ಹೆಂಗರುಳಿನ ಹೆಮಿಂಗ್ವೆ
ನಿಸರ್ಗದ ನಿರ್ದಯ ಕ್ರೌರ್ಯದೆದುರು ನಿರುತ್ತರನಾಗುವ ಕಡಲಿನ ಮೇಲೆ ಒಂಟಿ ಮುದುಕನೊಬ್ಬನ ಸೋಲು, ಗೆಲುವು ಹಾಗೂ ಛಲದ ಬದುಕನ್ನು ಕಾವ್ಯಾತ್ಮಕ ಭಾಷೆಯ ಮೂಲಕ ‘ದ ಓಲ್ಡ್ ಮ್ಯಾನ್ ಆ್ಯಂಡ್ ದ ಸಿ’ ಎಂಬ ಪುಟ್ಟ ಕಾದಂಬರಿಯ ಮುಖೇನ ಸಾರ್ವಕಾಲಿಕ ಶ್ರೇಷ್ಠ ಅನುಭವವೊಂದನ್ನು ಓದುಗರ ಎದೆಯೊಳಕ್ಕಿಳಿಸಿದ ಅಮೇರಿಕದ ಅರ್ನೆಸ್ಟ್ ಹೆಮಿಂಗ್ವೆ ಜಗತ್ತು ಕಂಡ ವಿಸ್ಮಯ ಪ್ರತಿಭೆ. ಈ ಕಥನದಲ್ಲಿ ಬರುವ ಮುದುಕ ಸ್ಯಾಂಟಿಯಾಗೊ, ‘Man is not made for defeat’ ಅನ್ನುವಂತೆ ಅರ್ನೆಸ್ಟ್ ಹೆಮಿಂಗ್ವೆ ತನ್ನ ನಿಜ ಬದುಕನ್ನೂ ನಿರಂತರ ಸಾಹಸದ ಬದುಕಿಗೆ ಒಡ್ಡಿಕೊಂಡಿದ್ದವನು. ‘‘ಜೀವನದ ಬಗ್ಗೆ ಬರೆಯಬೇಕು ಅಂದರೆ ಮೊದಲು ಅದನ್ನು ನೀವು ಬದುಕಬೇಕು’’ ಅಂತ ಹೇಳುತ್ತಿದ್ದ ಹೆಮಿಂಗ್ವೆಯ ಮುಂಚಿನ ಬಹುತೇಕ ಕಥೆಗಳು ಮಿಷಗನ್ನ ಔತ್ತರೇಯದ ವಾಲೂನ್ ಸರೋವರದಲ್ಲಿದ್ದ ಹೆಮಿಂಗ್ವೆ ಕುಟುಂಬ ಸ್ವಂತಕ್ಕೆ ಹೊಂದಿದ್ದ ಹಳ್ಳಿ ಮನೆಯ ಸುತ್ತಮುತ್ತ ನಡೆಯುತ್ತವೆ. ಹೆಮಿಂಗ್ವೆ ಹುಡುಗನಾಗಿದ್ದಾಗ ಹಾಗೂ ಯುವಕನಾಗಿದ್ದಾಗ ಬೇಸಗೆಯ ದಿನಗಳನ್ನು ಅಲ್ಲಿ ಹೆಚ್ಚಾಗಿ ಕಳೆಯುತ್ತಿದ್ದ. ಅಲ್ಲಿ ಅವನಿಗೆ ಸಿಕ್ಕ ಗೆಳೆಯರು ಅಲ್ಲಿ ಬದುಕಿದ್ದ ಇಂಡಿಯನ್ರನ್ನು ಒಳಗೊಂಡಂತೆ ಬಹುತೇಕರು ಹೆಮಿಂಗ್ವೆಯ ಹಲವಾರು ಕಥೆಗಳಲ್ಲಿ ಪಾತ್ರಗಳಾಗಿದ್ದಾರೆ. ಅದೇರೀತಿ ಪೂರಾ ಅಲ್ಲದಿದ್ದರೂ ಭಾಗಶಃವಾಗಿ ಅಲ್ಲಿನ ಪರಿಸರ, ಕೆಲ ಪ್ರಸಂಗಗಳು ಕೂಡಾ ಅವನ ಬರವಣಿಗೆಗೆ ಮೂಲಧಾತುವಾಗಿವೆ. ಹೆಮಿಂಗ್ವೆಯ ನಿಪುಣತೆ ಇರುವುದು ಮನೋಜ್ಞ ಚಣಗಳ ಪ್ರಾಮುಖ್ಯತೆ ಮತ್ತು ತೀವ್ರತೆಯನ್ನು ವಿಶದವಾಗಿ ಮತ್ತು ನಿಖರವಾಗಿ ಮುಟ್ಟಿಸುವುದರಲ್ಲಿ. ಹೆಮಿಂಗ್ವೆ ಮರಣಾನಂತರದಲ್ಲಿ ಪ್ರಕಟಗೊಂಡಿರುವ ‘ಸಮ್ಮರ್ ಪೀಪಲ್’ ಅಪೂರ್ಣವಾಗಿರುವ ‘ದ ಲಾಸ್ಟ್ಗುಡ್ ಕಂಟ್ರಿ’ ಕಥೆಗಳು ಈ ಹಿನ್ನೆಲೆಯಲ್ಲಿ ರೂಪುಗೊಂಡಿರುವಂಥವುಗಳು. ನಂತರದ ಕಥೆಗಳು ಗಂಡನಾಗಿ, ಅಪ್ಪನಾಗಿ, ಸೈನಿಕನಾಗಿ, ವರದಿಗಾರನಾಗಿ ಮತ್ತು ಆಸ್ಪತ್ರೆಯ ರೋಗಿಯಾಗಿ ದಕ್ಕಿದ ಅನುಭವಗಳು ಹೆಮಿಂಗ್ವೆಯ ಸೃಜನಶೀಲತೆಯಲ್ಲಿ ಕಥೆಗಳಾಗಿ ಕಟ್ಟಲ್ಪಟ್ಟಿವೆ. ಲೇಖಕನ ಸ್ವಂತ ಬದುಕಿನ ಅಷ್ಟೂ ವೈವಿಧ್ಯತೆಗಳನ್ನು ವಿಭಿನ್ನ ಪಾತ್ರಗಳು ಮತ್ತು ವಸ್ತುಗಳ ವೈವಿಧ್ಯತೆ ಹಾಗೂ ಸನ್ನಿವೇಶಗಳ ಮರು ಸೃಷ್ಟಿಯಲ್ಲಿನ ತನ್ಮಯತೆ ಗಾಢವಾಗಿ ಎರಕಗೊಂಡು ಅವು ಲೋಕದ ಕಥೆಗಳಾಗಿ ಉಳಿಯುತ್ತವೆ. ಹೆಮಿಂಗ್ವೆಯಷ್ಟು ಲೋಕವನ್ನು ಸುತ್ತಿದ ಲೇಖಕರು ತುಂಬಾ ಕಡಿಮೆ. ಆ ಸುತ್ತಾಟದ ಲೋಕಾನುಭವಗಳನ್ನೆಲ್ಲಾ ತನ್ನ ಕಥೆಗಳಿಗೆ ದಕ್ಕಿಸಿಕೊಂಡು ಓದುಗರೊಳಗೆ ಆ ಅನುಭವ ಅನುರಣಿಸುವಂತೆ ಮಾಡುವುದು ಹೆಮಿಂಗ್ವೆಯ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿದೆ.
1918ರಲ್ಲಿ ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಅಮೆರಿಕನ್ ಸೇನೆಯ ಫೀಲ್ಡ್ ಸರ್ವಿಸ್ ಯೂನಿಟ್ನ ಸದಸ್ಯನಾಗಿ ಆ್ಯಂಬ್ಯುಲೆನ್ಸ್ ಡ್ರೈವರ್ ಕೆಲಸ ಮಾಡುವ ನಿಮಿತ್ತ ಇಟಲಿಗೆ ಹೋಗುತ್ತಾನೆ. ಅದು ಅವನ ಮೊತ್ತ ಮೊದಲ ಸಾಗರದಾಚೆಯ ಪ್ರಯಾಣವಾಗಿರುತ್ತದೆ. ಆಗ ಅವನಿಗೆ ಕೇವಲ ಹದಿನೆಂಟು ವರ್ಷ. ಅವನು ಇಟಲಿಯ ಮಿಲನ್ಗೆ ಬಂದ ದಿನವೇ ಅಲ್ಲಿನ ಯುದ್ಧ ಸಾಮಗ್ರಿ ಕಾರ್ಖಾನೆಯೊಂದು ಸ್ಫೋಟಗೊಳ್ಳುತ್ತದೆ. ಆಗ ಇತರ ಸ್ವಯಂ ಸೇವಕರೊಂದಿಗೆ ಆ ಕಾರ್ಖಾನೆಯ ಸ್ಫೋಟದಲ್ಲಿ ಸತ್ತ ವ್ಯಕ್ತಿಗಳ ಅವಶೇಷಗಳನ್ನು ತೆಗೆಯುವ ಕೆಲಸಕ್ಕೆ ಹೆಮಿಂಗ್ವೆಯನ್ನು ನಿಯೋಜಿಸಲಾಗುತ್ತದೆ. ಅದಾದ ಕೇವಲ ಮೂರು ತಿಂಗಳಲ್ಲಿ ಯುದ್ಧದಲ್ಲಿ ಹೆಮಿಂಗ್ವೆಯ ಎರಡೂ ಕಾಲುಗಳು ಬಲವಾಗಿ ಗಾಯಗೊಂಡು ಅವನನ್ನು ಚಿಕಿತ್ಸೆಗಾಗಿ ಮಿಲನ್ನಲ್ಲಿಯ ರೆಡ್ಕ್ರಾಸ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಿಸಲಾಗುತ್ತದೆ. ಈ ಯುದ್ಧಕಾಲದ ಹೆಮಿಂಗ್ವೆಯ ಅನುಭವಗಳು ಹಾಗೂ ಆ ಹೊತ್ತಲ್ಲಿ ತಾನು ಭೇಟಿಯಾದ ವ್ಯಕ್ತಿಗಳನ್ನೂ ಒಳಗೊಂಡಂತೆ ಮುಖ್ಯವಾಗಿ ‘ಎ ಫೇರ್ವೆಲ್ ಟು ಆರ್ಮ್ಸ್’ ಅನ್ನುವ ಕಾದಂಬರಿ ಹಾಗೂ ಇತರ ಬಹು ಮುಖ್ಯ ಕಥೆಗಳಲ್ಲಿ ಚಿತ್ರಿಸಲ್ಪಟ್ಟಿವೆ. ಅದಾದ ಮೇಲೆ 1920ರಲ್ಲಿ ಹೆಮಿಂಗ್ವೆ ಅನೇಕ ಸಲ ಇಟಲಿಗೆ ಹೋಗುತ್ತಾನೆ. ಕೆಲವು ಸಲ ವೃತ್ತಿಪರ ಪತ್ರಿಕಾ ವರದಿಗಾರನಾಗಿ ಮತ್ತೆ ಕೆಲವು ಸಲ ತನ್ನ ಖುಷಿಗಾಗಿ. ಹಾಗೆ ಹೋದಾಗ ಒಮ್ಮೆ ತನ್ನ ಗೆಳೆಯನೊಂದಿಗೆ ಮುಸ್ಸೋಲಿನಿಯ ಆಡಳಿತದ ಇಟಲಿಯಲ್ಲಿ ಅಡ್ಡಾಡುತ್ತಾನೆ. ಆಗ ತಾನು ಕಂಡ ಸರ್ವಾಧಿಕಾರಿಯೊಬ್ಬನ ಆಡಳಿತದ ಭಯಾನಕ ವಾತಾವರಣವನ್ನು ತನ್ನ ‘ಚೇತಿಡೈಸ್ ಲಾ ಪಾತ್ರಿಯಾ’ ಕಥೆಯಲ್ಲಿ ತುಂಬಾ ಪರಿಣಾಮಕಾರಿಯಾಗಿ ನಿರೂಪಿಸುತ್ತಾನೆ.
1922 ಮತ್ತು 1924ರ ನಡುವೆ ಹೆಮಿಂಗ್ವೆ ಸ್ವಿಟ್ಸರ್ಲ್ಯಾಂಡ್ಗೆ ಕೆನಡದ ದಿನಪತ್ರಿಕೆ ‘ದಟೊರೆಂಟೋ ಸ್ಟಾರ್’ಗಾಗಿ ಅಲ್ಲಿ ಆರ್ಥಿಕ ಸ್ಥಿತಿಗತಿಗಳು, ಅಲ್ಲಿನ ಚಳಿಗಾಲದ ಆಟಗಳು, ಮತ್ತಿತರ ಸಂಗತಿಗಳನ್ನು ವರದಿ ಮಾಡುವ ಸಲುವಾಗಿ ಅನೇಕ ಪ್ರವಾಸಗಳನ್ನು ಮಾಡುತ್ತಾನೆ. ಅದರ ಜೊತೆಗೆ ತನ್ನ ಅನೇಕ ಕಥೆಗಳಿಗೆ ತಮಾಷೆಯಿಂದ ಹಿಡಿದು ಗಂಭೀರ ಹಾಗೂ ಭೀಕರ ಕಥಾ ವಸ್ತುಗಳನ್ನೂ ದಕ್ಕಿಸಿಕೊಳ್ಳುತ್ತಾನೆ. 1923ರಲ್ಲಿ ಹೆಮಿಂಗ್ವೆ ತನ್ನ ಅಮೆರಿಕದ ಕೆಲವು ಗೆಳೆಯರೊಂದಿಗೆ ಮೊತ್ತ ಮೊದಲ ಗೂಳಿ ಕಾಳಗವನ್ನು ವೀಕ್ಷಿಸುತ್ತಾನೆ. ಆಗ ಅಖಾಡವನ್ನು ಛೇದಿಸಿದ ಗೂಳಿಯ ಆ ಚಣದ ಆವೇಶ ಒಂದು ಅತ್ಯಂತ ವಿಶೇಷ ಅನುಭವವಾಗಿ ಹೆಮಿಂಗ್ವೆಯೊಳಗೆ ಕಡೆಗಾಲದವರೆಗೂ ಅಚ್ಚಳಿಯದೆ ಉಳಿದುಬಿಡುತ್ತದೆ. ಅದು ಅವನಿಂದ ‘ಡೆತ್ ಇನ್ ದ ಆಫ್ಟರ್ನೂನ್’, ‘ದ ಅನ್ಡಿಫೀಟೆಡ್’ ಮುಂತಾದ ಗೂಳಿ ಕಾಳಗದ ವಸ್ತುವುಳ್ಳ ಅನೇಕ ಅದ್ಭುತ ಕಥೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಇದೇ ಹೊತ್ತಲ್ಲಿ ಸ್ಪೇನಿನ ಮೋಹಕ್ಕೊಳಗಾಗುತ್ತಾನೆ. ಸ್ಪೇನಿನ ಪದ್ಧತಿಗಳು, ಅದರ ಭೂದೃಶ್ಯಗಳು, ಅದರ ಕಲಾ ವೈಭವಗಳು ಹಾಗೂ ಅಲ್ಲಿ ಜನ ಮತ್ತು ಜನಜೀವನಕ್ಕೆ ಮಾರುಹೋಗುತ್ತಾನೆ. 1936ರ ಜುಲೈ ಕೊನೆಯ ವಾರದಲ್ಲಿ ಸ್ಪೇನಿನ ಆಂತರಿಕ ಯುದ್ಧ ಸ್ಫೋಟಗೊಂಡಾಗ ಹೆಮಿಂಗ್ವೆ ಸ್ಪೇನಿನ ನಿಷ್ಠಾವಂತರ ವಿಶ್ವಾಸಾರ್ಹ ಸಮರ್ಥಕನಾಗುತ್ತಾನೆ. ಅವರ ಉದ್ದೇಶಕ್ಕೆ ಪೂರಕವಾಗಿ ನಿಂತು ಉತ್ತರ ಅಮೆರಿಕದ ಪತ್ರಿಕೆಯೊಂದಕ್ಕೆ ಯುದ್ಧದ ವರದಿಗಾರನಾಗಿ ವರದಿಗಳನ್ನು ಬರೆಯುತ್ತಾನೆ. ಆಗಿನ ಅವನ ಸ್ಪೇನಿನ ಒಟ್ಟು ಯುದ್ಧಾನುಭವಗಳು ಬಹು ಮುಖ್ಯವಾಗಿ ‘ಫಾರ್ ಹೂಂ ದ ಬೆಲ್ ಟೋಲ್ಸ್’ ಅನ್ನುವ ಕಾದಂಬರಿಯಲ್ಲೂ, ‘ಫಿಫ್ತ್ ಕಾಲಂ’ ಅನ್ನುವ ನಾಟಕದಲ್ಲೂ ಹಾಗೂ ಸುಮಾರು ಏಳೆಂಟು ಕಥೆಗಳಲ್ಲಿ ಅನಾವರಣಗೊಂಡಿವೆ. ಅದು ಹೆಮಿಂಗ್ವೆ ಬರವಣಿಗೆಯ ಬಹುಮುಖ್ಯ ಕಾಲ ಘಟ್ಟ ಕೂಡಾ ಆಗಿತ್ತು. 1933ರಲ್ಲಿ ಹೆಮಿಂಗ್ವೆಯ ಎರಡನೆಯ ಹೆಂಡತಿ ಪಾಲೀ ಫೈಫರ್ ತಾಯಿಯ ಶ್ರೀಮಂತ ಸೋದರ ಗಾಸ್ ಫೈಫರ್ ಹೆಮಿಂಗ್ವೆಗೆ ಆಫ್ರಿಕನ್ ಸಫಾರಿಯೊಂದಕ್ಕೆ ಅವಕಾಶ ಒದಗಿಸಿಕೊಡುತ್ತಾನೆ. ಸುಮಾರು ಹತ್ತು ವಾರಗಳ ಕಾಲ ನಡೆದ ಆ ಸಫಾರಿ ಹೆಮಿಂಗ್ವೆಯ ಮನಸ್ಸನ್ನು ಸೂರೆಗೊಂಡು ಬಿಡುತ್ತದೆ. ಅವನ ಮನಸ್ಸಿನ ಮೇಲೆ ಅಳಿಸಲಾರದ ಪ್ರಭಾವ ಬೀರುತ್ತದೆ. ಅದರ ತರುವಾಯ ಅವನು ತನ್ನ ಕಾಲ್ಪನಿಕವಲ್ಲದ ವಸ್ತು ಕೃತಿಯಾದ ‘ಗ್ರೀನ್ ಹಿಲ್ಸ್ ಆಫ್ ಅಮೆರಿಕ’ ಬರೆಯುತ್ತಾನೆ. ಅದೇ ರೀತಿ ಅನೇಕ ಬಹುಮುಖ್ಯ ಕಥೆಗಳಿಗೆ ಕಾರಣವಾಗುತ್ತದೆ. ಅವುಗಳಲ್ಲಿ ‘ಶಾರ್ಟ್ ಹ್ಯಾಪಿ ಲೈಫ್ ಆಫ್ ಫ್ರ್ಯಾನ್ಸಿಸ್ ಮೆಕಾಂಬರ್’, ‘ದ ಸ್ನೋಝ್ ಆಫ್ ಕಿಲಮಾಂಜಾರೋ’ ಅಂತೆಯೇ ಹೆಮಿಂಗ್ವೆಯ ಮರಣಾನಂತರ 1986ರಲ್ಲಿ ಪ್ರಕಟಗೊಂಡ ‘ದ ಗಾರ್ಡನ್ ಆಫ್ ಈಡನ್’ ಕಾದಂಬರಿಯಲ್ಲಿ ಒಂದು ಭಾಗವಾಗಿರುವ ‘ಯಾನ್ ಆಫ್ರಿಕನ್ ಸ್ಟೋರಿ’ ಮುಖ್ಯವಾದವುಗಳು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಹೆಮಿಂಗ್ವೆ ನಾಮಂಡಿ ಆಕ್ರಮಣಗಳು ಹಾಗೂ ಪ್ಯಾರಿಸ್ ವಿಮೋಚನೆಯ ಕುರಿತು ಯುದ್ಧ ವರದಿಗಾರನಾಗಿ ಕೆಲಸ ಮಾಡುತ್ತಾನೆ. ಆ ಅನುಭವ ‘ಬ್ಲ್ಯಾಕ್ ಆ್ಯಸ್ ಅಟ್ ದ ಕ್ರಾಸ್’ ಮುಂತಾದ ಕಥೆಗಳ ಬರವಣಿಗೆಗೆ ಕಾರಣವಾಗುತ್ತದೆ. ಕಡೆಗಾಲದಲ್ಲಿ ಹೆಮಿಂಗ್ವೆ ತನ್ನ ಗೆಳೆಯನ ಮಕ್ಕಳಿಗಾಗಿ ‘ದ ಗುಡ್ ಲಯನ್’ ಮತ್ತು ‘ದ ಫೇತ್ಫುಲ್ ಬುಲ್’ ಎಂಬ ಎರಡು ನೀತಿ ಕಥೆಗಳನ್ನು ಬರೆಯುತ್ತಾನೆ.
ಇಂಥ ಅಗಾಧ ಪ್ರತಿಭೆಯ, ಅಪಾರ ಜೀವನ ಪ್ರೀತಿಯ ಹೆಮಿಂಗ್ವೆ ಹುಟ್ಟಿದ್ದು ಜುಲೈ 21, 1899 ಅಮೆರಿಕದ ಓಕ್ ಪಾರ್ಕ್ನ ಇಲಿನಾಯ್ನಲ್ಲಿ. ತಂದೆ ಕ್ಲ್ಯಾರೆನ್ಸ್ ಎಡ್ಮಂಡ್ಸ್ ಹೆಮಿಂಗ್ವೆ. ತಾಯಿ ಗ್ರೇಸ್ ಹಾಲ್. ತಂದೆ ಒಬ್ಬ ಹಳ್ಳಿಯ ಡಾಕ್ಟರ್ ಆಗಿದ್ದ. ತಾಯಿ ಮಾಜಿ ಹಾಡುಗಾರ್ತಿ ಹಾಗೂ ಸಂಗೀತದ ಶಿಕ್ಷಕಿಯಾಗಿದ್ದಳು. ಇಡೀ ಕುಟುಂಬ ಗ್ರೇಸ್ ಹಾಲ್ನ ಹಿಡಿತದಲ್ಲಿತ್ತು. ಹೆಂಡತಿಗೆ ಹೆದರುತ್ತಿದ್ದ ಎಡ್ಮಂಡ್ಸ್ ಹೆಮಿಂಗ್ವೆ ಆರ್ಥಿಕ ಹಾಗೂ ಮಾನಸಿಕ ತೊಂದರೆಗಳಿಂದ ಖಿನ್ನತೆಗೊಳಗಾಗಿ ಮನೆಯಲ್ಲಿದ್ದ ಬಂದೂಕಿನಿಂದ 1928ರಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಹೆಮಿಂಗ್ವೆ ಇಪ್ಪತ್ತೊಂಭತ್ತು ವರ್ಷದ ಯುವಕನಾಗಿದ್ದ. ಅಪ್ಪನ ಸಾವು ಲೇಖಕ ಹೆಮಿಂಗ್ವೆಯನ್ನು ತುಂಬಾ ಕಾಡಿದ್ದಲ್ಲದೆ ಅದು ಅವನ ತಾಯಿಯ ಬಗೆಗಿನ ಮಮಕಾರವನ್ನೇ ಹೊಸಕಿ ಹಾಕುತ್ತದೆ. ಜೊತೆಗೆ ಅವನೊಳಗೂ ಆತ್ಮಹತ್ಯೆಯ ಪ್ರವೃತ್ತಿ ಮೆಲ್ಲಗೆ ಬೆಳೆಯುತ್ತಾ ಹೋಗುತ್ತದೆ. ಇದು ಅವನ ‘ಫಾರ್ ಹೂಂ ಬೆಲ್ ಟೋಲ್ಸ್’ ಅನ್ನುವ ಕಾದಂಬರಿಯಲ್ಲಿ ಪಾತ್ರವೊಂದರ ಸೃಷ್ಟಿಗೂ ಕಾರಣವಾಗುತ್ತದೆ. ಆ ಕಾದಂಬರಿಯಲ್ಲಿ ಮುಖ್ಯ ಪಾತ್ರವೊಂದರ ಅಪ್ಪಹೀಗೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಪ್ರಶಸ್ತಿಗಳನ್ನು ಯಾವತ್ತೂ ತಲೆಗೇರಿಸಿಕೊಳ್ಳದೆ, ಸಾರ್ವಜನಿಕ ವೇದಿಕೆಗಳು ಹಾಗೂ ಭಾಷಣಗಳಿಂದ ದೂರವೇ ಉಳಿದಿದ್ದ ಹೆಮಿಂಗ್ವೆ ಮನುಷ್ಯತೋರಿಕೆಯ ಬದುಕು ಮತ್ತು ಬರವಣಿಗೆಗಳಿಂದ ಕಿರಿಕಿರಿಗೊಳ್ಳುತ್ತಿದ್ದ. ಅವನ ಕಡೆಯ ದಿನಗಳಲ್ಲಿ ದೈಹಿಕವಾಗಿ ಸೊರಗಿದ್ದ ಹಾಗೂ ಮಾನಸಿಕವಾಗಿ ತುಂಬಾ ಖಿನ್ನತೆಗೊಳಗಾಗಿದ್ದ ಹಾಗೂ ಬರವಣಿಗೆ ಮಾಡಲಾಗುತ್ತಿಲ್ಲ ಅನ್ನುವ ಸಂಕಟದಲ್ಲಿದ್ದ ಹೆಮಿಂಗ್ವೆಯನ್ನು ಹಲವು ಸಲ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಅವನ ನಾಲ್ಕನೇ ಹೆಂಡತಿ ಮೇರಿ ವೆಲ್ಷ್ ಕಡೆಯ ಸಲ ಅವನನ್ನು ಆಸ್ಪತ್ರೆಯಿಂದ ಕರೆತಂದಾಗ ಅವನು ಕೆಚಮ್ನ ಐಡಹೋದಲ್ಲಿನ ಹೊಸ ಮನೆಯಲ್ಲಿ ಜುಲೈ 2, 1961ರಲ್ಲಿ ಬೆಳಗ್ಗೆ ಏಳು ಗಂಟೆಗೆ ಅವನ ಅಪ್ಪನ ಮಾದರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆವತ್ತು ಬೆಳಗ್ಗೆ ತುಂಬಾ ಬೇಗ ಎದ್ದಿದ್ದ ಹೆಮಿಂಗ್ವೆ ನೀಲಿ ಪೈಜಾಮ್ ಹಾಗೂ ಮೇರಿ ವೆಲ್ಷ್ ಇಟಲಿಯಿಂದ ಹೊಲಿಸಿ ತರಿಸಿದ್ದ ಕೆಂಪು ನಿಲುವಂಗಿಯನ್ನು ತೊಟ್ಟು ಅಡುಗೆ ಮನೆಯ ತೊಳೆಮರಿಗೆಯ ಹಿಂಬದಿಯಲ್ಲಿದ್ದ ಕಿಟಕಿಯ ಹಲಗೆಗೆ ನೇತಾಕಿದ್ದ ಕೀಲಿಗಳನ್ನು ತೆಗೆದುಕೊಂಡು ಕೆಳಮಾಳಿಗೆಯಲ್ಲಿ ಬಂದೂಕುಗಳನ್ನಿಟ್ಟಿದ್ದ ಸ್ಟೋರ್ರೂಮಿನ ಬೀಗವನ್ನು ತೆಗೆದು ಸಣ್ಣ ಬಂದೂಕೊಂದನ್ನು ಎತ್ತಿಕೊಂಡು ಮೇಲಿನ ಮಹಡಿಯ ಪ್ರವೇಶದ್ವಾರಕ್ಕೆ ಬಂದು ಅಲ್ಲಿ ಬಾಗಿ ನಿಂತು ಬಂದೂಕಿನ ತುದಿಯನ್ನು ಹಣೆಗೆ ಸರಿಯಾಗಿ ಇಟ್ಟುಕೊಂಡು ಅದರ ಟ್ರಿಗರನ್ನು ಒತ್ತಿ ಗುಂಡು ಹಾರಿಸಿಕೊಳ್ಳುತ್ತಾನೆ. ಆ ಮೂಲಕ ಹೆಮಿಂಗ್ವೆ ಎಂಬ ಹೆಂಗರುಳಿನ ಸೃಜನಶೀಲ ಒರತೆಯೊಂದು ಶಾಶ್ವತವಾಗಿ ಬತ್ತಿಹೋಗುತ್ತದೆ.
ಇಂಡಿಯನ್ ಕ್ಯಾಂಪ್ ಮತ್ತು ಇತರ ಕಥೆಗಳು
ಅನುವಾದ: ಎಸ್.ಗಂಗಾಧರಯ್ಯ
ಪ್ರ: ಬಿಸಿಲುಕೋಲು ಪ್ರಕಾಶನ
ಬೆಲೆ: 160, ಫೋನ್: 9448892305