ಕೋವಿಡ್ ಕಾರಣದಿಂದ ಸ್ಥಗಿತವಾಗಿದ್ದ ಯೋಜನೆ ಪುನರಾರಂಭ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಬೆಂಗಳೂರು, ಸೆ.23: ರಾಜ್ಯದಲ್ಲಿ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಎಲ್ಲ ಯೋಜನೆಗಳನ್ನು ಪುನರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸಪೂಜಾರಿ ತಿಳಿಸಿದರು.
ಶುಕ್ರವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಜೆಡಿಎಸ್‍ನ ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ಬಂದ ಹಿನ್ನೆಲೆಯಲ್ಲಿ ಹಲವು ಯೋಜನೆಗಳನ್ನು ಸರಕಾರ ಸ್ಥಗಿತಗೊಳಿಸಿತ್ತು. ಈಗ ಎಲ್ಲ ಇಲಾಖೆಗಳು ಸ್ಥಗತಿಗೊಂಡಿದ್ದ, ಯೋಜನೆಗಳ ಚಾಲನೆಗೆ ಸರಕಾರ ಮುಂದಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಶುಲ್ಕ ಮರು ಪಾವತಿ ಮಂಜೂರು ಮಾಡುವ ಯೋಜನೆ ಜಾರಿಯಲ್ಲಿಲ್ಲ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಪ್ರಥಮ ಬಾರಿಗೆ ತೆಗೆದುಕೊಳ್ಳುವ ಅರ್ಹ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಎಸ್ಸೆಸ್ಸೆಲ್ಸಿ ಬೋರ್ಡ್‍ಗೆ ಪಾವತಿ ಮಾಡಲಾಗುತ್ತಿದೆ ಎಂದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪರೀಕ್ಷಾ ಮಂಡಳಿಗಳಿಗೆ ಪಾವತಿ ಮಾಡಿರುವ ಅನುದಾನ 2020-21ರಲ್ಲಿ 11 ಕೋಟಿ ರೂ., 2021-22ರಲ್ಲಿ 11 ಕೋಟಿ, 2022-23 ರಲ್ಲಿ ಸುಮಾರು 15 ಕೋಟಿ ರೂ. ಸೇರಿದಂತೆ ಒಟ್ಟು 37.76 ಕೋಟಿ ಮರು ಪಾವತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.