varthabharthi


ಉಡುಪಿ

ಶರ್ವಾಣಿ ಕಲ್ಯಾಣ ಮಂಟಪ, ಯಾಗಶಾಲೆ ಲೋಕಾರ್ಪಣೆ

ಸೆ.26ರಿಂದ ಕಡಿಯಾಳಿ ದೇವಳದಲ್ಲಿ ಶರನ್ನವರಾತ್ರಿ ಸಂಭ್ರಮ

ವಾರ್ತಾ ಭಾರತಿ : 24 Sep, 2022

ಫೈಲ್‌ ಫೋಟೊ 

ಉಡುಪಿ, ಸೆ.24: ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ಬರುವ  ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ.26ರಿಂದ ಅ. 5ರ ತನಕ ಶರನ್ನವರಾತ್ರಿ ಮಹೋತ್ಸವವು ಪಾಡಿಗಾರು ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ ವಿ.ಆಚಾರ್ಯ ತಿಳಿಸಿದ್ದಾರೆ. 

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸೆ.26ರ ಸಂಜೆ 5:30ಕ್ಕೆ ದೇವಳದ ವತಿಯಿಂದ 10,000 ಚದರಡಿ ವಿಸ್ತೀರ್ಣದ ಸುಸಜ್ಜಿತ ಕಲ್ಯಾಣ ಮಂಟಪ, ಅನ್ನ ಛತ್ರ, ಪಾಕಶಾಲೆ ಸಹಿತ ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಸಹಕಾರದಿಂದ 1ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಿದ ಶರ್ವಾಣಿ ಕಲ್ಯಾಣ ಮಂಟಪದ ಲೋಕಾರ್ಪಣೆಯಾಗಲಿದೆ ಎಂದರು. 

ಸೋದೆ ಮಠಾದೀಶ ಶ್ರೀವಿಶ್ವವಲ್ಲಭತೀರ್ಥರು ಶರ್ವಾಣಿ ಕಲ್ಯಾಣ ಮಂಟಪ ಉದ್ಘಾಟಿಸುವರು. ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ಕಡಿಯಾಳಿ ವಾರ್ಡಿನ ನಗರಸಭಾ ಸದಸ್ಯೆ ಗೀತಾ ಶೇಟ್ ಮುಖ್ಯ ಅತಿಥಿಗಳಾಗಿರುವರು ಎಂದರು.

ಸಂಪೂರ್ಣ ಸುಸಜ್ಜಿತ ಶರ್ವಾಣಿ ಕಲ್ಯಾಣಮಂಟಪವನ್ನು ಯಾವುದೇ ಬಾಡಿಗೆ ಪಡೆಯದೆ ಎಲ್ಲ ವರ್ಗದ ಜನರಿಗೆ ನೀಡಲಿದ್ದು ಕಲ್ಯಾಣ ಮಂಟಪವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯುವಂತೆ ಮಾಡಲಾಗುವುದು. ದೇವಳದ ಜೀರ್ಣೋದ್ಧಾರದ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ, ಸೇವೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದರು.

ಹೊಸದಾಗಿ ನಿರ್ಮಿಸಿದ ಯಾಗ ಶಾಲೆಯೂ ನವರಾತ್ರಿಯ ಪರ್ವ ಕಾಲದಲ್ಲಿ ಲೋಕಾರ್ಪಣೆಗೊಳ್ಳಲಿದೆ. ನವರಾತ್ರಿಯ ದಿನಗಳಲ್ಲಿ ಒಟ್ಟು 1.5ಲಕ್ಷದಿಂದ 2ಲಕ್ಷ ಭಕ್ತರು ದೇವಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ನಿತ್ಯ 10,000 ಭಕ್ತರಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಿದ್ದು, 550 ಸ್ವಯಂಸೇವಕರು ವಿವಿಧ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಡಾ.ಆಚಾರ್ಯ ನುಡಿದರು.

ನವರಾತ್ರಿ ಅಂಗವಾಗಿ ಪ್ರತಿ ದಿನ ರಾತ್ರಿ 7:30ರಿಂದ ಮಹಾಪೂಜೆ, ಹೂವಿನ ಪೂಜೆ, ರಾತ್ರಿ 8ರಿಂದ ಕಲ್ಪೋಕತಿ ಪೂಜೆ, ಬಲಿ, ರಥೋತ್ಸವ, ಸೆ. 27ರ ಬೆಳಗ್ಗೆ 7ಕ್ಕೆ ಕದಿರು ಕಟ್ಟುವುದು, ಸೆ. 30ರಂದು ಲಲಿತಾ ಪಂಚಮಿ, ಅ.2ರಂದು ಶಾರದಾ ಪೂಜೆ ಆರಂಭ, ಅ. 3: ದುರ್ಗಾಷ್ಟಮಿ(ಮಹಾ ಚಂಡಿಕಾ ಹೋಮ), ಅ. 4: ಕನ್ನಿಕಾ ಪೂಜೆ ಹಾಗೂ  ಮಹಾಮಂತ್ರಾಕ್ಷತೆ, ಅ. 5ರಂದು ವಿಜಯದಶಮಿ, ಶಾರದಾ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದರು.

ಸೆ.26ರಿಂದ ಅ.4ರ ತನಕ ಪ್ರತಿ ದಿನ ಸಂಜೆ 4:30ರಿಂದ 5:30ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ದಾಂಡಿಯಾ ನೃತ್ಯ: ಉಡುಪಿ ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅ.1ರಂದು ಸಂಜೆ 5:30ರಿಂದ ಕಡಿಯಾಳಿ ಕಮಲಾಬಾಯಿ ಹೈಸ್ಕೂಲು ಮೈದಾನದಲ್ಲಿ ರಾತ್ರಿ 10ರ ತನಕ ಮಹಿಳೆಯರು, ಜೋಡಿ ದಾಂಡಿಯಾ ಸಾಂಪ್ರದಾಯಿಕ, ಆಧುನಿಕ ನೃತ್ಯ ನಡೆಯಲಿದ್ದು ಲೈವ್ ಸಂಗೀತವಿದೆ. 3000ದಿಂದ 3,500 ಜನರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಡಾ.ರವಿರಾಜ ಆಚಾರ್ಯ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀನಿವಾಸ ಹೆಬ್ಬಾರ್, ರಮೇಶ್ ಶೇರಿಗಾರ್, ನಾಗರಾಜ ಶೆಟ್ಟಿ, ಕಿಶೋರ್ ಸಾಲ್ಯಾನ್, ಗಣೇಶ್ ನಾಯಕ್, ಗಂಗಾಧರ ಹೆಗ್ಡೆ ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)