varthabharthi


ಸಂಪಾದಕೀಯ

ಜನೌಷಧಿಯ ವಿರುದ್ಧ ನಡೆದ ಹುನ್ನಾರ

ವಾರ್ತಾ ಭಾರತಿ : 22 Sep, 2022

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಆರೋಗ್ಯ ಸೇವೆ ಎಂಬುದು ವ್ಯಾಪಾರವಾಗಿರುವ ಇಂದಿನ ದಿನಗಳಲ್ಲಿ ಜನಸಾಮಾನ್ಯರ ಬದುಕು ಅಸಹನೀಯವಾಗಿದೆ. ಬಡವರಿಗೆ ಅಸ್ವಸ್ಥತೆ ಉಂಟಾದರೆ ಬದುಕಲು ಮನೆ-ಮಾರು ಮಾರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಆಸ್ಪತ್ರೆಗಳ ಲಂಗು ಲಗಾಮಿಲ್ಲದ ವಸೂಲಿ, ದುಬಾರಿಯಾಗಿರುವ ಜೀವ ರಕ್ಷಕ ಔಷಧಿಗಳು, ಸರಕಾರಿ ಆಸ್ಪತ್ರೆಗಳ ಸುಧಾರಣೆಯ ಬಗ್ಗೆ ಅಧಿಕಾರದಲ್ಲಿ ಇರುವವರ ನಿರ್ಲಕ್ಷ್ಯ ಹೀಗೆ ಹಲವಾರು ಕಾರಣಗಳಿಂದಾಗಿ ಹಣವಿಲ್ಲದವರ ಅಥವಾ ಕಡಿಮೆ ಆದಾಯವಿರುವವರ ಆರೋಗ್ಯ ಹದಗೆಟ್ಟರೆ ಬದುಕಿ ಉಳಿಯುವ ಭರವಸೆ ಉಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಬಡವರು ಮತ್ತು ದುಡಿಯುವ ಜನರಿಗೆ ಬದುಕಲು ಒಂದಿಷ್ಟು ಆಸರೆಯಾಗಿರುವ ಜನೌಷಧಿಯ ಸೌಕರ್ಯವನ್ನು ಮುಳುಗಿಸುವ ಮಸಲತ್ತು ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ.

ಜನೌಷಧಿ ಯೋಜನೆಯ ಔಷಧಿಗಳು ಕೈಗೆಟಕುವ ಬೆಲೆಗೆ ಸಿಗುತ್ತಿದ್ದು, ಜನ ಸಾಮಾನ್ಯರಿಗೆ ಸಂಜೀವಿನಿಯಾಗಿದ್ದವು. ಸರಕಾರ ಬಡವರ ಹಿತರಕ್ಷಣೆಗಾಗಿ ಆರಂಭಿಸಿರುವ ಈ ಮಹತ್ವದ ಜನೌಷಧಿ ಯೋಜನೆಯ ಮೇಲೆ ಈಗ ಖಾಸಗಿ ವೈದ್ಯಕೀಯ ವ್ಯಾಪಾರಿಗಳ ಕಣ್ಣು ಬಿದ್ದಿದೆ. ಜನೌಷಧಿ ಅಂಗಡಿಗಳಲ್ಲಿ ಮಧುಮೇಹ, ರಕ್ತದ ಒತ್ತಡದಂತಹ ಸಾಮಾನ್ಯ ಕಾಯಿಲೆಗಳಿಗೂ ಔಷಧಿಗಳು ಸಿಗುತ್ತಿಲ್ಲ ಎಂಬ ದೂರುಗಳು ಜನರಿಂದ ಬರುತ್ತಿವೆ. ಇದು ನಿಜವೇ ಆಗಿದ್ದರೆ ಅತ್ಯಂತ ಆತಂಕಕಾರಿ ಸಂಗತಿ ಎಂದರೆ ತಪ್ಪಲ್ಲ.

ಕಡು ಬಡವರಿಗೆ, ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಾಗಲಿ ಎಂಬ ಉದ್ದೇಶದಿಂದ ಒಕ್ಕೂಟ ಸರಕಾರ ಈ ಜನೌಷಧಿ ಯೋಜನೆಯನ್ನು ಆರಂಭಿಸಿತು. ಭಾರತದ ಬಹುತೇಕ ಮಹಾನಗರಗಳಲ್ಲಿ, ಪಟ್ಟಣಗಳಲ್ಲಿ, ಜನೌಷಧಿ ಕೇಂದ್ರಗಳನ್ನು ಆರಂಭಿಸಿದ ಸರಕಾರ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿಗಳು ಜನರಿಗೆ ಸಿಗುವಂತೆ ಮಾಡಿದ್ದು ಶ್ಲಾಘನೀಯ ಕ್ರಮವೆಂದು ಎಲ್ಲರೂ ಸ್ವಾಗತಿಸಿದರು. ಭಾರತದಾದ್ಯಂತ ಒಟ್ಟು 8,675 ಜನೌಷಧಿ ಮಳಿಗೆಗಳಿವೆ. ಕರ್ನಾಟಕದಲ್ಲಿ 900ಕ್ಕೂ ಅಧಿಕ ಕೇಂದ್ರಗಳಿವೆ. ಈ ಜನೌಷಧಿ ಕೇಂದ್ರಗಳ ಮೂಲಕ ದೇಶವ್ಯಾಪಿಯಾಗಿ 680 ಕೋಟಿ ರೂ.ನಷ್ಟು ವಹಿವಾಟು ನಡೆಯುತ್ತಿದೆ ಎಂದು ಅಧಿಕೃತ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇದರಲ್ಲಿ ಕರ್ನಾಟಕದ ಪಾಲು ಶೇಕಡಾ 25ರಷ್ಟು ಎಂದು ತಿಳಿದು ಬಂದಿದೆ.

ಬಡವರ ಪಾಲಿಗೆ ಸಂಜೀವಿನಿಯಾಗಿರುವ ಜೆನರಿಕ್ ಔಷಧಿಗಳ ವಿರುದ್ಧ ಖಾಸಗಿ ಮೆಡಿಕಲ್ ಲಾಬಿ ಹುನ್ನಾರ ನಡೆಸಿರುವ ಸಂಗತಿ ವಿಧಾನ ಪರಿಷತ್‌ನಲ್ಲೂ ಪ್ರಸ್ತಾಪವಾಗಿದೆ. ಜೆನರಿಕ್ ಔಷಧಿಗಳ ಜನಪ್ರಿಯತೆ ಕಂಡು ಸಹಿಸಲಾಗದ ಲೂಟಿಕೋರ ಖಾಸಗಿ ವೈದ್ಯಕೀಯ ಮಾಫಿಯಾ ಅದರ ವಿರುದ್ಧ ಅಪಪ್ರಚಾರ ಆರಂಭಿಸಿದೆ. ಜನೌಷಧಿ ಕೇಂದ್ರಗಳಲ್ಲಿ ಸಿಗುವ ಕಡಿಮೆ ಡೋಸ್‌ನ ಔಷಧಿಗಳಿಂದ ರೋಗ ವಾಸಿಯಾಗುವುದಿಲ್ಲ ಎಂದು ಕೆಲ ಖಾಸಗಿ ವೈದ್ಯರು ರೋಗಿಗಳಲ್ಲಿ ಭಯ ಉಂಟು ಮಾಡುತ್ತಿದ್ದಾರೆ. ಧಾರವಾಡದ ವೈದ್ಯೆಯೊಬ್ಬರು ‘‘ಜನೌಷಧಿ ಕೇಂದ್ರಗಳ ಔಷಧಿ ಪಡೆದು ಏನಾದರೂ ಹೆಚ್ಚು ಕಡಿಮೆಯಾದರೆ ನಾವು ಜವಾಬ್ದಾರರಲ್ಲ’’ ಎಂದು ತಮ್ಮ ದವಾಖಾನೆಯಲ್ಲಿ ಬೋರ್ಡು ಹಾಕಿದ್ದಾರೆ. ಇದು ನಿಜವಾಗಿ ಆತಂಕಕಾರಿ ಸಂಗತಿಯಾಗಿದೆ.

ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲೂ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರುವುದಿಲ್ಲ. ಆದರೆ ತಮ್ಮ ಆಸ್ಪತ್ರೆಗಳಲ್ಲಿ ತಮ್ಮದೇ ಔಷಧಿ ಅಂಗಡಿಗಳನ್ನು ಮಾಡಿಕೊಂಡು ಮನಬಂದಂತೆ ದರ ನಿಗದಿ ಮಾಡಿ ಬಡ ರೋಗಿಗಳನ್ನು ದೋಚಲಾಗುತ್ತದೆ. ಕೋವಿಡ್ ಕಾಲದಲ್ಲಿ ಈ ಖಾಸಗಿ ಆಸ್ಪತ್ರೆಗಳ ಬಂಡವಾಳ ಬಯಲಿಗೆ ಬಂದಿದೆ. ಇವರಿಗೆ ರೋಗಿಯ ಆರೋಗ್ಯ ಕಾಳಜಿ ಮುಖ್ಯವಲ್ಲ. ತಮ್ಮ ಲಾಭ ಮುಖ್ಯ. ಇಂತಹ ದುಷ್ಟ ಶಕ್ತಿಗಳು ಜೆನರಿಕ್ ಔಷಧಿಗಳ ವಿರುದ್ಧ ಸುಳ್ಳು ಪ್ರಚಾರ ನಡೆಸಿವೆ.

ದಿನದಿಂದ ದಿನಕ್ಕೆ ಜನೌಷಧಿ ಮಳಿಗೆಗಳ ಜನಪ್ರಿಯತೆ ಹೆಚ್ಚುತ್ತಿದೆ. 2021ರಲ್ಲಿ ಜನೌಷಧಿ ಕೇಂದ್ರಗಳಿಂದ 431.65 ಕೋಟಿ ರೂ. ಜೆನರಿಕ್ ಔಷಧಿಗಳು ಮಾರಾಟವಾಗಿವೆ. ಇದರಿಂದ ಜನಸಾಮಾನ್ಯರಿಗೆ 2,500 ಕೋಟಿ ರೂ.ಉಳಿತಾಯವಾಗಿದೆ. ಬೇರೆ ಮೆಡಿಕಲ್‌ಗಳಲ್ಲಿ 25-30 ರೂ.ಗೆ ಸಿಗುವ ಔಷಧಿಗಳು ಜನೌಷಧಿ ಮಳಿಗೆಗಳಲ್ಲಿ 3ರಿಂದ 4 ರೂ.ಗೆ ಸಿಗುತ್ತವೆ. ಇದು ಲಾಭಕೋರ ಖಾಸಗಿ ಮೆಡಿಕಲ್ ಮಾಫಿಯಾದ ಹೊಟ್ಟೆಯುರಿಗೆ ಕಾರಣವಾಗಿದೆ.

ಲಾಭಕೋರ ಖಾಸಗಿ ಮೆಡಿಕಲ್ ಲಾಬಿ ಜನೌಷಧಿಗಳ ವಿರುದ್ಧ ಮಸಲತ್ತು ನಡೆಸುತ್ತಿದೆ. ಬಹುಬೇಡಿಕೆಯ ಜೀವ ರಕ್ಷಕ ಔಷಧಿಗಳು ಜನೌಷಧಿ ವಿತರಣಾ ಕೇಂದ್ರಗಳನ್ನು ತಲುಪದಂತೆ ದಾರಿ ತಪ್ಪಿಸುವ ಸಂಚು ನಡೆಯುತ್ತಿದೆ. ಜನೌಷಧಿ ಕೇಂದ್ರಗಳಲ್ಲಿ ಕನಿಷ್ಠ 1,450 ಔಷಧಗಳನ್ನು ನೀಡಬೇಕೆಂಬ ಕಟ್ಟುನಿಟ್ಟಾದ ನಿಯಮವಿದೆ. ಆದರೆ ಪ್ರಸಕ್ತ ಈ ಕೇಂದ್ರಗಳಲ್ಲಿ ಲಭ್ಯವಿರುವುದು ಕೇವಲ 700 ಬಗೆಯ ಔಷಧಿಗಳು ಮಾತ್ರ. ಅದರಲ್ಲೂ 250 ಶಸ್ತ್ರಚಿಕಿತ್ಸೆಗೆ ಬೇಕಾಗುವ ಸಾಮಗ್ರಿ ಗಳಿವೆ. ಇವುಗಳನ್ನು ಬಿಟ್ಟರೆ ಕೇವಲ 200ರಿಂದ 300 ವಿಧದ ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ಸಿಗುತ್ತವೆ. ಈ ಪೈಕಿ ವಿರಳವಾಗಿ ಮಾರಾಟವಾಗುವ ನರ ಸಂಬಂಧಿ ಕಾಯಿಲೆಗಳ ಔಷಧಿಗಳು ಮಾತ್ರ ಸಿಗುತ್ತವೆ. ಆದರೆ ಅತ್ಯಂತ ಬೇಡಿಕೆಯ ಮಧುಮೇಹ ಮತ್ತು ರಕ್ತದ ಒತ್ತಡದಂತಹ ಸಾಮಾನ್ಯ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಿಗಳ ಕೃತಕ ಅಭಾವವನ್ನು ಸೃಷ್ಟಿಸಲಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ, ಅಗ್ಗದ ಬೆಲೆಯ ಔಷಧಿಗಳು ಎಲ್ಲಿಗೆ ಹೋಗುತ್ತವೆ ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.

ಜೆನರಿಕ್ ಔಷಧಿಗಳ ಕೃತಕ ಅಭಾವದಿಂದ ಸದರಿ ಔಷಧ ಕೇಂದ್ರಗಳಲ್ಲಿ ಹಣ ಹೂಡಿಕೆ ಮಾಡಿರುವವರು ನಷ್ಟ ಅನುಭವಿಸುತ್ತಿರುವುದು ಒತ್ತಟ್ಟಿಗಿರಲಿ, ಬಡವರ ಪಾಲಿನ ಸಂಜೀವಿನಿಯಾದ ಜನೌಷಧಿಗಳು ಜನರಿಗೆ ತಲುಪಬೇಕೆಂಬ ಒಕ್ಕೂಟ ಸರಕಾರದ ಸದುದ್ದೇಶವೇ ಹಳ್ಳ ಹಿಡಿದಂತಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ನರೇಂದ್ರ ಮೋದಿಯವರ ನೇತೃತ್ವದ ಒಕ್ಕೂಟ ಸರಕಾರದ ಗಮನಕ್ಕೆ ಇದು ಬಾರದಿರುವುದು ಆತಂಕಕಾರಿ ಸಂಗತಿಯಾಗಿದೆ. ಸರಕಾರ ಈಗ ಸುಮ್ಮನಿರಬಾರದು. ಔಷಧಿಗಳಿಗೆ ಸಂಬಂಧಿಸಿದ ಇಲಾಖೆ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು. ಈ ಸಂಚಿನ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಖಾಸಗಿ ಮೆಡಿಕಲ್ ಮಾಫಿಯಾಗೆ ತಕ್ಕ ಪಾಠ ಕಲಿಸಬೇಕು. ಜನೌಷಧಿ ಕೇಂದ್ರಗಳನ್ನು ಈ ಮಾಫಿಯಾದಿಂದ ಕಾಪಾಡುವುದು ಮಾತ್ರವಲ್ಲ, ಭಾರತದ ನೂರಾ ಮೂವತ್ತೈದು ಕೋಟಿ ಜನರಿಗೆ ತಲುಪುವಂತೆ ದೇಶದ ಮೂಲೆ ಮೂಲೆಗೆ ವಿಸ್ತರಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)