ಮೊದಲ ಟ್ವೆಂಟಿ-20: ಭಾರತವನ್ನು ಮಣಿಸಿದ ಆಸ್ಟ್ರೇಲಿಯ
ಗ್ರೀನ್ 61 ರನ್, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್ ಅರ್ಧಶತಕ ವ್ಯರ್ಥ
Photo: Twitter/@ICC
ಮೊಹಾಲಿ, ಸೆ.20: ಮೊದಲ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಭಾರತವನ್ನು 4 ವಿಕೆಟ್ಗಳ ಅಂತರದಿಂದ ಮಣಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 209 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ 19.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದೆ.
ಆರಂಭಿಕ ಬ್ಯಾಟರ್ ಕ್ಯಾಮರೂನ್ ಗ್ರೀನ್(61 ರನ್, 30 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ವಿಕೆಟ್ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್(ಔಟಾಗದೆ 45 ರನ್,21 ಎಸೆತ,6 ಬೌಂಡರಿ, 2 ಸಿಕ್ಸರ್) ಆಸ್ಟ್ರೇಲಿಯದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ಸ್ಟೀವನ್ ಸ್ಮಿತ್(35 ರನ್, 24 ಎಸೆತ, 3 ಬೌಂ., 1 ಸಿ.)ಆ್ಯರೊನ್ ಫಿಂಚ್(22 ರನ್,13 ಎಸೆತ, 3 ಬೌಂ., 1 ಸಿ.), ಟಿಮ್ ಡೇವಿಡ್(18 ರನ್, 14 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.
ಸ್ಮಿತ್ ಹಾಗೂ ಗ್ರೀನ್ 2ನೇ ವಿಕೆಟ್ಗೆ 70 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. 6ನೇ ವಿಕೆಟಿಗೆ 62 ರನ್ ಜೊತೆಯಾಟ ನಡೆಸಿದ ವೇಡ್ ಹಾಗೂ ಡೇವಿಡ್ ಆಸ್ಟ್ರೇಲಿಯವನ್ನು ಗೆಲುವಿನತ್ತ ಮುನ್ನಡೆಸಿದರು.
ಭಾರತದ ಪರ ಸ್ಪಿನ್ನರ್ ಅಕ್ಷರ್ ಪಟೇಲ್(3-17) ಹಾಗೂ ವೇಗದ ಬೌಲರ್ ಉಮೇಶ್ ಯಾದವ್(2-27)ಐದು ವಿಕೆಟ್ಗಳನ್ನು ಹಂಚಿಕೊಂಡರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು .ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (ಔಟಾಗದೆ 71 ರನ್, 30 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್(55 ರನ್,35 ಎಸೆತ, 4 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ತಂಡಕ್ಕೆ ಮೊದಲ ಪಂದ್ಯದ ಗೆಲುವಿಗೆ 209 ರನ್ ಗುರಿ ನೀಡಿತ್ತು.