varthabharthi


ಬೆಂಗಳೂರು

ಸರಕಾರದ ವಿರುದ್ಧ ಬೀದಿಗಿಳಿಯುವುದು ಅನಿವಾರ್ಯ: ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

ವಾರ್ತಾ ಭಾರತಿ : 22 Sep, 2022

ಬೆಂಗಳೂರು, ಸೆ.22: ನಿರುದ್ಯೋಗ ಸೇರಿದಂತೆ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ಗುರುವಾರ ನಗರದ ಕೊಂಡಜ್ಜಿ ಸಭಾಂಗಣದಲ್ಲಿ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಕರ್ನಾಟಕ(ಎಐಯುವೈಎಸ್ಸಿ) ಹಮ್ಮಿಕೊಂಡಿದ್ದ ನಿರುದ್ಯೋಗಿ ಯುವಜನರ ರಾಜ್ಯ ಮಟ್ಟದ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಖಾಲಿ ಇರುವ ಎಲ್ಲ ಹುದ್ದೆಗಳನ್ನು ಪಾರದರ್ಶಕವಾಗಿ ಸಮರೋಪಾದಿಯಲ್ಲಿ ಭರ್ತಿ ಮಾಡಲು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಆಗ್ರಹಿಸಿ ನಿರುದ್ಯೋಗಿ ಯುವಜನರ ರಾಜ್ಯ ಮಟ್ಟದ ಸಮಾವೇಶ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ನಿರುದ್ಯೋಗ ಸೇರಿದಂತೆ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಅನಿವಾರ್ಯ. ಅದಕ್ಕಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ. ಅಲ್ಲದೆ, ಆಡಳಿತದಲ್ಲಿರುವವರ ದುರಾಸೆಯಿಂದ ಸಮಸ್ಯೆಗಳು ತಲೆದೋರುತ್ತಿವೆ. ಅಭಿವೃದ್ಧಿ ಶೂನ್ಯವಾಗಿದೆ, ದುರಾಸೆ ಮಾತ್ರ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

50ರ ದಶಕದಿಂದ ಇಲ್ಲಿಯವರೆಗೂ ಸಾವಿರಾರು, ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣಗಳೇ ಬಯಲಿಗೆ ಬರುತ್ತಿವೆ. ಈ ಹಗರಣಗಳ ಕಾರಣದಿಂದಲೇ ಅಭಿವೃಧ್ಧಿ ಸಾಧ್ಯವಾಗುವುದಿಲ್ಲ. ನಿರುದ್ಯೋಗ ಹೆಚ್ಚಿದಂತೆ ಜನರಲ್ಲಿ ಆಕ್ರೋಶ ಹೆಚ್ಚಿ, ಅವರು ಬೀದಿಗೆ ಬಂದರೆ ಅದರ ಪರಿಣಾಮ ಆಳ್ವಿಕರ ಮೇಲೆ ಭೀಕರವಾಗಿರುತ್ತದೆ ಎಂದ ಅವರು, ನ್ಯಾಯವಾದ ಹಕ್ಕುಗಳನ್ನು ಪಡೆಯಲು ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.

ನಮ್ಮ ಜನ ಪ್ರತಿನಿಧಿಗಳಿಗೆ ಇಂದು ಜನರ ನೈಜ ಸಮಸ್ಯೆಗಳ ಬಿಸಿ ತಟ್ಟಲು ಪ್ರತಿಭಟನೆ ಅವಶ್ಯವಾಗಿದೆ. ಅಧಿಕಾರಿದಲ್ಲಿರುವವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ಆದ್ದರಿಂದ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಟ ಅನಿವಾರ್ಯ. ನಿಮ್ಮ ಹೋರಾಟದ ಜೊತೆ ನಾನೂ ಇದ್ದೇನೆ ಎಂದು ಅವರು ನುಡಿದರು.

ಎಐಡಿವೈಓನ ಅಖಿಲ ಭಾರತ ಉಪಾಧ್ಯಕ್ಷ ಡಾ.ಜಿ.ಎಸ್.ಕುಮಾರ್ ಮಾತನಾಡಿ, ಆಳ್ವಿಕರ ದುರಾಸೆಗೆ ಮುಖ್ಯ ಕಾರಣ ಇಂದಿನ ಶೋಷಣಾಯುಕ್ತ ಬಂಡವಾಳಶಾಹಿ ವ್ಯವಸ್ಥೆಯಾಗಿದೆ. ಇಂದು ನಮ್ಮ ಎಲ್ಲ ಸರಕಾರಗಳು ಬಂಡವಾಳಿಗರ ಪರವಾಗಿ ಆಳ್ವಿಕೆ ನಡೆಸುತ್ತಿದ್ದಾರೆ. ಕೆಲವೇ ಬಂಡವಾಳಗಾರರ ಹಿತಕ್ಕಾಗಿ 99 ಪ್ರತಿಶತ ದುಡಿಯುವ ಜನರ ಅವಶ್ಯಕತೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಟೀಕಿಸಿದರು.

ಚಿಂತಕ ಮಂಗ್ಳೂರು ವಿಜಯ ಮಾತನಾಡಿ, ದುಡಿಯುವವರಿಗೆ ಕೆಲಸ ಕೊಡುವುದು ಸರಕಾರದ ಕೆಲಸ. ನಾವು ಶ್ರಮಕ್ಕೆ ತಕ್ಕ ಪ್ರತಿಫಲ ಬಯಸುವುದು ನಮ್ಮ ಹಕ್ಕು. ಉದ್ಯೋಗ ನೀಡದೇ ಸರಕಾರಗಳು ಉಡಾಫೆಯಿಂದ ಉತ್ತರ ನೀಡುತ್ತಿವೆ. ಉದ್ಯೋಗ ನೀಡಿ ಇಲ್ಲವೇ ಜೈಲಿಗೆ ಕಳಿಸಿ ಎಂದು ಯುವಕರು ನಿರ್ಣಾಯಕವಾದ ಹೋರಾಟಕ್ಕೆ ಧುಮುಕಬೇಕಾಗಿದೆ ಎಂದು ಹೇಳಿದರು.

ಎಐಯುವೈಎಸ್‍ಸಿಯ ಅಖಿಲ ಭಾರತ ಅಧ್ಯಕ್ಷ ಈ.ವಿ.ಪ್ರಕಾಶ್ ಮಾತನಾಡಿ, ಇಂದು ಯುವಜನರನ್ನು ಬೇರೆಬೇರೆ ವ್ಯಸನಗಳಿಗೆ ತಳ್ಳಲಾಗುತ್ತಿದೆ. ದೇಶದ ಆರ್ಥಿಕ ನೀತಿಗಳು ಬಂಡವಾಳಗಾರರ ಪರವಾಗಿದ್ದು ಖಾಸಗೀಕರಣ ನೀತಿಗಳನ್ನು ವೇಗವಾಗಿ ಜಾರಿಗೊಳಿಸಲಾಗುತ್ತಿದೆ. ಉದ್ಯೋಗಗಳನ್ನು ನಾಶಪಡಿಸಲಾಗುತ್ತಿದೆ. ಆದ್ದರಿಂದ ನಮ್ಮ ಉದ್ಯೋಗದ ಹಕ್ಕಿಗಾಗಿ ಸಮರಶೀಲ ಹೋರಾಟವನ್ನು ಸರಿಯಾದ ವೈಚಾರಿಕತೆಯೊಂದಿಗೆ ಕಟ್ಟೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಐಡಿವೈಓನ ರಾಜ್ಯ ಕಾರ್ಯದರ್ಶಿಸಿದ್ದಲಿಂಗ ಬಾಗೇವಾಡಿ, ಚನ್ನಬಸವ ಜಾನೇಕಲ್, ಎಐಯುವೈಎಸ್‍ಸಿಯ ರಾಜ್ಯಾಧ್ಯಕ್ಷ ವಿಜಯ್‍ಕುಮಾರ್, ಭಾವನಿ ಶಂಕರ್ ಸೇರಿದಂತೆ ಪ್ರಮುಖರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)