varthabharthi


ಕಾಲಂ 9

ಕಾಶ್ಮೀರ, ಆರ್ಟಿಕಲ್ 370 ಮತ್ತು ಅಂಬೇಡ್ಕರ್

ವಾರ್ತಾ ಭಾರತಿ : 21 Sep, 2022
ಶಿವಸುಂದರ್

photo: pti

ಇನ್ನು ಅಂಬೇಡ್ಕರ್ ಅವರಿಗೆ ಕಾಶ್ಮೀರದ ಬಗ್ಗೆ ಯಾವ ಅಭಿಪ್ರಾಯವಿತ್ತು ಎಂದು ಅರ್ಥ ಮಾಡಿಕೊಳ್ಳಲು ನೇರವಾಗಿ ಅವರ ಬರಹಗಳಿಗೆ ಮೊರೆ ಹೋಗಬೇಕು. ಅಂಬೇಡ್ಕರ್ ಅವರು ಪ್ರಜಾತಂತ್ರವಾದಿಯಾಗಿದ್ದು ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಹಕ್ಕಿನ ಪರವಾಗಿದ್ದವರು. ದೇಶದೊಳಗೆ ಊಳಿಗಮಾನ್ಯ ಶಕ್ತಿಗಳಿಗೆ ಹೆಚ್ಚಿಗೆ ಅಧಿಕಾರ ಕೊಡುವ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹಾಗೂ ಭಾಷಾವಾರು ಪ್ರಾಂತಗಳ ಬಗ್ಗೆ ಅವರಿಗೆ ತಕರಾರಿತ್ತು. ಆದರೆ ದೇಶಗಳ ನಡುವಿನ ರಾಷ್ಟ್ರೀಯತಾ ವಿಮೋಚನಾ ಪ್ರಶ್ನೆಯು ಎದುರಾದಾಗ ಅವರು ಸದಾ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಪರವಾಗಿದ್ದರು. ಇದನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅವರ Pakistan Or The Partition Of India ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು!


ಬ್ರಾಹ್ಮಣಶಾಹಿಯ ನಯವಂಚಕತನ ಹಾಗೂ ಕ್ರೌರ್ಯದ ಅತ್ಯುನ್ನತ ರೂಪವಾಗಿರುವ ಸಂಘಪರಿವಾರ ಚುನಾವಣಾ ಕಾರಣಗಳಿಗಾಗಿ ತನ್ನನ್ನು ಹಾಗೂ ನರೇಂದ್ರ ಮೋದಿಯವರನ್ನು ಅಂಬೇಡ್ಕರ್ ಅವರ ಶ್ರೇಷ್ಠ ಅನುಯಾಯಿ ಎಂದು ಬಿತ್ತರಿಸಿಕೊಳ್ಳುವ ವಿಫಲ ಪ್ರಯತ್ನಗಳನ್ನು ಮಾಡುತ್ತಲೇ ಇವೆ.

ಅದರ ಭಾಗವಾಗಿಯೇ ಮೊನ್ನ್ನೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ "Ambedkar and Modi- Reformer’s Ideas and Peroformer’s Implementation' (ಅಂಬೇಡ್ಕರ್ ಮತ್ತು ಮೋದಿ- ಸುಧಾರಕನ ಆದರ್ಶಗಳು ಮತ್ತು ಪರಿಪಾಲಕನ ಕಾರ್ಯಪಾಲನ) ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿಸಲಾಯಿತು. ಆ ಪುಸ್ತಕದಲ್ಲಿ ಮೋದಿ ಜಾರಿಗೆ ತಂದಿರುವ ಎಲ್ಲಾ ಯೋಜನೆ ಮತ್ತು ನೀತಿಗಳ ಹಿಂದೆ ಅಂಬೇಡ್ಕರ್ ಚಿಂತನೆಯ ಪ್ರೇರಣೆ ಇದೆ ಎಂದು ಸಂಘಪರಿವಾರ ಮಾಡಿರುವ ಮತ್ತು ಮಾಡುತ್ತಿರುವ ಎಲ್ಲಾ ಅನಾಹುತಗಳಿಗೂ ಅಂಬೇಡ್ಕರ್ ಕವಚ ತೊಡಿಸುವ ದುಷ್ಟ ಪ್ರಯತ್ನ ಮಾಡಲಾಗಿದೆ.

ಆ ಪುಸ್ತಕವನ್ನು ಬಿಡುಗಡೆ ಮಾಡುತ್ತಾ ಮಾತನಾಡಿದ ಮಾಜಿ ರಾಷ್ಟ್ರಪತಿ ಕೋವಿಂದ್ ಅವರು ಮೋದಿ ಸರಕಾರದ ಆರ್ಟಿಕಲ್ 370 ರದ್ದು ಮತ್ತು ಕಾಶ್ಮೀರ ನೀತಿಗಳು ಅಂಬೇಡ್ಕರ್ ಅವರ ಕನಸುಗಳೇ ಆಗಿದ್ದವು ಎಂದು ಸ್ಥಾನದ ಪರಿವೆಯೂ ಇಲ್ಲದೆ ಸಂಘಪರಿವಾರದ ತುತ್ತೂರಿಯನ್ನು ಊದಿದರು ಹಾಗೂ ವಿಶೇಷವಾಗಿ ಆರ್ಟಿಕಲ್ 370 ರದ್ದನ್ನೂ ಒಳಗೊಂಡಂತೆ ಮೋದಿಯವರ ಎಲ್ಲಾ ಕ್ರೂರ ಕಾಶ್ಮೀರ ನೀತಿಯು ಅಂಬೇಡ್ಕರ್ ಅವರ ಆದರ್ಶವೇ ಆಗಿತ್ತು ಎಂದು ಒತ್ತುಕೊಟ್ಟು ಹೇಳಿದರು.

ಇದು ಕಾಶ್ಮೀರ ಮತ್ತು ಅಂಬೇಡ್ಕರ್ ವಿಷಯದ ಬಗ್ಗೆ ಈವರೆಗೂ ಸಂಘಪರಿವಾರ ಹಬ್ಬಿಸಿಕೊಂಡು ಬಂದಿರುವ ಈ ಮೂರು ಸುಳ್ಳುಗಳ ಮುಂದುವರಿಕೆಯೇ ಆಗಿವೆ.

ಅವು: 1. ಅಂಬೇಡ್ಕರ್ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡಲು ಇಷ್ಟವಿರಲಿಲ್ಲ. ಆರ್ಟಿಕಲ್ 370 ರದ್ದು ಮಾಡುವುದು ಸರ್ದಾರ್ ಪಟೇಲ್ ಮತ್ತು ಅಂಬೇಡ್ಕರ್ ಇಬ್ಬರ ಕನಸೂ ಆಗಿತ್ತು. 2. ಆದ್ದರಿಂದಲೇ ಅಂಬೇಡ್ಕರ್ ಅವರು 370ನೇ ವಿಧಿಯನ್ನು ರಚಿಸಲು ಒಪ್ಪಿರಲಿಲ್ಲ ಮತ್ತು ತಮ್ಮ ಸಹಾಯ ಕೇಳಿ ಬಂದಿದ್ದ ಶೇಕ್ ಅಬ್ದುಲ್ಲಾ ಅವರನ್ನು ಗದರಿಸಿ ಕಳಿಸಿದ್ದರು.

3. ಅಂಬೇಡ್ಕರ್ ಅವರು ಆರೆಸ್ಸೆಸ್ಸಿಗರ ರೀತಿಯಲ್ಲೇ ಮುಸ್ಲಿಮ್ ವಿರೋಧಿ, ಕಾಶ್ಮೀರ ಪ್ರತ್ಯೇಕತಾ ವಿರೋಧಿ ಮತ್ತು ಪಾಕಿಸ್ತಾನ ವಿರೋಧಿ ದೇಶಭಕ್ತರಾಗಿದ್ದರು.
ಹೀಗಾಗಿ ಈ ಲೇಖನದಲ್ಲಿ ಆರ್ಟಿಕಲ್ 370 ಮತ್ತು ಕಾಶ್ಮೀರದ ಬಗ್ಗೆ ಅಂಬೇಡ್ಕರ್ ಅವರ ನಿಲುವೇನಾಗಿತ್ತು ಮತ್ತು ಮೇಲಿನ ಮೂರು ಪ್ರಚಾರಗಳ ಸತ್ಯಾಸತ್ಯತೆ ಏನು ಎಂದು ಅರಿಯುವ ಪ್ರಯತ್ನ ಮಾಡಲಾಗಿದೆ:

ಆರ್ಟಿಕಲ್ 370 ಮತ್ತು ಭಾರತದ ಸರ್ವಸಮ್ಮತಿ:
ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಅವರ ನೇರಾಳ್ವಿಕೆಯಲ್ಲಿದ್ದ ಪ್ರದೇಶಗಳು ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಗೊಂಡವು ಮತ್ತು ಉಳಿದ 480 ಸಂಸ್ಥಾನಗಳಿಗೆ ಭಾರತ ಅಥವಾ ಪಾಕಿಸ್ತಾನ ಸೇರುವ ಅಥವಾ ತಟಸ್ಥವಾಗುಳಿಯುವ ಅವಕಾಶವನ್ನು ನೀಡಲಾಗಿತ್ತು. ಆದರೆ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್ ಪ್ರತ್ಯೇಕವಾಗುಳಿಯುವ ತೀರ್ಮಾನ ಮಾಡಿದ್ದರು. ಅದಕ್ಕೆ ತದ್ವಿರುದ್ಧವಾಗಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಮ್ ರೈತಾಪಿ ಜನರು ಶೇಕ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಭಾರತವನ್ನು ಸೇರಬೇಕೆಂದು ರಾಜನ ಮೇಲೆ ಒತ್ತಾಯ ಹಾಕುತ್ತಿದ್ದರು. ಅದೇ ಸಮಯದಲ್ಲಿ ಪಾಕಿಸ್ತಾನ ಸರಕಾರದ ಬೆಂಬಲದೊಂದಿಗೆ ಗುಡ್ಡಗಾಡು ದಾಳಿಕೋರರು ಕಾಶ್ಮೀರದ ಮೇಲೆ ದಾಳಿ ಮಾಡಿದಾಗ ರಾಜ ಅನಿವಾರ್ಯವಾಗಿ ಭಾರತ ಸೈನ್ಯದ ಸಹಾಯ ಬೇಡಬೇಕಾಯಿತು.

ಆ ಕಾರಣದಿಂದಲೇ 1947ರ ಅಕ್ಟೋಬರ್ 27ರಂದು ಭಾರತ ಸರಕಾರ ಮತ್ತು ರಾಜ ಹರಿಸಿಂಗ್ ನಡುವೆ 'ಸೇರ್ಪಡೆ ಒಪ್ಪಂದ'ವಾಯಿತು. ಅದರ ಪ್ರಕಾರ ಕಾಶ್ಮೀರವು ಭಾರತಕ್ಕೆ ಸೇರಿಕೊಳ್ಳುತ್ತದೆ. ಆದರೆ ಕಾಶ್ಮೀರದ ಮೇಲೆ ಭಾರತ ಸರಕಾರದ ಅಧಿಕಾರ ಕೇವಲ ರಕ್ಷಣೆ, ವಿದೇಶಾಂಗ ಮತ್ತು ಸಂಪರ್ಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನುಳಿದ ಎಲ್ಲಾ ಅಧಿಕಾರಗಳು ಕಾಶ್ಮೀರದ ಜನ ರಚಿಸಿಕೊಳ್ಳುವ ಶಾಸನ ಸಭೆಗೆ ಸೇರಿರುತ್ತದೆ. ಕಾಶ್ಮೀರದ ಸಂವಿಧಾನ ಸಭೆ/ ಶಾಸನ ಸಭೆಯ ಒಪ್ಪಿಗೆ ಇಲ್ಲದೆ ಭಾರತವು ಇನ್ಯಾವುದೇ ಅಧಿಕಾರವನ್ನು ಕಾಶ್ಮೀರದ ಮೇಲೆ ಚಲಾಯಿಸುವಂತಿಲ್ಲ ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ ಮೇಲೆ ಕಾಶ್ಮೀರದ ಜನಾಭಿಪ್ರಾಯದ ಮೇರೆಗೇ ಈ ಒಪ್ಪಂದವನ್ನು ಶಾಶ್ವತಗೊಳಿಸಲಾಗುವುದು ಎಂಬುದು ಭಾರತ ಕೊಟ್ಟ ಆಶ್ವಾಸನೆಯಾಗಿತ್ತು ಹಾಗೂ ಆ ಸೇರ್ಪಡೆ ಒಪ್ಪಂದದ ತಾತ್ಪರ್ಯವೂ ಆಗಿತ್ತು.

ಭಾರತ ಸರಕಾರವು ರಾಜ ಹರಿಸಿಂಗ್ ಜೊತೆ ಈ ಒಪ್ಪಂದ ಮಾಡಿಕೊಳ್ಳುವಾಗ ಅಂಬೇಡ್ಕರ್ ಅವರೂ ಭಾರತ ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದರು. ಅವರು ಈ ಒಪ್ಪಂದದ ಬಗ್ಗೆ ಯಾವ ಆಕ್ಷೇಪಣೆಯನ್ನೂ ಮಾಡಿರಲಿಲ್ಲ. ಅಷ್ಟು ಮಾತ್ರವಲ್ಲ. ಇಂದಿನ ಬಿಜೆಪಿಯ ಪಿತಾಮಹ ಶ್ಯಾಮ ಪ್ರಸಾದ್ ಮುಖರ್ಜಿ ಕೂಡಾ ಆಗ ಇದರ ಬಗ್ಗೆ ಚಕಾರವೆತ್ತಿರಲಿಲ್ಲ. ಇನ್ನು ಇಂದು ಬಿಜೆಪಿ ಆರಾಧಿಸುವ ಸರ್ದಾರ್ ವಲ್ಲಭಭಾಯಿ ಪಟೇಲರೇ ಆ ಮಾತುಕತೆಯ ಒಟ್ಟಾರೆ ಉಸ್ತುವಾರಿ ವಹಿಸಿದ್ದರು.

ಆ ನಂತರದಲ್ಲಿ ಈ ಒಪ್ಪಂದವನ್ನು ಆರ್ಟಿಕಲ್ 370ರ (ಆಗ ಆರ್ಟಿಕಲ್ 306-ಎ) ರೂಪದಲ್ಲಿ ಭಾರತ ಸಂವಿಧಾನದಲ್ಲಿ ಸೇರಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಆ ಒಟ್ಟಾರೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವರು ಕಾಶ್ಮೀರದ ರಾಜನಿಂದ ಕಾಶ್ಮೀರದ ತಾತ್ಕಾಲಿಕ ಸರಕಾರದ ಮುಖ್ಯಸ್ಥರಾದ ಶೇಕ್ ಅಬ್ದುಲ್ಲಾ ಮತ್ತು ಇತರರು ಹಾಗೂ ಭಾರತ ಪ್ರಭುತ್ವದ ಕಡೆಯಿಂದ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಸದಸ್ಯರಾದ ಗೋಪಾಲ್‌ಸ್ವಾಮಿ ಅಯ್ಯಂಗಾರ್. ಇದರ ಬಹುಪಾಲು ಚರ್ಚೆಗಳು ವಲ್ಲಭಭಾಯಿ ಪಟೇಲರ ಗೃಹ ಕಚೇರಿಯಲ್ಲೇ ನಡೆಯುತ್ತಿದ್ದವು. ಆರ್ಟಿಕಲ್‌ನ ರಚನೆಯನ್ನು ಸಾಂವಿಧಾನಿಕವಾಗಿ ಮಾನ್ಯವಾಗಿಸುವ ಪ್ರಕ್ರಿಯೆಯ ಭಾಗವಾಗಿ 1949ರ ಮೇ ತಿಂಗಳಲ್ಲಿ ಭಾರತದ ಸಂವಿಧಾನ ಸಭೆಗೆ ಕಾಶ್ಮೀರದ ಪ್ರತಿನಿಧಿಗಳಾಗಿ ಶೇಕ್ ಅಬ್ದುಲ್ಲಾ, ಮಿರ್ಜಾ ಮುಹಮ್ಮದ್ ಅ್ಝಲ್ ಬೇಗ್, ಮೌಲಾನ ಮುಹಮ್ಮದ್ ಸಯ್ಯದ್ ಮಸೂದಿ ಮತ್ತು ಶ್ರೀ ಮೋತಿ ರಾಂ ಬಾಗ್ಡಾ ಅವರನ್ನು ಸೇರಿಸಿಕೊಳ್ಳಲಾಯಿತು. (Article 370- A Constitutional History Of Jammu And Kasmir- A.G. Noorani)

ಒಪ್ಪಿತ ಕರಡನ್ನು ಗೋಪಾಲ್‌ಸ್ವಾಮಿ ಅಯ್ಯಂಗಾರ್ ಅವರು 1949ರ ಅಕ್ಟೋಬರ್ 17ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂಬೇಡ್ಕರ್ ಅವರು ಆ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಮಾಡಲಿಲ್ಲ. ಅಷ್ಟು ಮಾತ್ರವಲ್ಲ ಅಂದು ಸಭೆಯಲ್ಲಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ, ವಲ್ಲಭಭಾಯಿ ಪಟೇಲರಾದಿಯಾಗಿ ಯಾರೂ ಅರ್ಧ ಸಾಲಿನ ತಿದ್ದುಪಡಿಯನ್ನೂ ಹೇಳಲಿಲ್ಲ. ಅಂದು ಭಾರತದ ಸಂವಿಧಾನದ ಪೀಠಿಕೆಯ ಬಗ್ಗೆ ಚರ್ಚೆ ಮಾಡಬೇಕಿದ್ದರಿಂದ ಈ ಆರ್ಟಿಕಲ್ ಸೇರ್ಪಡೆ ಮಾಡಲು ನಮ್ಮ ಸಂವಿಧಾನ ಸಭೆಯು ತೆಗೆದುಕೊಂಡ ಸಮಯ ಅರ್ಧ ದಿನಕ್ಕಿಂತಲೂ ಕಡಿಮೆ! (ಇವೆಲ್ಲವೂ ಸಂವಿಧಾನ ಸಭೆಯ ನಡಾವಳಿಯಲ್ಲಿ ದಾಖಲುಗೊಂಡಿದ್ದು ಆಸಕ್ತರು ಈ ವೆಬ್ ವಿಳಾಸದಲ್ಲಿ ಇದನ್ನು ಪರಿಶೀಲಿಸಬಹುದು: http://164.100.47.194/loksabha/writereaddata/cadebatefiles/C17101949.html)

ಶೇಕ್ ಅಬ್ದುಲ್ಲಾರನ್ನು ಗದರಿದರೆಂಬ ಆರೆಸ್ಸೆಸ್ ಪುಕಾರು:
ಹಾಗಿದ್ದಲ್ಲಿ ಅಂಬೇಡ್ಕರ್ ಅವರು ಆರ್ಟಿಕಲ್ 370 ರಚನೆ ಮಾಡಲು ಒಪ್ಪಿರಲಿಲ್ಲವೆಂಬ ಹಾಗೂ ಶೇಕ್ ಅಬ್ದುಲ್ಲಾ ಅವರನ್ನು ಗದರಿ ಕಳಿಸಿದರೆಂಬ ಪುಕಾರು ಎಲ್ಲಿಂದ ಹುಟ್ಟಿಕೊಂಡಿತು? ಇದರ ಬಗ್ಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆಯಲ್ಲಾಗಲೀ ಅಥವಾ ಅಂಬೇಡ್ಕರ್ ಆವರ ಬರಹ ಭಾಷಣಗಳ ಇಡೀ 17 ಸಂಪುಟಗಳಲ್ಲಾಗಲೀ ಅಥವಾ ಅವರ ಸಹಚರರ ಬರಹಗಳಲ್ಲಾಗಲೀ ಎಲ್ಲೂ ಉಲ್ಲೇಖವಿಲ್ಲ. ಇದರ ಬಗ್ಗೆ ಪ್ರಥಮ ಬಾರಿ ಉಲ್ಲೇಖವಾಗುವುದು 1991ರಲ್ಲಿ ಆರೆಸ್ಸೆಸ್‌ನ ಮುಖವಾಣಿಯಾದ 'ತರುಣ್ ಭಾರತ್' ಪತ್ರಿಕೆಯ ಸಂಪಾದಕೀಯದಲ್ಲಿ.

ಆರೆಸ್ಸೆಸ್ ಮತ್ತು ಬಿಜೆಪಿಯ ಮುಖಂಡರಾದ ಬಲರಾಜ್ ಮುಧೋಕ್ ಅವರು ಈ ರೀತಿ ಎಲ್ಲೋ ಹೇಳಿದ್ದನ್ನು ಉಲ್ಲೇಖಿಸಿ ಆ ಸಂಪಾದಕೀಯವನ್ನು ಬರೆಯಲಾಗಿತ್ತು. ಆದರೆ ಅದು ತನ್ನ ಪ್ರತಿಪಾದನೆಗೆ ಯಾವುದೇ ಪುರಾವೆಯನ್ನು ಒದಗಿಸುವುದಿಲ್ಲ. ಆನಂತರ ಈ ಸುಳ್ಳನ್ನು ಪದೇಪದೇ ಹೇಳುತ್ತಾ ಹೇಳುತ್ತಾ ಈಗ ಅದೇ ಸತ್ಯವೇನೋ ಎಂಬಂತಾಗಿಬಿಟ್ಟಿದೆ. ಈ ಹಿಂದೆಯೂ ಇದೇ ರೀತಿ ಅಂಬೇಡ್ಕರ್ ಅವರನ್ನು 'ತಮ್ಮವರನ್ನಾಗಿಸಿಕೊಳ್ಳುವ' ಪ್ರಕ್ರಿಯೆಯಲ್ಲಿ ಗಾಂಧಿ ಕೊಲೆ ಪ್ರಕರಣದಲ್ಲಿ ನಿಂದಿತರಾಗಿದ್ದ ಸಾವರ್ಕರ್ ಅವರ ವಕೀಲರನ್ನು ಅಂಬೇಡ್ಕರ್ ಅವರು ಖಾಸಗಿಯಾಗಿ ಭೇಟಿಯಾಗಿ ಸಾವರ್ಕರ್‌ಗೆ ತಮ್ಮ ಬೆಂಬಲವನ್ನು ತಿಳಿಸಿದ್ದರು ಎಂಬ ಪುಕಾರನ್ನು ಆರೆಸ್ಸೆಸ್ ಬಣವು ಹರಿಬಿಟ್ಟಿತ್ತು. ಇದನ್ನು ಮೊದಲು ಮುಲ್ಗಾಂವ್ಕರ್ ಎನ್ನುವ ಮರಾಠಿ ಬರಹಗಾರರೊಬ್ಬರು ತಮ್ಮ ಕಲ್ಪನಾ ಲಹರಿಯ ಬರಹದಲ್ಲಿ ತೇಲಿಬಿಟ್ಟಿದ್ದರು. ಆನಂತರ ದೇಶದ ಗೃಹಮಂತ್ರಿಯಾಗಿದ್ದಾಗ ಅಡ್ವಾಣಿಯವರು ಮುಲ್ಗಾಂವ್ಕರ್ ಅವರ ಬರಹವನ್ನು ಉಲ್ಲೇಖಿಸಿ ಒಂದು ಭಾಷಣದಲ್ಲಿ ಮಾತನಾಡಿದ್ದರು. ಆ ನಂತರ ಲಕ್ಷ ಲಕ್ಷ ಸಾರಿ ಬಿಜೆಪಿಯ ಬಾಯಿಗಳು ಅದನ್ನೇ ಪುನರುಚ್ಚರಿಸುತ್ತಾ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನವನ್ನು ಮುಂದುವರಿಸಿವೆ.

ಅಂಬೇಡ್ಕರ್ ಮತ್ತು ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರ:

 ಇನ್ನು ಅಂಬೇಡ್ಕರ್ ಅವರಿಗೆ ಕಾಶ್ಮೀರದ ಬಗ್ಗೆ ಯಾವ ಅಭಿಪ್ರಾಯವಿತ್ತು ಎಂದು ಅರ್ಥ ಮಾಡಿಕೊಳ್ಳಲು ನೇರವಾಗಿ ಅವರ ಬರಹಗಳಿಗೆ ಮೊರೆ ಹೋಗಬೇಕು. ಅಂಬೇಡ್ಕರ್ ಅವರು ಪ್ರಜಾತಂತ್ರವಾದಿಯಾಗಿದ್ದು ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಹಕ್ಕಿನ ಪರವಾಗಿದ್ದವರು. ದೇಶದೊಳಗೆ ಊಳಿಗಮಾನ್ಯ ಶಕ್ತಿಗಳಿಗೆ ಹೆಚ್ಚಿಗೆ ಅಧಿಕಾರ ಕೊಡುವ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹಾಗೂ ಭಾಷಾವಾರು ಪ್ರಾಂತಗಳ ಬಗ್ಗೆ ಅವರಿಗೆ ತಕರಾರಿತ್ತು. ಆದರೆ ದೇಶಗಳ ನಡುವಿನ ರಾಷ್ಟ್ರೀಯತಾ ವಿಮೋಚನಾ ಪ್ರಶ್ನೆಯು ಎದುರಾದಾಗ ಅವರು ಸದಾ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಪರವಾಗಿದ್ದರು. ಇದನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅವರ Pakistan Or The Partition Of India ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು!

ಆ ಪುಸ್ತಕದಲ್ಲಿ ಅವರು ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸುತ್ತಾರೆ. ಅವರ ಪ್ರಕಾರ ''ಒಟ್ಟಾಗಿ ಬದುಕಬೇಕೆಂಬ ರಾಜಕೀಯ ಬಯಕೆ'' ಇದ್ದಾಗ ಮಾತ್ರ ಒಂದು ರಾಷ್ಟ್ರೀಯತೆ ಜನ್ಮ ತಾಳುತ್ತದೆ ಮತ್ತು ಅಂತಹ ಭಾವನೆ ಮೂಡಲು ಹಲವು ಬಗೆಯ ಏಕರೂಪತೆಗಳು ಅಗತ್ಯವಿದ್ದರೂ ರಾಜಕೀಯ ಬಯಕೆ ಅತ್ಯಗತ್ಯ. ಎರಡು ಭಿನ್ನ ರಾಷ್ಟ್ರೀಯತೆಗಳು ಒಟ್ಟಾಗಿ ಬದುಕಬೇಕೆಂದರೆ ರಾಜಕೀಯ ಸಮಾನಾಧಿಕಾರ ಹಂಚಿಕೊಳ್ಳುವ ವ್ಯವಸ್ಥೆ ಇರಬೇಕು.

ಹಾಗಾಗಲಿಲ್ಲವೆಂದರೆ ಬೇರ್ಪಟ್ಟು ಬೇರೆಬೇರೆ ರಾಷ್ಟ್ರಪ್ರಭುತ್ವಗಳನ್ನು ರಚಿಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಒಂದು ರಾಷ್ಟ್ರೀಯತೆಗೆ ಮತ್ತೊಂದು ರಾಷ್ಟ್ರೀಯತೆ ಅಧೀನವಾಗಿ ಬದುಕುವುದು ಸಾಧ್ಯವೇ ಇಲ್ಲ ಎಂಬುದು ಅವರ ನಿಶ್ಚಿತ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಅವರು ದೇಶ ವಿಭಜನೆ ಅನಿವಾರ್ಯ ಎಂದು ಹೇಳುತ್ತಾರೆ. ಮತ್ತು ಅದೇ ಪುಸ್ತಕದಲ್ಲಿ ಹಿಂದೂ ರಾಷ್ಟ್ರ ಜಾರಿಗೆ ಬಂದರೆ ಪ್ರಜಾತಂತ್ರವು ನಾಶಗೊಳ್ಳುತ್ತದೆ ಎಂದು ಬಹಳ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸುತ್ತಾರೆ ಹಾಗೂ ಅದೇ ಸಮಯದಲ್ಲಿ ಮುಸ್ಲಿಮ್ ಕೋಮುವಾದಿಗಳು ತಮಗೆ ಅನುಕೂಲವಿದ್ದಾಗ ಮಾತ್ರ ಪ್ರಜಾತಂತ್ರವನ್ನು ಮತ್ತು ಸ್ವನಿರ್ಣಯಾಧಿಕಾರವನ್ನು ಬಳಸಿಕೊಳ್ಳುವ ಅವಕಾಶವಾದವನ್ನು ಬಲವಾದ ಮಾತಿನಿಂದ ಖಂಡಿಸುತ್ತಾರೆ. ಅದರ ಜೊತೆಗೆ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರವು ಯಾವಾಗಲೂ ಒಂದೇ ರೀತಿಯಲ್ಲಿ ಚಲಾವಣೆಯಾಗಬೇಕಿಲ್ಲವೆಂಬ ಎಚ್ಚರಿಕೆಯನ್ನೂ ನೀಡುತ್ತಾರೆ.

ಕಾಶ್ಮೀರ ಸಮಸ್ಯೆಗೆ ಅಂಬೇಡ್ಕರ್ ಸೂಚಿಸುವ ಪರಿಹಾರ:
ಅಂಬೇಡ್ಕರ್ ಅವರು ಹೇಗೆ ರಾಷ್ಟ್ರೀಯತೆಗಳ ಸ್ವನಿರ್ಣಯಾಧಿಕಾರದ ಹಿನ್ನೆಲೆಯಲ್ಲಿ ದೇಶವಿಭಜನೆಯ ಬಗ್ಗೆ ತೀರ್ಮಾನಕ್ಕೆ ಬರುತ್ತಾರೋ ಅದೇ ಹಿನ್ನೆಲೆಯಲ್ಲಿ ಕಾಶ್ಮೀರದ ಬಗ್ಗೆಯೂ ಖಚಿತವಾದ ನಿಲುವನ್ನೇ ತೆಗೆದುಕೊಳ್ಳುತ್ತಾರೆ. ಸ್ವನಿರ್ಣಯಾಧಿಕಾರ ನೆಲೆಯ ಜೊತೆಜೊತೆಗೆ ಭಾರತ ಮತ್ತು ಪಾಕಿಸ್ತಾನಗಳೆಂಬ ಈ ಎರಡು ಯುವ ದೇಶಗಳ ನಡುವೆ ಇರಬೇಕಾದ ಶಾಂತಿಯುತ ಸಂಬಂಧ, ಅನಗತ್ಯವಾಗಿ ಹೆಚ್ಚುತ್ತಿರುವ ರಕ್ಷಣಾ ವೆಚ್ಚದಂತಹ ದೃಷ್ಟಿಕೋನಗಳೂ ಕಾಶ್ಮೀರ ಸಮಸ್ಯೆಗೆ ಅವರು ಸೂಚಿಸುವ ಪರಿಹಾರಗಳ ರಾಜತಾಂತ್ರಿಕ ನೆಲೆಗಳಾಗಿವೆ.

ಇದರ ಬಗ್ಗೆ ಅವರು ಸಂಸತ್ತಿನಲ್ಲಿ ರಕ್ಷಣೆ ಮತ್ತು ವಿದೇಶಾಂಗ ನೀತಿಗಳ ಬಗ್ಗೆ ನಡೆದ ಚರ್ಚೆಯ ಸಂದರ್ಭದಲ್ಲಿ, ತಾವು ಸಂಪುಟಕ್ಕೆ ಕೊಟ್ಟ ರಾಜೀನಾಮೆ ಪತ್ರದಲ್ಲಿ, 1952ರ ಎಸ್.ಸಿ.ಎಫ್.ನ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಜಲಂಧರ್‌ನಲ್ಲಿ ಪತ್ರಿಕಾ ಸಂಪಾದಕರಿಗೆ ಕೊಟ್ಟ ಸಂದರ್ಶನದಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. - 1951ರಲ್ಲಿ ತಮ್ಮ ಸಂಪುಟ ಸಚಿವ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡುತ್ತಾರೆ. ತಾವು ರಾಜೀನಾಮೆ ನೀಡಲು ಸರಕಾರವು ಹಿಂದೂ ಕೋಡ್ ಬಿಲ್, ಒಬಿಸಿ ಮತ್ತು ದಲಿತರ ಹಕ್ಕುಗಳ ರಕ್ಷಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ತೋರುತ್ತಿರುವ ನಿರ್ಲಕ್ಷಗಳ ಜೊತೆಗೆ ಭಾರತದ ತಪ್ಪು ವಿದೇಶಾಂಗ ನೀತಿಯಿಂದ ಭಾರತದ ರಕ್ಷಣಾ ವೆಚ್ಚ ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸುತ್ತಾ ಹೇಗೆ ಭಾರತ ಸರಕಾರದ ತಪ್ಪುಕಾಶ್ಮೀರ ನೀತಿಯೂ ಕಳವಳಕಾರಿಯಾಗಿದೆ ಎಂದು ವಿವರಿಸುತ್ತಾರೆ.

ಅದರ ಭಾಗವಾಗಿಯೇ ಕಾಶ್ಮೀರ ವಿವಾದವನ್ನು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ತಮ್ಮ ನಿಲುವನ್ನೂ ಪ್ರತಿಪಾದಿಸುತ್ತಾರೆ: ''ಪಾಕಿಸ್ತಾನದ ಜೊತೆಗೆ ನಮ್ಮ ಜಗಳವು ನಮ್ಮ ತಪ್ಪುವಿದೇಶಾಂಗ ನೀತಿಯ ಭಾಗವಾಗಿದ್ದು ನನಗೆ ಅದರ ಬಗ್ಗೆ ತೀವ್ರ ಅಸಮಾಧಾನವಿದೆ. ಎರಡು ಕಾರಣಗಳಿಂದ ಪಾಕಿಸ್ತಾನದ ಜೊತೆ ನಮ್ಮ ಸಂಬಂಧ ಹದಗೆಟ್ಟಿದೆ- ಒಂದು ಕಾಶ್ಮೀರ ಮತ್ತೊಂದು ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ. ಪತ್ರಿಕಾ ವರದಿಗಳನ್ನು ಗಮನಿಸಿದಾಗ ಕಾಶ್ಮೀರಕ್ಕಿಂತ ಪೂರ್ವ ಬಂಗಾಳದಲ್ಲಿ ನಮ್ಮ ಜನರ ಪರಿಸ್ಥಿತಿ ಅಸಹನೀಯವಾಗಿದೆ ಎಂದು ತಿಳಿಯುತ್ತದೆ. ಆದ್ದರಿಂದ ನಾವು ಪೂರ್ವ ಬಂಗಾಳದ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಆದರೂ ನಾವು ನಮ್ಮೆಲ್ಲಾ ಗಮನವನ್ನು ಕಾಶ್ಮೀರದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಹಾಗಿದ್ದರೂ ನಾವು ಒಂದು ವಿಷಯವಲ್ಲದ ವಿಷಯದ ಮೇಲೆ ಹೊಡೆದಾಡುತ್ತಿದ್ದೇವೆ ಎಂದು ನನಗೆ ಭಾಸವಾಗುತ್ತದೆ.

ಬಹಳಷ್ಟು ಸಮಯ ನಾವು ಯಾರು ಸರಿ ಮತ್ತು ಯಾರು ತಪ್ಪು ಎಂದು ಕಾದಾಡುತ್ತಿದ್ದೇವೆ. ಆದರೆ ನಿಜವಾದ ವಿಷಯ ಯಾರು ಸರಿ ಅಥವಾ ತಪ್ಪುಎಂಬುದಲ್ಲ, ಬದಲಿಗೆ ಯಾವುದು ಸರಿ ಎಂಬುದೇ ಆಗಿದೆ. ನಮ್ಮ ಮುಂದಿರುವ ಪ್ರಧಾನ ಪ್ರಶ್ನೆ ಅದಾಗಿದ್ದಲ್ಲಿ ಕಾಶ್ಮೀರವನ್ನು ವಿಭಜಿಸುವುದೇ ಅದಕ್ಕೆ ಸರಿಯಾದ ಪರಿಹಾರ ಎಂದು ನಾನು ಪ್ರತಿಪಾದಿಸಿಕೊಂಡು ಬಂದಿದ್ದೇನೆ. ನಾವು ಭಾರತ ವಿಭಜನೆಯ ಸಂದರ್ಭದಲ್ಲಿ ಮಾಡಿದಂತೆ ಕಾಶ್ಮೀರದ ಮುಸ್ಲಿಮ್ ಭಾಗಗಳನ್ನು ಪಾಕಿಸ್ತಾನಕ್ಕೆ ಕೊಟ್ಟು ಹಿಂದೂ ಮತ್ತು ಬೌದ್ಧ ಭಾಗಗಳನ್ನು ಭಾರತಕ್ಕೆ ಪಡೆದುಕೊಳ್ಳಬೇಕು. ಕಾಶ್ಮೀರದ ಮುಸ್ಲಿಮ್ ಪ್ರಾಂತದ ಬಗ್ಗೆ ನಮಗೆ ನಿಜಕ್ಕೂ ಕಾಳಜಿಯಿಲ್ಲ. ಅದು ಕಾಶ್ಮೀರದ ಮುಸ್ಲಿಮರು ಮತ್ತು ಪಾಕಿಸ್ತಾನದ ನಡುವಿನ ವಿಷಯ. ಅವರಿಗೆ ತೋರಿದಂತೆ ಅವರು ಅದನ್ನು ಬಗೆಹರಿಸಿಕೊಳ್ಳಬಹುದು ಅಥವಾ ನೀವು ಬಯಸುವುದಾದಲ್ಲಿ, ಕಾಶ್ಮೀರವನ್ನು ಯುದ್ಧ ವಿರಾಮ ವಲಯ, ಕಾಶ್ಮೀರ ಕಣಿವೆ ಹಾಗೂ ಜಮ್ಮು ಮತ್ತು ಲಡಾಖ್ ಪ್ರಾಂತಗಳಾಗಿ ತ್ರಿಭಜೀಕರಿಸಿ ಕಾಶ್ಮೀರ ಕಣಿವೆಯಲ್ಲಿ ಮಾತ್ರ ಜನಮತಗಣನೆ ನಡೆಸಿ. ಅದರ ಬದಲಿಗೆ ಇಡೀ ಪ್ರಾಂತದಲ್ಲಿ ಜನಮತಗಣನೆಯನ್ನು ನಡೆಸಿದರೆ ಕಾಶ್ಮೀರದ ಹಿಂದೂ ಮತ್ತು ಬೌದ್ಧರನ್ನೂ ಸಹ ಅವರ ಬಯಕೆಗೆ ವಿರುದ್ಧವಾಗಿ ಪಾಕಿಸ್ತಾನದೆಡೆಗೆ ದೂಡಿದಂತಾಗುತ್ತದೆ. ಮತ್ತು ಆಗ ಪೂರ್ವ ಬಂಗಾಳದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಯನ್ನೇ ಇಲ್ಲಿಯೂ ಎದುರಿಸಬೇಕಾಗಿ ಬರಬಹುದು.''
(DR. BABASAHEB AMBEDKAR: WRITINGS AND SPEECHES VOL. 14-2, p.1322)
- 1951ರ ಅಕ್ಟೋಬರ್‌ನಲ್ಲಿ ಜಲಂಧರ್‌ನಲ್ಲಿ ಪತ್ರಿಕಾ ಸಂಪಾದಕರು ಈ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೂ ಅಂಬೇಡ್ಕರ್ ಅವರು ನೇರವಾದ ಉತ್ತರವನ್ನೇ ಕೊಡುತ್ತಾರೆ:
ಸಂಪಾದಕರು: ಕಾಶ್ಮೀರ ಸಮಸ್ಯೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅಂಬೇಡ್ಕರ್: ಪ್ರಾಯಶಃ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬಹುದಾದ ಜನಮತಗಣನೆ ಭಾರತಕ್ಕೆ ವ್ಯತಿರಿಕ್ತವಾಗಿ ಬರಬಹುದು ಎನಿಸುತ್ತದೆ. ಜಮ್ಮು ಮತ್ತು ಲಡಾಖ್ ಪ್ರಾಂತದ ಹಿಂದೂ ಮತ್ತು ಬೌದ್ಧರು ಪಾಕಿಸ್ತಾನಕ್ಕೆ ಹೋಗದಂತಾಗಬೇಕೆಂದರೆ ಜಮ್ಮು, ಲಡಾಖ್ ಮತ್ತು ಕಾಶ್ಮೀರಗಳಲ್ಲಿ ವಲಯವಾರು ಜನಮತಗಣನೆಯಾಗಬೇಕು.
(DR. BABASAHEB AMBEDKAR: WRITINGS AND SPEECHES VOL. 17&2, p. 381)

- ನಂತರ 1952ರಲ್ಲಿ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ (ಎಸ್.ಸಿ.ಎಫ್) ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಶ್ಮೀರ ಸಮಸ್ಯೆಗೆ ಏಕೆ ಮತ್ತು ಹೇಗೆ ಜನಮತಗಣನೆಯೇ ಪರಿಹಾರವೆಂದು ವಿವರಿಸುತ್ತಾರೆ:

ಕಾಶ್ಮೀರದ ವಿಷಯದಲ್ಲಿ ಕಾಂಗ್ರೆಸ್ ಸರಕಾರವು ಅಳವಡಿಸಿಕೊಂಡಿರುವ ನೀತಿಯು ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್‌ಗೆ ಸಮ್ಮತವಿಲ್ಲ. ಈ ನೀತಿಯು ಹೀಗೆ ಮುಂದುವರಿದಲ್ಲಿ ಅದು ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಶ್ವತ ವೈರತ್ವವನ್ನು ಹುಟ್ಟುಹಾಕುತ್ತದೆ ಮತ್ತು ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಎರಡೂ ದೇಶಗಳು ಒಳ್ಳೆಯ ಮತ್ತು ಸ್ನೇಹಪೂರ್ವಕ ನೆರೆಹೊರೆಯವರಾಗಿ ಮುಂದುವರಿಯುವುದು ಎರಡೂ ದೇಶಗಳಿಗೂ ಒಳ್ಳೆಯದು ಮತ್ತು ಅತ್ಯಗತ್ಯವಾದದ್ದು.

ಈ ಉದ್ದೇಶವನ್ನು ಸಾಧ್ಯಗೊಳಿಸಲು ಪಾಕಿಸ್ತಾನದ ಬಗ್ಗೆ ನಾವು ಅನುಸರಿಸುವ ನೀತಿಯು ಎರಡು ಮುಖ್ಯ ವಿಷಯಗಳನ್ನು ಪರಿಗಣಿಸಬೇಕು:
1. ಈಗಾಗಲೇ ಆಗಿರುವ ದೇಶ ವಿಭಜನೆಯನ್ನು ರದ್ದುಗೊಳಿಸುವ ಮಾತುಗಳನ್ನು ಯಾರೂ ಆಡಬಾರದು. ದೇಶ ವಿಭಜನೆ ಆಗಿರುವುದನ್ನು ಎರಡೂ ದೇಶಗಳು ವಾಸ್ತವವೆಂದು ಒಪ್ಪಿಕೊಳ್ಳಬೇಕು ಮತ್ತು ಎರಡೂ ದೇಶಗಳು ಎರಡು ಭಿನ್ನ ಸಾರ್ವಭೌಮಿ ದೇಶಗಳಾಗಿ ಮುಂದುವರಿಯಬೇಕು.
 2. ಹಾಗೂ ಕಾಶ್ಮೀರವನ್ನು ವಿಭಜಿಸಬೇಕು. ಕಾಶ್ಮೀರದ ಮುಸ್ಲಿಮ್ ಬಾಹುಳ್ಯದ ಪ್ರಾಂತವು, ಕಾಶ್ಮೀರ ಕಣಿವೆಯಲ್ಲಿರುವ ಮುಸ್ಲಿಮರು ಇಚ್ಛೆ ಪಟ್ಟಲ್ಲಿ, ಪಾಕಿಸ್ತಾನಕ್ಕೆ ಹೋಗಬೇಕು ಮತ್ತು ಮುಸ್ಲಿಮೇತರರು ವಾಸಿಸುವ ಜಮ್ಮು ಮತ್ತು ಲಡಾಖ್ ಪ್ರಾಂತವು ಭಾರತಕ್ಕೆ ಸೇರಬೇಕು.
(DR. BABASAHEB AMBEDKAR: WRITINGS AND SPEECHES VOL. 17&1, p. 396)
-1952ರಲ್ಲಿ ಸಂಸತ್ತಿನಲ್ಲಿ ನಡೆದ ಭಾರತದ ವಿದೇಶಾಂಗ ನೀತಿ ಹಾಗೂ ರಕ್ಷಣಾ ವೆಚ್ಚಗಳ ಬಗೆಗಿನ ಚರ್ಚೆಯಲ್ಲಿ ಭಾಗವಹಿಸುತ್ತಾ ಅಂಬೇಡ್ಕರ್ ಅವರು ಮತ್ತೊಮ್ಮೆ ಕಾಶ್ಮೀರ ವಿವಾದದ ಬಗ್ಗೆ ತಮ್ಮ ನಿಲುವನ್ನು ಒತ್ತಿಹೇಳುತ್ತಾರೆ:
 ''ಕಾಶ್ಮೀರದಂತಹ ವಿವಾದಾಸ್ಪದ ವಿಷಯಗಳನ್ನು ಬಗೆಹರಿಸಲು 'ಜನಮತಗಣನೆ'ಯೆಂಬ ಸಾಧನವನ್ನು ಬಳಸಬೇಕೇ ಎಂಬುದನ್ನು ಅರಿಯಲು ತೀರಾ ಹಳೆಯ ಪುರಾವೆಗಳನ್ನು ಹುಡುಕುವ ಅಗತ್ಯವೇನೂ ಇಲ್ಲ. ಎರಡನೇ ಮಹಾಯುದ್ಧದ ನಂತರ, ನನಗೆ ನೆನಪಿರುವ ಹಾಗೆ, ಎರಡು ಪ್ರಕರಣಗಳನ್ನು ಜನಮತಗಣನೆಯ ಮೂಲಕ ಬಗೆಹರಿಸಬೇಕಾಯಿತು. ಒಂದು (ಆಗ ಪೋಲ್ಯಾಂಡಿನ ಭಾಗವಾಗಿದ್ದು ಜರ್ಮನಿ ಮತ್ತು ಪೋಲ್ಯಾಂಡಿನ ನಡುವೆ ತಗಾದೆಗೊಳಗಾಗಿದ್ದ-ಲೇ) ಉತ್ತರ ಸಿಲೇಸಿಯಾ ಮತ್ತೊಂದು (ಈ ಹಿಂದೆ ಜರ್ಮನರು ಫ್ರೆಂಚರಿಂದ ವಶಪಡಿಸಿಕೊಂಡಿದ್ದ-ಲೇ) ಅಲ್ಸೇಸ್-ಲೋರೈನ್ ಪ್ರಾಂತ. ಈ ಎರಡೂ ವಿವಾದಗಳನ್ನು ಜನಮತಗಣನೆಯ ಮೂಲಕ ಅಲ್ಲಿನ ನಿವಾಸಿಗಳ ಮತಾಭಿಪ್ರಾಯಗಳ ಆಧಾರದ ಮೇಲೆ ತೀರ್ಮಾನಿಸಲಾಯಿತು. ಪ್ರಬುದ್ಧರು ಮತ್ತು ಮೇಧಾವಿಗಳು ಮತ್ತು ನನ್ನ ಗೌರವಾನ್ವಿತ ಸ್ನೇಹಿತರೂ ಆಗಿರುವ ಗೋಪಾಲಸ್ವಾಮಿ ಅಯ್ಯಂಗಾರ್ ಅವರಿಗೆ ಈ ವಿಷಯವು ತಿಳಿದಿರುತ್ತದೆ ಎಂದೇ ನಾನು ಭಾವಿಸುತ್ತೇನೆ. ಉತ್ತರ ಸಿಲೇಸಿಯಾ ಮತ್ತು ಅಲ್ಸೇಸ್-ಲೋರೈನ್ ಪ್ರಾಂತದ ವಿವಾದಗಳನ್ನು ಬಗೆಹರಿಸಲು ಅಂದಿನ ಲೀಗ್ ಆಫ್ ನೇಷನ್ಸ್ ಅನುಸರಿಸಿದ ಮಾದರಿಯನ್ನೇ ಕಾಶ್ಮೀರದಲ್ಲಿ ಅಳವಡಿಸುವ ಮೂಲಕ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ, ಈ ವಿವಾದವು ರಕ್ಷಣಾ ಬಜೆಟ್‌ನಲ್ಲಿ ನುಂಗಿಹಾಕುತ್ತಿರುವ 50 ಕೋಟಿ ರೂ.ಯನ್ನು ನಮ್ಮ ಜನರ ಅಗತ್ಯಗಳಿಗೆ ಬಳಸಿಕೊಳ್ಳಲಾಗದೇ?''
(DR. BABASAHEB AMBEDKAR: WRITINGS AND SPEECHES VOL. 15, p. 849)

ಹೀಗೆ ಅಂಬೇಡ್ಕರ್ ಅವರು ಅತ್ಯಂತ ಸ್ಪಷ್ಟವಾಗಿ ಭಾರತ ಮತ್ತು ಪಾಕಿಸ್ತಾನದ ಸ್ನೇಹಯುತ ಸಂಬಂಧದ ಪರವಾಗಿದ್ದರು ಮತ್ತು ಕಾಶ್ಮೀರದಲ್ಲಿ ಕಡ್ಡಾಯವಾಗಿ ಜನಮತಗಣನೆ ನಡೆದು ಅಲ್ಲಿನ ಜನರ ಅಭಿಪ್ರಾಯಕ್ಕೆ ತಕ್ಕಂತೆ ನಡೆದುಕೊಳ್ಳಲು ಅವಕಾಶ ಮಾಡಿಕೊಡುವುದರ ಪರವಾಗಿದ್ದರು. ಅದರಿಂದ ಮಾತ್ರ ಭಾರತಕ್ಕೂ, ಪಾಕಿಸ್ತಾನಕ್ಕೂ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದ ಜನತೆಗೂ ಒಳಿತಾಗುತ್ತದೆ ಎಂಬ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದ್ದರು. ಇವತ್ತಿಗೂ ಆಗಬೇಕಿರುವುದು ಅದೇ. ಕಾಶ್ಮೀರಿಗಳ ಜಮನತಗಣನೆಯೇ ವಿನಃ ಆರ್ಟಿಕಲ್ 370ರ ರದ್ದತಿಯಲ್ಲ. ಅಂಬೇಡ್ಕರ್ ಅವರು ಮೋದಿ-ಶಾ ಸರಕಾರ ಕಾಶ್ಮೀರಿಗಳ ಮೇಲೆ ಮಾಡಿರುವ ಈ ದಾಳಿಯನ್ನು ಎಂದಿಗೂ ಒಪ್ಪುತ್ತಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)