು ಹೇಳುವವರಿರುವಾಗ ಸರಿಯೋ ತಪ್ಪೋ ಗೊತ್ತಿಲ್ಲ-ಪಟ್ಟ, ಪಡುವ ಪಾಡು ನಮ್ಮದೆಂದು ಸುಮ್ಮನಿರುವುದೇ ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)