varthabharthi


ವಿಶೇಷ-ವರದಿಗಳು

ಆಂಧ್ರ ಪ್ರದೇಶದಲ್ಲಿ ದೇಶದ್ರೋಹ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ!

ಆದಿತ್ಯನಾಥ್‌ರ ಹಾದಿಯಲ್ಲಿ ಜಗನ್‌ಮೋಹನ್ ರೆಡ್ಡಿ?

ವಾರ್ತಾ ಭಾರತಿ : 23 Sep, 2022
ಲುಭ್ಯತಿ ರಂಗರಾಜನ್

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ದ ವರದಿಯಂತೆ ಕಳೆದ ವರ್ಷ ಅತ್ಯಧಿಕ ದೇಶದ್ರೋಹ ಪ್ರಕರಣಗಳು ಆಂಧ್ರಪ್ರದೇಶದಲ್ಲಿ ದಾಖಲಾಗಿದ್ದವು. ಆ ವರ್ಷ ದೇಶಾದ್ಯಂತ ದಾಖಲಾಗಿದ್ದ 76 ದೇಶದ್ರೋಹ ಪ್ರಕರಣಗಳಲ್ಲಿ ಆಂಧ್ರಪ್ರದೇಶದ ಪಾಲು 29 ಆಗಿತ್ತು.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್‌ರೆಡ್ಡಿಯವರು ದೇಶದ್ರೋಹ ಕಾನೂನನ್ನು ಬಳಸಿಕೊಂಡು ಟೀಕಾಕಾರರನ್ನು ಮಟ್ಟ ಹಾಕಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಹೆಜ್ಜೆಗಳಲ್ಲಿ ಸಾಗುತ್ತಿದ್ದಾರೆಯೇ?

ಮೇ 2019ರಲ್ಲಿ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ 175 ಸ್ಥಾನಗಳ ಪೈಕಿ 151 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಪ್ರಚಂಡ ಗೆಲುವನ್ನು ಗಳಿಸಿತ್ತು ಮತ್ತು ರೆಡ್ಡಿ ಮುಖ್ಯಮಂತ್ರಿ ಗದ್ದುಗೆಗೇರಿದ್ದರು.
ಐದು ತಿಂಗಳ ಬಳಿಕ ಆಂಧ್ರಪ್ರದೇಶ ಸರಕಾರವು ಸುಗ್ರೀವಾಜ್ಞೆಯೊಂದನ್ನು ಹೊರಡಿಸುವ ಮೂಲಕ ‘ಸುಳ್ಳು, ಆಧಾರರಹಿತ ಮತ್ತು ಮಾನಹಾನಿಕರ ಸುದ್ದಿಗಳ’ ವಿರುದ್ಧ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಮೂಲಕ ದೂರುಗಳನ್ನು ಸಲ್ಲಿಸಲು ಮತ್ತು ಸೂಕ್ತ ಕಾನೂನು ಮೊಕದ್ದಮೆಗಳನ್ನು ದಾಖಲಿಸಲು ಎಲ್ಲ ಇಲಾಖಾ ಕಾರ್ಯದರ್ಶಿಗಳಿಗೆ ಅಧಿಕಾರ ನೀಡಿತ್ತು.

ಕೆಲವು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳು ಸರಕಾರದ ವರ್ಚಸ್ಸಿಗೆ ಕಳಂಕವನ್ನುಂಟು ಮಾಡಲು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿರುವ ನಿದರ್ಶನಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿತ್ತು.
ಎರಡು ವರ್ಷಗಳ ಬಳಿಕ, 2021ರಲ್ಲಿ ಎನ್‌ಸಿಆರ್‌ಬಿ ದೇಶದಲ್ಲಿ ಅತ್ಯಧಿಕ ದೇಶದ್ರೋಹ ಪ್ರಕರಣಗಳು ಆಂಧ್ರಪ್ರದೇಶದಲ್ಲಿ ದಾಖಲಾಗಿವೆ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು.

ಎನ್‌ಸಿಆರ್‌ಬಿಯು 2014ರಲ್ಲಿ ದೇಶದ್ರೋಹ ಪ್ರಕರಣಗಳ ದಾಖಲೆಯನ್ನಿಡಲು ಆರಂಭಿಸಿತ್ತು ಮತ್ತು ಅಲ್ಲಿಂದ 2020ರವರೆಗೆ ಆಂಧ್ರಪ್ರದೇಶದಲ್ಲಿ ಕೇವಲ ಮೂರು ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದವು. ವಾಸ್ತವದಲ್ಲಿ 2019 ಮತ್ತು 2020ರಲ್ಲಿ ಅಲ್ಲಿ ಒಂದೂ ದೇಶದ್ರೋಹ ಪ್ರಕರಣ ದಾಖಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2021ರೊಂದರಲ್ಲೇ 29 ದೇಶದ್ರೋಹ ಪ್ರಕರಣಗಳು ದಾಖಲಾಗಿರುವುದು ಮಹತ್ವವನ್ನು ಪಡೆದುಕೊಂಡಿದೆ.
ಮೇ 11ರಂದು ದೇಶದ್ರೋಹ ಕಾನೂನನ್ನು ತಡೆಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು ಅದರಡಿ ಹೊಸ ಪ್ರಕರಣಗಳನ್ನು ದಾಖಲಿಸದಂತೆ ಆದೇಶಿಸಿತ್ತು. ಆದಾಗ್ಯೂ ಒಂದೇ ವರ್ಷದಲ್ಲಿ ದೇಶದ್ರೋಹ ಪ್ರಕರಣಗಳ ಸಂಖ್ಯೆ ಶೂನ್ಯದಿಂದ 29ಕ್ಕೆ ಏರಿಕೆ ಯಾಗಿರುವುದು ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ: ಆಂಧ್ರಪ್ರದೇಶ ಸರಕಾರವು ಈ ಪ್ರಕರಣಗಳನ್ನು ದಾಖಲಿಸಲು ಕಾರಣವೇನು?
ಅಂದ ಹಾಗೆ ಎನ್‌ಸಿಆರ್‌ಬಿ ಅಪರಾಧಗಳಿಗೆ ಕಾರಣಗಳನ್ನು ದಾಖಲಿಸಿಕೊಳ್ಳುವುದಿಲ್ಲ.

 ಎನ್‌ಸಿಆರ್‌ಬಿಯಲ್ಲಿ ಕಾರಣಗಳ ಅನುಪಸ್ಥಿತಿಯಲ್ಲಿ, 2021ರಲ್ಲಿ ದಾಖಲಾದ ಎರಡು ದೇಶದ್ರೋಹ ಪ್ರಕರಣಗಳು ರಾಜಕೀಯ ಸ್ವರೂಪವನ್ನು ಸೂಚಿಸಿವೆ. ಒಂದು ಪ್ರಕರಣ ಸಂಸದ ಕೆ.ರಾಮಕೃಷ್ಣ ರಾಜು ಹಾಗೂ ಟಿವಿ 5 ಮತ್ತು ಎಬಿಎನ್ ಆಂಧ್ರಜ್ಯೋತಿ ಸುದ್ದಿವಾಹಿನಿಗಳ ವಿರುದ್ಧವಾಗಿದ್ದರೆ, ಇನ್ನೊಂದು ಅಮಾನತುಗೊಂಡಿರುವ ಮ್ಯಾಜಿಸ್ಟ್ರೇಟ್ ಎಸ್.ರಾಮಕೃಷ್ಣ ಅವರ ವಿರುದ್ಧ ದಾಖಲಾಗಿತ್ತು. ಇವೆರಡೂ ಪ್ರಕರಣಗಳಲ್ಲಿ ಆರೋಪಿಗಳು ಮುಖ್ಯಮಂತ್ರಿಯನ್ನು ಟೀಕಿಸಿದ್ದರು.

ದೇಶದ್ರೋಹ ಕಾನೂನನ್ನು ಬಳಸುವುದರಲ್ಲಿ ರೆಡ್ಡಿ ಆದಿತ್ಯನಾಥರ ಹೆಜ್ಜೆಗಳಲ್ಲಿ ಸಾಗುತ್ತಿದ್ದಾರೆಯೇ? ಅಧಿಕಾರ ವಹಿಸಿಕೊಂಡ ಬಳಿಕ ಮಾಡಿದ ಭಾಷಣದಲ್ಲಿ ರೆಡ್ಡಿ ತನ್ನ ಪಕ್ಷವನ್ನು ಟೀಕಿಸುತ್ತಿದ್ದ ಮಾಧ್ಯಮಗಳನ್ನು, ವಿಶೇಷವಾಗಿ ಆಂಧ್ರಜ್ಯೋತಿಯನ್ನು ಗುರಿಯಾಗಿಸಿಕೊಂಡಿದ್ದರು ಮತ್ತು ಅವುಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದರು.

ಮುಖ್ಯಮಂತ್ರಿಯೋರ್ವರಿಂದ ಭಾಷಣದ ಮೂಲಕ ಇಂತಹ ಎಚ್ಚರಿಕೆಯ ತಂತ್ರವನ್ನು ಆದಿತ್ಯನಾಥರೂ 2017ರಲ್ಲಿ ಉ.ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಳಸಿದ್ದರು. ಹಾಥರಾಸ್ ಸಾಮೂಹಿಕ ಅತ್ಯಾಚಾರ, ಸಿಎಎ ವಿರುದ್ಧ ಪ್ರತಿಭಟನೆಯ ಬಳಿಕ ‘ಮಾನಹಾನಿ, ಸಂಚು ಮತ್ತು ಸರಕಾರದ ವರ್ಚಸ್ಸಿಗೆ ಕಳಂಕ’ದ ಭಾಷೆಯನ್ನು ಬಳಸಲು ಉ.ಪ್ರದೇಶದ ಪೊಲೀಸರಿಗೆ ಅಧಿಕಾರ ನೀಡಲಾಗಿದೆ.
ಇಂತಹುದೇ ಮಾದರಿ ಆಂಧ್ರ ಪ್ರದೇಶದಲ್ಲಿ ಹೊರಹೊಮ್ಮಿದೆ.

ಸಂಖ್ಯೆ ‘ಸಣ್ಣದಿರುವಾಗ’ ದೇಶದ್ರೋಹ ಪ್ರಕರಣಗಳ ಕುರಿತ 2021ರ ಮಾಹಿತಿಗೇಕೆ ಮಹತ್ವ ನೀಡಬೇಕು ಎಂದು ಯಾರಾದರೂ ಪ್ರಶ್ನಿಸಬಹುದು. 5.20 ಕೋ.ಜನಸಂಖ್ಯೆಯ ರಾಜ್ಯದಲ್ಲಿ 29 ದೇಶದ್ರೋಹ ಪ್ರಕರಣಗಳು ಕಳವಳಕ್ಕೆ ಕಾರಣವಾಗಬೇಕಿಲ್ಲ ನಿಜ. ಆದಾಗ್ಯೂ ದೇಶದ್ರೋಹವೂ ಒಂದಾಗಿರುವ ಸರಕಾರದ ವಿರುದ್ಧ ಅಪರಾಧಗಳ ಕುರಿತ ಪ್ರಾಯೋಗಿಕ ಪುರಾವೆಗಳು ನೈತಿಕ ಅಥವಾ ಸೈದ್ಧಾಂತಿಕ ಪರಿಗಣನೆಗಳಿಗೆ ಹೊರತಾದ ರಾಜಕೀಯ ವ್ಯವಸ್ಥೆಯೊಂದಿಗೆ ಕಾನೂನು ವಿಲೀನಗೊಂಡಿರುವುದರ ಆಳವಾದ ಒಳನೋಟಗಳನ್ನು ನೀಡುತ್ತಿವೆ.

ಉದಾಹರಣೆಗೆ ರಾಜ್ಯದ ಚುನಾಯಿತ ನಾಯಕರು ತಮ್ಮ ಟೀಕಾಕಾರರು ಅಥವಾ ‘ಶತ್ರು’ಎಂದು ತಾವು ಭಾವಿಸಿರುವ ಯಾವುದೇ ವ್ಯಕ್ತಿಯ ವಿರುದ್ಧ ಬೆದರಿಕೆ ಮತ್ತು ಎಚ್ಚರಿಕೆಗಳನ್ನು ನೀಡಿದಾಗ ಕಾರ್ಯನಿರ್ವಾಹಕ ಯಂತ್ರವು ಹೆಚ್ಚಿನ ಧೈರ್ಯವನ್ನು ಪಡೆದುಕೊಳ್ಳುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಯೋರ್ವ ಟೀಕೆಯನ್ನು,ಅದು ಕಾನೂನಿಗನುಗುಣವಾದ ಭಾಷೆಯಲ್ಲಿ ವ್ಯಕ್ತವಾಗಿದ್ದರೂ,ದೇಶದ್ರೋಹವಲ್ಲ ಎಂದು ಪರಿಗಣಿಸುತ್ತಾರೆ ಎಂದು ನಿರೀಕ್ಷಿಸುವುದು ಸಮಂಜಸವೇ?

ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)