ಪಿಎಸ್ಸೈ ನೇಮಕಾತಿ ಅಕ್ರಮ: ಎತ್ತಿಗೆ ಜ್ವರ, ಎಮ್ಮೆಗೆ ಬರೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಿಎಸ್ಸೈ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಆರೋಪಿಗಳಿಗೆ ಶಿಕ್ಷೆಯಾಗುತ್ತದೆಯೋ ಇಲ್ಲವೋ ಆದರೆ, ಯಾವುದೇ ತಪ್ಪೆಸಗದ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗಂತೂ ಶಿಕ್ಷೆ ಘೋಷಣೆಯಾಗಿದೆ. ಇಂದಿನ ದಿನಗಳಲ್ಲಿ ಯುವಕರಿಗೆ ಉದ್ಯೋಗ ದೊರಕುವುದೇ ಕಷ್ಟ ಎನ್ನುವ ಸ್ಥಿತಿಯಿದೆ. ಅದರಲ್ಲೂ ಸರಕಾರಿ ಉದ್ಯೋಗವಂತೂ ಗಗನ ಕುಸುಮವಾಗಿದೆ. ಇಂತಹ ಸಂದರ್ಭದಲ್ಲಿ ಪಿಎಸ್ಸೈ ಹುದ್ದೆಗಾಗಿ ಈ ರಾಜ್ಯದ ನೂರಾರು ತರುಣ, ತರುಣಿಯರು ಹಗಲು ರಾತ್ರಿ ಎನ್ನದೇ ತಯಾರಿ ನಡೆಸಿ ಪರೀಕ್ಷೆ ಎದುರಿಸಿ ಅದರಲ್ಲಿ ಆಯ್ಕೆಯಾಗಿದ್ದಾರೆ. ಮಾಡಿದ ಸಾಧನೆಗಳಿಗಾಗಿ ಹಲವರ ಭಾವಚಿತ್ರಗಳು ನಾಡಿನ ಪತ್ರಿಕೆಗಳಲ್ಲಿ ರಾರಾಜಿಸಿದವು. ಇವರಲ್ಲಿ ಬಹುತೇಕರು ಮಧ್ಯಮ ವರ್ಗಕ್ಕೆ ಸೇರಿದವರು. ಈ ಹುದ್ದೆ ಅವರ ಕೈಗೆಟಕುವಷ್ಟರಲ್ಲಿ, ಅದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಆದರೆ ಯಾವಾಗ ಪಿಎಸ್ಸೈ ನೇಮಕಾತಿಯಲ್ಲಿ ರಾಜಕೀಯ ಹಿನ್ನೆಲೆಯಿರುವ ಕೆಲವು ಪ್ರಮುಖರು ಮಾಡಿರುವ ಅಕ್ರಮಗಳು ಹೊರ ಬಿದ್ದವೋ, ತಪ್ಪೇ ಮಾಡದ ಅರ್ಹ ಅಭ್ಯರ್ಥಿಗಳೆಲ್ಲ ತಮಗೆ ದೊರಕಿದ ಹುದ್ದೆಗಳನ್ನು ಕಳೆದುಕೊಳ್ಳಬೇಕಾಯಿತು.
ಇದೀಗ ಸರಕಾರ ಪಿಎಸ್ಸೈ ಹುದ್ದೆಗಾಗಿ ಮರು ಪರೀಕ್ಷೆಯನ್ನು ಮಾಡಲು ಮುಂದಾಗಿದೆ. ಇದನ್ನು ವಿರೋಧಿಸಿ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮುಖ್ಯವಾಗಿ ಪಿಎಸ್ಸೈ ಅಕ್ರಮ ಪರೀಕ್ಷೆಯಲ್ಲಿ ನಿರ್ದಿಷ್ಟ ಕೆಲವು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯೊಳಗಿರುವ ಅಧಿಕಾರಿಗಳೇ ಸಹಕರಿಸಿದ್ದಾರೆ. ಹಾಗೂ ಕೆಲವು ರ್ಯಾಂಕ್ ವಿಜೇತ ಅಭ್ಯರ್ಥಿಗಳನ್ನು ತನಿಖಾ ಅಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವಿದ್ಯಮಾನ ನಡೆದಿಲ್ಲ. ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅಭ್ಯರ್ಥಿಗಳನ್ನು ಗುರುತಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಹೀಗಿರುವಾಗ, ಉಳಿದ ಅರ್ಹ ಅಭ್ಯರ್ಥಿಗಳನ್ನು ಆರೋಪಿ ಸ್ಥಾನದಲ್ಲಿ ಯಾಕೆ ನಿಲ್ಲಿಸಬೇಕು? ಅವರೇಕೆ ಮತ್ತೆ ಹೊಸದಾಗಿ ಪರೀಕ್ಷೆಯನ್ನು ಎದುರಿಸಬೇಕು? ಎನ್ನುವ ಪ್ರಶ್ನೆಯನ್ನು ಅರ್ಹ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಈ ಪ್ರಶ್ನೆಯನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ, ಒಮ್ಮೆ ಆಯ್ಕೆಯಾದ ಅಭ್ಯರ್ಥಿಗಳು ಮತ್ತೊಮ್ಮೆ ಆಯ್ಕೆಯಾಗಬೇಕು ಎಂದೇನೂ ಇಲ್ಲ. ಯಾಕೆಂದರೆ ಸರಕಾರಿ ಹುದ್ದೆಗಳು, ಅದರ ಪ್ರಶ್ನೆಪತ್ರಿಕೆಗಳು, ಪರೀಕ್ಷೆ ಗಳು ಒಂದು ರೀತಿಯಲ್ಲಿ ಲಾಟರಿ ಇದ್ದ ಹಾಗೆ. ಕೆಲವೊಮ್ಮೆ ಅದೃಷ್ಟವೇ ನೇಮಕಾತಿಯನ್ನು ನಿರ್ಧರಿಸುತ್ತದೆ. ಹೀಗಿರುವಾಗ ಮುಂದಿನ ಬಾರಿ ಪರೀಕ್ಷೆಯನ್ನು ಎದುರಿಸುವಾಗ ಇದೇ ಅಭ್ಯರ್ಥಿಗಳು ಅನರ್ಹರಾಗಿ ಬಿಟ್ಟರೆ ಅದು ಅವರ ಮನಸ್ಸಿನ ಮೇಲೆ ಬೀರುವ ಪರಿಣಾಮ ತೀರಾ ಕೆಟ್ಟದಾಗಿರುತ್ತದೆ. ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಸರಕಾರದ ವೈಫಲ್ಯವಾಗಿದೆ. ಅದಕ್ಕಾಗಿ ಸರಕಾರವಷ್ಟೇ ಬೆಲೆ ತೆರಬೇಕು. ಇದಕ್ಕಾಗಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಬದುಕನ್ನು ಬಲಿಕೊಡಬಾರದು. ಇಷ್ಟಕ್ಕೂ ಪಿಎಸ್ಸೈಯಂತಹ ಹುದ್ದೆಗಳನ್ನು ಎದುರಿಸುವಾಗ ಅದಕ್ಕೆ ಎಷ್ಟೆಲ್ಲ ಸಿದ್ಧತೆ ನಡೆಸಬೇಕು, ಎಷ್ಟೆಲ್ಲ ಹಣ ಸುರಿಯಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಾಸ್ತವ.
ಕೆಲವೊಮ್ಮೆ ಪ್ರತಿಭೆ, ಅರ್ಹತೆಯಿದ್ದರೂ ಸಂಬಂಧ ಪಟ್ಟ ವರಿಗೆ ಹಲವು ಲಕ್ಷ ಚೆಲ್ಲದೇ ಇದ್ದರೆ ಆಯ್ಕೆ ನಡೆಯುವುದಿಲ್ಲ. ಪ್ರತಿಭೆ ಮತ್ತು ಅರ್ಹತೆಯ ಜೊತೆ ಜೊತೆಗೇ ಹಣ ನೀಡುವುದು ಅಘೋಷಿತ ನಿಯಮವಾಗಿ ಬಿಟ್ಟಿದೆ. ಮಧ್ಯಮ ವರ್ಗದಿಂದ ಬಂದ ಹಲವು ಅಭ್ಯರ್ಥಿಗಳು ಸಾಲ ಸೋಲ ಮಾಡಿ ಈ ಹಣವನ್ನು ಕಟ್ಟಿರುವ ಸಾಧ್ಯತೆಗಳಿವೆ. ಇದೀಗ ಏಕಾಏಕಿ ಮರು ಪರೀಕ್ಷೆ ಘೋಷಿಸಿದರೆ, ಇವರು ಚೆಲ್ಲಿದ ಹಣ ವಾಪಸಾಗುವುದಿಲ್ಲ. ಅಷ್ಟೇ ಅಲ್ಲ, ಇನ್ನೊಂದು ಬಾರಿ ಪರೀಕ್ಷೆ ಎದುರಿಸಿ ಅರ್ಹರಾದರೆ ಆಗಲೂ ಅವರು ಸಂಬಂಧ ಪಟ್ಟವರಿಗೆ ಅನಧಿಕೃತವಾಗಿ ಹಣವನ್ನು ಪಾವತಿಸಬೇಕಾಗುತ್ತದೆ. ಈ ಮರು ಪರೀಕ್ಷೆಯಿಂದ ಮಧ್ಯವರ್ತಿಗಳು ಪ್ರತಿಭಾವಂತ ಅಭ್ಯರ್ಥಿಗಳಿಂದ ಎರಡೆರಡು ಬಾರಿ ಹಣ ಸುಲಿಗೆ ಮಾಡುವುದಕ್ಕೆ ಅವಕಾಶ ನೀಡಿದಂತಾಗುತ್ತದೆ. ಸರಕಾರಿ ಉದ್ಯೋಗಗಳಿಗೆ ಆಯ್ಕೆ ಎನ್ನುವುದೇ ಅಕ್ರಮಗಳ ಗೂಡು. ಈ ಹಿಂದೆ ಅಕ್ರಮ ಬಯಲಿಗೆ ಬಂದಿಲ್ಲ ಎಂದಾಕ್ಷಣ ಅಲ್ಲಿ ಅಕ್ರಮ ನಡೆದೇ ಇಲ್ಲ ಎಂದು ಅರ್ಥವಲ್ಲ. ಅವರು ಅಕ್ರಮಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅರ್ಥ. ಹಿಂದೆ ನಡೆದಿರುವ ಅಕ್ರಮಗಳು ಮುಂದೆ ಎಂದಾದರೂ ಬಯಲಿಗೆ ಬರುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು. ಈ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಶಿಕ್ಷಣ ಇಲಾಖೆಯಲ್ಲಿ ನಡೆದ ಅವ್ಯವಹಾರ ಈಗ ಬೆಳಕಿಗೆ ಬರುತ್ತಿದೆ. ಇದರ ವಿರುದ್ಧ ತನಿಖೆ ನಡೆಸಬೇಕು ಎನ್ನುವ ಒತ್ತಡಗಳೂ ಕೇಳಿ ಬರುತ್ತಿದೆ. ಹಾಗಾದರೆ, ಆ ಸಂದರ್ಭದಲ್ಲಿ ಆಯ್ಕೆಯಾದ ಎಲ್ಲ ಶಿಕ್ಷಕರನ್ನು ವಜಾಗೊಳಿಸಬೇಕೆ? ಪಿಎಸ್ಸೈ ನೇಮಕಾತಿಗೆ ಮರು ಪರೀಕ್ಷೆಯನ್ನೇ ಸರಕಾರ ಹಮ್ಮಿಕೊಂಡಿತು ಎಂದು ಇಟ್ಟುಕೊಳ್ಳೋಣ. ಈ ಮರು ಪರೀಕ್ಷೆಯಲ್ಲೂ ಅಕ್ರಮಗಳು ನಡೆಯುವುದಿಲ್ಲ ಎಂದು ಸರಕಾರ ಭರವಸೆ ನೀಡಲು ಸಾಧ್ಯವೆ? ನಾಳೆ ಈ ಪರೀಕ್ಷೆಯಲ್ಲೂ ಅಕ್ರಮ ಬಯಲಾದರೆ ಇಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಗತಿಯೇನು? ಅವರೆಲ್ಲ ಮತ್ತೆ ಹೊಸದಾಗಿ ಪರೀಕ್ಷೆಯನ್ನು ಎದುರಿಸಬೇಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕವೇ ಸರಕಾರ ಮರು ಪರೀಕ್ಷೆಯ ಬಗ್ಗೆ ಆಲೋಚಿಸಬೇಕು.
ಒಂದು ವೇಳೆ ಮರು ಪರೀಕ್ಷೆ ಅನಿವಾರ್ಯ ಎಂದಾದರೆ, ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಸೂಕ್ತ ಪರಿಹಾರವನ್ನು ಸರಕಾರ ನೀಡಬೇಕು. ಯಾಕೆಂದರೆ ಅವರು ಇಂದು ಬೀದಿಗೆ ಬಿದ್ದಿರುವುದು ಸರಕಾರದ ವೈಫಲ್ಯದಿಂದಾಗಿ. ತನ್ನ ವೈಫಲ್ಯಕ್ಕಾಗಿ ಈವರೆಗೆ ಒಬ್ಬರೇ ಒಬ್ಬ ರಾಜಕಾರಣಿಯೂ ಸರಕಾರದ ವತಿಯಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಿಲ್ಲ. ವೈಫಲ್ಯ ತಮ್ಮದೇ ಇದ್ದರೂ ರಾಜೀನಾಮೆ ನೀಡಲು ರಾಜಕಾರಣಿಗಳು ಹಿಂದೇಟು ಹಾಕುತ್ತಿರುವಾಗ, ಹಗಲು ರಾತ್ರಿ ಓದಿ, ಪರೀಕ್ಷೆ ಬರೆದು ಸಾಧನೆ ಮಾಡಿದ ಅಭ್ಯರ್ಥಿಗಳು ತಾವು ಮಾಡದ ತಪ್ಪಿಗಾಗಿ ಯಾಕೆ ಕೆಲಸವನ್ನು ಕಳೆದುಕೊಳ್ಳಬೇಕು? ಅವರ ನೇಮಕಾತಿಯನ್ನು ಸರಕಾರ ಸ್ಥಗಿತಗೊಳಿಸಿದರೆ, ಅಕ್ರಮಗಳ ಕಳಂಕವನ್ನು ಆ ಅಭ್ಯರ್ಥಿಗಳೂ ಹೊತ್ತುಕೊಂಡಂತಾಗುತ್ತದೆ. ಪಿಎಸ್ಸೈಗಳ ಕೆಲಸ ಅತ್ಯುತ್ತಮ ಸಮಾಜವೊಂದನ್ನು ರೂಪಿಸುವುದು. ಹಲವು ಅಭ್ಯರ್ಥಿಗಳು ಆ ಹುದ್ದೆಯನ್ನು ತನ್ನದಾಗಿಸಿಕೊಳ್ಳಬೇಕು ಎಂದು ದಶಕಗಳಿಂದ ಅದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಆ ಹುದ್ದೆಯನ್ನು ನಿರ್ವಹಿಸಿ ಸಮಾಜಕ್ಕೆ ಅತ್ಯುತ್ತಮವಾದುದನ್ನು ಕೊಡಬೇಕು ಎಂದು ಕನಸು ಕಂಡವರಿದ್ದಾರೆ. ಆ ಕನಸುಗಳು ಕೆಲವು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದಾಗಿ ಭಗ್ನವಾಗುವ ಸ್ಥಿತಿಗೆ ಬಂದಿದೆ.
ಆ ಕಾರಣಕ್ಕಾಗಿಯೇ ಇದೀಗ ಅರ್ಹರು ಬೀದಿಯಲ್ಲಿ ನಿಂತು 'ಮರು ಪರೀಕ್ಷೆ ನಡೆಸದೇ ಅರ್ಹ ಅಭ್ಯರ್ಥಿಗಳ ನೇಮಕಾತಿ ನಡೆಸಬೇಕು' ಎಂದು ಒತ್ತಾಯಿಸುತ್ತಿದ್ದಾರೆ. ಯುವಕರ ಭವಿಷ್ಯದ ಬಗ್ಗೆ ಸರಕಾರಕ್ಕೆ ಒಂದಿಷ್ಟು ಕಾಳಜಿಯಿದೆಯೆಂದಾದರೆ ತಕ್ಷಣ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಅಥವಾ ತಾನು ಮಾಡಿದ ತಪ್ಪಿಗಾಗಿ ಅತಂತ್ರ ಸ್ಥಿತಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಮುಂದಿನ ಪರೀಕ್ಷೆಯಲ್ಲಿ ಆಯ್ಕೆಯಾಗದೇ ಇದ್ದರೂ, ಈ ಪರಿಹಾರ ಹಣದಿಂದ ಅವರು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಬಹುದು.