ಮಧುಗಿರಿ | ದೇವಸ್ಥಾನದ ಜಾಗದ ವಿಚಾರಕ್ಕೆ ಜಗಳ: ಮಹಿಳೆ ಸಹಿತ ಇಬ್ಬರ ಕೊಲೆ; ಆರೋಪಿಯ ಸೆರೆ
ಮಧುಗಿರಿ, ಸೆ.23: ದೇವಸ್ಥಾನದ ಜಾಗದ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಓರ್ವ ಮಹಿಳೆ ಸಹಿತ ಇಬ್ಬರನ್ನು ತಂಡವೊಂದು ಕೊಲೆಗೈದ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ದಾಳಿಗೊಳಗಾದ ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಾಮಾಂಜನಯ್ಯ (48) ಮತ್ತು ಶಿಲ್ಪಾ (38) ಕೊಲೆಯಾದವರು. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಲ್ಲಿಕಾರ್ಜುನಯ್ಯ ಎಂಬವರ ಸ್ಥಿತಿ ಗಂಭೀರವಾಗಿದ್ದು ಮಧುಗಿರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕೊಲೆ ಆರೋಪಿ ಶ್ರೀಧರ್ ಗುಪ್ತಾ, ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಶ್ರೀಧರ್ ಗುಪ್ತಾ ಜೆಡಿಎಸ್ ಮುಖಂಡ ಎನ್ನಲಾಗಿದ್ದು, ಗ್ರಾಮದ ಗಣೇಶ ದೇವಸ್ಥಾನದ ಜಾಗ ಕಬಳಿಸಲು ಯತ್ನಿಸಿದ್ದನೆನ್ನಲಾಗಿದೆ. ಈತನಿಂದ ಜಾಗವನ್ನ ಉಳಿಸಿಕೊಳ್ಳಲು ಗ್ರಾಮಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದರ ತೀರ್ಪು ಗ್ರಾಮಸ್ಥರ ಪರವಾಗಿ ಪ್ರಕಟವಾಗಿತ್ತು. ಮೃತ ರಾಮಾಂಜನಯ್ಯ ಹಾಗೂ ಶಿಲ್ಪಾ ಜಾಗದ ವಿಚಾರವಾಗಿ ದೇವಸ್ಥಾನದ ಪರವಾಗಿ ಹೋರಾಟ ನಡೆಸಿದ್ದರು. ಇದು ಶ್ರೀಧರ್ ದ್ವೇಷಕ್ಕೆ ಕಾರಣವಾಗಿತ್ತು. ಕಳೆದ ರಾತ್ರಿ ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದ ರಾಮಾಂಜನಯ್ಯ ಹಾಗೂ ಶಿಲ್ಪಾರ ತನ್ನ ಸಹಚರರೊಂದಿಗೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಆರೋಪಿ ಶ್ರೀಧರ್ ಕೊಚ್ಚಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಿಡಿಗೇಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.