varthabharthi


ನಿಮ್ಮ ಅಂಕಣ

ಶಾಲೆಗಳಲ್ಲಿ ಭಗವದ್ಗೀತೆ, ವೇದಗಣಿತದ ಪ್ರಯೋಗ ಸರಿಯಲ್ಲ

ವಾರ್ತಾ ಭಾರತಿ : 22 Sep, 2022
ಪು.ಸೂ. ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ನಮ್ಮ ಶಿಕ್ಷಣ ಸಚಿವರು ರಾಜ್ಯದ ಶಾಲಾ ಪಠ್ಯಪುಸ್ತಕಗಳಲ್ಲಿ ನೈತಿಕ ಶಿಕ್ಷಣವನ್ನು ಅಳವಡಿಸಲು ರಾಜ್ಯ ಸರಕಾರ ಮುಂದಾಗಿದ್ದು, ಅದರಲ್ಲಿ ಭಗವದ್ಗೀತೆ ಬೋಧನೆಯನ್ನು ಈ ವರ್ಷದಿಂದಲೇ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿರುವುದು (ವಾ.ಭಾ. ಸೆ.20) ಮತ್ತು 5ರಿಂದ 8ನೇ ತರಗತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ವೇದಗಣಿತವನ್ನು ಬೋಧಿಸಲಾಗುವುದು ಎಂಬ ಹೇಳಿಕೆ ಹಾಗೂ ತತ್ಸಂಬಂಧಿತ ಸುತ್ತೋಲೆ (ವಾಪಸ್ ಪಡೆಯಲಾಗಿದೆ ಎಂಬ ಸುದ್ದಿ ಸದ್ಯಕ್ಕೆ ಬಂದಿದೆ.) ಜೊತೆಗೆ ರೋಹಿತ್ ಚಕ್ರತೀರ್ಥರ ಅಸಾಂವಿಧಾನಿಕ ಪಠ್ಯಪರಿಷ್ಕರಣೆಯ ನಾಮ್ ಕೆ ವಾಸ್ತೆ ತಿದ್ದುಪಡಿಗಳನ್ನು ಗಮನಿಸಿದರೆ ಅವರು ಶಿಕ್ಷಣ ಇಲಾಖೆಯ ಕೇಸರೀಕರಣದ ಕಠಿಣವ್ರತವನ್ನು ಕೈಗೊಂಡಿದ್ದಾರೆ ಹಾಗೂ ತನ್ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಅಪ್ರಸಕ್ತಗೊಳಿಸುತ್ತಿದ್ದಾರೆ ಎಂದು ಯಾರಿಗೆ ಆದರೂ ಅನ್ನಿಸದಿರದು.

ಏಕೆಂದರೆ ಇತ್ತೀಚೆಗೆ ವಿಧಾನಸಭೆಯಲ್ಲಿ ಮಾನ್ಯ ಸಚಿವರೇ ರಾಜ್ಯದ ಸರಕಾರಿ ಶಾಲೆಗಳಲ್ಲಿ 47 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇರುವುದನ್ನು, ಅವುಗಳ ಪೈಕಿ 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದೂ ಹಾಗೂ ಕೊರತೆ ಇರುವ 24 ಸಾವಿರ ಕೊಠಡಿಗಳಲ್ಲಿ ಕೇವಲ 8,100 ಕೊಠಡಿಗಳನ್ನು ಮಾತ್ರ ನಿರ್ಮಿಸುವುದಾಗಿ ಹೇಳಿದ್ದಾರೆ. ಬಡಮಕ್ಕಳಿಗೆ ಇರುವ ಸರಕಾರಿ ಶಾಲೆಗಳನ್ನು ಪ್ರತೀವರ್ಷ ಮುಚ್ಚಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಗಳನ್ನು ಓದುತ್ತಲೇ ಇದ್ದೇವೆ. ಅಳಿದುಳಿದ ಶಾಲೆಗಳಲ್ಲೂ ಶೌಚಾಲಯ, ಗ್ರಂಥಾಲಯ, ಪ್ರಯೋಗಶಾಲೆ, ಆಟದ ಮೈದಾನ ಇತ್ಯಾದಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಹಾಲಿ ಇರುವ ಸಾಕಷ್ಟು ಶಿಕ್ಷಕರನ್ನು ಪಠ್ಯ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಶಕ್ತರನ್ನಾಗಿಸಬೇಕಾದ (ಛಿಚ್ಚಛ್ಟಿ ಛಿಞಟಡಿಛ್ಟಿಞಛ್ಞಿಠಿ) ಜರೂರಿನ ಜವಾಬ್ದಾರಿಯ ಬಗ್ಗೆ ಇಲಾಖೆ ದಿವ್ಯ ನಿರ್ಲಕ್ಷ್ಯವನ್ನು ತಳೆದಿದೆ. ಹೀಗೆ ಇನ್ನೂ ನಾನಾ ಕಾರಣಗಳಿಗಾಗಿ ಸರಕಾರಿ ಶಾಲೆಗಳು ಶಿಕ್ಷಣ ಇಲಾಖೆಯ ತೀವ್ರ ಔದಾಸೀನ್ಯಕ್ಕೆ ಗುರಿಯಾಗಿ ದೇಶದ ಭವಿಷ್ಯವನ್ನು ನಿರ್ಮಿಸುವ ಬಹುಮುಖ್ಯ ಅಂಗವೇ ರೋಗಗ್ರಸ್ತವಾಗಿರುವುದನ್ನು ಕನಿಷ್ಠ ಮಟ್ಟಿಗೆ ಸರಿಪಡಿಸುವ ಗಂಭೀರ ಪ್ರಯತ್ನಗಳನ್ನು ಕೈಗೊಳ್ಳದೆ ಅನಗತ್ಯವಾದ ಹಾಗೂ ಅರ್ಥಹೀನವಾದ ಚಟುವಟಿಕೆಗಳಲ್ಲಿ ಕಾಲಹರಣ ಮಾಡುವುದು ಖಂಡಿತ ಖಂಡನಾರ್ಹವಾದುದಾಗಿದೆ.
ಅಂತೆಯೇ, ನೈತಿಕ ಶಿಕ್ಷಣವನ್ನು ಸರಳವಾದ ಕಥೆಗಳ ಮೂಲಕ, ಪ್ರಶ್ನೋತ್ತರ, ಸಂವಾದ, ಚರ್ಚೆ ಮುಂತಾದ ಹಲವು ಆನಂದದಾಯಕ ವಿಧಾನಗಳ ಮೂಲಕ ನೀಡಬಹುದು. ಅದರ ಬದಲು ಭಗವದ್ಗೀತೆಯ ಪ್ರಯೋಗ ಸರಿಯಲ್ಲ.
ಇನ್ನು ವೇದಗಣಿತವೆಂಬ ಪುಸ್ತಕದ ಕರ್ತೃವಾದ ಶ್ರೀ ಭಾರತೀ ಕೃಷ್ಣ ತೀರ್ಥರೇ ಆನಂತರ ವೇದಗಣಿತವೆಂಬುದಿಲ್ಲ, ಅದು ತನ್ನದೇ ಅಂಕಗಣಿತಾತ್ಮಕ ಕೂಡು, ಕಳೆ, ಗುಣಿಸು, ಭಾಗಿಸು ಮುಂತಾದ ಸುಲಭೋಪಾಯಗಳೆಂದು ಒಪ್ಪಿಕೊಂಡಿರುವಾಗ ಅಂತಹುದನ್ನು ದಲಿತ ಮಕ್ಕಳ ಮೇಲೆ ಹೇರುವುದಲ್ಲದೆ, ಅವರ ಅಭಿವೃದ್ಧಿಗೆ ಮೀಸಲಾದ ಹಣವನ್ನು ಅಮಾನವೀಯವಾಗಿ ತಮ್ಮ ರಾಜಕೀಯ ದುರುದ್ದೇಶಗಳಿಗೆ ಬಳಸಿಕೊಳ್ಳಲೆತ್ನಿಸುವುದು ಯಾವ ರೀತಿಯ ಶೈಕ್ಷಣಿಕ ಚಿಂತನೆಯಾದೀತು ! ?
ದಯವಿಟ್ಟು ಇನ್ನಾದರೂ ನಮ್ಮ ರಾಜ್ಯದ ಗ್ರಾಮೀಣ ಹಾಗೂ ಬಡಮಕ್ಕಳ ಪಾಲಿನ ಸರಕಾರಿ ಶಾಲೆಗಳನ್ನು ಸುವ್ಯವಸ್ಥೆಗೊಳಿಸುವ ನೈಜವಾದ (ಅಕಾಡಮಿಕ್ ಶೈಲಿಯ ದ್ರಾವಿಡ ಪ್ರಾಣಾಯಾಮಗಳು ಸದ್ಯಕ್ಕಂತೂ ಅನಗತ್ಯ ಅಂತ ಅನಿಸುತ್ತೆ.) ಯೋಜನೆಗಳ ಬಗೆಗೆ ಸಂಬಂಧಿಸಿದ ಎಲ್ಲರೂ ಯೋಚಿಸುವಂತಾಗಲಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)