‘ಡಿಸೆಂಡೆಂಟ್ಸ್ ಆಫ್ ದ ಸನ್’ ಮತ್ತು ‘ವಿನ್ಸೆಂಝೋ’ ಪ್ರೀತಿ ಮತ್ತು ಯುದ್ಧ
ಎರಡು ಕುತೂಹಲಕಾರಿ ಕೊರಿಯನ್ ಸರಣಿಗಳು
‘ಡಿಸೆಂಡೆಂಟ್ಸ್ ಆಫ್ ದ ಸನ್’ ಮತ್ತು ‘ವಿನ್ಸೆಂಝೋ’ ನೆಟ್‌ಫ್ಲಿಕ್ಸ್ ನಲ್ಲಿ ವೀಕ್ಷಕರನ್ನು ಸೆಳೆಯುತ್ತಿರುವ ಎರಡು ಜನಪ್ರಿಯ ಕೊರಿಯನ್ ಸಿರೀಸ್‌ಗಳು. ಈ ಎರಡು ಸಿರೀಸ್‌ಗಳ ನಾಯಕ ಪಾತ್ರವನ್ನು ನಿರ್ವಹಿಸಿರುವುದು ಕೊರಿಯನ್‌ನ ಜನಪ್ರಿಯ ನಟ ಸಾಂಗ್ ಜೂಂಗ್ ಕಿ. ಈ ಎರಡು ಸಿರೀಸ್‌ಗಳ ಮೂಲಕ ಹಲವು ಪ್ರಮುಖ ಸಿನೆಮಾ ಪ್ರಶಸ್ತಿಗಳನ್ನು ಈತ ತನ್ನದಾಗಿಸಿಕೊಂಡಿದ್ದಾನೆ. ‘ಡಿಸೆಂಡೆಂಟ್ಸ್ ಆಫ್ ದ ಸನ್’ 2016ರಲ್ಲಿ ಹರಿದು ಬಂದ ಸರಣಿ. ಒಟ್ಟು 16 ಸಂಚಿಕೆಗಳನ್ನು ಇದು ಹೊಂದಿದೆ. 2021ರಲ್ಲಿ ಸರಣಿ ರೂಪದಲ್ಲಿ ಹೊರ ಬಂದ ವಿನ್ಸೆಂರೆ 20 ಸಂಚಿಕೆಯನ್ನು ಹೊಂದಿದೆ. ‘ಡಿಸೆಂಡೆಂಟ್ಸ್ ಆಫ್ ದ ಸನ್’ ಕೊರಿಯಾದ ಸೇನೆಯ ಯೋಧರ ತ್ಯಾಗ ಬಲಿದಾನವನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದ ಪ್ರೇಮ ಕಥಾನಕ. ‘ವಿನ್ಸೆಂರೆ’ ದಕ್ಷಿಣ ಕೊರಿಯಾದ ಭ್ರಷ್ಟ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗೆ ಅನಿರೀಕ್ಷಿತವಾಗಿ ಪ್ರತಿರೋಧ ರೂಪದಲ್ಲಿ ನಿಲ್ಲುವ, ಇಟಲಿ ಮಾಫಿಯಾದ ಭಾಗವಾಗಿ ಕೆಲಸ ಮಾಡಿದ್ದ ‘ವಿನ್ಸೆಂರೆ’ ಎಂಬ ಪಾತ್ರವನ್ನು ಕೇಂದ್ರವಾಗಿಟ್ಟು ಹೆಣೆದ ಸರಣಿ.
ಡಿಸೆಂಡೆಂಟ್ಸ್ ಆಫ್ ದ ಸನ್
ಒಬ್ಬ ಯೋಧ ಮತ್ತು ವೈದ್ಯೆಯ ನಡುವಿನ ಪ್ರೇಮಕಥನವೇ ಡಿಸೆಂಡೆಂಟ್ಸ್ ಆಫ್‌ದ ಸನ್‌ನ ಮುಖ್ಯ ವಸ್ತು. ಆ ಎರಡೂ ಪಾತ್ರಗಳನ್ನು ಇಟ್ಟು ಜನರಿಗಾಗಿ, ನಾಡಿಗಾಗಿ ತಮ್ಮ ಬದುಕನ್ನು ಒತ್ತೆಯಿಟ್ಟ ಯೋಧರು ಮತ್ತು ವೈದ್ಯರ ಸೇವೆಯನ್ನು ಹೃದಯ ಸ್ಪರ್ಶಿಯಾಗಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಎರಡು ಸೇವೆಗಳೂ ಒಂದಕ್ಕಿಂತ ಒಂದು ಭಿನ್ನವಲ್ಲ ಎನ್ನುವುದನ್ನು ಹೇಳುವ ಪ್ರಯತ್ನ ಇಲ್ಲಿ ನಡೆಯುತ್ತದೆ. ದಕ್ಷಿಣ ಕೊರಿಯಾದ ಸ್ಪೆಶಲ್ ಫೋರ್ಸ್ ಯುನಿಟ್‌ನ ಕ್ಯಾಪ್ಟನ್ ಯೂ ಸಿ ಜಿನ್ ಮತ್ತು ಆತನ ಗೆಳೆಯ ಸಾರ್ಜೆಂಟ್ ಸಿಯೋ ಡಿಯೋ ಯಂಗ್ ಸರಣಿಯ ಮುಖ್ಯ ಪಾತ್ರಗಳು. ಇದೇ ಸಂದರ್ಭದಲ್ಲಿ ಡಾ. ಕಾಂಗ್ ಮೂ ಯಾನ್ ಎನ್ನುವ ವೈದ್ಯೆಯೊಬ್ಬಳ ಅನಿರೀಕ್ಷಿತ ಮುಖಾಮುಖಿ ಕ್ಯಾಪ್ಟನ್‌ನ ಬದುಕನ್ನೇ ಬದಲಿಸುತ್ತದೆ. ಅವರಿಬ್ಬರ ನಡುವಿನಲ್ಲಿ ಚಿಗುರೊಡೆಯುವ ಪ್ರೇಮ, ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಲೇ ಅದನ್ನು ಉಳಿಸಲು ಅವರು ನಡೆಸುವ ಸಂಘರ್ಷಗಳನ್ನು ನವಿರಾಗಿ ಕಟ್ಟಿಕೊಡಲಾಗಿದೆ. ದೃಶ್ಯದಿಂದ ದೃಶ್ಯಕ್ಕೆ, ಸಂಚಿಕೆಯಿಂದ ಸಂಚಿಕೆಗೆ ಅವರ ಪ್ರೇಮದ ಹರಿವು ನಮ್ಮೆಳಗೆ ಹಿಗ್ಗುತ್ತಾ ಹೋಗುತ್ತದೆ.
ಯೋಧನೊಬ್ಬನ ಹೊಣೆಗಾರಿಕೆ ಕೇವಲ ಯುದ್ಧವನ್ನು ಎದುರಿಸುವುದಷ್ಟೇ ಅಲ್ಲ. ಈ ನಿಟ್ಟಿನಲ್ಲಿ, ಸರಣಿಯಿಂದ ಸರಣಿಗೆ ಒಬ್ಬ ಯೋಧನ ಮುಂದಿರುವ ಸವಾಲುಗಳು ಹಿಗ್ಗುತ್ತಾ ಹೋಗುತ್ತದೆ. ಅವನಿಗೆ ಹೆಗಲಾಗುವ ವೈದ್ಯೆ ಡಾ. ಕಾಂಗ್ ಕೂಡ ದೇಶದ ರಕ್ಷಣೆಗೆ ಹಲವು ವ್ಯಾಖ್ಯಾನಗಳನ್ನು ನೀಡುತ್ತಾಳೆ. ಇವರಿಬ್ಬರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ಥ್ರಿಲ್ಲರ್ ರೂಪದಲ್ಲಿ ಕಟ್ಟಿಕೊಡಲಾಗಿದೆ. ಈ ಸಂದರ್ಭದಲ್ಲಿ ಅವರನ್ನು ಕಟ್ಟಿ ಹಾಕುವ ರಾಜಕೀಯ ಶಕ್ತಿಗಳು, ಪ್ರಭುತ್ವ , ಮಾಫಿಯಾ ಇವೆಲ್ಲವನ್ನೂ ಅತ್ಯಂತ ಪರಿಣಾಮಕಾರಿ ಯಾಗಿ ಸರಣಿಯೊಳಗೆ ಸೇರಿಸಲಾಗಿದೆ.
ದುಬೈ ದೊರೆಯ ಅನಿರೀಕ್ಷಿತ ಶಸ್ತ್ರ ಕ್ರಿಯೆ, ಈ ಸಂದರ್ಭದಲ್ಲಿ ಪೀಸ್‌ಮೇಕರ್ ಎಮರ್ಜೆನ್ಸಿ ವೈದ್ಯರ ತಂಡ ಮತ್ತು ದುಬೈ ದೊರೆಯ ಅಂಗರಕ್ಷಕರ ನಡುವಿನ ಸಂಘರ್ಷ, ವೈದ್ಯರಿಗೆ ಒತ್ತಾಸೆಯಾಗಿ ನಿಲ್ಲುವ ಯೋಧರು, ಒಂದು ಯುದ್ಧಕ್ಕೇ ಕಾರಣ ವಾಗಬಹುದಾದ ಒಂದು ಪ್ರಕರಣವನ್ನು ಕ್ಯಾಪ್ಟನ್ ಯೂ ಸಿ ಜಿನ್ ತನ್ನ ವೃತ್ತಿಯನ್ನೇ ಬಲಿಕೊಟ್ಟು ವೈದ್ಯರ ಜೊತೆಗೆ ನಿಲ್ಲು ವ ಪ್ರಕರಣ ಇಡೀ ಸರಣಿಗೆ ಹೊಸ ತಿರುವನ್ನು ನೀಡುತ್ತದೆ. ಇದಾದ ಬಳಿಕ ಭೂಕಂಪ, ಗ್ಯಾಂಗ್‌ಸ್ಟರ್‌ಗಳ ಮುಖಾಮುಖಿ, ಅಂತರ್‌ರಾಷ್ಟ್ರೀಯ ರಾಜಕೀಯ ಬೆಳವಣಿಗೆ ಇವೆಲ್ಲವನ್ನು ಹಂತ ಹಂತವಾಗಿ ಎದುರಿಸುತ್ತಾ ಹೋಗುವ ಯೋಧರು ಮತ್ತು ವೈದ್ಯಕೀಯ ತಂಡದ ಧೀರೋದ್ಧಾತ್ತ ಸಾಹಸಗಳು ವೀಕ್ಷಕರನ್ನು ಹಿಡಿದಿಡುತ್ತದೆ. ಇವೆಲ್ಲವನ್ನು ಪ್ರೀತಿಯ ಬೊಗಸೆಯಲ್ಲೇ ಸರಣಿ ಕಟ್ಟಿಕೊಡುತ್ತದೆ.
ವಿನ್ಸೆಂರೆ:
ಇಟಲಿ ಮಾಫಿಯಾದಿಂದ ಕೊರಿಯಾದ ಭ್ರಷ್ಟ ವ್ಯವಸ್ಥೆಯವರೆಗಿನ ‘ವಿನ್ಸೆಂರೆ’ನ ಪಯಣದ ಕತೆಯೇ ಈ ಸರಣಿ. ವಿನ್ಸೆಂರೆ ಇಟಲಿ ಮಾಫಿಯಾದ ಪ್ರತಿಷ್ಠಿತ ಲಾಯರ್. ತನ್ನ ದತ್ತು ತಂದೆಯನ್ನು ಕೊಂದವನ ಮೇಲೆ ಸೇಡು ತೀರಿಸಿ, ಮಲ ಸಹೋದರನ ಕೊಲೆ ಸಂಚಿನಿಂದ ಪಾರಾಗಿ, ಒಂದು ಪ್ರಮುಖ ಗುರಿಯನ್ನು ಇಟ್ಟುಕೊಂಡು ದಕ್ಷಿಣ ಕೊರಿಯಾಕ್ಕೆ ಆಗಮಿಸುತ್ತಾನೆ. ಆತನ ಗುರಿ, ಒಂದು ಫ್ಲಾಝಾದ ತಳಮಹಡಿಯಲ್ಲಿ ಬಚ್ಚಿಟ್ಟಿರುವ ನಿಧಿಯನ್ನು ಹೊರ ತೆಗೆಯುವುದು. ಅದಕ್ಕಾಗಿ ಆ ಫ್ಲಾಝಾದಲ್ಲಿ ಈಗಾಗಲೇ ವಾಸವಾಗಿರುವ ಕೆಲವು ಕುಟುಂಬಗಳನ್ನು ತೆರವು ಗೊಳಿಸಬೇಕು. ಆದರೆ ಆ ಫ್ಲಾಝಾವನ್ನು ಕೊರಿಯಾದ ಬಾಬೆಲ್ ಕಂಪೆನಿ ಅಕ್ರಮವಾಗಿ ಕೈವಶ ಮಾಡಿಕೊಳ್ಳುತ್ತದೆ. ಹೀಗೆ ವಿನ್ಸೆಂರೆ ಬದುಕು ಒಂದು ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ.
ಉದ್ಯಮ ಕ್ಷೇತ್ರದಲ್ಲಿ ಬಾಬೆಲ್ ಗ್ರೂಪ್‌ನ ಸರ್ವಾಧಿಕಾರ, ವೈದ್ಯಕೀಯ ಸಂಶೋಧನೆಯ ಅಕ್ರಮಗಳು, ಅದನ್ನು ಸುತ್ತಿಕೊಂಡಿರುವ ಕೊರಿಯಾದ ಭ್ರಷ್ಟ ರಾಜಕೀಯ ವ್ಯವಸ್ಥೆ ಇವೆಲ್ಲವನ್ನು ಈ ಸರಣಿಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಬಾಬೆಲ್ ಗ್ರೂಪ್‌ನ ವೈದ್ಯಕೀಯ ಸಂಶೋಧನೆಯ ಸಂತ್ರಸ್ತರ ಪರವಾಗಿ ಹೋರಾಟ ಮಾಡುವ ವಕೀಲ, ಭ್ರಷ್ಟ ಬಾಬೆಲ್ ಗ್ರೂಪ್‌ನ ಪರವಾಗಿ ವಾದ ಮಾಡುವ ಆ ವಕೀಲ ನ ಮಗಳು...ಇವರ ನಡುವೆ ನಿಧಿ ಅನ್ವೇಷಣೆಗೆ ಬಂದ ವಿನ್ಸೆಂರೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ನಿಧಾನಕ್ಕೆ ಅಲ್ಲಿನ ಜನರ ಬದುಕಿನಲ್ಲಿ ಒಂದಾಗುವ ಆತ, ಬಾಬೆಲ್ ಗ್ರೂಪ್‌ನ ವಿರುದ್ಧ ಸ್ಥಳೀಯ ಜನರ ಪರವಾಗಿ ಹೋರಾಟಕ್ಕಿಳಿಯುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಲ್ಲಿಂದ ಬಾಬೆಲ್ ಗ್ರೂಪ್ ಚೇರ್‌ಮೆನ್ ಮತ್ತು ವಿನ್ಸೆಂರೆ ನಡುವಿನ ಸಂಘರ್ಷ, ತಂತ್ರ- ಪ್ರತಿತಂತ್ರಗಳು ಸರಣಿಯನ್ನು ಅತ್ಯಂತ ಕುತೂಹಲಕಾರಿಯಾಗಿ ಮುನ್ನಡೆಸಿಕೊಂಡು ಹೋಗುತ್ತದೆ. ತಂದೆ - ಮಗಳು, ತಾಯಿ- ಮಗ, ಅಣ್ಣ-ತಮ್ಮ ಈ ಸಂಬಂಧಗಳ ನಡುವಿನ ತಿಕ್ಕಾಟವನ್ನೂ ಸರಣಿಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.ಬಹುಕಾಲ ಕಾಡುವ ಹಲವು ಹೃದಯಸ್ಪರ್ಶಿ ಈ ಸರಣಿಯಲ್ಲಿವೆ. ವಿನ್ಸೆಂರೆ ದಕ್ಷಿಣ ಕೊರಿಯಾ ಪ್ರವೇಶದ ಬಳಿಕ ಚಿತ್ರ ಅತ್ಯಂತ ನವಿರಾಗಿ ತೆರೆದುಕೊಳ್ಳುತ್ತದೆ. ಥ್ರಿಲ್ಲರ್ ವಸ್ತುವನ್ನು ತಿಳಿ ಹಾಸ್ಯದ ಮೂಲಕ ನಿರೂಪಿಸಲಾಗಿದೆ.
ಕುತೂಹಲಕಾರಿ ಅಂಶವೆಂದರೆ, ಡಿಸೆಂಡೆಂಟ್ಸ್ ಆಫ್ ದ ಸನ್ ಸರಣಿಯ ಪ್ರೀತಿ, ಪ್ರೇಮದ ಸಂವೇದನೆಗಳು ಭಾರತಕ್ಕೆ ಅದರಲ್ಲೂ ಬಾಲಿವುಡ್‌ಗೆ ತುಂಬಾ ಹತ್ತಿರದಲ್ಲಿದೆ. ಹಾಗೆಯೇ ದಕ್ಷಿಣ ಕೊರಿಯಾ ಭ್ರಷ್ಟ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಗಳ ಜೊತೆಗೂ ಜೊತೆಗೆ ಭಾರತದ ಸನ್ನಿವೇಶಗಳನ್ನು ತಾಳೆ ಹಾಕಬಹುದು. ಯಾವುದೇ ಅಶ್ಲೀಲಗಳಿಲ್ಲದ, ಹಿಂಸೆಯ ಅತಿರೇಕಗಳಿಲ್ಲದ ಎರಡೂ ಸರಣಿಗಳು ವೀಕ್ಷಕರನ್ನು ಮನರಂಜನೆಯ ದೃಷ್ಟಿಯಿಂದ ಎಲ್ಲೂ ನಿರಾಶೆಗೊಳಿಸುವುದಿಲ್ಲ. ಬಾಲಿವುಡ್‌ನ ಕೆಲವು ಅತಿಗಳು ಇಲ್ಲೂ ಇವೆಯಾದರೂ, ಅದು ನಮ್ಮ ಸಿನೆಮಾ ನೋಡುವ ಓಘಕ್ಕೆ ಯಾವ ಧಕ್ಕೆಯನ್ನೂ ತರುವುದಿಲ್ಲ. ಬಿಗಿ ಚಿತ್ರಕತೆಯೇ ಎರಡೂ ಸರಣಿಗಳ ಹೆಗ್ಗಳಿಕೆ.