varthabharthi


ದಕ್ಷಿಣ ಕನ್ನಡ

ಬಜಾರ್ ಸಮೂಹ ಸಂಸ್ಥೆಯ ಆಡಳಿತ ಪಾಲುದಾರ ಗೋಪಾಲಕೃಷ್ಣ ಆಚಾರ್ಯ ನಿಧನ

ವಾರ್ತಾ ಭಾರತಿ : 23 Sep, 2022

ಬಂಟ್ವಾಳ, ಸೆ.23: ತಾಲೂಕಿನ ಮಾರ್ನಬೈಲಿನ ಪ್ರತಿಷ್ಠಿತ ಬಜಾರ್ ಸಮೂಹ ಸಂಸ್ಥೆಯ ಆಡಳಿತ ಪಾಲುದಾರರಾದ ಡಾ. ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ (56) ಅಲ್ಪಕಾಲದ ಅಸೌಖ್ಯದಿಂದಾಗಿ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ಜೀರ್ಣೋದ್ದಾರ ಸಮಿತಿಯ ಸದಸ್ಯರಾಗಿ, ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘ, ಶ್ರೀ ವಿಶ್ವಕರ್ಮ ಸಮುದಾಯ ಭವನದ ಕಟ್ಟಡ ಸಮಿತಿ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ, ಅಲ್ಲದೆ ಅರೆಮಾದನಹಳ್ಳಿ ಗುರುಶಿವ ಸುಜ್ಞಾನ ಮೂರ್ತಿ ಸ್ವಾಮಿಗಳವರ ಮಹಾಸಂಸ್ಥಾನದ  ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ, ಶ್ರೀಮದ್ ಆನೆಗುಂದಿ ಮಹಾ ಸಂಸ್ಥಾನದ ಆಪ್ತ ಶಿಷ್ಯರಾಗಿ ಧಾರ್ಮಿಕ ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಕೊಡುಗೈ ದಾನಿಯಾಗಿದ್ದ ಇವರು ಮೈಸೂರಿನ ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೆಟ್  ಮತ್ತು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಷ್ಟ್ರ ವಿಭೂಷಣ ರಾಷ್ಟ್ರ ಪ್ರಶಸ್ತಿ, ಬಸವ  ಪ್ರಶಸ್ತಿ, ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್, 2022ರ ಕರ್ನಾಟಕ ಬ್ಯುಸಿನೆಸ್ ಐಕೊನ್ ಪ್ರಶಸ್ತಿ, ಬುದ್ಧ ಶಾಂತಿ ರಾಜ್ಯ ಪ್ರಶಸ್ತಿ, ಸೇರಿದಂತೆ ಅನೇಕ ಪ್ರತಿಷ್ಠತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 

ಬಂಟ್ವಾಳ ತಾಲೂಕಿನ ಮಾರ್ನಬೈಲ್‌ನಲ್ಲಿ ಬಜಾರ್ ಬೀಡಿ ಸಂಸ್ಥೆಯ ಮೂಲಕ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಆಶ್ರಯದಾತರಾಗಿದ್ದರು.

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾoಬಾ ದೇವಸ್ಥಾನದ ಮೊಕ್ತೇಸರರಾಗಿ, ಸಜಿಪ ಮಾಗಣೆಯ ನಾಲ್ಕೈತ್ತಾಯ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾಗಿ, ತನ್ನ ಊರಿನ ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಶಾಲೆಯ ಸಮಗ್ರ ಅಭಿವೃದ್ಧಿ ಮತ್ತು ಮಾರ್ನಬೈಲಿನ ಪ್ರಾಥಮಿಕ ಉಪ ಆರೋಗ್ಯ ಕೇಂದ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದರು.

ಇತ್ತೀಚಿಗೆ ತನ್ನ ಸಹೋದರ ಹಾಗೂ ಪಾಲುದಾರ ಸುಧಾಕರ ಆಚಾರ್ಯರೊಂದಿಗೆ ಸೇರಿ ನಿರ್ಮಾಣಗೊಳಿಸಿದ ಕಂದೂರಿನ ಬಜಾರ್ ಆಡಿಟೋರಿಯಂ ಎಂಬ ಭವ್ಯ ಸಭಾಂಗಣ ನಿರ್ಮಾಣದ ರೂವಾರಿ ಇವರು.

ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 10 ಗಂಟೆಗೆ ಮಾರ್ನಬೈಲ್‌ನಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಲಿದೆ. 

ಮೃತರು ಪತ್ನಿ, ಪುತ್ರ, ಸಹೋದರರು, ಸಹೋದರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)