varthabharthi


ರಾಷ್ಟ್ರೀಯ

ವಕ್ಫ್ ಆಸ್ತಿ ಎಂದು ತಪ್ಪಾಗಿ ನೊಂದಾಯಿಸಲಾದ ಬಂಜರು ಭೂಮಿಯ ಕಂದಾಯ ದಾಖಲೆ ಪರಿಶೀಲಿಸಲು ಉ.ಪ್ರ. ಸರಕಾರ ಸೂಚನೆ

ವಾರ್ತಾ ಭಾರತಿ : 22 Sep, 2022

ಲಕ್ನೋ, ಸೆ. 22: ಬಂಜರು ಭೂಮಿಯನ್ನು ವಕ್ಫ್ ಆಸ್ತಿ ಎಂದು ತಪ್ಪಾಗಿ ನೋಂದಾಯಿಸಲು ಕಾರಣವಾದ ಕಂದಾಯ ಇಲಾಖೆಯ 1989ರ ಆದೇಶವನ್ನು ಉತ್ತರಪ್ರದೇಶ ಸರಕಾರ ರದ್ದುಪಡಿಸಿದೆ.

ಇಸ್ಲಾಂ ಕಾನೂನು ಹಾಗೂ ಸಂಪ್ರದಾಯದ ಪ್ರಕಾರ ಧಾರ್ಮಿಕ ಹಾಗೂ ಕಲ್ಯಾಣ ಕಾರ್ಯಗಳಿಗೆ ದೇಣಿಗೆ ನೀಡಲಾದ ಸೊತ್ತು ವಕ್ಫ್ ವರ್ಗದಲ್ಲಿ ಬರುತ್ತದೆ. ಒಮ್ಮೆ ದೇಣಿಗೆ ನೀಡಿದರೆ, ಅದನ್ನು ‘‘ದೇವರ ಸೊತ್ತು’’ ಎಂದು ಪರಿಗಣಿಸಲಾಗುತ್ತದೆ. 1989ರ ಆದೇಶದ ಅಡಿಯಲ್ಲಿ ಕೈಗೊಳ್ಳಲಾದ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸುವಂತೆ ರಾಜ್ಯದ ಎಲ್ಲಾ ವಿಭಾಗೀಯ ಆಯುಕ್ತರು ಹಾಗೂ ಜಿಲ್ಲೆಯ   ದಂಡಾಧಿಕಾರಿಗಳಿಗೆ ಸರಕಾರ ಸೆಪ್ಟಂಬರ್ 7ರಂದು ನಿರ್ದೇಶಿಸಿದೆ.

ಉತ್ತರಪ್ರದೇಶದ ಮುಸ್ಲಿಂ ಕಾಯ್ದೆ-1960ರ ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಹಲವು ಸ್ಥಳಗಳ ಬಂಜರು ಭೂಮಿಯನ್ನು ವಕ್ಫ್ ಆಸ್ತಿ ಎಂದು ನೋಂದಾಯಿಸಲಾಗಿತ್ತು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಇಲಾಖೆಯ ಉಪ ಕಾರ್ಯದರ್ಶಿ ಶಕೀಲ್ ಅಹ್ಮದ್ ಸಿದ್ದೀಕ್ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಹಾಗೂ ಪುರಸಭೆಯ ಭೂಮಿಯನ್ನು ಕೂಡ ವಕ್ಫ್ ಮಂಡಳಿ ವಶಪಡಿಸಿಕೊಂಡಿದೆ ಎಂದು ರಾಜ್ಯ ಸರಕಾರ ಹೇಳಿದೆ. ಆದರೆ, ಆಡಳಿತ ಮಂಡಳಿ ಹಾಗೂ ಈ ಪ್ರದೇಶದ ಸ್ವರೂಪದಲ್ಲಿ ಬದಲಾವಣೆಗೆ 1989ರ ಆದೇಶದಲ್ಲಿ ನಿಷೇಧ ವಿಧಿಸಲಾಗಿದೆ ಎಂದು ಅದು ತಿಳಿಸಿದೆ.

ಮುಸ್ಲಿಂ ಕಾನೂನು ಹಾಗೂ ಸಂಪ್ರದಾಯಕ್ಕೆ ಅನುಗುಣವಾಗಿ ಧಾರ್ಮಿಕ ಹಾಗೂ ಕಲ್ಯಾಣ ಕಾರ್ಯಗಳಿಗೆ ದೇಣಿಗೆ ನೀಡಲಾದ ಸೊತ್ತುಗಳನ್ನು ಮಾತ್ರ ವಕ್ಫ್‌ನದೆಂದು ಪರಿಗಣಿಸಬಹುದೆಂದು ಎಂದು ಸಿದ್ದೀಕ್ ಅವರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)