‘ವಯಸ್ಸು ಆಗೋಯ್ತಲ್ಲ ನಮಗೆ': ಸಿದ್ದರಾಮಯ್ಯ-ಬಿಎಸ್ವೈ ಮುಖಾಮುಖಿ
photo- twitter@siddaramaiah
ಬೆಂಗಳೂರು, ಸೆ. 22: ಸದಾ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಾ ಬದ್ಧ ವೈರಿಗಳಂತೆ ಕಾಣುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿ ಕೈಕುಲುಕಿ, ಹಾಸ್ಯ ಮಾಡಿದ್ದು ವಿಧಾನಸಭೆಯ ಮೊಗಸಾಲೆಯಲ್ಲಿ ನಡೆಯಿತು.
ಗುರುವಾರ ಸ್ಪೀಕರ್ ಕಚೇರಿಯಲ್ಲಿ ನಡೆದ ಸಭೆ ಮುಗಿಸಿ ಹೊರಗೆ ಬರುವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬರುವ ವೇಳೆ ಎದುರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸರ್ ವಿಧಾನ ಪರಿಷತ್ತಿಗೆ(ಕೌನ್ಸಿಲ್)ಗೆ ಹೋಗ್ತಾ ಇದೀನಿ' ಎಂದರು. ಬಿಎಸ್ವೈ ‘ಆಗಲಿ' ಎಂದು ಬೀಳ್ಕೊಟ್ಟರು. ಇದೇ ವೇಳೆ ಎದುರಿಗೆ ಸಿಕ್ಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜೋಕ್ ಮಾಡಿದ ಯಡಿಯೂರಪ್ಪ, ‘ಏನು ಸಿದ್ದರಾಮಯ್ಯ ಅವರೇ ನೀವೂ ಕೌನ್ಸಿಲ್ಗೆ ಹೋಗ್ತಾ ಇದ್ದೀರೋ?' ಎಂದು ಪ್ರಶ್ನಿಸಿದರು.
ಇದಕ್ಕೆ ನಕ್ಕ ಸಿದ್ದರಾಮಯ್ಯ, ‘ಯಡಿಯೂರಪ್ಪ ಅವರೇ ವಯಸ್ಸು ಆಗೋಯ್ತಲ್ಲ ನಮಗೆ. ನೀವು ಕೌನ್ಸಿಲ್ಗೆ ಹೋಗಲು ಆಗಲ್ಲ, ನಾನು ಹೋಗಲು ಆಗಲ್ಲ' ಎಂದು ಚಟಾಕಿ ಹಾರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಹುಣಸೂರು ಮಂಜುನಾಥ್, ಚಂದ್ರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
ವಿಧಾನಸಭಾ ಕಲಾಪಕ್ಕೆ ತೆರಳುವ ವೇಳೆ ಆಕಸ್ಮಿಕವಾಗಿ ಸಿಕ್ಕ ಮಾಜಿ ಮುಖ್ಯಮಂತ್ರಿ @BSYBJP ಅವರ ಜೊತೆ ಕೆಲಕ್ಷಣಗಳ ಆತ್ಮೀಯ ಮಾತುಕತೆ. pic.twitter.com/oqA7iKuSGQ
— Siddaramaiah (@siddaramaiah) September 22, 2022