varthabharthi


ವಿಶೇಷ-ವರದಿಗಳು

ಮಹಿಳೆಯರ ಕುರಿತ ಅಂಬೇಡ್ಕರ್ ದೃಷ್ಟಿಕೋನಗಳು

ವಾರ್ತಾ ಭಾರತಿ : 23 Sep, 2022
ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಕನ್ನಡಕ್ಕೆ: ದು. ಸರಸ್ವತಿ

ಮಹಿಳೆಯರ ಕುರಿತ ಡಾ.ಅಂಬೇಡ್ಕರ್ ಅವರ ಉದಾರ ದೃಷ್ಟಿಕೋನಗಳು ಅಸ್ಪೃಶ್ಯ ಮಹಿಳೆಯರ ಪರಿವರ್ತನೆಯ ಹಿಂದಿನ ಚಾಲಕ ಶಕ್ತಿಯಾಗಿದ್ದವು ಎಂಬುದನ್ನು ನಾವು ಮರೆಯುವಂತಿಲ್ಲ. ಡಾ. ಅಂಬೇಡ್ಕರ್ ಅವರ ಉದಾರ ದೃಷ್ಟಿಕೋನಗಳು, ವಿದೇಶದಲ್ಲಿ ಅವರು ಪಡೆದ ಉನ್ನತ ಶಿಕ್ಷಣದ ಫಲ ಮತ್ತು ಅವರ ಮನಸ್ಸಿನ ಮೇಲೆ ಆದ ಪಶ್ಚಿಮದ ಲಿಂಗಸಮಾನತೆಯ ಪ್ರಭಾವದ ಉತ್ಪನ್ನ ಎನ್ನುವುದು ತಪ್ಪು. ಬಾಬಾಸಾಹೇಬರು ವಿದ್ಯಾರ್ಥಿಯಾಗಿರುವಾಗಲೇ ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಶಿಕ್ಷಣ ಬೇಕು ಮತ್ತು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರೊಂದಿಗೆ ಕ್ರಿಯಾಶೀಲರಾಗಿರಬೇಕು ಎಂಬ ನಿಲುವು ಹೊಂದಿದ್ದರು.ತಮ್ಮ ವಿಮೋಚನೆಗಾಗಿ ಹೋರಾಟ ಮಾಡುವ ಅಸ್ಪೃಶ್ಯರ ಚಳವಳಿಗೆ ಡಾ. ಬಾಬಾಸಾಹೇಬರಂಥ ಸಮರ್ಥ ನಾಯಕ ಸಿಕ್ಕಾಗ ಬಹುಕಾಲದಿಂದಲೂ ಬಡತನ ಅಜ್ಞಾನ ಮತ್ತು ಮೌಢ್ಯದಲ್ಲಿ ಸಿಲುಕಿಕೊಂಡು ಉರಿಯುತ್ತಿದ್ದ ಸಮುದಾಯದ ಅಸ್ಮಿತೆಗೆ ಜ್ವಾಲೆ ಹೊತ್ತಿಕೊಂಡಿತು. ಸ್ವಯಂ ಪ್ರಜ್ಞೆಯನ್ನೇ ಕಳೆದುಕೊಂಡಿದ್ದ ಸಮುದಾಯವದು. ‘‘ಅಗಣಿತ ಕಾಲದಿಂದಲೂ ನಿಮ್ಮನ್ನು ಹೀಗೆ ಇಟ್ಟಿರುವುದರಿಂದ ನೀವು ಹಾಗೇ ಇರಬೇಕು’’ ಮತ್ತು ‘‘ಯಾವ ಫಲವನ್ನೂ ನಿರೀಕ್ಷಿಸದೆ ನಿಮ್ಮ ಕೆಲಸ ಮಾಡುತ್ತಲೇ ಇರಿ’’ ಎಂಬ ಹೇಳಿಕೆಗಳಿಂದ ಅಜ್ಞಾನದಲ್ಲಿದ್ದ ವಂಚಿತರಾಗಿದ್ದ ಜನರು ಸತ್ಯಕ್ಕೆ ಎಚ್ಚರವಾಗತೊಡಗಿದರು. ಅವರ ಮನದೊಳಗಿದ್ದ ಕೀಳರಿಮೆಯ ಭಾವನೆಯು ಕರಗತೊಡಗಿತು.

ಮಹಾಡ್ ಸತ್ಯಾಗ್ರಹದಲ್ಲಿ ಡಾ.ಅಂಬೇಡ್ಕರ್ ಮಾಡಿದ ಭಾಷಣ, ಅಸ್ಪೃಶ್ಯ ಮಹಿಳೆಯರಲ್ಲಿ ಕ್ರಾಂತಿಯನ್ನು ಉಂಟುಮಾಡಿತು. ಅವರ ವಿಚಾರಗಳು ಮತ್ತು ವರ್ತನೆಗಳು ಬದಲಾಗತೊಡಗಿದವು. ಸಭೆಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸತೊಡಗಿದರು. ಮಹಿಳಾ ಸಂಘಟನೆಗಳನ್ನು ರಚಿಸಲಾಯಿತು. ಸಭೆಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಮಹಿಳೆಯರು ಹುರುಪಿನಿಂದ ಮಾತನಾಡತೊಡಗಿದರು. ಮೆರವಣಿಗೆಗಳಲ್ಲಿ ಹೋದರು. ಚಳವಳಿ ಮತ್ತು ಅದರ ಹೋರಾಟಗಳಲ್ಲಿ ಸಕ್ರಿಯರಾದರು.

ಮಹಿಳೆಯರ ಕುರಿತ ಡಾ.ಅಂಬೇಡ್ಕರ್ ಅವರ ಉದಾರ ದೃಷ್ಟಿಕೋನಗಳು ಅಸ್ಪೃಶ್ಯ ಮಹಿಳೆಯರ ಪರಿವರ್ತನೆಯ ಹಿಂದಿನ ಚಾಲಕ ಶಕ್ತಿಯಾಗಿದ್ದವು ಎಂಬುದನ್ನು ನಾವು ಮರೆಯುವಂತಿಲ್ಲ. ಡಾ. ಅಂಬೇಡ್ಕರ್ ಅವರ ಉದಾರ ದೃಷ್ಟಿಕೋನಗಳು, ವಿದೇಶದಲ್ಲಿ ಅವರು ಪಡೆದ ಉನ್ನತ ಶಿಕ್ಷಣದ ಫಲ ಮತ್ತು ಅವರ ಮನಸ್ಸಿನ ಮೇಲೆ ಆದ ಪಶ್ಚಿಮದ ಲಿಂಗಸಮಾನತೆಯ ಪ್ರಭಾವದ ಉತ್ಪನ್ನ ಎನ್ನುವುದು ತಪ್ಪು. ಬಾಬಾಸಾಹೇಬರು ವಿದ್ಯಾರ್ಥಿಯಾಗಿರುವಾಗಲೇ ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಶಿಕ್ಷಣ ಬೇಕು ಮತ್ತು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರೊಂದಿಗೆ ಕ್ರಿಯಾಶೀಲರಾಗಿರಬೇಕು ಎಂಬ ನಿಲುವು ಹೊಂದಿದ್ದರು. ಬಾಬಾಸಾಹೇಬರ ಸ್ವಂತ ಕುಟುಂಬವು ಸುಸಂಸ್ಕೃತವಾಗಿತ್ತು; ಅವರ ತಂದೆಯವರು ತಮ್ಮ ಹೆಣ್ಣುಮಕ್ಕಳು ಮತ್ತು ಸೋದರಿಯರಿಗೆ ಓದಲು ಮತ್ತು ಬರೆಯಲು ಕಲಿಸಿದ್ದರು. ಬಾಬಾಸಾಹೇಬರ ಅತ್ತೆಯವರು ರಾಮಾಯಣ ಮತ್ತು ಮಹಾಭಾರತದಂತಹ ಕೃತಿಗಳ ಕುರಿತು ವ್ಯಾಖ್ಯಾನ ಮಾಡುತ್ತಿದ್ದರು. ಸೇನೆಯ ಸೇವೆಯಲ್ಲಿದ್ದ ಕುಟುಂಬಗಳಲ್ಲಿ ಹುಡುಗಿಯರು ಮತ್ತು ಹುಡುಗರಿಬ್ಬರನ್ನೂ ಶಾಲೆಗೆ ಕಳಿಸುತ್ತಿದ್ದರು.

ಬಾಬಾಸಾಹೇಬರು ಅಮೆರಿಕದಲ್ಲಿ ವಿದ್ಯಾರ್ಥಿಯಾಗಿದ್ದಾಗ, ಸತಾರಾದ ಸೇನಾ ವಸತಿ ಬಡಾವಣೆಯಲ್ಲಿದ್ದ ಅವರ ನೆರೆಯವರಾದ ಜಾಮ್ದಾರ್ ಜಾಧವ್ (ಪೊಯಿಪ್‌ಕರ್) ಅವರಿಗೆ ಪತ್ರಬರೆದಿದ್ದರು. ಆ ಪತ್ರದಲ್ಲಿ, ಅವರು ತಮ್ಮ ಮಗಳನ್ನು ಶಾಲೆಗೆ ಕಳಿಸುತ್ತಿರುವುದಕ್ಕೆ ಶುಭಾಶಯಗಳನ್ನು ತಿಳಿಸಿದ್ದರು ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಜನ್ಮ ಮಾತ್ರ ನೀಡುತ್ತಾರೆ ಎನ್ನುವುದು ತಪ್ಪು, ಆ ಮಕ್ಕಳ ಕರ್ಮವೂ ಅವರದೇ. ಮಕ್ಕಳನ್ನು ರೂಪಿಸಬೇಕು. ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಶಿಕ್ಷಣ ಕೊಡಿಸಿದರೆ, ನಾವು ಶೀಘ್ರವಾಗಿ ಪ್ರಗತಿ ಸಾಧಿಸುವುದರಲ್ಲಿ ಅನುಮಾನವೇ ಇಲ್ಲ; ಹಾಗಾಗಿ ಇಂತಹ ವಿಚಾರಗಳನ್ನು ಕನಿಷ್ಠ ಪಕ್ಷ ನಿಮ್ಮ ನಿಕಟ ಸಂಬಂಧಿಕರಲ್ಲಾದರೂ ಹಂಚಿಕೊಳ್ಳಬೇಕು ಎಂದು ಬರೆದಿದ್ದರು. ಇಲ್ಲಿ ಬಾಬಾಸಾಹೇಬರು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿ ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ.

ಬಾಬಾಸಾಹೇಬ್ ಅವರು ಔರಂಗಾಬಾದ್‌ನಂತಹ ಸಹಶಿಕ್ಷಣದ ಕಲ್ಪನೆಯೇ ಇಲ್ಲದ, ಸಾಮಾಜಿಕವಾಗಿ ಹಿಂದುಳಿದ ಪಟ್ಟಣದಲ್ಲಿ ಕಾಲೇಜನ್ನು ಆರಂಭಿಸಿ, ಹುಡುಗರು ಮತ್ತು ಹುಡುಗಿಯರಿಬ್ಬರಿಗೂ ಪ್ರವೇಶ ನೀಡಿದರು. ಜೊತೆಗೆ ನಗರದಿಂದ ಬಸ್ ಸೌಲಭ್ಯವನ್ನೂ ಕಲ್ಪಿಸಿ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಿದರು. ವ್ಯಕ್ತಿಗಳಾಗಿ ಪ್ರತಿಯೊಬ್ಬ ಹುಡುಗಿಗೂ ಸ್ವತಂತ್ರ ಅಸ್ತಿತ್ವವಿದೆಯೆಂದು ಬಾಬಾಸಾಹೇಬರು ತೋರಿಸಿಕೊಟ್ಟರು. ಅಲ್ಲದೆ ಬಾಂಬೆಯ ರಾವಳಿ ಕ್ಯಾಂಪ್‌ನಲ್ಲಿ ಮಹಿಳಾ ಮಂಡಲಿಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹುಡುಗಿಯರಿಗೆ ಶಿಕ್ಷಣದ ಜೊತೆಗೆ ಸದ್ಗುಣದ ವರ್ತನೆಯೂ ಮುಖ್ಯ ಎಂಬುದನ್ನು ಒತ್ತಿ ಹೇಳಿದರು.

ಲಂಡನ್‌ನಿಂದ ರಮಾಬಾಯಿಯವರಿಗೆ ಬರೆದ ಪತ್ರಗಳಲ್ಲಿ ಬಾಬಾಸಾಹೇಬರು ಅವರು ಓದಲು ಮತ್ತು ಬರೆಯಲು ಪ್ರೋತ್ಸಾಹಿಸುತ್ತಿದ್ದರು. ಅವರ ಓದಿನ ಬಗ್ಗೆ ಪ್ರೀತಿಯಿಂದ ವಿಚಾರಿಸುತ್ತಿದ್ದರು, ತಮ್ಮ ಪತಿಯನ್ನು ಒಲಿಸಿಕೊಳ್ಳಲು ರಮಾಬಾಯಿಯವರು ಓದಲಾರಂಭಿಸಿದರಲ್ಲದೆ ಅವರು ವಿದೇಶದಲ್ಲಿದ್ದಾಗ ಪತ್ರಗಳನ್ನು ಬರೆದರು. ಜಸ್ಟಿಸ್ ರಾನಡೆಯವರು ತಮ್ಮ ಪತ್ನಿಗಾಗಿ ಮಾಡಿದಂತಹ ಪ್ರಯತ್ನಗಳನ್ನು ಬಾಬಾಸಾಹೇಬ್ ಅವರು ತಮ್ಮ ಪತ್ನಿಯ ಶಿಕ್ಷಣಕ್ಕಾಗಿ ಮತ್ತು ಬೌದ್ಧಿಕ ಬೆಳವಣಿಗೆಗಾಗಿ ಮಾಡಲು ಆಗಲಿಲ್ಲ. ಇದಕ್ಕಿದ್ದ ಎರಡು ಕಾರಣಗಳೆಂದರೆ, ಅಂಬೇಡ್ಕರ್ ಮತ್ತು ರಾನಡೆಯವರ ಸಾಮಾಜಿಕ ಹಿನ್ನೆಲೆ ಮತ್ತು ಸಂಸ್ಕೃತಿಯಲ್ಲಿನ ವ್ಯತ್ಯಾಸ ಮತ್ತು ಅವರ ದಿನನಿತ್ಯದ ಕೆಲಸಗಳ ಸ್ವರೂಪದಲ್ಲಿದ್ದ ವ್ಯತ್ಯಾಸಗಳು. ಶಿಕ್ಷಣದತ್ತ ಪತ್ನಿಗೆ ಒಲವು ಮೂಡಿಸಿದ್ದಕ್ಕಾಗಿ ಬಾಬಾಸಾಹೇಬರನ್ನು ಖಂಡಿತವಾಗಿಯೂ ಪ್ರಶಂಸಿಸಬೇಕು. 1938ರಲ್ಲಿ ವಿದ್ಯಾರ್ಥಿಗಳ ಗುಂಪನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಬಾಬಾಸಾಹೇಬರು, ‘‘ಸಣ್ಣವಯಸ್ಸಿಗೆ ಮದುವೆ ಮಾಡಿ ತಮ್ಮ ಮಕ್ಕಳ ಜೀವನವನ್ನು ಪೋಷಕರು ಹಾಳು ಮಾಡಬಾರದು. ಪತ್ನಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಪುರುಷರ ಇಚ್ಛೆಯನ್ನು ಪರಿಗಣಿಸುವಂತೆ, ಗಂಡನನ್ನು ಆಯ್ಕೆಮಾಡಿಕೊಳ್ಳುವಾಗ ಹುಡುಗಿಯರ ಇಚ್ಛೆಯನ್ನೂ ಪರಿಗಣಿಸಬೇಕು. ಯಾವಾಗಲೂ ಸುಂದರ ಹುಡುಗಿಯರನ್ನು ಕುರೂಪಿ ಗಂಡಸರೊಂದಿಗೆ ಮದುವೆ ಮಾಡಿಸಲಾಗುತ್ತದೆ. ಇದು ತಮ್ಮಿಚ್ಛೆಯನ್ನು ವ್ಯಕ್ತಪಡಿಸಲು ಹುಡುಗಿಯರಿಗೆ ಅವಕಾಶವಿಲ್ಲದಿರುವುದನ್ನು ತೋರಿಸುತ್ತದೆ, ಮಹಿಳೆ ಒಬ್ಬ ವ್ಯಕ್ತಿ. ಆದ್ದರಿಂದ ಆಕೆಗೂ ವೈಯಕ್ತಿಕ ಸ್ವಾತಂತ್ರ್ಯವಿರಬೇಕು’’ ಎಂದು ಘೋಷಿಸಿದರು.

ಮಹಿಳಾ ಪರಿಷತ್ತಿನ ಮುಂದೆ 1942ರಲ್ಲಿ ಕೆಲವು ನಿರ್ದಿಷ್ಟ ಅಂಶಗಳಿಗೆ ಅವರು ಒತ್ತು ನೀಡಿ: ‘‘ಹುಡುಗರು ಮತ್ತು ಹುಡುಗಿಯರಿಗೆ ಸಣ್ಣವಯಸ್ಸಿನಲ್ಲೇ ಮದುವೆ ಮಾಡಬೇಡಿ, ಮೊದಲು ಅವರು ಆರ್ಥಿಕವಾಗಿ ಸ್ವತಂತ್ರರಾಗಬೇಕು. ಹೆಚ್ಚು ಮಕ್ಕಳ ಕೆಟ್ಟ ಪರಿಣಾಮಗಳನ್ನು ಅವರಿಗೆ ಮನವರಿಕೆ ಮಾಡಿಕೊಡಿ. ಹುಡುಗಿಯರ ಅಭಿವೃದ್ಧಿಗೆ ಮದುವೆ ಅಡ್ಡಿಯಾಗಿದೆ; ಅವಳ ಮೇಲೆ ಮದುವೆಯನ್ನು ಹೇರಬೇಡಿ. ಮದುವೆಯಾದ ಮೇಲೆ ಹೆಂಡತಿಯು ಗಂಡನ ಸ್ನೇಹಿತೆಯಾಗಬೇಕು ಮತ್ತು ಗೃಹಿಣಿಯಾಗಿ ಸಮಾನ ಹಕ್ಕುಗಳನ್ನು ಹೊಂದಿರಬೇಕು, ಆಕೆ ಗಂಡನ ಗುಲಾಮಳಾಗಿರಬಾರದು’’ ಎಂಬಂತಹ ಮಾತುಗಳನ್ನು ಆಡಿದರು.

ಮಹಾಡ್‌ನ ಚೌಡಾರ್ ಕೆರೆ ಸತ್ಯಾಗ್ರಹದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾಡಿದ ಭಾಷಣವು ಮಹಿಳೆಯರಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು. ಇಂತಹ ಭಾಷಣಗಳನ್ನು ಅವರು ಪದೇ ಪದೇ ಮಾಡಿದರು. ಬಾಂಬೆಯ ಚೆಂಬೂರಿನಲ್ಲಿ 1953, ಮೇ 29ರಂದು ‘‘ತೂಕದ ಆಭರಣಗಳನ್ನು ಧರಿಸಬೇಡಿ; ನಿಮ್ಮ ಉಡುಪು ನಿಮ್ಮ ಜಾತಿಯ ಗುರುತನ್ನು ತೋರಿಸುವಂತಿರಬಾರದು’’ ಎಂದು ಮಹಿಳೆಯರಿಗೆ ಹೇಳಿದರು.

ಡಾ. ಅಂಬೇಡ್ಕರ್ ಅವರು 1932, ಅಕ್ಟೋಬರ್‌ನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾದ ಮಾಡಲು ಸಾವಂತ್‌ವಾಡಿಗೆ ಭೇಟಿಕೊಟ್ಟಾಗ ಅಸ್ಪೃಶ್ಯ ಸಮುದಾಯವು ಆಯೋಜಿಸಿದ ಸಭೆಯಲ್ಲಿ ಇಂಥದೇ ಭಾಷಣವನ್ನು ಮಾಡಿದರು. ಭಾಷಣದಲ್ಲಿ ಅವರು ನೀಡಿದ ಸಲಹೆಗಳು ತಾಯಿಯೊಬ್ಬಳು ಮಗಳನ್ನು ತವರುಮನೆಯಿಂದ ಗಂಡನ ಮನೆಗೆ ಕಳಿಸುವಾಗ ನೀಡುವ ಸಲಹೆಗಳಂತಿದ್ದವು. ‘‘ನಿಮ್ಮ ಬದುಕು ಎಷ್ಟೇ ಕಷ್ಟದ್ದಾಗಿರಲಿ, ನಿಮ್ಮ ಮಗ ಮತ್ತು ಮಗಳನ್ನು ಶಾಲೆಗೆ ಕಳುಹಿ. ಸತ್ತ ಪ್ರಾಣಿಯ ಮಾಂಸವನ್ನು ಗಂಡಸರು ಮನೆಗೆ ತಂದರೆ ಕಠಿಣವಾಗಿ ವಿರೋಧಿಸಿ. ನಿಮ್ಮ ಬಟ್ಟೆಗಳು ಹರಿದುಹೋಗಿದ್ದರೂ, ಉಡುವ ಮುನ್ನ ಹೊಲಿದು, ಒಗೆದು ಧರಿಸಿರಿ. ನಿಮಗೂ ಮತ್ತು ಮೇಲ್ಜಾತಿ ಹಿಂದೂ ಮಹಿಳೆಯರ ನಡುವಿನ ವ್ಯತ್ಯಾಸ ಕಾಣಬಾರದು. ಇಷ್ಟನ್ನು ನೀವು ಮಾಡಿದರೂ, ನಮ್ಮ ಸಮುದಾಯವನ್ನು ವಿಮೋಚನೆಗೊಳಿಸುವ ಕೆಲಸದಲ್ಲಿ ನೀವು ಮಹತ್ವದ ಪಾತ್ರವಹಿಸಿದಂತೆ’’ ಮಹಿಳೆಯರು ನೆರೆದ ಕಡೆಯಲ್ಲೆಲ್ಲ ಬಾಬಾಸಾಹೇಬರು ಹೀಗೆ ಮಾತನಾಡಿದರು.

ನಿಪ್ಪಾಣಿಯಲ್ಲಿ 1952, ಡಿಸೆೆಂಬರ್ 25ರಂದು ದಲಿತ ಪರಿಷತ್ ಅನ್ನು ಆಯೋಜಿಸಲಾಗಿದ್ದು, ಪುರುಷರು ಮತ್ತು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಮಹಿಳೆಯರನ್ನು ಉದ್ದೇಶಿಸಿ ಬಾಬಾಸಾಹೇಬರು ‘‘ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾ ನಿಮ್ಮ ದಿನಗಳನ್ನು ಕಳೆಯುತ್ತಿದ್ದೀರಿ, ಇನ್ನೆಂಥ ಕೆಟ್ಟ ಪರಿಸ್ಥಿತಿ ಬರಬೇಕು? ನೀವು ಹೋರಾಟದಲ್ಲಿ ಭಾಗಿಯಾಗಬೇಕು’’ ಎಂದು ಹೇಳಿದರು.
ಬಡತನವೆಂದರೇನೆಂಬುದು ಬಾಬಾಸಾಹೇಬರಿಗೆ ಅನುಭವದಿಂದ ತಿಳಿದಿತ್ತು. ಅವರ ಸುತ್ತ ಇದ್ದ ಅಸ್ಪಶ್ಯ ಜನರಿಗೆ ಉಣ್ಣಲು, ಉಡಲು ಹೊಂದಿಸುವುದೇ ಕಷ್ಟವಾಗಿತ್ತು. ಬಡತನದಿಂದಾಗಿ ಪೂರ್ತಿ ಮೈ ಮುಚ್ಚಿಕೊಳ್ಳುವುದೂ ಸಾಧ್ಯವಾಗದ ತಾಯಂದಿರು ಮತ್ತು ಸೋದರಿಯರನ್ನು ನೋಡಿ ಅವರಿಗೆ ಹೃದಯ ಹಿಂಡಿದಂತಾಗುತ್ತಿತ್ತು, ಬಾವುರಾವ್ ಗಾಯಕ್ವಾಡ್ ಅವರಿಗೆ, ಬುದ್ಧ ಪೂರ್ಣಿಮೆಯ ದಿವಸ ಬಡ ಮತ್ತು ಅಗತ್ಯವಿರುವ ಮಹಿಳೆಯರಿಗೆ ನೂರಾರು ಸೀರೆಗಳನ್ನು ನೀಡಬೇಕೆಂದುಕೊಂಡಿರುವೆ ಎಂದು ಬರೆದು ತಿಳಿಸಿದರು.

ಬಡತನ ಮತ್ತು ಹೆಚ್ಚಿನ ಸಂಖ್ಯೆಯ ಮಕ್ಕಳು ಸಮುದಾಯದ ಶೀಘ್ರ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಬಾಬಾಸಾಹೇಬರು ಎಚ್ಚರಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ 1938ರಲ್ಲಿ ಮಾಡಿದ ಭಾಷಣದಲ್ಲಿ ಕುಟುಂಬ ಯೋಜನೆಯು ಪುರುಷ ಮತ್ತು ಮಹಿಳೆಯರಿಬ್ಬರದೂ ಜವಾಬ್ದಾರಿ ಎಂದು ಬಾಬಾಸಾಹೇಬರು ವಿವರಿಸಿದರು. ತಮ್ಮ ಕುಟುಂಬದ 14 ಸೋದರ ಮತ್ತು ಸೋದರಿಯರು ಮತ್ತು ಬಾಲ್ಯದ ಬಡತನ ಕುರಿತು ಮಾತನಾಡಿದರು. ‘‘ಮಕ್ಕಳು ಕಡಿಮೆ ಇದ್ದರೆ, ಮಹಿಳೆಯರಿಗೆ ಮಕ್ಕಳನ್ನು ಹೆರುವ ಅಪಾರ ಪರಿಶ್ರಮದಿಂದ ಬಿಡುಗಡೆ ಸಿಕ್ಕ್ಕಿ, ಅವರು ಇತರ ಕೆಲಸಗಳಲ್ಲಿ ತಮ್ಮ ಶಕ್ತಿಯನ್ನು ವ್ಯಯಿಸಬಹುದು’’ ಎಂದು ಹೇಳಿದರು.
ಇಂಡಿಪೆಂಡೆಂಟ್ ಲೇಬರ್ ಪಾರ್ಟಿಯ ಶಾಸಕ ಪ್ರಭಾಕರ್ ರೋಹಮ್ ಅವರು ಬಾಬಾಸಾಹೇಬರ ದೃಷ್ಟಿಕೋನಗಳಿಂದ ಪ್ರಭಾವಿತರಾಗಿ ಕುಟುಂಬ ಯೋಜನೆಯ ನಿರ್ಣಯವನ್ನು ಶಾಸನ ಸಭೆಯ ಮುಂದೆ ಇಟ್ಟರು. ಅದೇ ವರ್ಷ ಬಾಬಾ ಸಾಹೇಬರು ಮಹಿಳಾ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಪಟ್ಟ ಮಸೂದೆಯನ್ನು ಬೆಂಬಲಿಸಿದರು. ‘‘ಮಗು ಹುಟ್ಟುವ ಮೊದಲು ಮತ್ತು ನಂತರ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯವಿರುವುದರಿಂದ ಮಾಲಕರು ಆಕೆಗೆ ರಜೆಯ ಸಹಿತ ವೇತನವನ್ನು ನೀಡಬೇಕು’’ ಎಂದು ವಾದಿಸಿದರು. ಅನಾಥ ಮಕ್ಕಳು ಮತ್ತು ಪರಿತ್ಯಕ್ತ ಹಾಗೂ ಅವಿವಾಹಿತ ತಾಯಂದಿರಿಗೆ ಆಶ್ರಯ ಒದಗಿಸುವುದು ಬಾಬಾಸಾಹೇಬರ ಹೃದಯದಾಳದ ಇಚ್ಛೆಯಾಗಿತ್ತು. ಆದ್ದರಿಂದ ಅವರು ಔರಂಗಾಬಾದ್‌ನಲ್ಲಿ ಅನಾಥಾಲಯವನ್ನು ಕಟ್ಟಲು ಯೋಚಿಸಿದರು. ‘‘ಸಣ್ಣ ಮಕ್ಕಳನ್ನು ಇಲ್ಲಿ ಇರಿಸಬಹುದು. ಪರಿತ್ಯಕ್ತರಾದ ಮತ್ತು ಅವಿವಾಹಿತರಾದ ಬಡವರು, ನಿರ್ಗತಿಕ ತಾಯಂದಿರು ಬಿಟ್ಟುಹೋದ ಮಕ್ಕಳನ್ನು ನಾನು ಸಲಹುವೆ ಎಂದು ಹೇಳುತ್ತಿದ್ದರು.

ಮಹಿಳೆಯರ ಮೇಲೆ ಪುರುಷರು ಮಾಡುತ್ತಿದ್ದ ಅನ್ಯಾಯವನ್ನು ಅವರು ಸಹಿಸಿಕೊಳ್ಳುತ್ತಲೇ ಇರಲಿಲ್ಲ. ತನ್ನ ಹೆಂಡತಿಯನ್ನು ಅಸಮಾನವಾಗಿ ಕಾಣುವ ಪುರುಷನನ್ನು ಕಂಡರೆ ಆತನನ್ನು ಹಿಡಿದೆಳೆಯುತ್ತಿದ್ದರು. ಅಂತಹ ಒಂದು ಘಟನೆಯನ್ನು ಸ್ಮರಿಸಲಾಗಿದೆ. ಅಂಬೇಡ್ಕರ್ ಅವರ ನಿಕಟವರ್ತಿ ಜೀವಪ್ಪ ಐದಾಳೆಯವರು ಸೋಲಾಪುರ ಜಿಲ್ಲೆಯ ವಾವಿ ಗ್ರಾಮದಲ್ಲಿ ನೆಲೆಸಿದ್ದರು. ಆ ಹಳ್ಳಿಯ ಕಾರಭಾರಿ ಎಂಬ ಕಾರ್ಯಕರ್ತ 55ನೇ ವರ್ಷದಲ್ಲಿ ಮಕ್ಕಳಿಲ್ಲವೆಂದು ಎರಡನೆ ಮದುವೆಯಾಗಲು ಹೊರಟಿದ್ದ. ಬಾಬಾಸಾಹೇಬರು ಅವನನ್ನು ‘‘ಮಕ್ಕಳಾಗದಿರಲು ನೀನು ಕಾರಣವಾಗಿದ್ದು ನಿನ್ನ ಹೆಂಡತಿ ಎರಡನೇ ಗಂಡನನ್ನು ಮಾಡಿಕೊಳ್ಳಲು ಯೋಚಿಸಿದರೆ, ನಿನಗದು ಸರಿಯೇ? ನಿನಗೆ ಮಗು ಬೇಕಾಗಿರುವಂತೆ ಅವಳಿಗೂ ಬೇಕು, ಮಹಿಳೆಯರಿಗೂ ಮಕ್ಕಳ ಆಸೆ ಇಲ್ಲವೇ?’’ ಎಂದು ಕೇಳಿದರು.

ಬಾಬಾಸಾಹೇಬರು ನೈತಿಕತೆಯನ್ನು ಮುಖ್ಯವೆಂದು ಭಾವಿಸಿದ್ದರು. 1932ರಲ್ಲಿ ವಾಘ್ಯಾಗಳು, ಮುರಳಿಯರು ಮತ್ತು ದೇವದಾಸಿಯರಿಗೆ ಮಾಡಿದ ಭಾಷಣದಲ್ಲಿ ‘‘ವೇಶ್ಯಾವೃತ್ತಿಯನ್ನು ಬಿಟ್ಟು ನೈತಿಕ ಜೀವನ ನಡೆಸಿ. ನಾವು ಬಡತನಕ್ಕೆ ಅಂಜುವುದಿಲ್ಲ; ಅದು ಹುಟ್ಟಿನಿಂದಲೇ ನಮ್ಮಿಂದಿಗಿದೆ. ಹಾಗಾಗಿ ಬಡತನಕ್ಕೆ ಅಂಜಿ ಈ ವೃತ್ತಿಯನ್ನು ಕೈಗೊಳ್ಳಬೇಡಿ’’ ಎಂದು ಹೇಳಿದ್ದರು. ಪಟ್ಟೆ ಬಾಪುರಾವ್‌ನ ಕೆಲಸಕ್ಕಾಗಿ ಹಣ ಪಡೆಯುವುದನ್ನು ನಿರಾಕರಿಸುವ ಮೂಲಕ ಮಹಿಳೆಯರು ನೈತಿಕವಾಗಿ ಎತ್ತರಕ್ಕೇರಬೇಕು ಎಂಬ ನಿಲುವನ್ನು ತೆಗೆದುಕೊಂಡು ‘‘ಪವಲಬಾಯಿಯನ್ನು ಕುಣಿಸಿ ಸಂಪಾದಿಸಿದ ಹಣ ನನಗೆ ಬೇಡ’’ ಎಂದು ಘೋಷಿಸಿದರು.

ಡಾ. ಅಂಬೇಡ್ಕರ್ ಅವರು ಸೈಮನ್ ಕಮಿಷನ್ ಮುಂದೆ 1928ರ ಅಕ್ಟೋಬರ್ 23ರಂದು ಸಾಕ್ಷ್ಯ ನೀಡಿದರು. ಅವರು ಮುಂದಿಟ್ಟ ಮೊದಲ ಬೇಡಿಕೆ ಎಂದರೆ ಪ್ರಾಪ್ತ ವಯಸ್ಕರಾದ ಎಲ್ಲಾ ಪುರುಷರು ಮತ್ತು ಮಹಿಳೆಯರಿಗೆ ಮತ ಚಲಾವಣೆಯ ಹಕ್ಕು ನೀಡಬೇಕು. ಈ ಬೇಡಿಕೆಯನ್ನು ದುಂಡು ಮೇಜಿನ ಪರಿಷತ್ತಿನಲ್ಲೂ ಮತ್ತೆ ಮುಂದಿಟ್ಟರು. ಅವರು ಆರಂಭಿಸಿದ ಹಲವಾರು ಹೋರಾಟಗಳಲ್ಲಿ, ಕೆಲಸ ಮಾಡುವ ಸಾಮರ್ಥ್ಯದ ಆಧಾರದ ಮೇಲೆ ದಲಿತ ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ಒದಗಿಸಲು ಪ್ರಯತ್ನಿಸಿದರು. ಅವರು 1932-33ರಲ್ಲಿ ಶ್ರೀಮತಿ ಸಾವಿತ್ರಿಬಾಯಿ ಬೋರಾಡೆ ಮತ್ತು ಶ್ರೀಮತಿ ಅಂಬುಬಾಯಿ ಗಾಯಕ್ವಾಡ್ ಅವರನ್ನು ಜನತಾ ಸುದ್ದಿ ಪತ್ರಿಕೆಯ ಕಾರ್ಯಕಾರಿ ಸಮಿತಿಗೆ ಸೇರಿಸಿಕೊಂಡರು. ದಲಿತರ ಎಲ್ಲಾ ಪ್ರಮುಖ ಸಮ್ಮೇಳನಗಳಲ್ಲಿಯೂ ಮಹಿಳೆಯರಿಗಾಗಿ ಪ್ರತ್ಯೇಕ ವೇದಿಕೆಗಳನ್ನು ಕಲ್ಪಿಸಿದರು. ಅಂದರೆ ಪುರುಷರ ಜೊತೆ ಜೊತೆಯಲ್ಲೇ ಮಹಿಳಾ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿತ್ತು. ಈ ಮೂಲಕ ಮುಂದೆ ಮಹಿಳೆಯರು ತಮ್ಮದೇ ವೇದಿಕೆಗಳನ್ನು ನಿರ್ಮಿಸಿಕೊಂಡರು.

ಮಹಿಳೆಯರ ಹಕ್ಕುಗಳನ್ನು, ಅವರ ಉನ್ನತಿ ಮತ್ತು ಅಭಿವೃದ್ಧಿಯನ್ನು ಸಲಹೆ ಮಾತ್ರದಿಂದಲೇ ಸಾಧಿಸಲಾಗದು, ಕೆಲವು ಕಾನೂನಿನ ಸವಲತ್ತುಗಳು ಅವಶ್ಯಕ ಎಂಬುದನ್ನು ಗುರುತಿಸಿ ಬಾಬಾಸಾಹೇಬರು ಹಿಂದೂ ಕೋಡ್ ಬಿಲ್ ಅನ್ನು ಸಂಸತ್ತಿಗಾಗಿ ಸಿದ್ಧಪಡಿಸಿದರು.

(ಡಾ. ಎಚ್. ಎಸ್. ಅನುಪಮಾರ ಕವಿ ಪ್ರಕಾಶನ ಹೊರತಂದ ‘ನಾವೂ ಇತಿಹಾಸ ಕಟ್ಟಿದೆವು’ ಕೃತಿಯಿಂದ ಆಯ್ದ ಭಾಗ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)