varthabharthi


ದಕ್ಷಿಣ ಕನ್ನಡ

► ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ

ಸಂವಿಧಾನದ 8ನೆ ಪರಿಚ್ಛೇದದಲ್ಲಿ ‘ತುಳು’ ಸೇರ್ಪಡೆಗೆ ರಾಜ್ಯದಿಂದ ಶಿಫಾರಸು: ಸಚಿವ ಸುನೀಲ್ ಕುಮಾರ್

ವಾರ್ತಾ ಭಾರತಿ : 24 Sep, 2022

ಮಂಗಳೂರು, ಸೆ.24: ಸಂವಿಧಾನದ 8ನೇ ಪರಿಚ್ಚೇದದಲ್ಲಿ ತುಳು ಭಾಷೆಯನ್ನು ಸೇರಿಸುವ ಸಲುವಾಗಿ ರಾಜ್ಯ ಸರಕಾರವು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಕೇಂದ್ರ ಗೃಹ ಸಚಿವರಿಗೂ ಮನವರಿಕೆ ಮಾಡಲಾಗಿದೆ. ಹಾಗಾಗಿ ಶೀಘ್ರದಲ್ಲೇ ತುಳು ಭಾಷೆಯು ಸಂವಿಧಾನದಲ್ಲಿ ಸೇರ್ಪಡೆಯಾಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ನಡೆದ 2021ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಪುಸ್ತಕ ಬಹುಮಾನ ವಿತರಣೆ, ವಿಶೇಷ ಸಾಧಕರಿಗೆ ರಾಜ್ಯ ಪುರಸ್ಕಾರವನ್ನು ನೀಡಿ ಅವರು ಮಾತನಾಡಿದರು.

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸುವುದು ಸುಲಭದ ಕೆಲಸವಲ್ಲ. ಸೇರ್ಪಡೆಗೆ ಅನೇಕ ಭಾಷೆಗಳು ಪಟ್ಟಿಯಲ್ಲಿವೆ. ಆದಾಗ್ಯೂ ತುಳುನಾಡಿನ ಪ್ರಮುಖರು ಕೇಂದ್ರ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಲಿದ್ದಾರೆ ಎಂದು ಸುನೀಲ್ ಕುಮಾರ್ ಹೇಳಿದರು.

ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ ಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸದ ನಳಿನ್ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಅದಾನಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಕಿಶೋರ್ ಆಳ್ವ, ಪ್ರಮುಖರಾದ ಸರ್ವೋತ್ತಮ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ರಾಜೇಶ್ ಜಿ., ಪೂರ್ಣಿಮಾ, ರಿಜಿಸ್ಟ್ರಾರ್ ಕವಿತಾ, ಮತ್ತಿತರರು ಉಪಸ್ಥಿತರಿದ್ದರು. ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

ತುಳು ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು

ಸಂಜೀವ ಬಂಗೇರ ತಲಪಾಡಿ (ತುಳು ಜಾನಪದ ಕ್ಷೇತ್ರ), ಕೃಷ್ಣಪ್ಪ ಉಪ್ಪೂರು (ತುಳು ನಾಟಕ/ಸಿನೆಮಾ ಕ್ಷೇತ್ರ), ಉಲ್ಲಾಸ ಕೃಷ್ಣ ಪೈ ಪುತ್ತೂರು (ತುಳು ಸಾಹಿತ್ಯ ವಿಭಾಗ).

2021ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು

ಯೋಗೀಶ್ ಕಾಂಚನ್ ಬೈಕಂಪಾಡಿ (ತುಳು ಕವನ ವಿಭಾಗ), ಅಕ್ಷತಾರಾಜ್ ಪೆರ್ಲ (ತುಳು ನಾಟಕ ವಿಭಾಗ), ಡಾ. ಅಶೋಕ ಆಳ್ವ ಸುರತ್ಕಲ್ (ಅಧ್ಯಯನ ವಿಭಾಗ)

ತುಳು ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ವಿಶೇಷ ಯುವ ಸಾಧಕ ರಾಜ್ಯ ಪುರಸ್ಕೃತರು

ಹರಿಪ್ರಸಾದ್ ನಂದಳಿಕೆ, ಚಿನ್ಮಯ್ ಮೋಹನ್ ಸಾಲಿಯಾನ್ ಮುಂಬೈ, ರಮಾನಂದ ಶೆಟ್ಟಿ ಒಮನ್ (ಹೊರ ರಾಷ್ಟ್ರ)

ತುಳು ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ವಿಶೇಷ ಬಾಲ ಪ್ರತಿಭಾ ರಾಜ್ಯ ಪುರಸ್ಕೃತರು

ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಜೀವಿಕಾ ಶೆಟ್ಟಿ ಮುಂಬೈ, ಸಾನ್ವಿ ಯುಎಸ್‌ಎ (ಹೊರ ರಾಷ್ಟ್ರ)

ತುಳು ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ವಿಶೇಷ ರಾಜ್ಯ ಮಾಧ್ಯಮ ಪುರಸ್ಕೃತರು
ಶಶಿ ಬಂಡಿಮಾರ್, ರೋನ್ಸ್ ಬಂಟ್ವಾಳ (ಹೊರರಾಜ್ಯ)

2020ನೇ ಸಾಲಿನ ವಿಶೇಷ ಸಂಘಟನಾ ರಾಜ್ಯ ಪುರಸ್ಕಾರ

ಜೈ ತುಳುನಾಡ್, ತುಳು ಕೂಟ ಫೌಂಡೇಶನ್ ನಾಲಸೋಪಾರ ಮುಂಬೈ, ತುಳು ಕೂಟ ಕತರ್ (ಹೊರ ರಾಷ್ಟ್ರ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು