varthabharthi


ಅನುಗಾಲ

ಪ್ರತಿಮಾ ಭಾರತ

ವಾರ್ತಾ ಭಾರತಿ : 22 Sep, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕಳೆದ ಕೆಲವು ವರ್ಷಗಳಿಂದ ಈ ವ್ಯಕ್ತಿಪೂಜೆ ಮಿತಿಮೀರಿದೆ ಅಥವಾ ಮಿತಿಯನ್ನು ಹೆಚ್ಚಿಸಲಾಗಿದೆ. ರಾಜಾ ಕಾಲಸ್ಯ ಕಾರಣಂ ಎಂಬುದನ್ನು ತಿದ್ದಿ ‘ಪ್ರಧಾನಮಂತ್ರಿ ಕಾಲಸ್ಯ/ಆಲಸ್ಯ ಕಾರಣಂ’ ಎನ್ನಬಹುದು. ಜೊತೆಗೆ ಅವರ ಆಪ್ತರೂ ಇದಕ್ಕೆ ಕಾರಣ. ನಮ್ಮ ಆಕಾಶವಾಣಿಯು ಅವಕಾಶವಾಣಿಯಂತೆ ಧ್ವನಿಸುರುಳಿಯನ್ನು ಬಿಚ್ಚಿದೆ. ಬೆಳಗಿನಿಂದ ರಾತ್ರಿಯ ಗೊರಕೆಯ ವರೆಗೆ ಒಬ್ಬನೇ ವ್ಯಕ್ತಿಯ ಸುದ್ದಿಯನ್ನು ಬಿತ್ತರಿಸಲಾಗುತ್ತದೆ. ಸಂದರ್ಭಸಹಿತ ವಿವರಿಸುವಾಗ ಅದೇ ಧ್ವನಿಯ ಅನಾವರಣದ ಬದಲಿಗೆ ನಾಯಕನ ದಿನಚರಿಯನ್ನು ಸಂಸತ್ತಿನ ಕಲಾಪದಂತೆ ವೀಕ್ಷಕ ವಿವರಣೆಯೊಂದಿಗೆ ಬಿತ್ತರಿಸಿದರೆ ಹೇಗಿರುತ್ತದೆ? ಅಗತ್ಯವಿದ್ದವರು ಕೇಳುತ್ತ ಕೂರಲಿ. ಉಳಿದವರಿಗೆ ಕಾಟವಿಲ್ಲ.ಕಳೆದ ಎಂಟು ವರ್ಷಗಳಲ್ಲಿ ಈ ದೇಶವು ವ್ಯಕ್ತಿಪೂಜೆಯ ಪರಾಕಾಷ್ಠೆಯನ್ನು ತಲುಪಿದೆ. ಸರಕಾರದ ಯಾವುದೇ ಜಾಹೀರಾತಿರಲಿ, ಅದೆಷ್ಟೇ ಸಣ್ಣದಿರಲಿ, ಪ್ರಧಾನಿ ಮೋದಿಯ ಚಿತ್ರ ರಾರಾಜಿಸುತ್ತಿದೆ. ರಾಜಸತ್ತೆಯು ಅಳಿದು ಪ್ರಜಾಸತ್ತೆಯು ಬಂದದ್ದು ಹೌದೇ ಎಂಬ ಸಂಶಯಕ್ಕೆಡೆಮಾಡಿಕೊಡುವ ಜೀಹುಜೂರ್ ಸಂಸ್ಕೃತಿ (ಅದನ್ನು ಸಂಸ್ಕೃತಿ ಎಂದು ಕರೆಯಬಹುದಾದರೆ!) ದೇಶದ ಉನ್ನತಮಟ್ಟದಲ್ಲಿ ನೆಲೆ ನಿಂತಂತಿದೆ. ವ್ಯಕ್ತಿಯು ಮುಖ್ಯವಾಗಿದ್ದುದರ ಪರಿಣಾಮವಾಗಿ ಜನರು ತಮ್ಮ ಪಾಡಿಗೆ ಗುಡಿಸಲುಗಳಲ್ಲಿ ವಾಸವಾಗಿದ್ದಾಗ ಆಳುವವರು ವಿವಿಧ ಅರಮನೆಗಳಲ್ಲಿ ಸುಖವಾಗಿದ್ದರು. ಚರಿತ್ರೆ ಮಾತ್ರವಲ್ಲ, ಪುರಾಣವೂ ಇದನ್ನು ಬಿಂಬಿಸುತ್ತಿತ್ತು. ಕುಮಾರವ್ಯಾಸ ಭಾರತದಲ್ಲಿ ಬರುವ- ಆ ಸುಯೋಧನನರಮನೆಯನವ

ನೀಶ ಹೊಕ್ಕನು ಪವನಸುತ ದು

ಶ್ಶಾಸನನ ಸದನವನು ಪಾರ್ಥಗೆ ಕರ್ಣಭವನದಲಿ॥
ಶ್ಶಾಸನಾನುಜರರಮನೆಗಳುಳಿ

ದೈಸುಮನೆ ಭಂಡಾರವಾದುದು ಭೂಪ ಕೇಳೆಂದ॥

ರುನ್ನತಾಲಯವಾಯ್ತು ನೃಪನ ಪಸಾಯ್ತ ಸಂತತಿಗೆ॥ 
ಎಂಬ ಎರಡು ಷಟ್ಪದಿಗಳು ಅಧಿಕಾರವು ಹಸ್ತಾಂತರವಾದಾಗ ಏನಾಗುತ್ತದೆ ಎಂಬುದಕ್ಕೆ ಕೈಗನ್ನಡಿ.
ವಿಪರ್ಯಾಸವೆಂದರೆ ಈ ಬದಲಾವಣೆಯಾಗಿ ಭೀಷ್ಮರ ಅರಮನೆಗೆ ಹೊಸಬರ ಪ್ರವೇಶವಾದಾಗ ಭೀಷ್ಮರಿನ್ನೂ ತನ್ನ ಅಂತ್ಯಕ್ಕೆ ರಣಭೂಮಿಯಲ್ಲಿ ಕಾಯುತ್ತಿದ್ದರೇನೋ? ಪುರಾಣಯುಗದಿಂದ ಚರಿತ್ರೆಯ ಯುಗಕ್ಕೆ ಬಂದಾಗಲೂ ಇದೇ ಸ್ಥಿತಿಯು ಮುಂದುವರಿದಿದೆ. ಆದಿಯಿಂದ ಯುದ್ಧಗಳೇ ಶ್ರೇಷ್ಠತೆಯ ಕುರುಹಾಯಿತು. ಅವತಾರಗಳಾದದ್ದೂ ಯುದ್ಧಕ್ಕಾಗಿ. ಸಮಾನಾಂತರವಾಗಿ ದಾರ್ಶನಿಕರು ಸಾಮಾಜಿಕ ಪರಿವರ್ತನೆಗೆ ದುಡಿದರೂ ಅದೊಂದು ಐಚ್ಛಿಕ ವಿಷಯವಾಯಿತೇ ವಿನಾ ಬದುಕಿನ ಪಠ್ಯವಾಗಲೇ ಇಲ್ಲ. ಏನೂ ತಿಳಿಯದವನೊಬ್ಬ ಸಿಂಹಾಸನಾಧೀಶನಾದಾಗ ಎಲ್ಲ ತಿಳಿದವರೂ ಆತನಿಗೆ ಚಾಮರ ಬೀಸಿ ಆತನ ಆಣತಿಯಂತೆ ತಮ್ಮ ಜ್ಞಾನವನ್ನು ಹಂಚುವುದು ಅನಿವಾರ್ಯವಾಯಿತು. ಅಪ್ಪ-ಮಗ, ಅಣ್ಣ-ತಮ್ಮ ಹೀಗೆ ಅಧಿಕಾರ ಬದಲಾಯಿತೇ ಹೊರತು ಸಮಾಜ ಇದರಲ್ಲಿ ಪೋಷಣೆಯ ಪಾತ್ರವನ್ನು ವಹಿಸುವುದೂ ಕಷ್ಟಸಾಧ್ಯವಾಯಿತು. ಪ್ರಜೆಗಳ ಯಾವುದೇ ನಿಲುವುಗಳನ್ನೂ ರಾಜನ ಮೂರ್ತಿಯಾಗಿಸುವುದರಲ್ಲೇ ದೊರೆಯ ಅಕ್ಕಪಕ್ಕದವರು, ಹಿಂಬಾಲಕರು ಅಹರ್ನಿಶಿ ದುಡಿದರು. ಶಿಲಾಶಾಸನಗಳು ರಾಜ ಕೊಟ್ಟದ್ದನ್ನು ನಿರೂಪಿಸಿದವು. ಸಂಸ್ಕೃತಿಯೆಂದರೆ ಆಳಿದವರ ಜೀವನಶೈಲಿಯಾಯಿತು. ಅಳಿದವರನ್ನು ಇಳಿದವರನ್ನು ಉಳಿದವರು ತುಳಿದರು.

ಇದ್ದರೋ ಇಲ್ಲವೋ ಗೊತ್ತಿಲ್ಲ. ನಮ್ಮ ಮುಂದೆ ಕವಿಸೃಷ್ಟಿಯ ಪಾತ್ರಗಳಿವೆ. ಅವುಗಳಲ್ಲಿರುವ ದೇವ-ದೇವತೆಗಳ, ಋಷಿಮುನಿಗಳ, ಜೀವನಶೈಲಿ ಅದೆಷ್ಟೇ ಕಲುಷಿತವಾಗಿದ್ದರೂ ಅದಕ್ಕೊಂದು ಮಾದರಿಯನ್ನು ಸೃಷ್ಟಿಸಿ ಉದಾತ್ತ ನಡೆನುಡಿಯನ್ನು ಆರೋಪಿಸಿ ಆದರ್ಶಗಳನ್ನಾಗಿಸಲಾಯಿತು. ಆದ್ದರಿಂದಲೇ ಮತ್ಸ್ಯಗಂಧಿ ಮತ್ತೆ ಕುಮಾರಿಯಾದಳು. ಎಷ್ಟಾದರೂ ಪರಾಶರರು ಸ್ಪರ್ಶಿಸಿದ ಮೈಯಲ್ಲವೇ? ಗಟ್ಟಿಗರು ಮುಟ್ಟಿದ ಪ್ರತಿಯೊಬ್ಬರೂ ಕೆಸರಿನ ಕಮಲಗಳು. ದೇವರ ಪೂಜೆಗೆ ಅರ್ಹ. ಶಕುಂತಲೆಗೆ ತಂದೆಯಾದ ವಿಶ್ವಾಮಿತ್ರರು? ಶ್ರೇಷ್ಠರು. ದೇವಕನ್ಯೆ-ಅಪ್ಸರೆ ಮೇನಕೆ? ಅವಳೂ ಬಿಟ್ಟುಹೋದಳು. ಕಣ್ವಪಕ್ಷಿಗಳೇ ರಕ್ಷಣೆಗೆ. ಪುರಾಣಗಳನ್ನು ಓದಿದರೆ ಅಲ್ಲಿ ನಾವಿಂದು ಕುಕೃತ್ಯಗಳೆಂದು ಬಗೆಯುವ ಎಲ್ಲ ನಡೆನುಡಿಗಳೂ ಪೂಜೆ ಸಲ್ಲುವಂತಿವೆ. ಏಕೆಂದರೆ ಹೀಗೆ ಕುಕೃತ್ಯಗಳನ್ನೆಸಗಿದವರೆಲ್ಲ ಆಗಿನ ಶ್ರೇಷ್ಠರು. ಯಯಾತಿಯಾದರೂ ಅಷ್ಟೇ; ದುಷ್ಯಂತನಾದರೂ ಅಷ್ಟೇ. ಪುರು ತೆರಳಬೇಕು ವೃದ್ಧಾಶ್ರಮಕ್ಕೆ.

ಈ ಪರಿಯ ಬದಲಾವಣೆಯು ಪ್ರಜಾತಂತ್ರ ವ್ಯವಸ್ಥೆಯಲ್ಲೂ ಬದಲಾಗಲಿಲ್ಲ, ಬದಲಾಗುವುದಿಲ್ಲ. ಜನರಿಗೆ ಅದೇ ಹಣೆಬರಹ. ಶ್ರೇಷ್ಠತೆಯ ಸಾಕಾರವೆಂದರೆ ಆಳುವವರು. ರಾಜಾ ಕಾಲಸ್ಯ ಕಾರಣಂ ಎಂದರು. ಸಕಾಲಕ್ಕೆ ದೊರೆಯು ಕಾರಣ; ಅಕಾಲಕ್ಕೆ ಯಾರು ಕಾರಣ ಎಂದು ಹೇಳಲೇ ಇಲ್ಲ. ಸುಖವೆಂದರೆ ಅಡಿಯಡಿ ಅಡಿಯಾಳಾಗಿರುವುದು ಮತ್ತು ದೊರೆಯ ಇಷ್ಟಾನಿಷ್ಟಗಳ ಹೆಡೆಯಡಿ ದಿನತಳ್ಳುವುದು. ಪಂಪನಂಥ ಕವಿ ಕೂಡಾ ಆಳರಸನನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತನ್ನ ಕಾವ್ಯನಾಯಕನನ್ನಾಗಿಸಬೇಕಾಯಿತು. ಇದನ್ನು ಕವಿಪ್ರತಿಭೆಯೆಂದರು. ಸೂಕ್ಷ್ಮವಾಗಿ ಗಮನಿಸಿದರೆ ಇವೆಲ್ಲ ಪ್ರಾಯೋಜಕತ್ವಕ್ಕೆ ಬಲಿಯಾದ ಪ್ರತಿಭೆ-ಪಾಂಡಿತ್ಯಗಳು. ಭಟ್ಟಂಗಿತನಕ್ಕೂ ಇದೆ ಕವಿಸಮಯ.

ಇಂದಿನ ಸ್ಥಿತಿ ಹೇಗಿದೆ? ಇದೇ ರೀತಿಯ ಮುಂದುವರಿದ ಭಾಗ. ನಮ್ಮ ಸಮಾಜದಲ್ಲಿ ಕಷ್ಟಪಡುವವರು ಬಡವರೋ ದೀನ-ದಲಿತರೋ ವಿನಾ ದೊಡ್ಡವರಲ್ಲ. ರಾತ್ರಿ ಪಾಳಿಯ ಕಾವಲುಗಾರನ ಸುಖಾಪೇಕ್ಷೆಯನ್ನು ಅಂದೂ ಮನ್ನಿಸಲಿಲ್ಲ; ಇಂದೂ ಮನ್ನಿಸುವುದಿಲ್ಲ. ಏಕೆಂದರೆ ಅವರೆಲ್ಲ ದುಡಿಯುವುದಕ್ಕೇ ಹುಟ್ಟಿದವರು. ಉಳಿದವರು? ಅನುಭವಿಸುವುದಕ್ಕೆ. ಸುಖವಾಗಿರಬೇಕಾದರೆ ಸತ್ಯ, ಧರ್ಮ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳನ್ನು ನಂಬಿ ನಡೆದರೆ ಪ್ರಯೋಜನವಿಲ್ಲ. ಪ್ರತಿಯೊಬ್ಬನೂ ತನ್ನ ಉತ್ಥಾನವನ್ನು ನೋಡಬಯಸುತ್ತಾನೆಯೇ ಹೊರತು ಸಮಾಜದ್ದನ್ನಲ್ಲ. ಇವೆಲ್ಲವು ನಡೆಯುವುದು ಯಾವುದು ಶಾಶ್ವತವಲ್ಲವೆಂದು ನಮಗೆ ಗೊತ್ತಿರುವ ಬದುಕಿನಲ್ಲಿ ಮತ್ತು ಯಾವುದೂ ಶಾಶ್ವತವಲ್ಲವೆಂಬ ನಮ್ಮ ಅರಿವಿನಲ್ಲಿ. ಕಾಣದ ದೇವದೇವತೆಗಳ ಪೂಜೆ ಮಾಡಿ ಸುಸ್ತಾಗದ ಮನುಷ್ಯನಿಗೆ ಕಾಣುವ ದೇವರ ವ್ಯಕ್ತಿಪೂಜೆ ದೊಡ್ಡದಲ್ಲ. ಆದ್ದರಿಂದ ರಾಜನನ್ನು ಪ್ರತ್ಯಕ್ಷ ದೇವರಾಗಿಸಿದರು. ರಾಜ ಸರಿಯಾದ್ದು ಮಾಡಬೇಕಾಗಿಲ್ಲ. ಆತ ಮಾಡಿದ್ದೇ ಸರಿ. ಅದನ್ನು ಸರಿಯೆಂದು ಸಮರ್ಥಿಸಲು ಪಂಡಿತರ ದಂಡೇ ಇತ್ತು; ಇದೆ. ವಿರೋಧಿಸಿದರೆ ಅಳಿಸುವ ವೀರಶೂರರು ತಮ್ಮ ಆಯುಧಗಳೊಂದಿಗೆ ಸದಾ ಸಿದ್ಧ; ಎಲ್ಲರೂ ಸಾಹಸ ಸನ್ನದ್ಧರೇ. ಜಗವೆಲ್ಲ ಮಲಗಿರಲು ರಾಜನೆಂಬವನಿದ್ದ; ನಿದ್ದೆ ಮಾಡುತ್ತಿದ್ದ. ಇಂದಿನ ಭಾರತದಲ್ಲೂ ಆಳುವವರು ಮಾತ್ರವಲ್ಲ ಇತರ ದೊಡ್ಡವರೂ ಮುಖ್ಯವೇ. ಏಕೆಂದರೆ ಅವರು ಆಳುವವರಿಗೆ ಪ್ರಿಯರು. ದೊರೆ ದೊಡ್ಡವನಾಗಬೇಕಾದರೆ ಆತನನ್ನು ನಚ್ಚಿದವರೆಲ್ಲ, ಮೆಚ್ಚಿದವರೆಲ್ಲ ದೊಡ್ಡವರಾಗಬೇಕು. ‘ಧನಿಯರ ಸತ್ಯನಾರಾಯಣ’ ಅಂದಿಗೂ ನಿಜವೇ; ಇಂದಿಗೂ ನಿಜವೇ. ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ಎಂಬ ಸುಶ್ರಾವ್ಯ ಹಾಡು ಕೇಳಿದಾಗ ಈ ಹರಿ ನಮ್ಮ ಕಾಲದ ಆಳುವವರಿಗೆ ಅವರ ಪ್ರಜೆಗಳು (ಆಧುನಿಕ ಪಾರಿಭಾಷಿಕತೆಯಲ್ಲಿ ದೇವರಿಗೆ ಭಕ್ತರು, ನಾಯಕರಿಗೆ ಅನುಯಾಯಿಗಳು, ಇತರರಿಗೆ ಚೇಲರು!) ಹೇಳುತ್ತಿರಲೂಬಹುದು ಎಂಬ ನಂಬಿಕೆ ಬರಬೇಕು. ಆಗಷ್ಟೇ ಅದರ ಸ್ವಾರಸ್ಯ. ಸಮಕಾಲೀನ ಸಂದರ್ಭವನ್ನು ಗಮನಿಸಿದರೆ ನಮ್ಮ ರಾಜಕೀಯ ಅಂತಲ್ಲ, ಯಾವುದೇ ವಲಯದ ಧುರೀಣರಿಗೆ ಹಾರತುರಾಯಿಗಳನ್ನು ಅಭಿನಂದನೆಗಳನ್ನು ಸಲ್ಲಿಸುವಾಗ ಇವುಗಳ ಅಗತ್ಯವಿದೆಯೇ ಎಂದು ಹೇಳುವವನಿಗೆ ಮೂರ್ಖತನದ ಪ್ರಶಸ್ತಿ ನೀಡಬೇಕಾದೀತು. ತಾನು ಹೇಳುತ್ತಿರುವುದು ಸುಳ್ಳು ಮತ್ತು ಸುಳ್ಳು ಮಾತ್ರ ಎಂದು ಗೊತ್ತಿದ್ದವನೂ ಅದರ ಅರಿವೇ ಇಲ್ಲದಂತೆ ಭಜಿಸುತ್ತಾನೆ, ಸಮರ್ಥಿಸುತ್ತಾನೆ.

ಕಳೆದ ಕೆಲವು ವರ್ಷಗಳಿಂದ ಈ ವ್ಯಕ್ತಿಪೂಜೆ ಮಿತಿಮೀರಿದೆ ಅಥವಾ ಮಿತಿಯನ್ನು ಹೆಚ್ಚಿಸಲಾಗಿದೆ. ರಾಜಾ ಕಾಲಸ್ಯ ಕಾರಣಂ ಎಂಬುದನ್ನು ತಿದ್ದಿ ‘ಪ್ರಧಾನಮಂತ್ರಿ ಕಾಲಸ್ಯ/ಆಲಸ್ಯ ಕಾರಣಂ’ ಎನ್ನಬಹುದು. ಜೊತೆಗೆ ಅವರ ಆಪ್ತರೂ ಇದಕ್ಕೆ ಕಾರಣ. ನಮ್ಮ ಆಕಾಶವಾಣಿಯು ಅವಕಾಶವಾಣಿಯಂತೆ ಧ್ವನಿಸುರುಳಿಯನ್ನು ಬಿಚ್ಚಿದೆ. ಬೆಳಗಿನಿಂದ ರಾತ್ರಿಯ ಗೊರಕೆಯ ವರೆಗೆ ಒಬ್ಬನೇ ವ್ಯಕ್ತಿಯ ಸುದ್ದಿಯನ್ನು ಬಿತ್ತರಿಸಲಾಗುತ್ತದೆ. ಸಂದರ್ಭಸಹಿತ ವಿವರಿಸುವಾಗ ಅದೇ ಧ್ವನಿಯ ಅನಾವರಣದ ಬದಲಿಗೆ ನಾಯಕನ ದಿನಚರಿಯನ್ನು ಸಂಸತ್ತಿನ ಕಲಾಪದಂತೆ ವೀಕ್ಷಕ ವಿವರಣೆಯೊಂದಿಗೆ ಬಿತ್ತರಿಸಿದರೆ ಹೇಗಿರುತ್ತದೆ? ಅಗತ್ಯವಿದ್ದವರು ಕೇಳುತ್ತ ಕೂರಲಿ. ಉಳಿದವರಿಗೆ ಕಾಟವಿಲ್ಲ. ಇದು ಎಲ್ಲ ನಾಯಕರಿಗೆ ಅಭ್ಯಾಸವಾದರೆ ಒಳ್ಳೆಯದು. ಆದರೆ ರೈಲುಗಾಡಿಯನ್ನು ನೋಡಿ. ಇಂಜಿನ್ ಒಂದೇ ಸದ್ದು ಮಾಡುತ್ತ ನಡೆಯುತ್ತದೆ. ಉಳಿದ ಬೋಗಿಗಳು ಎಷ್ಟೇ ಸದ್ದುಮಾಡಲು ಯತ್ನಿಸಿದರೂ ಹಿಂದೆಯೇ ಹೋಗಬೇಕು. ಕೆಟ್ಟರೆ ಹೆಚ್ಚು ಸದ್ದು. ಮೌನವಾಗಿ ಅನುಸರಿಸುವುದೇ ಒಳ್ಳೆಯದೆಂಬ ತರ್ಕಕ್ಕೆ ಅನೇಕರು. ಅನ್ಯಥಾ ದಾರಿಯಿಲ್ಲ. ಮೌನವೇ ಆಭರಣ.

ಈಗ ಪ್ರಜಾಪ್ರಭುತ್ವದ ರಾಜ್ಯಭಾರ; ಕಾರುಬಾರು. ಆದ್ದರಿಂದ ಕಾಲಕ್ಕೆ ಪ್ರಜೆಯೇ ಕಾರಣ. ಹೌದಲ್ಲ! ಐದು ವರ್ಷಗಳಿಗೊಮ್ಮೆ ತಮ್ಮ ತೋರುಬೆರಳುಗಳನ್ನೆತ್ತಿ ತಮ್ಮ ದಾರಿಯನ್ನು ತಾವೇ ತೋರಿಸಿ ಬದುಕನ್ನು ಒಪ್ಪಿಸಿದರೆಂದರೆ ಮುಗಿಯಿತು. ಸರ್ವ ಸರ್ವಸ್ಯ ಕಾರಣ. ಈ ದೇಶದ ದೊಡ್ಡ ಸಮಸ್ಯೆಯೆಂದರೆ ಜನರು (ಇವರನ್ನು ಪ್ರಜೆಗಳೆಂದೋ, ಮತದಾರರೆಂದೋ ಹೇಳಿ; ಎಲ್ಲವೂ ಒಂದೇ!) ಅರೆಕ್ಷಣದಲ್ಲಿ ಒಲಿಯುತ್ತಾರೆ; ತಮ್ಮ ಅರಿವನ್ನೂ, ಇರುವಿಕೆಯನ್ನೂ ಮರೆತು ವಾಲುತ್ತಾರೆ. ಕೊರಳು ಎಡಕ್ಕೂ ಬಲಕ್ಕೂ ವಾಲುತ್ತದೆ. ಆದರೆ 360 ಡಿಗ್ರಿ ಚಲಿಸುವುದಿಲ್ಲವಲ್ಲ! ಯೋಚಿಸಿ ಯಾವುದನ್ನೂ ಕಾರ್ಯಗತ ಮಾಡುವವರು ಅಪರೂಪ. ಮೊದಲು ನಿಲುವನ್ನು ತಳೆದು ಆನಂತರ ಅದಕ್ಕೆ ಬೇಕಾದ ಸಮರ್ಥನೆಯನ್ನು ಮಾಡುವವರೇ ಅಪಾರ. ಒಂದರ್ಥದಲ್ಲಿ ಈ ಅಪಾರ ನಿಲುವೇ ಸರಿಯೋ ಏನೋ? ಮನೆ ಕಟ್ಟಬೇಕೆಂದು ಯೋಚಿಸದೆ ಅದಕ್ಕೆ ಬೇಕಾದ ನೆಲ, ಹಣ ಇವನ್ನು ಜೋಡಿಸುವುದಾದರೂ ಹೇಗೆ? ಹೀಗೆ ಯೋಚಿಸುವವನಲ್ಲಿ ನೆಲವೂ ಇರುವುದಿಲ್ಲ, ಹಣವೂ ಇರುವುದಿಲ್ಲ ಎಂಬ ಕಾರಣಕ್ಕೆ ಆತನ ಯೋಜನೆಯನ್ನು ನಿರರ್ಥಕವೆನ್ನಬಹುದೇ? ಕನಸು ಕಾಣಿರಿ, ಆಗ ಮಾತ್ರ ಬದುಕಿನಲ್ಲಿ ಏನಾದರೂ ಸಾಧಿಸಬಹುದು ಎಂಬ ಮಾತುಗಳನ್ನು ಅಶ್ರಯಿಸಿ ಇಂತಹ ನಿಲುವನ್ನು ತಳೆಯಬಹುದು ಮತ್ತು ಕನಸು ಕಾಣುವುದಕ್ಕಾಗಿಯೇ ನಿದ್ರಿಸಬಹುದು. ಜನರ ಬದುಕು ಚರಿತ್ರೆಯಾಗಬೇಕೆಂದೇ ಸ್ವಾತಂತ್ರ್ಯ ಹೋರಾಟ ನಡೆಯಿತು. ಜಲಿಯನ್‌ವಾಲಾಬಾಗ್ ನಡೆಯಿತು. ವಿಭಜನೆಯಾಯಿತು. ಬರ ಬಂದಿತು; ಪ್ರವಾಹ ಕಷ್ಟ ನೀಡಿತು. ಆದರೆ ಚರಿತ್ರೆ ಪಂಚತಾರಾ ಹೊಟೇಲ್‌ಗಳಲ್ಲಿ ಮಾತ್ರ ಸೃಷ್ಟಿಯಾಗುತ್ತಿದೆ.

ಸಂಶಯವಿದ್ದರೆ ನಮ್ಮ ಮಾಧ್ಯಮಗಳನ್ನು, ಸಾಮಾಜಿಕ ಜಾಲತಾಣಗಳನ್ನು ವಿಚಾರಿಸಿ; ಗಮನಿಸಿ. ದೊಡ್ಡವರಿಗೆ ಮಕ್ಕಳಾದರೆ ಬಡವರು ಸಂತೋಷಪಡಬೇಕಾಗಿದೆ. ಅಥವಾ ಹಾಗೆಂದು ವರದಿಯಾಗುತ್ತದೆ. ಕ್ಯಾಮರಾಗಳು ಬಡವರ ದುಃಖಗಳನ್ನು ಚಿತ್ರಿಸುತ್ತವೆ-ಮನೋರಂಜನೆಯಾಗಿ ಮಾತ್ರ. ನಮ್ಮ ಸಿನೆಮಾಗಳು, ಸಾಹಿತ್ಯಗಳು ಹೊಸಬಗೆಯ ವಿಕೃತಿಗಳನ್ನು ಸೃಷ್ಟಿಸುತ್ತಿವೆಯಲ್ಲ; ಯಾರ ಲಾಭಕ್ಕಾಗಿ? ನಮ್ಮ ಸಾಹಿತಿಗಳಿಗೆ ಪದವಿ ಪ್ರಶಸ್ತಿಗಳು ಬಂದರೆ ಸಾಕು: ಜಗತ್ತು ಮುಳುಗಿದರೂ ಪರವಾಗಿಲ್ಲ. ಅಪಾರ್ಟ್ ಮೆಂಟುಗಳಲ್ಲಿ ಪಕ್ಕದವರೇ ಸತ್ತರೂ ನೋಡುವುದಿಲ್ಲ ಜನ; ಮರುದಿನ ಟಿವಿಯಲ್ಲೋ ಪತ್ರಿಕೆಯಲ್ಲೋ ನೋಡಬಹುದಲ್ಲ ಎಂಬ ಅವಧೂತ ಪ್ರಜ್ಞೆ. ಈಚೆಗೆ ಸಾಕಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದು ಸುದ್ದಿಯಾಗುತ್ತಿದೆ. ಮತ್ತೆ ಮರೆತುಹೋಗುತ್ತಿದೆ. ಏಕೆಂದರೆ ಆತ್ಮ ಅವಿನಾಶಿ. ಅದು ಹತ್ಯೆಯಾಗುವಂತಿಲ್ಲ. ಸರಕಾರವಾಗಲೀ ಇತರ ನಾಯಕರಾಗಲೀ, ಅಧಿಕಾರಿಗಳಾಗಲೀ ಆ ಬಗ್ಗೆ ತಲೆಕೆಡಿಸಿಕೊಳ್ಳುವ ವ್ಯವಧಾನ ಹೊಂದಿಲ್ಲ. ಅಗತ್ಯವೂ ಇಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಚಿಂತೆ; ಚಿತೆಗೂ ಚಿಂತೆಯಿದೆಯಂತಲ್ಲ! ಇಂಜೆಕ್ಷನ್ ನೀಡುವವರೂ ‘‘ಸಾಯಲಿ ಎಂದು ಇಂಜೆಕ್ಷನ್ ಕೊಟ್ಟೆ!’’ ಎಂದರೆ ಮದುವೆಗೆ ಉಡುಗೊರೆ ನೀಡುವವರೂ ‘‘ಹಾಳಾಗಿ ಹೋಗಲಿ ಎಂದು ಉಡುಗೊರೆ ನೀಡಿದೆ’’ ಎನ್ನುತ್ತಾರೆ. ಮುಖ್ಯ ಅರ್ಥವಿಷ್ಟೇ: ಬದುಕು ಪರಾರ್ಥಕ್ಕಾಗಿ ಅಲ್ಲ. ಅದು ನಮ್ಮ ಏಳ್ಗೆಗೆ. ಕೊನೆಗೂ ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಲ್ಲವೇ? ಈ ವ್ಯಾಯಾಮದಲ್ಲಿ ಏಕಲವ್ಯನ ಹೆಬ್ಬೆೆರಳು ಕತ್ತರಿಸಿಹೋದರೆ ಯಾಕೆ ಚಿಂತಿಸಬೇಕು? ಅಭಿಮನ್ಯು ಸತ್ತರೆ ನಷ್ಟವಿಲ್ಲ. ದುರ್ಯೋಧನ ಸಾಯಬೇಕಾದ್ದು ಅಂತಿಮ ಗುರಿ. ದ್ರೌಪದಿಯು ಕಳೆದುಕೊಂಡದ್ದು ವಸ್ತ್ರ ಮಾತ್ರ; ಮಾನಹರಣವಾಗಿಲ್ಲ. ತಾನಂದು ಗೋಪಿಕಾಸ್ತ್ರೀಯರ ಸೀರೆಗಳನ್ನು ಕದ್ದು ಇಟ್ಟುಕೊಂಡದ್ದು ಈ ದ್ರೌಪದಿಗೆ ನೀಡುವುದಕ್ಕಲ್ಲವೇ ಎನ್ನುತ್ತಾನೆ ಕೃಷ್ಣ.

ಕಾಲ ಸಾಗುತ್ತದೆ. ನಾಲ್ಕು ಕಾಲಿನ ಅಥವಾ ಎರಡು ಕಾಲಿನ ಪ್ರಾಣಿಗಳಿಗೆ ಡೈನೊಸಾರ್ ರೀತಿಯಲ್ಲಿ ನಶಿಸಿಹೋಗುವ ಯೋಗ ಬಂದಾಗಲೂ ಪಾಠ ಬಾರದು. ಹೇಳಿದ್ದಾನಲ್ಲ ಭೃತೃಹರಿ-ಕಾಲ ಕೆಡುವುದಿಲ್ಲ, ಕೆಡುವುದು ನಾವೇ! ಅಂತ. ಧರ್ಮರಾಯನ ಸಿಂಹಾಸನಾಭಿಷೇಕದ ಹೊತ್ತಿನಲ್ಲಿ ಭೀಷ್ಮರು ಉತ್ತರಾಯಣಕ್ಕೆ ಕಾದುಕೊಂಡು ಬದುಕುತ್ತಾರೆ- ಸರಳಮಂಚದಲ್ಲಿ. ಬೇಕಾದರೆ ಅಡ್ವಾಣಿಯವರನ್ನು ವಿಚಾರಿಸಿ. ಮುರಳಿ ಮನೋಹರ ಜೋಷಿಯವರು ಸಿಗರು. ಈ ಸ್ಯಾಂಪಲ್ಲುಗಳನ್ನು ನಿಮ್ಮ ಅಭಿರುಚಿಗನುಸಾರವಾಗಿ ಬದಲಾಯಿಸಿಕೊಳ್ಳಬಹುದು. ಹೀಗೆ ದೇಶದೆಲ್ಲೆಡೆ ಪ್ರತಿಮಾಲೋಕ ರಚನೆಯಾಗಬೇಕಾದ್ದು ಮುಖ್ಯ. ಸರ್ದಾರರದ್ದು ಮಾತ್ರವಲ್ಲ. ಎಲ್ಲರದ್ದೂ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)