ಭೂ ಮಾಫಿಯಾ ರಕ್ಷಣೆಗಾಗಿ ಕಾನೂನಿನ ತಿದ್ದುಪಡಿ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಸರಕಾರಿ ಭೂಮಿಯ ಕಬಳಿಕೆಯನ್ನು ತಡೆಯಲು ಜಾರಿಗೆ ತರಲಾಗಿದ್ದ 'ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ'ಗೆ ವಿಧಾನಸಭೆಯಲ್ಲಿ ತಿದ್ದುಪಡಿ ತಂದಿರುವುದು ಸರಕಾರದ ಜಮೀನನ್ನು ನುಂಗಿದವರನ್ನು ರಕ್ಷಿಸುವ ಉದ್ದೇಶದಿಂದ ಕೂಡಿದೆ ಎಂದರೆ ಅತಿಶಯೋಕ್ತಿಯಲ್ಲ. ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸರಕಾರದ ಭೂಮಿ ಒತ್ತುವರಿಯಾಗಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಅವರ ನೇತೃತ್ವದ ಶಾಸನಸಭೆಯ ಜಂಟಿ ಸದನ ಸಮಿತಿ ಹತ್ತು ವರ್ಷಗಳ ಹಿಂದೆಯೇ ಪತ್ತೆ ಹಚ್ಚಿತ್ತು. ಆಗಿನ ಬೆಲೆಯಲ್ಲಿ ಬೆಂಗಳೂರು ಜಿಲ್ಲಾ ಪ್ರದೇಶದ ವ್ಯಾಪ್ತಿಯಲ್ಲಿ ನಲವತ್ತು ಸಾವಿರ ಕೋಟಿ ರೂಪಾಯಿ ಸರಕಾರದ ಭೂಮಿ ಕಬಳಿಕೆಯಾಗಿದೆ ಎಂದು ಸದರಿ ಸಮಿತಿ ವರದಿ ನೀಡಿತ್ತು. ಇದಷ್ಟೇ ಅಲ್ಲ ರಾಜ್ಯಾದ್ಯಂತ ಲಕ್ಷಾಂತರ ಎಕರೆ ಸರಕಾರದ ಭೂಮಿ ಒತ್ತುವರಿಯಾಗಿದ್ದನ್ನು ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ನೇತೃತ್ವದಲ್ಲಿ ರಚಿಸಲಾಗಿದ್ದ ಸರಕಾರಿ ಜಮೀನುಗಳ ಕಾರ್ಯಪಡೆ ಗುರುತಿಸಿತ್ತು. ಜಂಟಿ ಸದನ ಸಮಿತಿ ಮತ್ತು ಕಾರ್ಯ ಪಡೆಗಳ ಶಿಫಾರಸಿನನ್ವಯ ಭೂಕಬಳಿಕೆ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಲಾಗಿತ್ತು. ಈ ಕಾಯ್ದೆಗೆ ಎಳ್ಳು ನೀರು ಬಿಟ್ಟು ಭೂ ಕಬಳಿಕೆ ಮಾಫಿಯಾವನ್ನು ರಕ್ಷಿಸಲು ಹೊರಟಿರುವ ರಾಜ್ಯದ ಬಿಜೆಪಿ ಸರಕಾರ ಅದಕ್ಕೆ ರೈತರನ್ನು ಗುರಾಣಿಯನ್ನಾಗಿ ಬಳಸಿಕೊಂಡಿದೆ. ಈ ಕಾಯ್ದೆಯಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಕುಂಟು ನೆಪ ಹೇಳುತ್ತಿದೆ. ಈ ತಿದ್ದುಪಡಿ ಪ್ರಕಾರ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಹಾಗೂ ರಾಜ್ಯದ ಎಲ್ಲಾ ನಗರ ಪಾಲಿಕೆಗಳ ವ್ಯಾಪ್ತಿಯ ಹೊರಗಿನ ಪ್ರದೇಶಗಳನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವ ಪ್ರದೇಶಗಳಲ್ಲಿನ ಭೂ ಕಬಳಿಕೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಮುಕ್ತಾಯಗೊಳಿಸುವ ಅಂಶವೂ ಈ ತಿದ್ದುಪಡಿ ವಿಧೇಯಕದಲ್ಲಿ ಅಡಕವಾಗಿದೆ.ಇದು ರೈತರ ಹಿತರಕ್ಷಣೆಯ ಹೆಸರಿನಲ್ಲಿ ಭೂ ಕಬಳಿಕೆ ಮಾಫಿಯಾವನ್ನು ರಕ್ಷಿಸುವ ಮತ್ತು ಅರಣ್ಯ ಹಾಗೂ ಪರಿಸರಗಳಿಗೆ ಧಕ್ಕೆ ತರುವ ಹುನ್ನಾರವಲ್ಲದೇ ಬೇರೇನೂ ಅಲ್ಲ.
ನಿಜ, ಈ ಕಾಯ್ದೆಯ ಅನುಷ್ಠಾನದಲ್ಲಿ ಕೆಲವು ಲೋಪಗಳಾಗಿವೆ. ನಗರಗಳು ಮಾತ್ರವಲ್ಲ ಹಾಗೂ ಸಣ್ಣಪುಟ್ಟ ಪಟ್ಟಣಗಳಲ್ಲೂ ಸರಕಾರಿ ಭೂಮಿ ಕಬಳಿಕೆ ವ್ಯಾಪಕವಾಗಿ ನಡೆಯುವುದನ್ನು ತಪ್ಪಿಸಲು ಈ ಕಾಯ್ದೆಯನ್ನು ತರಲಾಯಿತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಭೂಮಿಯನ್ನು ಲಪಟಾಯಿಸುವ ದಗಾಕೋರರನ್ನು ದಂಡಿಸುವುದು ಈ ಕಾಯ್ದೆಯ ಗುರಿಯಾಗಿತ್ತು. ಆದರೆ ಅಧಿಕಾರಶಾಹಿ ಇದನ್ನು ಸರಿಯಾಗಿ ಜಾರಿಗೆ ತರಲಿಲ್ಲ. ಭೂಗಳ್ಳರನ್ನು ಪತ್ತೆ ಹಚ್ಚಿ ದಂಡಿಸುವ ಬದಲಾಗಿ ಸಣ್ಣಪುಟ್ಟ ರೈತರನ್ನು ಅವರು ಉಳುಮೆ ಮಾಡುತ್ತಿದ್ದ ಭೂಮಿಯಿಂದ ಹೊರದಬ್ಬುವ ಮೂಲಕ ಅಧಿಕಾರಿಗಳು ಸದರಿ ಕಾನೂನನ್ನು ದುರ್ಬಳಕೆ ಮಾಡಿಕೊಂಡರು. ತಪ್ಪುಕಾನೂನಿನದ್ದಲ್ಲ, ಇದನ್ನು ತಮ್ಮ ಮನ ಬಂದಂತೆ ಜಾರಿಗೆ ತಂದ ಅಧಿಕಾರಿಗಳದ್ದು. ಇಂತಹ ಸನ್ನಿವೇಶದಲ್ಲಿ ಅಧಿಕಾರಿಗಳು ಮಾಡಿದ ತಪ್ಪುಗಳನ್ನು ಸರಿಪಡಿಸುವ ಬದಲಾಗಿ ಸರಕಾರ ಭೂಗಳ್ಳರನ್ನು ನಿಗ್ರಹಿಸುವ ಕಾಯ್ದೆಯನ್ನೇ ದುರ್ಬಲಗೊಳಿಸಲು ಹೊರಟಿದೆ. ಇದು ಸರಿಯಲ್ಲ.
ರೈತರು ತಮ್ಮ ಉಪಜೀವನಕ್ಕಾಗಿ ಸಾಗುವಳಿ ಮಾಡುತ್ತಿರುವ ಮೂರು ಎಕರೆ ವರೆಗಿನ ಸರಕಾರದ ಭೂಮಿ ಒತ್ತುವರಿಯನ್ನು ತೆರವುಗೊಳಿಸಬಾರದೆಂದು ಸರಕಾರ 2015ರಲ್ಲೇ ತೀರ್ಮಾನಿಸಿದೆ. ಆದ್ದರಿಂದ ಇಂತಹ ರೈತರ ವಿರುದ್ಧ ಭೂ ಕಬಳಿಕೆ ನಿರ್ಬಂಧ ತಡೆ ಶಾಸನದನ್ವಯ ಪ್ರಕರಣ ದಾಖಲಿಸುವುದನ್ನು ತಡೆಯಲು ಸಾಧ್ಯವಾಗುತ್ತದೆ. ಈಗಲೂ ಅಂತಹ ಸಣ್ಣಪುಟ್ಟ ರೈತರ ಮೇಲೆ ಪ್ರಕರಣ ದಾಖಲಾಗಿದ್ದರೆ ಸರಕಾರ ಅದನ್ನು ಕೈ ಬಿಡಬಹುದು. ಆದರೆ ಸರಕಾರ ಇದೇ ನೆಪ ಹೇಳಿ ಕಾನೂನಿಗೆ ತಿದ್ದುಪಡಿ ತಂದು ದಗಾಕೋರ ಭೂಗಳ್ಳರನ್ನು ಕಾಪಾಡಲು ಹೊರಟಿರುವುದು ಅನ್ಯಾಯದ ಪರಮಾವಧಿಯಲ್ಲವೇ?.
ಭೂಕಬಳಿಕೆ ಈಗ ಕೇವಲ ನಗರ ಪಾಲಿಕೆಗಳ ವ್ಯಾಪ್ತಿಗೆ ಸೀಮಿತವಾಗಿ ಉಳಿದಿಲ್ಲ. ರಿಯಲ್ ಎಸ್ಟೇಟ್ ಜಾಲ ರಾಜ್ಯದ ಎಲ್ಲೆಡೆ ವ್ಯಾಪಿಸಿದೆ. ನಕಲಿ ದಾಖಲೆಯನ್ನು ಸೃಷ್ಟಿಸಿ ಸರಕಾರದ ಭೂಮಿಯನ್ನು ಲಪಟಾಯಿಸುತ್ತಿರುವವರಿಗೆ ಅಧಿಕಾರದಲ್ಲಿ ಇರುವ ರಾಜಕಾರಣಿಗಳ ಆಶೀರ್ವಾದವೂ ಇದೆ. ಗ್ರಾಮೀಣ ಪ್ರದೇಶವೂ ಇದಕ್ಕೆ ಹೊರತಾಗಿಲ್ಲ. ಭೂಕಬಳಿಕೆ ಕಾಯ್ದೆ ಜಾರಿಗೆ ಬಂದ ನಂತರ ಆರಂಭದಲ್ಲಿ ಸರಕಾರದ ಭೂಮಿ ಒತ್ತುವರಿ ಕಡಿಮೆಯಾಗಿದ್ದರೂ ರಾಜ್ಯದಲ್ಲಿ ಸದರಿ ಕಾನೂನು ಜಾರಿಯ ನಂತರವೂ ಎರಡು ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಈಗ ಸರಕಾರದ ಜಮೀನಿನಲ್ಲಿರುವ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಜೊತೆ ಜೊತೆಗೆ ಭೂ ಕಬಳಿಕೆ ನಿರ್ಬಂಧ ಕಾಯ್ದೆಯ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಹೊರಗಿಡಲು ಹೊರಟಿರುವುದು ಅರಣ್ಯ ಭೂಮಿಯ ಒತ್ತುವರಿಗೆ ಅವಕಾಶ ಮಾಡಿ ಕೊಟ್ಟಂತಾಗುತ್ತದೆ.
ರಾಜ್ಯದ ಬಿಜೆಪಿ ಸರಕಾರ ಭೂ ಮಾಫಿಯಾದ ಒತ್ತಡಕ್ಕೆ ಮಣಿದಿರುವಂತೆ ಕಾಣುತ್ತದೆ. ಈ ತಿದ್ದುಪಡಿಯ ದುಷ್ಪರಿಣಾಮ ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣದ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಮೇಲೂ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.
ಕಾಫಿ ತೋಟಗಳ ಮಾಲಕರ ಒತ್ತುವರಿ ಹಾಗೂ ಅನಧಿಕೃತ ಸಾಗುವಳಿಯಿಂದಾಗಿ ರೆಸಾರ್ಟ್‌ಗಳ ಹಾವಳಿ ಹೆಚ್ಚಾಗಿದ್ದು ಪಶ್ಚಿಮ ಘಟ್ಟ ಪ್ರದೇಶ ಈಗಾಗಲೇ ನಲುಗುತ್ತಿದೆ.ಈಗ ಗ್ರಾಮೀಣ ಪ್ರದೇಶದಲ್ಲಿ ಸರಕಾರದ ಭೂಮಿ ಒತ್ತುವರಿಗೆ ಅವಕಾಶ ಕಲ್ಪಿಸಿರುವ ತೀರ್ಮಾನ ರಾಜ್ಯದ ಅರಣ್ಯ ಪ್ರದೇಶದಲ್ಲಿ ಕೆಟ್ಟ ಪರಿಣಾಮ ಬೀರಲಿದೆ. ರೈತರ ಹೆಸರಿನಲ್ಲಿ ಭೂಗಳ್ಳರ ಹಿತಾಸಕ್ತಿಗಳನ್ನು ರಕ್ಷಿಸಲು ಹೊರಟಿರುವುದು ಸರಕಾರಕ್ಕೆ ಶೋಭೆ ತರದು. ಈಗ ವಿಧಾನ ಸಭೆಯಲ್ಲಿ ಮಂಡಿಸಲಾದ ಈ ತಿದ್ದುಪಡಿ ವಿಧೇಯಕ ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ತರಲಾಗಿದೆ ಎಂದು ಹೇಳಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಪ್ರತಿಪಕ್ಷಗಳು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ಈ ತಿದ್ದುಪಡಿಯ ಬಗ್ಗೆ ವಿವರವಾಗಿ ಉಭಯ ಸದನಗಳಲ್ಲಿ ಚರ್ಚೆ ನಡೆದ ನಂತರವೇ ಒಂದು ತೀರ್ಮಾನಕ್ಕೆ ಬರಬೇಕು.