ಧಮ್ ಇದ್ದರೆ ನಮ್ಮ ಅವಧಿಯದ್ದೂ ಸೇರಿಸಿ ಎಲ್ಲ ನೇಮಕಾತಿಗಳ ಬಗ್ಗೆ ತನಿಖೆ ಮಾಡಿಸಿ ನೋಡೋಣ: ಸಿದ್ದರಾಮಯ್ಯ ಸವಾಲು
ಬೆಂಗಳೂರು, ಸೆ.23: ಭ್ರಷ್ಟಾಚಾರದ ಮೂಲಕ ಹಿಂಬಾಗಿಲಿನಿಂದ ಬಂದು ಅಧಿಕಾರದಲ್ಲಿ ಕೂತಿರುವ ಬಿಜೆಪಿ ಸರಕಾರಕ್ಕೆ ಕಿಂಚಿತ್ತೂ ಮಾನ ಮರ್ಯಾದೆ ಇದೆಯಾ? ಏನು ದಮ್ ಇದ್ರೆ, ತಾಕತ್ ಇದ್ರೆ ಎಂಬ ವೀರಾವೇಶದ ಭಾಷಣಗಳನ್ನು ಮಾಡುತ್ತಾರೆ. ಈಗ ನಿಮಗೆ ಧಮ್ ಇದ್ರೆ 2006ರಿಂದ ಈವರೆಗಿನ ಸರಕಾರಿ ನೇಮಕಾತಿಗಳು ಸೇರಿದಂತೆ ಎಲ್ಲವನ್ನು ನ್ಯಾಯಾಂಗ ತನಿಖೆ ಮಾಡಿಸಿ ನೋಡೋಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಶುಕ್ರವಾರ ವಿಧಾನಸಭೆಯ ಅಧಿವೇಶನ ಮುಕ್ತಾಯವಾದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2006ರಿಂದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಮತ್ತು ನಮ್ಮ ಸರಕಾರ ಹಾಗೂ ಈ 4 ವರ್ಷಗಳ ಸರಕಾರದ ಎಲ್ಲವನ್ನೂ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದರು.
ಆಗ ಯಾರು ಭ್ರಷ್ಟರು, ಯಾರು ಪ್ರಾಮಾಣಿಕರು ಗೊತ್ತಾಗುತ್ತದೆ. ನನಗೆ ನ್ಯಾಯಾಂಗ ತನಿಖೆ ಬಗ್ಗೆ ಯಾವ ಭಯವೂ ಇಲ್ಲ. ನಾನು ಜೈಲಿಗೆ ಹೋಗುತ್ತೀನಿ ಎಂದು ಬಾಯಿಗೆ ಬಂದಂತೆ ಒದರುವ ಕಟೀಲ್‍ಗೆ ಕಾನೂನಿನ ಅರಿವಿಲ್ಲ. ಆರೆಸೆಸ್ಸ್‍ನವರು ಬರೆದುಕೊಟ್ಟಿದ್ದಾರೆ, ಅದನ್ನು ಓದಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಆರೆಸೆಸ್ಸ್‍ನವರು ಶಾಸಕ ಪಿ.ರಾಜೀವ್ ಕೈಯಲ್ಲಿ ಮಾಧ್ಯಮಗೋಷ್ಠಿ ಮಾಡಿಸುತ್ತಾರೆ. ಈ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕ ಪ್ರಿಂಟ್ ಆಗಿರುವುದು ಕೇಶವ ಕೃಪದಲ್ಲಿ. ಇದರಲ್ಲಿರುವುದು ಬರೀ ಸುಳ್ಳು. ಒಂದೇ ಒಂದು ಪ್ರಕರಣವೂ ಸತ್ಯದಿಂದ ಕೂಡಿಲ್ಲ. ಈಗ ನಾವು ಅಧಿಕಾರದಲ್ಲಿ ಇದ್ದೀವಾ, ದಾಖಲೆಗಳು ನಮ್ಮ ಬಳಿ ಇದ್ದಾವ, ಅಧಿಕಾರಿಗಳು ನಮ್ಮ ಮಾತುಗಳನ್ನು ಕೇಳುತ್ತಾರ? ಆದರೂ ಬಿಜೆಪಿಯವು ಸುಳ್ಳು ಆರೋಪ ಮಾಡಿಕೊಂಡು ಕೂತಿದ್ದಾರೆ ಎಂದು ಅವರು ಕಿಡಿಗಾರಿದರು.
ನಮ್ಮ ಸರಕಾರದ ಅವಧಿಯಲ್ಲಿ ಅಧಿಕೃತ ವಿರೋಧ ಪಕ್ಷವಾಗಿದ್ದಾಗ ಸುಮ್ಮನೆ ಇದ್ದ ಬಿಜೆಪಿಯವರು, ನಾವೀಗ ಸರಕಾರದ ಭ್ರμÁ್ಟಚಾರದ ವಿರುದ್ಧ ದೊಡ್ಡ ಆಂದೋಲನ ಕೈಗೊಂಡಿರುವುದರಿಂದ ಇಂತಹ ಸುಳ್ಳಿನ ಬುಕ್ ಬಿಡುಗಡೆ ಮಾಡಿದ್ದಾರೆ. ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್ಸೈ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರ್ ಆಡಿಯೋ ಬಹಿರಂಗವಾಗಿದೆ. ಅದರಲ್ಲಿನ ಧ್ವನಿ ನನ್ನದೆ, ನಾನು 15 ಲಕ್ಷ ರೂ.ಲಂಚ ತೆಗೆದುಕೊಂಡು ಸರಕಾರಕ್ಕೆ ನೀಡಿದ್ದೇನೆ ಎಂದಿದ್ದಾರೆ. ಈ ಹಣವನ್ನು ಮುಖ್ಯಮಂತ್ರಿ ಅಥವಾ ಗೃಹ ಸಚಿವರಿಗೆ ಕೊಟ್ಟಿರಬೇಕು. ಬಸನಗೌಡ ಪಾಟೀಲ್ ಯತ್ನಾಳ್ ಈ ಹಗರಣದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿಯ ಮಗನ ಕೈವಾಡವಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆಯಾಗಿಲ್ಲ ಎಂದು ಅವರು ಹೇಳಿದರು.
ಗುತ್ತಿಗೆದಾರರು ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ವಿಚಾರಣೆ ಸಂದರ್ಭದಲ್ಲಿ ನಾವು ಅಗತ್ಯ ದಾಖಲೆ ಒದಗಿಸುತ್ತೇವೆ. ಒಂದು ವೇಳೆ ನಾವು ಮಾಡಿರುವ ಆರೋಪ ಸಾಬೀತು ಮಾಡಲು ಸಾಧ್ಯವಾಗಿಲ್ಲ ಎಂದರೆ ಯಾವುದೇ ರೀತ್ಯಾ ಕಾನೂನು ಶಿಕ್ಷೆ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ. ಈಗಲೇ ಸರಕಾರಕ್ಕೆ ಗುತ್ತಿಗೆದಾರರು ದಾಖಲೆ ನೀಡಿದರೆ ತೊಂದರೆಗೆ ಬೀಳುತ್ತೇವೆ ಎಂಬ ಭಯ ಅವರಿಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೆಂಪಣ್ಣ ಪ್ರಕಾರ ಆರೋಗ್ಯ, ವೈದ್ಯಕೀಯ ಶಿಕ್ಷಣ, ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ವ್ಯಾಪಕವಾಗಿ ಲಂಚ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಮುನಿರತ್ನ ಮತ್ತು ಸುಧಾಕರ್ ಅವರ ಹೆಸರನ್ನು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸದನದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ ಕೊನೆಗೆ ಅಧಿವೇಶನವನ್ನು ಮುಕ್ತಾಯ ಮಾಡಿದ್ದಾರೆ. ನಾನು ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಿ, ಸೋಮವಾರ ಅಥವಾ ನಾಳೆ ಈ ವಿಚಾರ ಚರ್ಚೆ ಮಾಡೋಣ ಎಂದು ಹೇಳಿದರೆ ಸರಕಾರ ಯಾವುದಕ್ಕೂ ಸಿದ್ಧವಿಲ್ಲ ಎಂದು ಅವರು ಕಿಡಿಗಾರಿದರು.
ಗುತ್ತಿಗೆದಾರರು ಸರಕಾರದ ವಿರುದ್ಧ ನೇರ ಆರೋಪ ಮಾಡುತ್ತಿದ್ದಾರೆ. ಬಿಬಿಎಂಪಿ ಗುತ್ತಿಗೆದಾರ ಮಂಜುನಾಥ್ ಎಂಬುವವರು ಬಿಬಿಎಂಪಿ ಕಾಮಗಾರಿಗಳಲ್ಲಿ 50 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಈ ವಿಚಾರವನ್ನು ಸದನದಲ್ಲಿ ಚರ್ಚೆಗೆ ಅವಕಾಶ ನೀಡಿಲ್ಲ, ತನಿಖೆಗೆ ನೀಡಲು ಸಿದ್ಧರಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
1676 ಸಬ್ ಇನ್‍ಸ್ಪೆಕ್ಟರ್, 30,113 ಕಾನ್‍ಸ್ಟೆಬಲ್, 1102 ಜೈಲರ್ ಮತ್ತು ವಾರ್ಡನ್‍ಗಳು, ಫೊರೆನ್ಸಿಕ್ ಸೈನ್ಸ್ ಸಿಬ್ಬಂದಿಗಳಾಗಿ 33 ಜನರು ಸೇರಿದಂತೆ ಒಟ್ಟು 35 ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ನಮ್ಮ ಸರಕಾರದ ಅವಧಿಯಲ್ಲಿ ನೇಮಕಾತಿ ಮಾಡಿದ್ದೇವೆ. ಯಾವ ಸಮಸ್ಯೆ, ಹಗರಣ ಆಗಿಲ್ಲ. ಈ ಬಿಜೆಪಿಯವರು 545 ಜನ ನೇಮಕ ಮಾಡಲು ಹೋಗಿ ಸಿಕ್ಕಿಹಾಕಿಕೊಂಡು ನರಳಾಡುತ್ತಿದ್ದಾರೆ. ಜನ ಛೀ, ತೂ ಎಂದು ಉಗಿಯುತ್ತಿದ್ದಾರೆ. ನಾಚಿಕೆಯಾಗಲ್ವಾ ನಿಮಗೆ? ಎಂದು ಅವರು ಕಿಡಿಗಾರಿದರು.
ಇದನ್ನು ಇಲ್ಲಿಗೆ ಬಿಡಲ್ಲ. ಮತ್ತೆ ಸದನ ಕರೆದರೆ ಶುರು ಮಾಡುತ್ತೇವೆ. ಈಗಾಗಲೇ 40 ಪರ್ಸೆಂಟ್ ಕಮಿಷನ್ ಕುರಿತು ಅಭಿಯಾನ ಆರಂಭ ಮಾಡಿದ್ದೇವೆ. ಜನರ ಬಳಿಗೆ ಹೋಗಿ ಸತ್ಯ ಹೇಳುತ್ತೇವೆ. ಇಂಥಾ ಭ್ರಷ್ಟ ಸರಕಾರ ಇಡೀ ದೇಶದಲ್ಲೂ ಇಲ್ಲ, ನನ್ನ ರಾಜಕೀಯ ಜೀವನದಲ್ಲೂ ನೋಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಕಾಂಗ್ರೆಸ್ ಸರಕಾರ ಸಿಬಿಐಗೆ ವಹಿಸಿದ್ದ ಪ್ರಕರಣಗಳು: ಐಎಎಸ್ ಅಧಿಕಾರಿ ಡಿ.ಕೆ.ರವಿ ಪ್ರಕರಣ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ, ಅಕ್ರಮ ಲಾಟರಿ, ಪರೇಶ್ ಮೇಸ್ತಾ ಸಾವು, ಸೌಜನ್ಯಾ ಕೊಲೆ, ಎಂ.ಎಂ.ಕಲಬುರ್ಗಿ ಕೊಲೆ, ರಾಮನಗರ ಮತ್ತು ಮಂಡ್ಯ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅವ್ಯವಹಾರ ಪ್ರಕರಣ ಹಾಗೂ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ. ಇದೆಲ್ಲದರ ಬಗ್ಗೆ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕದಲ್ಲಿ ತಪ್ಪು ತಪ್ಪಾಗಿ, ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
--------------------------------
ಪಿಎಸ್ಸೈ ಹಗರಣದ ಕುರಿತು ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ನಮ್ಮ ಕಾನೂನು ಘಟಕದವರು ಪರಿಶೀಲನೆ ಮಾಡುತ್ತಿದ್ದಾರೆ, ಇದರ ಜೊತೆಗೆ ಈ ವಿಚಾರವನ್ನು ನಾವು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ. ನಮಗೆ ಅಂತಿಮ ನಿರ್ಣಯ ಸಿಗುವುದು ಜನತಾ ನ್ಯಾಯಾಲಯದಲ್ಲೆ.
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ