ಗೊಡಾರ್ಡ್: ಫ್ರೆಂಚ್ ಹೊಸ ಅಲೆ ಸಿನೆಮಾದ ವಿಗ್ರಹಭಂಜಕ
ಜನಜನತೆ

ತನ್ನ ಸಿನೆಮಾ ಪ್ರಯೋಗಗಳನ್ನು ಹಾಲಿವುಡ್‌ಗೆ ಪ್ರತಿರೋಧ ಚಳವಳಿ ಎಂದು ಹೇಳುತ್ತಿದ್ದ ಗೊಡಾರ್ಡ್‌ಗೆ 2010ರಲ್ಲಿ ಗೌರವ ಆಸ್ಕರ್ ಪ್ರಶಸ್ತಿ ಘೋಷಿಸಲಾಯಿತು. ಆದರೆ ಸ್ವೀಕರಿಸಲು ಸಮಾರಂಭಕ್ಕೆ ತೆರಳಲು ನಿರಾಕರಿಸಿದ ಗೊಡಾರ್ಡ್ ‘‘ಅಕಾಡಮಿಗೆ ಇಷ್ಟವಾಗಿದ್ದರೆ ಕೊಟ್ಟುಕೊಳ್ಳಲಿ, ಅವರು ನನ್ನ ಸಿನೆಮಾಗಳನ್ನು ನೋಡಿದ್ದಾರೆಯೇ?’’ ಎಂದು ಖಾರವಾಗಿ ಪ್ರಶ್ನಿಸಿದರು. ಬಂಡವಾಳಶಾಹಿ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಗೊಡಾರ್ಡ್ ಮಾರ್ಕ್ಸಿಸ್ಟ್ ಚಿಂತನೆಗಳನ್ನು ಅಪ್ಪಿಕೊಂಡರು. ವಿಯೆಟ್ನಾಂ ಯುದ್ಧವನ್ನು ವಿರೋಧಿಸಿದರು, ಫೆಲೆಸ್ತೀನಿಯರ ಸಾರ್ವಭೌಮತೆ, ಸ್ವಾಯತ್ತತೆ ಹೋರಾಟವನ್ನು ಬೆಂಬಲಿಸಿದರು. ಈ ಸಂದರ್ಭದಲ್ಲಿ ಇಸ್ರೇಲ್ ವಿರುದ್ಧ ಮಾಡಿದ ಟೀಕೆಗಳನ್ನು ಆಧರಿಸಿ ಗೊಡಾರ್ಡ್ ಸೆಮೆಟಿಕ್ ವಿರೋಧಿ ಎಂದು ಅಮೆರಿಕನ್ನರು ಜರೆದರು. ಆದರೆ 2011ರಲ್ಲಿ ಗೊಡಾರ್ಡ್ ಇದನ್ನು ಅಲ್ಲಗೆಳೆದರು. ‘‘ನಾನು ಮೂಲಭೂತವಾಗಿ ವಿಮರ್ಶಕ, ಆದರೆ ಸಿನೆಮಾ ನಿರ್ದೇಶನ ಮಾಡಿದೆ’’ ಎಂದು ತನ್ನನ್ನು ವಿಮರ್ಶಿಸಿಕೊಳ್ಳುತ್ತಿದ್ದ ಗೊಡಾರ್ಡ್ ಬ್ರೆಕ್ಟ್‌ನ ‘ಎಪಿಕ್ ರಂಗಭೂಮಿ’ ಆಯಾಮಗಳನ್ನು ತನ್ನ ಸಿನೆಮಾಗಳಲ್ಲಿ ಆವಾಹಿಸಲು ಪ್ರಯತ್ನಿಸುತ್ತಿದ್ದರು. ‘‘ಎಲ್ಲಿಂದ ಆರಿಸಿಕೊಂಡೆ ಎಂಬುದಲ್ಲ, ಎಲ್ಲಿಗೆ ಕೊಂಡೊಯ್ಯುತ್ತೀಯ ಎಂಬುದು ಮುಖ್ಯ’’ವೆಂದು ನಂಬಿದ್ದರು.
ಫ್ರೆಂಚ್ ಹೊಸ ಅಲೆ ಸಿನೆಮಾ ಚಳವಳಿಯ ಮುಂಚೂಣಿಯಲ್ಲಿದ್ದ, ನವ ವಾಸ್ತವತಾವಾದದ ಹರಿಕಾರ ನಿರ್ದೇಶಕ ಗೊಡಾರ್ಡ್ 91ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ವರ್ಷ ಕೇರಳ ಸಿನೆಮಾ ಉತ್ಸವದಲ್ಲಿ ಭಾಗವಹಿಸಿ ಆನ್‌ಲೈನ್ ಸಂದರ್ಶನದಲ್ಲಿ ಮಾತನಾಡುತ್ತಾ ‘‘ನಾನು ನನ್ನ ಸಿನೆಮಾ ಬದುಕನ್ನು ಮುಗಿಸುತ್ತಿದ್ದೇನೆ. ಹೌದು ನನ್ನ ಸಿನೆಮಾ ನಿರ್ಮಾಣದ ಬದುಕನ್ನು.... ಎರಡು ಚಿತ್ರಕತೆಗಳನ್ನು ಬರೆದು ಮುಗಿಸುತ್ತಿದ್ದೇನೆ, ನಂತರ ಗುಡ್ ಬೈ, ಗುಡ್ ಬೈ...’’ ಎಂದು ಹೇಳಿದ್ದರು. ಕಡೆಗೂ ಮುಗಿಸಿದ್ದಾರೆ. ಅವರ ಅರವತ್ತು ವರ್ಷಗಳ ಸಿನೆಮಾ ಬದುಕು ನಾವೆಲ್ಲಾ ಕನಸುವಂತಹ ಪಯಣ. 1960-70ರ ಆ ದಶಕದ ಹೊಸ ಅಲೆಯ ಸಿನೆಮಾದ ಮುಂಚೂಣಿಯಲ್ಲಿದ್ದ ಗೊಡಾರ್ಡ್ ಮತ್ತು ಎರಿಕ್ ರ್ಹೋಮರ್, ಅಗ್ನೇಸ್ ವಾರ್ದ, ಟ್ರುಫೋ, ರಿವೆಟ್ಟೆ, ಮೆಲ್ವಿಲ್ಲೆರಂತಹ ನಿರ್ದೇಶಕರು ಸಿನೆಮಾ ಜಗತ್ತಿಗೆ ಇದ್ದ ಎಲ್ಲಾ ಮಡಿವಂತಿಕೆಯ ಗಡಿಗಳನ್ನು ಕಿತ್ತು ಬಿಸಾಡಿದರು. ಹೊಸ ಅಲೆ ಸಿನೆಮಾಗೆ ಪರಿವರ್ತನೆಯ ಭಾಷ್ಯವನ್ನು ಬರೆದರು. ನಿರ್ದೇಶಕ ಟ್ರುಫೋ ‘400 ಬ್ಲೋಸ್’ ಸಿನೆಮಾ ಮೂಲಕ ಈ ಹೊಸ ಅಲೆ ಚಳವಳಿಗೆ ವಿಸ್ತಾರವಾದ ಅಡಿಪಾಯ ಹಾಕಿಕೊಟ್ಟರೆ ಗೊಡಾರ್ಡ್, ವಾರ್ದ ಮುಂತಾದವರು ಅದನ್ನು ಕಟ್ಟುತ್ತಾ ಹೋದರು ಮತ್ತು ಹೊಸ ಸಂಚಲನ ಮೂಡಿಸಿದರು. ಸವಕಲಾದ ಮುಖ್ಯವಾಹಿನಿ ಸಿನೆಮಾವನ್ನು ಡೆಡ್ ಎಂಡ್ ತಲುಪಿದ ‘ಗುಣಮಟ್ಟದ ಪರಂಪರೆ’ ಎಂದು ಟೀಕಿಸುವ ಎದೆಗಾರಿಕೆಯಿದ್ದ ಗೊಡಾರ್ಡ್ ಯುರೋಪಿಯನ್ ಸಿನೆಮಾದ ರೂಢಿಗತ ಸಿದ್ಧ ಮಾದರಿಯನ್ನು ವಿಗ್ರಹಭಂಜಕನಂತೆ ಒಡೆಯುತ್ತಾ ಹೊಸ ರಚನೆಗಳನ್ನು ಕಟ್ಟಿದರು. ಕತೆ ಹೇಳುವುದೆಂದರೆ ಕಲೆಗಾರಿಕೆಯಲ್ಲ, ನಾಜೂಕುತನವಲ್ಲ. ಬದಲಿಗೆ ಅಡ್ಡಾದಿಡ್ಡಿಯಾಗಿದ್ದರೂ ಅದು ದಿಟ್ಟತನದಿಂದ ಕೂಡಿರಬೇಕು, ತಾಜಾತನವಿರಬೇಕು ಮತ್ತು ಅರ್ಥಪೂರ್ಣವಾಗಿರಬೇಕು ಎಂದು ನಂಬಿದ ಗೊಡಾರ್ಡ್ ಮುರಿದು ಕಟ್ಟುವುದಕ್ಕೆ ಮಾದರಿ ನಿರ್ದೇಶಕನಾಗಿದ್ದರು. ಅಲ್ಲಿ ಬಂಡುಕೋರುತನವಿತ್ತು, ಒರಟುತನವಿತ್ತು, ಆಧುನಿಕತೆಯೂ ಇತ್ತು, ಕೇಂದ್ರದಿಂದ ಪಕ್ಕಕ್ಕೆ ಜರಗುವ ಹೊರಳುವಿಕೆಯೂ ನಿರಂತರವಾಗಿತ್ತು ಮುಖ್ಯವಾಗಿ ಶ್ರೇಷ್ಠತೆಯ ವ್ಯಸನವಿರಲಿಲ್ಲ.
1960ರಲ್ಲಿ ಬಿಡುಗಡೆಯಾದ ಗೊಡಾರ್ಡ್‌ನ ‘ಬ್ರೆತ್‌ಲೆಸ್’ ಸಿನೆಮಾ ನಿರ್ಮಾಣದ ಮತ್ತು ನೋಡುವ ವ್ಯಾಕರಣವನ್ನೇ ಬದಲಿಸಿಬಿಟ್ಟಿತು. ‘‘ನಾನು ಏನನ್ನಾದರೂ ಹೇಳುತ್ತೇನೆ, ಆದರೆ ಅರ್ಥಪೂರ್ಣವಾಗಿರುತ್ತದೆ, ಅದನ್ನು ದಕ್ಕಿಸಿಕೊಳ್ಳುವುದು ನಿಮಗೆ ಬಿಟ್ಟಿದ್ದು’’ ಎಂಬಂತೆ ಈ ಸಿನೆಮಾ ಮೂಲಕ ತಿರುಗುಮುರುಗಾದ ಫಾರ್ಮ್ ಮತ್ತು ಅಸಾಂಪ್ರದಾಯಿಕ ದೃಶ್ಯಗಳನ್ನು ಕಟ್ಟಿದ ಗೊಡಾರ್ಡ್ ಒಂದಕ್ಕೊಂದು ಹೆಣಿಗೆಯಿಲ್ಲದ ನಿರೂಪಣೆಯ ಸರ್ರಿಯಲಿಸಂ ಶೈಲಿಯನ್ನು ಹುಟ್ಟು ಹಾಕಿದರು. ಆಧುನಿಕ ಬದುಕಿನ ಸಂಘರ್ಷವನ್ನು ಉಡಾಫೆಯಲ್ಲಿ ತೋರಿಸಿದಂತೆ ಕಂಡುಬಂದರೂ ಅದಕ್ಕೆ ನಿರಂತರತೆಯೇ ಇಲ್ಲ ಎಂದು ಕಥನ ಕಟ್ಟಿದರು. ‘‘ಒಂದು ಸಿನೆಮಾಗೆ ಆರಂಭವಿರುತ್ತದೆ, ಮಧ್ಯಂತರವಿರುತ್ತದೆ, ಕ್ಲೈಮಾಕ್ಸ್ ಇರುತ್ತದೆ. ಆದರೆ ಅದು ಅನುಕ್ರಮವಾಗಿರಬೇಕು ಎನ್ನುವ ನಿಯಮವಿಲ್ಲ’’ ಎಂದು ಹೇಳಿದ ಗೊಡಾರ್ಡ್ ‘ಬ್ರೆತ್‌ಲೆಸ್’ ಸಿನೆಮಾ ಮೂಲಕ ‘ಜಂಪ್ ಕಟ್’ ಎನ್ನುವ ಹೊಸ ಟ್ರೆಂಡ್ ಸೃಷ್ಟಿಸಿದರು. ಅದೇ ವರ್ಷ ಇಟಲಿಯಲ್ಲಿ ಅಂಟೋನಿಯೋನಿಯ ‘L’Avventura’, ಫೆಡರಿಕೋ ಫೆಲಿನಿಯ La Dolce Vita , ಭಾರತದಲ್ಲಿ ರುತ್ವಿಕ್ ಘಟಕ್ ನಿರ್ದೇಶನದ ‘ಮೇಘಾ ಡಾಕೆ ತಾರಾ’, ಸ್ವೀಡನ್‌ನಲ್ಲಿ ಇಂಗ್ಮರ್ ಬರ್ಗಮನ್ ನಿರ್ದೇಶನದ ‘The Virgin Spring’ ಎಂಬ ಹೊಸ ಸಂವೇದನೆ ಮತ್ತು ಹೊಸ ಅಲೆಯ ಸರ್ರಿಯಲಿಸಂ ಸ್ಪರ್ಶದ ಸಿನೆಮಾಗಳು ಬಿಡುಗಡೆಯಾದವು. ನಾವು ಬರುತ್ತಿದ್ದೇವೆ ಎನ್ನುವ ಹೇಳಿಕೆಯನ್ನು ನೀಡಿದರು. ಕ್ರಿಯಾಶೀಲ ನಿರ್ದೇಶಕರು ಏಕರೂಪದಲ್ಲಿ ಚಿಂತಿಸುವ ಈ ಬಗೆಯು ಕಾಕತಾಳೀಯವೇ?
1950ರ ದಶಕದಲ್ಲಿ ಗೊಡಾರ್ಡ್ ಮತ್ತು ಆತನ ಸಮಾನಮನಸ್ಕ ಒಡನಾಡಿಗಳು Cahiers du Cinéma ಪ್ರಕಾಶನದ ಮೂಲಕ ಹಳೆಯ ಯುರೋಪಿಯನ್ ಸಾಂಪ್ರದಾಯಿಕ ಶೈಲಿಯನ್ನು ಮುರಿದು ಹೊಸ ಅಲೆಯ ಸಿನೆಮಾ ಚಳವಳಿಗೆ ನಾಂದಿ ಹಾಡಿದರು. ಇದನ್ನು ಫ್ರೆಂಚ್ ಮಾಧ್ಯಮ La Nouvelle Vague ಎಂದು ಕರೆಯಿತು. 1960ರ ದಶಕದ ಆರಂಭದಲ್ಲಿ ಗೊಡಾರ್ಡ್ 'Le Petit Soldat' (The Little Soldier) ಎನ್ನುವ ಪ್ರಭುತ್ವ ವಿರೋಧಿ ಸಿನೆಮಾ ನಿರ್ದೇಶಿಸಿದ. ತನ್ನದೇ ದೇಶ ಫ್ರೆಂಚ್ ವಸಾಹತುಶಾಹಿ ಪಕ್ಕದ ಅಲ್ಜೀರಿಯಾದ ಸಾರ್ವಭೌಮವನ್ನೇ ಧಿಕ್ಕರಿಸಿ ಅದರ ಸ್ವಾತಂತ್ರ್ಯವನ್ನು ನಿರಾಕರಿಸಿ ಯುದ್ಧ ನಡೆಸಿರುವುದನ್ನು ಟೀಕಿಸಿದ. ಆಗ ಫ್ರಾನ್ಸ್ ನಲ್ಲಿ ಮೂರು ವರ್ಷಗಳ ಕಾಲ ‘Le Petit Soldat’ ಸಿನೆಮಾವನ್ನು ನಿಷೇಧಿಸಿದ್ದರು. 1963ರಲ್ಲಿ ಬಿಡುಗಡೆಯಾದ ‘ಕಂಟೆಂಪ್ಟ್’ ಬಹುಶಃ ಗೊಡಾರ್ಡ್‌ರ ಕಮರ್ಷಿಯಲ್ ಸಿನೆಮಾ ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಅದು ಬಿಗ್ ಬಜೆಟ್ ಸಿನೆಮಾ. ದುರಹಂಕಾರಿ ಅಮೆರಿಕನ್ ನಿರ್ಮಾಪಕ, ಪ್ರತಿಷ್ಠೆಯ ಯುರೋಪಿಯನ್ ನಿರ್ದೇಶಕ ಮತ್ತು ಭ್ರಮನಿರಸನಗೊಂಡ ಹೆಂಡತಿಯ ನಡುವೆ ಬಳಲುವ ಚಿತ್ರಕತೆಗಾರ ಇಲ್ಲಿನ ಪ್ರೊಟಗಾನಿಸ್ಟ್. ವೈವಾಹಿಕ ಬದುಕಿನ ಬಿರುಕುಗಳನ್ನು ನಿರೂಪಿಸುವ ಈ ಸಿನೆಮಾ ಗೊಡಾರ್ಡ್‌ತನವನ್ನು ಬಯಸುವ ಅಭಿಮಾನಿಗಳಿಗೆ ಹುಬ್ಬೇರಿಸುವಂತೆ ಮಾಡಿದ್ದು ನಿಜ.
Vivre sa vie ಸಿನೆಮಾ 12 ಎಪಿಸೋಡ್‌ಗಳ ಮೂಲಕ ನಿರೂಪಿತವಾಗಿದೆ. ಗೊಡಾರ್ಡ್‌ನ ಮೊದಲ ಹೆಂಡತಿ ಅನ್ನಾ ಕರೀನಾ ಇಲ್ಲಿನ ಪ್ರೊಟಗಾನಿಸ್ಟ್. ಇಲ್ಲಿ ದುರಂತ ಪಾತ್ರಗಳನ್ನು ಅದ್ಭುತವೆನಿಸುವ ದೃಶ್ಯಗಳ ಮೂಲಕ ನಿರೂಪಿಸುತ್ತಾರೆ. 1964ರಲ್ಲಿ Bande à part ( Band of Outsiders) ಎನ್ನುವ ಗ್ಯಾಂಗ್‌ಸ್ಟರ್ ಸಿನೆಮಾ ನಿರ್ದೇಶಿಸಿದರು. ಇದು ಒಡಿಲೆ, ಅರ್ಥುರ್, ಫ್ರಾಂಜ್ ನಡುವಿನ ಪ್ರೇಮವೂ ಹೌದು. ತ್ರಿಕೋನ ಪ್ರೇಮವೇ? ಹೌದು ಮತ್ತು ಇಲ್ಲ. 1960-65ರ ಅವಧಿಯಲ್ಲಿ 9 ಸಿನೆಮಾಗಳನ್ನು ನಿರ್ದೇಶಿಸಿದ, ತಮ್ಮ ಸಿನೆಮಾಗಳ ಮೂಲಕ ನಿರಂತರ ಪ್ರಯೋಗಕ್ಕೆ ಒಳಪಡಿಸಿಕೊಳ್ಳುತ್ತಿದ್ದ ಗೊಡಾರ್ಡ್ ಮೂಲಕ ಮತ್ತೊಂದು ದಿಕ್ಕಿಗೆ ಹೊರಳಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ‘‘ಈ ಬಾರಿ ನನ್ನ ಮೊದಲ ಸಿನೆಮಾ ಮಾಡುತ್ತಿದ್ದೇನೆ ಎನ್ನುವ ಅನುಭವವಾಗುತ್ತಿದೆ. ಹೊಸ ಪ್ರದೇಶವನ್ನು ಪ್ರವೇಶಿಸುತ್ತಿದ್ದೇನೆ’’ ಎಂದು ಹೇಳಿದ್ದರು. 1966ರಲ್ಲಿ ಟೈಮ್ ಪತ್ರಿಕೆ ‘‘ಗೊಡಾರ್ಡ್ ಸಿನೆಮಾಗಳನ್ನು ನೋಡುವುದು ಕಷ್ಟ, ನೋಡುವುದನ್ನು ನಿಲ್ಲಿಸುವುದೂ ಕಷ್ಟ’’ ಎಂದು ವಿಮರ್ಶಿಸಿತ್ತು. 1970ರ ದಶಕದ ನಂತರ ಗೊಡಾರ್ಡ್ ಸಿನೆಮಾಗಳು ರಾಜಕೀಯಕರಣಗೊಂಡವು, ಹಿಂದಿನ auteur ಶೈಲಿಯನ್ನು ಅಣಕಿಸುವ ಪ್ರತಿಸಂಸ್ಕೃತಿಯಂತೆ ಬಿಂಬಿತವಾಗಿದ್ದವು ಎಂದು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ.
ಅವರ ಬಹುಕಾಲದ ಕಾನೂನು ಸಲಹೆಗಾರ ಪಾಟ್ರಿಕ್ ಜೆನ್ನೆರ್ಟ ‘‘ಇನ್ನು ಸಾಕು ಎಂದು ನಿರ್ಧರಿಸಿದ ಗೊಡಾರ್ಡ್ ನೆರವಿನ ಆತ್ಮಹತ್ಯೆಯ ಮೂಲಕ ನಿಧನರಾದರು’’ ಎಂದು ತಿಳಿಸಿದರು. ನಮ್ಮ ಸಿನೆಮಾ ನೋಡುವ ದೃಷ್ಟಿಕೋನವನ್ನೇ ಬದಲಿಸಿದ ಈ ವಿಗ್ರಹಭಂಜಕನಿಗೆ ನಾವು ಋಣಿಗಳಾಗಿದ್ದೇವೆ. ಥ್ಯಾಂಕ್ಸ್ ಸರ್.