varthabharthi


ದಕ್ಷಿಣ ಕನ್ನಡ

ಸಮಾಜದ ಹಿರಿಯರ ಸ್ಮರಣೆ ಅತ್ಯಗತ್ಯ: ಡಾ. ವೀರೇಂದ್ರ ಹೆಗ್ಗಡೆ

ವಾರ್ತಾ ಭಾರತಿ : 24 Sep, 2022

ಮಂಗಳೂರು, ಸೆ.24: ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸುಧಾರಣೆ ದೃಷ್ಟಿಯಿಂದ ನಮ್ಮ ಹಿರಿಯರು ಅವಕಾಶಗಳನ್ನು ನಿರ್ಮಾಣ ಮಾಡಿಕೊಂಡು ಹೋದ ಕಾರಣ ದೇಶದಲ್ಲಿಂದು  ಪರಿವರ್ತನೆಯಾಗಿದೆ. ಈ ಕಾರಣ ದಿಂದ ನಾವು ನಮ್ಮ ಹಿರಿಯರನ್ನು ಸ್ಮರಿಸಲೇಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದ ಬಂಟ್ಸ್‌‌ ಹಾಸ್ಟೆಲ್‌ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ನಮಗೆ ಅವಕಾಶಗಳು ಭಾರೀ ಕಡಿಮೆಯಿತ್ತು. ವೈದ್ಯಕೀಯ, ಉದ್ಯಮ ಕ್ಷೇತ್ರದ ಅಭ್ಯಾಸಕ್ಕಾಗಿ ಕಾಶಿ, ಬನರಾಸ್, ಚೆನ್ನೈ ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗಿತ್ತು. ದೂರದ ಊರಿನಲ್ಲಿ ಕಲಿತು ಬಂದು ಈ ನೆಲದಲ್ಲಿ ಸಾಧನೆ ಮಾಡಿದ್ದಾರೆ. 4 ರಾಷ್ಟ್ರೀಯ ಬ್ಯಾಂಕ್‌ಗಳನ್ನು ಕೊಟ್ಟ ಜಿಲ್ಲೆ ನಮ್ಮದು. ಬಂಟರ ಸಂಘ ವಿದ್ಯಾರ್ಥಿನಿ ಭವನ ಕಟ್ಟುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆ ನೀಡಿದೆ. ನಾವು ದುಡ್ಡು, ಸಂಪತ್ತು ಕೊಟ್ಟರೆ ಶಾಶ್ವತವಲ್ಲ. ನಮ್ಮ ಹಿರಿಯರಂತೆ ನಾವು ಅವಕಾಶಗಳನ್ನು ನಿರ್ಮಾಣಮಾಡಿಕೊಟ್ಟರೆ ಅದು ಶಾಶ್ವತವಾಗಿ ಉಳಿಯುವುದರೊಂದಿಗೆ ದೇಶ ಮತ್ತಷ್ಟು ಪರಿವರ್ತನೆಯಾಗಲು ಸಾಧ್ಯ ಎಂದರು.

ಜೈನ ಮತ್ತು ಬಂಟ ಸಮುದಾಯ ತ್ಯಾಗ ಮಾಡಿದ ಸಮಾಜವಾಗಿದೆ. ಪರವೂರಿನಲಿ ಶ್ರದ್ಧೆಯಿಂದ ಕೆಲಸ, ಉದ್ಯಮ ಸ್ಥಾಪಿಸಿ ಯಶಸ್ಸು ಕಂಡು ಈ ನೆಲದ ಋಣ ತೀರಿಸಿದ್ದಾರೆ. ರಾಜಕೀಯ, ಕೃಷಿ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಕ್ಕೆ ಬಂಟ ಸಮಾಜದ ಕೊಡುಗೆ ದೊಡ್ಡದಿದೆ. ಅದೇ ರೀತಿ ನಾವು ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜತೆ ನಮ್ಮ ಕುಟುಂಬಕ್ಕೆ ಒಳ್ಳೆಯ ಸಂಸ್ಕಾರ ಕೊಡುವ ಕೆಲಸ ಮಾಡಬೇಕಿದೆ.

ಅದಮ್ಯ ಚೇತನ ಫೌಂಡೇಶನ್ ಸಿಇಒ ತೇಜಸ್ವಿನಿ ಅನಂತ ಕುಮಾರ್ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ  ವಹಿಸಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ  ಸರ್ವಸಮುದಾಯದ ಏಳಿಗೆಯ ಉದ್ದೇಶದೊಂದಿಗೆ ನಮ್ಮ ಹಿರಿಯರು ರಾಮಕೃಷ್ಣ ವಿದ್ಯಾರ್ಥಿನಿ ಭವನ ನಿರ್ಮಿಸಿದ್ದು, ಸಾವಿರಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ ಎಂದರು.

ವಿಬಿಎಂಎಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ಡಾ.ಡಿ. ವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಿದರು. ಸ್ತ್ರೀಶಕ್ತಿಕರಣ ಯೋಜನೆಗಳನ್ನು ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈ ಸಿಎಂಡಿ ಸದಾಶಿವ ಶೆಟ್ಟಿ ಕನ್ಯಾನ ಮತ್ತು ನಿರ್ದೇಶಕಿ ಸುಜಾತ ಎಸ್. ಶೆಟ್ಟಿ ಉದ್ಘಾಟಿಸಿದರು. ಪ್ರಯಾಣಿಕರ ತಂಗುದಾಣ ಮತ್ತು ಎಸ್‌ಆರ್‌ವಿ ಭವನ ದ್ವಾರವನ್ನು ಕತಾರ್ ಬಂಟ್ಸ್ ಅಧ್ಯಕ್ಷೆ ಡಾ. ಪದ್ಮಶ್ರೀ ಆರ್. ಶೆಟ್ಟಿ ಉದ್ಘಾಟಿಸಿದರು. ಅಮೃತ ಸಿರಿ ಸ್ಮರಣ ಸಂಚಿಕೆಯನ್ನು ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ಸ್ ಎಂಡಿ ಉಪೇಂದ್ರ ಶೆಟ್ಟಿ ಮತ್ತು ಕಾರ್ಯದರ್ಶಿ ಪ್ರಗತಿ ಯು. ಶೆಟ್ಟಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದ ಸಾಧಕಿಯರಾದ ಭಾರತಿ ಶೆಟ್ಟಿ, ಶಕುಂತಲಾ ಶೆಟ್ಟಿ, ರೀನಾ ಶೆಟ್ಟಿ, ಹಸ್ತಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಭವನಕ್ಕೆ ಅನನ್ಯ ಸೇವೆ ಸಲ್ಲಿಸಿದವರಿಗೆ ಗೌರವ ಅರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ವಿದ್ಯಾರ್ಥಿ ಭವನ ಸಂಚಾಲಕಿ ಶಾಲಿನಿ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ಜತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ವಿದ್ಯಾರ್ಥಿ ಭವನ ಅಧ್ಯಕ್ಷೆ ವೀಣಾ ಟಿ. ಶೆಟ್ಟಿ ಧನ್ಯವಾದ ಅರ್ಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು