varthabharthi


ಉಡುಪಿ

​ನಮ್ಮ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ : ಸಚಿವ ಸುನೀಲ್ ಕುಮಾರ್

ವಾರ್ತಾ ಭಾರತಿ : 24 Sep, 2022

ಉಡುಪಿ, ಸೆ.24: ಅವಧಿ ಪೂರ್ವ ಚುನಾವಣೆ ರಾಜ್ಯದಲ್ಲಿ ಇಲ್ಲ. ನಿಗದಿತ ಸಮಯದಲ್ಲಿ ಚುನಾವಣೆ ಆಗುತ್ತದೆ. ಬಿಜೆಪಿ ಮತ್ತೊಮ್ಮೆ ಸರಕಾರವನ್ನು ರಚನೆ ಮಾಡುತ್ತದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕೂಡ ಬಸವರಾಜ್ ಬೊಮ್ಮಾಯಿ ಆಗಿದ್ದಾರೆ. ಈಗಾಗಲೇ ಜೆಪಿ ನಡ್ಡ ಇದನ್ನೇ ಹೇಳಿದ್ದಾರೆ. ನಾವೆಲ್ಲರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದೇವೆ. ನಮ್ಮಲ್ಲಿ ಗೊಂದಲ ಇಲ್ಲ. ನಾವು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ನಮ್ಮ ಇವತ್ತಿನ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ. ನವರಾತ್ರಿ ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.

ಪಿಎಫ್‌ಐ ವಿರುದ್ಧ ಕಠಿಣ ಕ್ರಮ

ಪಿಎಫ್‌ಐಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಗ್ಗು ಬಡಿಯುತ್ತದೆ. ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ಯಾರು ಮಾಡಬಾರದು. ಬಂಧಿತ ವ್ಯಕ್ತಿಗಳು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕನಸು ಕಂಡಿದ್ದಾರೆ. ಜಗತ್ತಿನ ಯಾವುದೇ ರಾಷ್ಟ್ರ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಭಾರತ ಹಿಂದೂ ರಾಷ್ಟ್ರ. ಹಿಂದೂ ಸಂಸ್ಕೃತಿಯ ಹಿನ್ನೆಲೆಯಲ್ಲಿ ಆಧಾರದಲ್ಲೇ ರಾಷ್ಟ್ರವನ್ನು ಮತ್ತಷ್ಟು ಸಬಲಗೊಳಿಸುತ್ತೇವೆ. ಜನರು ಕೂಡ ಇದಕ್ಕೆ ಬೆಂಬಲವನ್ನ ಕೊಡಬೇಕು ಎಂದು ಅವರು ಹೇಳಿದರು.

ಪ್ರವೀಣ್ ನೆಟ್ಟಾರು ಹತ್ಯೆ ನಡೆದಾಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದೆ. ಈ ಮೂಲಕ ಸರಕಾರ ಬದ್ಧತೆಯನ್ನು ಪ್ರದರ್ಶಿಸಿ ಪ್ರಕರಣ ತನಿಖೆಯನ್ನು ಎನ್‌ಐಎಗೆ ವಹಿಸಿತು. ಪಿಎಫ್‌ಐ ಹಾಗೂ ಎಸ್‌ಡಿಪಿಐ ಯನ್ನು ಸಿದ್ದರಾಮಯ್ಯ ಸರಕಾರ ಪೋಷಿಸಿದ ಪರಿಣಾಮ 14 ಕಾರ್ಯಕರ್ತರ ಹತ್ಯೆಯಾಗಿತ್ತು ಮತ್ತು ಅವರ ಕೇಸು ವಾಪಾಸ್ಸು ಪಡೆದ ಪರಿಣಾಮ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಕಂಡುಬಂದಿತ್ತು. ಇದೊಂದು ಆಂತರಿಕ ಭದ್ರತೆಗೆ ದೊಡ್ಡ ಸವಾಲು ಆಗಿತ್ತು. ಭಾರತದ ಭದ್ರತೆಯನ್ನು ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರಕಾರದ ನಿಲುವು ಆಗಿದೆ ಎಂದರು.

ಭ್ರಷ್ಟಾಚಾರದ ಪಿತಾಮಹ

ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ. ಪೇ ಸಿಎಂ ಎಂಬುದು ಕಾಂಗ್ರೆಸ್‌ನ ಸುಳ್ಳಿನ ಸುರಿಮಳೆಯಾಗಿದೆ. ಪೋಸ್ಟರ್ ಅಂಟಿಸಿದ ಡಿಕೆಶಿ ಇಡಿ ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಭ್ರಷ್ಟಾಚಾರದ ಬಗ್ಗೆ ವಿಚಾರಣೆಗೆ ಒಳಗಾಗಿ   ಪೇ ಸಿಎಂ ಪೋಸ್ಟರ್ ಅಂಟಿಸಲು ಇವರಿಗೆ ಯಾವ ನೈತಿಕತೆ ಇದೆ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.

ಅರ್ಕಾವತಿ, ಇಂದಿರಾ ಕ್ಯಾಂಟೀನ್, ಹಾಸಿಗೆಯಲ್ಲಿ ಹಣ ನುಂಗಿದವರು ಕಾಂಗ್ರೆಸ್ಸಿಗರು. ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರದ ಉತ್ತುಂಗ ಏರಿಸಿದ ಕಾಂಗ್ರೆಸ್ಸಿಗರು ನಮ್ಮ ಕಾಮನ್ ಸಿಎಂ ಬಗ್ಗೆ ಮಾತನಾಡು ತ್ತಾರೆ. ಭ್ರಷ್ಟಾಚಾರ ನಡೆದಿದ್ದರೆ ನ್ಯಾಯಾಲಯ, ಮುಖ್ಯಮಂತ್ರಿಗಳು, ಲೋಕಾ ಯುಕ್ತಕ್ಕೆ ದೂರು ಕೊಡಲಿ. 10 ದಿನಗಳ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ದಿನವು ಚರ್ಚೆ ನಡೆದಿಲ್ಲ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)