‘ಸಾಹಿತ್ಯ ವಿಮರ್ಶೆ’ ಎಂಬುದು ಇದೆಯೇ?
ಸಾಹಿತ್ಯ ವಿಮರ್ಶೆ’ಯ ಬಗ್ಗೆ ನನಗಿರುವ ತಕರಾರು ಅನೇಕರಿಗೆ ಇಷ್ಟವಾಗುವುದಿಲ್ಲ ಎಂದು ನನಗೆ ಗೊತ್ತು. ಮುಖ್ಯವಾಗಿ ನನ್ನ ತಕರಾರು ಇರುವುದು ಕೃತಿಯ ಒಳಗೆ ಅರ್ಥ ಹುಡುಕುವ ‘ಪ್ರಾಯೋಗಿಕ ವಿಮರ್ಶೆ’ಯ ಬಗ್ಗೆ. ಈ ಬಗ್ಗೆ ಬೇರೊಂದು ಕಡೆ ವಿವರವಾಗಿಯೇ ಬರೆದಿದ್ದೇನೆ.
ವಿಮರ್ಶೆಯ ರೀತಿ ನೀತಿಯಲ್ಲಿ ಆಮೂಲಾಗ್ರವಾದ ಬದಲಾವಣೆ ಯೊಂದು ಕನ್ನಡದಲ್ಲಿ ಆಗಬೇಕಿದೆ. ನೀರಸವಾದ ಪತ್ರಿಕಾ ವಿಮರ್ಶೆಗಳು ಇದಕ್ಕೆ ಉತ್ತರವಲ್ಲ. ಒಂದು ಕೃತಿಯನ್ನು ಓದಿ ತನಗೆ ಏನನಿಸಿತು ಎಂಬ ಓದುಗನ ಅಭಿಪ್ರಾಯವಂತೂ ಎಲ್ಲೂ ದಾಖಲಾಗುವುದಿಲ್ಲ. ಅದು ಎಷ್ಟೇ ವೈಬ್ರೆಂಟ್ ಇದ್ದರೂ ತನ್ನ ಪಾಂಡಿತ್ಯವನ್ನು ಪ್ರದರ್ಶಿಸುವ ವಿಮರ್ಶಕನ ಮಾತುಗಳಿಗಿಂತ ಆತನ ಅಭಿಪ್ರಾಯವೇನೂ ಕಳಪೆ ಇರಲಾರದು.ಪೂರ್ಣಚಂದ್ರ ತೇಜಸ್ವಿ ಅವರ ‘ಅಬಚೂರಿನ ಪೋಸ್ಟ್ ಆಫೀಸು’, ‘ಅವನತಿ’ ಅಂತಹ ಅತ್ಯುತ್ತಮ ಕಥೆಗಳ ಬಗ್ಗೆ ವಿಮರ್ಶಕರು ಏಕೆ ಒಂದು ಮಾತನ್ನೂ ಆಡಲಿಲ್ಲ?
ಈ ಕಥೆಗಳನ್ನು ಓದಿದ ಸಾಮಾನ್ಯ ಓದುಗನ ಅಭಿಪ್ರಾಯಗಳು ದಾಖಲಾಗಿದ್ದರೆ ಹೇಗಿರುತ್ತಿತ್ತು? ಕನ್ನಡದಲ್ಲಿ ಹಾಗೆ ಆಗುವುದಿಲ್ಲ. ಆದರೆ ಯಾವುದೋ ವೈಯಕ್ತಿಕ ಕಾರಣಕ್ಕೋ, ತಮ್ಮವನೆಂಬ ಕಾರಣಕ್ಕೋ ಕೆಲವರು ಎತ್ತಿ ಹಿಡಿದ ಅನೇಕ ಕೃತಿಗಳು ಹಾಗೇ ಯಾರ ನೆನಪಿಗೂ ಬಾರದಂತೆ ಕತ್ತಲಿಗೆ ಸಂದುಹೋಗಿವೆ ಎಂಬುದೂ ಬಹಳ ಮುಖ್ಯ.ಒಂದು ಸಾಧಾರಣ ಕೃತಿಯನ್ನು ಹಾಗೆ ವಿಮರ್ಶಕರ ಸಹಾಯದಿಂದ ‘ಸಾರ್ವಕಾಲಿಕ ಕೃತಿ’ ಎಂದು ಎತ್ತಿ ಹಿಡಿಯಲಾಗುವುದಿಲ್ಲ.ಎತ್ತಿ ಹಿಡಿದರೂ ಒಂದು ಸಾರ್ವಕಾಲಿಕ ತೀರ್ಪಾಗಿ ಉಳಿಯುವುದಿಲ್ಲ.
ಕೆಳಗಿನ ಚಿತ್ರದಲ್ಲಿ ಗೋಪಾಲಕೃಷ್ಣ ಅಡಿಗರ ಕಾವ್ಯದ ಬಗ್ಗೆ ಯು.ಆರ್. ಅನಂತಮೂರ್ತಿ ಬಳಸಿರುವ ಚಮತ್ಕಾರಿಕ ಭಾಷೆಯನ್ನು ಗಮನಿಸಬಹುದು. ಒಂದು ಕಾಲಕ್ಕೆ ಈ ವಿಮರ್ಶೆಯನ್ನೂ ಹಾಡಿ ಹೊಗಳಲಾಯಿತು. ಆದರೆ ಅಲ್ಲಿ ಬಳಸಿರುವುದು ಸುಳ್ಳನ್ನು ಪ್ರತಿಪಾದಿಸುವ ಕೃತಕ ಭಾಷೆ ಎಂಬುದು ಇವತ್ತು ಗುಟ್ಟಾಗಿ ಉಳಿದಿಲ್ಲ.
ಶಿವರಾಮ ಕಾರಂತ ಮತ್ತು ಕುವೆಂಪು ತಮ್ಮ ಕೃತಿಗಳ ಮಹತ್ವ ಸಾರಲು ವಿಮರ್ಶಕರ ಸಹಾಯವನ್ನು ಎಂದೂ ಬಯಸಿದವರಲ್ಲ. ಇದು ಕುತೂಹಲಕಾರಿ ವಿಷಯ. ವಿಮರ್ಶಕರ ಬಗ್ಗೆ ಅವರಿಗೆ ಅಷ್ಟಾಗಿ ಗಮನವಿರಲಿಲ್ಲ. ಅವರು ತಮ್ಮ ಬರವಣಿಗೆ ಬಗ್ಗೆ ನಂಬಿಕೆ ಹೊಂದಿದ್ದವರಾಗಿದ್ದರು. ಅದೇ ಐವತ್ತರ ದಶಕದಲ್ಲಿ ಕಾಣಿಸಿಕೊಂಡ ನವ್ಯ ಸಾಹಿತ್ಯದ ವಕ್ತಾರರಿಗೆ ತಮ್ಮ ಕೃತಿಗಳ ಬಗೆಗಿನ ವಿಮರ್ಶೆಯೇ ಮುಖ್ಯವಾಗಿ ಬಿಟ್ಟಿತು. ‘ಕೃತಿಯನ್ನು ಬಗೆವ ಬಗೆ’ ಮುಂತಾದ ಹೆಸರಿನಲ್ಲಿ ಪ್ರಾಯೋಗಿಕ ವಿಮರ್ಶೆ ಚಾಲ್ತಿಗೆ ಬಂತು. ಅಡಿಗರ ‘ಸಾಕ್ಷಿ’ ಮತ್ತು ಅನಂತ ಮೂರ್ತಿಯವರ ‘ರುಜುವಾತು’ಪತ್ರಿಕೆಯಲ್ಲಿ ಈ ಬಗೆಯ ವಿಮರ್ಶೆಗಳು ಕಾಣಿಸಿಕೊಂಡವು.
ಅಂದಿನ ಪ್ರಾಯೋಗಿಕ ವಿಮರ್ಶಕರಿಗಂತೂ ತಾವು ಬಳಸುವ ವಿಮರ್ಶೆಯ ಪರಿಭಾಷೆ ತೀರಾ ಶ್ರೇಷ್ಠ ಎಂಬ ಕಲ್ಪನೆ ಇತ್ತು. ತಮ್ಮ ವಿಮರ್ಶೆಯ ಹತಾರಗಳಿಂದ ಎಂಥವರನ್ನೂ ಅತಿ ಮುಖ್ಯ ಲೇಖಕ ಎಂದು ಪ್ರತಿಷ್ಠಾಪಿಸಬಲ್ಲೆವೆಂದೂ ತಮಗೆ ಹಿತವೆನಿಸದವರನ್ನು ಮೂಲೆಗುಂಪು ಮಾಡಬಲ್ಲೆವೆಂದೂ ಅವರು ತಿಳಿದಿದ್ದರು.
ಆ ದಿಕ್ಕಿನಲ್ಲಿ ಅವರು ಕಾರ್ಯಪ್ರವರ್ತರಾದರು ಕೂಡ.ಜವರೇಗೌಡ ಅಂತಹ ವಂದಿಮಾಗಧರು ಮಾತ್ರ ಕುವೆಂಪು ಬಗ್ಗೆ ಬರೆಯಬಲ್ಲರು. ಹೀಗಾಗಿ ಅವರೆಲ್ಲ ಗಮನಕ್ಕೆ ಅರ್ಹರಲ್ಲ ಎಂಬ ಕುಚೋದ್ಯ ಕೂಡ ಅಂದು ಚಾಲ್ತಿಯಲ್ಲಿತ್ತು.ಸ್ವತ: ತಾವೇ ವಂದಿಮಾಗಧರೇ ಆಗಿದ್ದರೂ ತಾವು ಅತಿ ಸೂಕ್ಷ್ಮ ಜೀವಿಗಳು ಎಂಬ ಅಹಮಿಕೆ ಇಲ್ಲೆಲ್ಲ ಕೆಲಸ ಮಾಡಿದಂತೆ ತೋರುತ್ತದೆ. ಹೀಗಾಗಿ, ‘ಬ್ರಾಹ್ಮಣ ವಿಮರ್ಶಕ’ರು ‘ಬ್ರಾಹ್ಮಣ ಲೇಖಕ’ರ ಬಗ್ಗೆ ಅತಿಶಯೋಕ್ತಿಯಿಂದ ಬರೆಯುವ ಹೀನ ವಾತಾವರಣವೊಂದು ಅಂದು ನಿರ್ಮಾಣವಾಗಿತ್ತು.
ಇದನ್ನೆಲ್ಲ ನೋಡಿದ ಕುವೆಂಪು, ‘ನಾನೇರಿದ ಎತ್ತರಕ್ಕೆ ನೀ ಏರಬಲ್ಲೆಯಾ, ನಾ ಇಳಿವ ಆಳಕ್ಕೆ ನೀ ಇಳಿಯಬಲ್ಲೆಯಾ’ ಎಂದು ಬರೆದರು. ಕುವೆಂಪು ಮಾತು ಇಂದು ನಿಜವಾಗಿದೆ. ಕುವೆಂಪು ಅವರನ್ನು ಕವಿಯೇ ಅಲ್ಲ ಎಂದವರು ಎಂತಹ ಕುಬ್ಜರು ಎನ್ನುವುದು ತಿಳಿಯುವಂತಾಗಿದೆ. ಅಂದಿನ ನವ್ಯ ವಿಮರ್ಶಕರು ‘ಆಹಾ,ಇವೇ ಕನ್ನಡದ ಶ್ರೇಷ್ಠ ಕೃತಿಗಳು’ ಎಂದು ಸಾರಿದ ಹತ್ತು ಕೃತಿಗಳನ್ನು ಇಂದು ‘ತೂಕ’ಕ್ಕೆ ಹಾಕಿದರೆ, ಅವರು ಬೇಕೆಂದೇ ಕಡೆಗಣಿಸಿದ್ದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಹತ್ತಿರಕ್ಕೂ ಬರಲಾರವು ಎಂಬುದು ಅರಿವಿಗೆ ಬರುತ್ತಿದೆ.
ವಿಮರ್ಶಕರ ಬಗ್ಗೆ ಶಿವರಾಮ ಕಾರಂತರದೂ ಕಟುವಾದ ನಿಲುವು. ಕಾರಂತರು ಕುಂದಾಪುರ ಕನ್ನಡದಲ್ಲಿ ಕೃತಿರಚನೆ ಮಾಡಲು ಹೋಗಲಿಲ್ಲ ಎಂಬುದರ ಬಗ್ಗೆ ಕೆಲವರಿಗೆ ತಕರಾರು ಇತ್ತು.ಕೋಟದಲ್ಲಿ ಹುಟ್ಟಿಬೆಳೆದ ಅವರು ಕುಂದಾಪುರ ಭಾಷೆಯ ಪರಿಸರದಲ್ಲಿ ಬೆಳೆದಿದ್ದರೂ ಕೂಡ ಬಳಸಿದ್ದು ಶುದ್ಧ ಕನ್ನಡವನ್ನು. ಅವರೇ ಹೇಳಿಕೊಂಡಿರುವಂತೆ ಹೆಚ್ಚು ಓದುಗರನ್ನು ತಲುಪಬೇಕು ಎಂಬ ಕಾರಣಕ್ಕಾಗಿ.ಇದು ಸರಿಯಾದ ಮಾದರಿ ಅಂದೇನು ನಾನು ಹೇಳುವುದಿಲ್ಲ. ಆದರೆ ಓದುಗರ ಬಗ್ಗೆ ಅಷ್ಟೊಂದು ಗಮನ ಹರಿಸುತ್ತಿದ್ದ ಅವರು ತನ್ನ ಕಾದಂಬರಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ವಿಮರ್ಶಕರನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ ಎಂಬುದು ಕುತೂಹಲಕಾರಿ ಅಂಶ.ಓದುಗರು ಓದಿ ತಮ್ಮದೇ ರೀತಿಯಲ್ಲಿ ವಿಮರ್ಶೆ ಮಾಡಿಕೊಳ್ಳಲಿ ಎನ್ನುವುದು ಅವರ ನಿಲುವಿದ್ದಿರಬೇಕು.
‘ಪ್ರಾಯೋಗಿಕ ವಿಮರ್ಶೆ’ಎಂಬ ಹೆಸರಿನಲ್ಲಿ ನವ್ಯರು ಹುಟ್ಟುಹಾಕಿದ ಸಾಹಿತ್ಯ ವಿಮರ್ಶೆ ಮಾಡಿರುವ ಅಧ್ವಾನದ ಹಿನ್ನೆಲೆಯಲ್ಲಿ ಕಾರಂತರದು ಸರಿಯಾದ ನಿಲುವು ಎಂದೇ ನನಗನಿಸುತ್ತದೆ. ಕೃತಿಯ ಚೌಕಟ್ಟಿನೊಳಗೆ ಏನೆಲ್ಲ ಅರ್ಥ ಹುಡುಕುವ ವ್ಯರ್ಥ ಪ್ರಯತ್ನವನ್ನು ಪ್ರಾಯೋಗಿಕ ವಿಮರ್ಶಕರು ಮಾಡಿದರು.ಇದ್ದಕ್ಕಿದ್ದ ಹಾಗೆ ಕೆಲವು ಲೇಖಕರು ಅತಿ ಶ್ರೇಷ್ಠರು ಎಂದು ಅವರಿಗೆ ಅನಿಸಿಬಿಟ್ಟಿತು. ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿಕಟ್ಟುವ ಕೆಲಸವೂ ನಡೆಯಿತು.ಅನಂತಮೂರ್ತಿ ಈ ಪವಿತ್ರ ಕಾರ್ಯದ ಮುಂಚೂಣಿ ವಹಿಸಿಕೊಂಡರು.ಅಡಿಗ ಮತ್ತು ಅನಂತಮೂರ್ತಿಯವರ ಸ್ನೇಹ ಸಂಬಂಧ ಹೇಗೆ ಒಂದಿಡೀ ಸಾಹಿತ್ಯ ವಲಯವನ್ನು ಬಗ್ಗಡಗೊಳಿಸಿತು ಎಂಬುದು ಒಂದು ಕ್ಲಾಸಿಕ್ ಉದಾಹರಣೆ.ಆ ಕಾಲದ ಕೆಲವು ಸಾಹಿತಿಗಳು ತಮ್ಮದೇ ಕೃತಿಗಳ ಬಗ್ಗೆ ಮತ್ತು ಇತರರ ಕೃತಿಗಳ ಬಗ್ಗೆ ಮತ್ತು ಕೆಲವು ವಿಮರ್ಶಕರು ಗೊತ್ತಾದ ಕೆಲವು ಕೃತಿಗಳ ಬಗ್ಗೆ ಬರೆದಿರುವ ಅಷ್ಟೂ ವಿಮರ್ಶೆಗಳು ಇಂದು ಡೇಟೆಡ್ ಆಗಿರುವುದು ಇದೇ ಕಾರಣಕ್ಕೆ. ‘ಭೂಮಿ ಗೀತ’ದ ಬಗ್ಗೆ ಅನಂತಮೂರ್ತಿ ಬರೆದಿರುವ ಪ್ರಾಯೋಗಿಕ ವಿಮರ್ಶೆಯೂ ಇಂದು ಡೇಟೆಡ್.ಲೇಖನದ ಆರಂಭದಲ್ಲೇ ಅಡಿಗರು ಮುಖ್ಯ ಕವಿ,ಶ್ರೇಷ್ಠ ಕವಿ ಮುಂತಾಗಿ ಬಿರುದು ಬಾವಲಿ ಹಚ್ಚುವಲ್ಲಿನ ಅನಂತಮೂರ್ತಿ ಅವರ ತಹತಹ ಮರುಕಹುಟ್ಟಿಸುವಂತಿದೆ.ಸನಾತನ ತತ್ವಗಳನ್ನು ತನ್ನ ಕಾವ್ಯದಲ್ಲಿ ಎತ್ತಿ ಹಿಡಿದ ಅಡಿಗರ ಬಗ್ಗೆ, ‘ತತ್ವಕ್ಕಾಗಿ ಪ್ರಚಾರ ಮಾಡುವ ಆತ್ಮ ವಂಚನೆ’ ಅಡಿಗರದ್ದಲ್ಲ ಎಂದು ಎಷ್ಟು ಧೈರ್ಯದಿಂದ ಹೇಳಿದ್ದಾರೆ!ಆತ್ಮ ವಂಚನೆ ಎಂದರೆ ಇದೇ.
ಇಷ್ಟಿದ್ದೂ ಆ ಕಾಲದ ಯೋಚನೆಗಳ ಪಳೆಯುಳಿಕೆಗಳು ಇಂದು ಕೂಡ ಸಾಹಿತ್ಯ ವಲಯದಲ್ಲಿ ಚಾಲ್ತಿಯಲ್ಲಿವೆ.ನವ್ಯರು ಹಾಕಿಕೊಟ್ಟ ದಾರಿಯಲ್ಲಿ ಇಂಥಿಂಥವರು ಮಾತ್ರ ಶ್ರೇಷ್ಠರು ಎಂದು ನಂಬಿರುವವರ ದೊಡ್ಡ ಗುಂಪೂ ಇದೆ. ಪ್ರಪಂಚದಾದ್ಯಂತ ಕಾಣಿಸಿಕೊಂಡಿರುವ ಹೊಸ ವಿಚಾರಗಳತ್ತ ಕಣ್ಣು ಹೊರಳಿಸಲು ಹೆದರುವ ಗುಂಪು ಇದು.
ಸಾಹಿತ್ಯ ವಿಮರ್ಶೆ ಇರದ ಸಂದರ್ಭವನ್ನು ಇವರಿಗೆ ಊಹಿಸಲೂ ಆಗದು. ಇವರು ಸಾಹಿತಿಗಳಾಗಿ ಉಳಿದಿರುವುದೇ ಸ್ನೇಹಿತರಾದ ಸಾಹಿತ್ಯ ವಿಮರ್ಶಕರ ಕೃಪೆಯಿಂದ. ಪ್ರಜಾವಾಣಿಯಲ್ಲಿ ತಮ್ಮ ಕೃತಿಯ ಬಗ್ಗೆ ಬರಬಹುದಾದ ನಾಲ್ಕು ಸಾಲಿನ ವಿಮರ್ಶೆಗಾಗಿ ಕಾಯುವವರು ಇವರು.
ವಿಮರ್ಶೆಯ ಮಾತುಗಳು ಇರಬಾರದು ಎಂದು ನನ್ನ ಮಾತಿನ ಅರ್ಥವಲ್ಲ. ನಾಟಕವೊಂದರ ಪ್ರದರ್ಶನದ ಬಳಿಕದ ಮಾತುಕತೆಯನ್ನೇ ನೋಡಿ. ಪ್ರದರ್ಶನ ಚೆನ್ನಾಗಿತ್ತೋ ಇಲ್ಲವೋ ಇಷ್ಟವಾಯಿತೋ ಇಲ್ಲವೋ ಎಂಬಲ್ಲಿಗೆ ಅದು ಮುಗಿಯುತ್ತದೆ.ಅಲ್ಲಿನ ಕೊರತೆಗಳ ಬಗ್ಗೆ ಕಟು ಟೀಕೆಯೂ ವ್ಯಕ್ತವಾಗಬಹುದು. ಆದರೆ ಅದೊಂದು ಸಾರ್ವಕಾಲಿಕ ಅಭಿಪ್ರಾಯವಾಗಿರುವುದಿಲ್ಲ.
ಏಕೆಂದರೆ ಅದೇ ನಾಟಕದ ಮುಂದಿನ ಪ್ರದರ್ಶನ ಬೇರೆಯದೇ ಆಗಿರುತ್ತದೆ. ಸಿದ್ಧ ವಿಮರ್ಶೆಗೆ ಅದು ದಕ್ಕುವುದಿಲ್ಲ.ಅದು ರಟ್ಟಿನ ಒಳಗೆ ಕೂತ ಸಾಹಿತ್ಯವಲ್ಲ.ಪ್ರಯೋಗದಿಂದ ಪ್ರಯೋಗಕ್ಕೆ ಅದು ಬದಲಾಗುತ್ತಲೂ ಹೋಗಬಹುದು.ಮಾಡಿದ ಬದಲಾವಣೆ ಮೊದಲಿನ ಪ್ರಯೋಗದಷ್ಟು ಪರಿಣಾಮಕಾರಿ ಆಗದೆಯೂ ಇರಬಹುದು. ನಾಟಕ ಕೃತಿಯೂ ಕೂಡ ಹೀಗೆ ಪರಿಷ್ಕರಣೆಗೆ ಒಳಗಾಗುತ್ತಲೇ ಇರುವ ಉದಾಹರಣೆಗಳೂ ಇವೆ.
ಶೇಕ್ಸ್ ಪಿಯರ್ ಹೀಗೆ ತನ್ನ ನಾಟಕಗಳನ್ನು ತಿದ್ದಿ ಬರೆಯುತ್ತಿದ್ದ. ಎಲ್ಲ ಕಾಲಕ್ಕೂ ಸಲ್ಲುವ ಅರ್ಥ ಸಾಹಿತ್ಯ ಕೃತಿಯೊಂದರಲ್ಲಿ ಹುದುಗಿರುತ್ತದೆ ಎಂಬ ಸುಳ್ಳು ವ್ಯಾಖ್ಯಾನ ಎಷ್ಟು ಬೇಗ ಕಳಚಿಬಿದ್ದರೆ ಅಷ್ಟು ಒಳ್ಳೆಯದು. ಈಗಾಗಲೇ ವಿನಾಶದ ಅಂಚಿನಲ್ಲಿರುವ ಈ ಬಗೆಯ ’ಪ್ರಾಯೋಗಿಕ ವಿಮರ್ಶೆ’ಯ ಅಳಿವು ಎಷ್ಟು ಬೇಗ ಆಗುತ್ತದೋ ಅಷ್ಟು ಒಳ್ಳೆಯದು. ಆಗ ‘ಶ್ರೇಷ್ಠತೆಯ ವ್ಯಸನ’ವಿಲ್ಲದೆ ಸಾಹಿತ್ಯ ಕೃತಿಯೊಂದು ಓದುಗನಿಗೆ ತಾನಾಗಿ ದಕ್ಕುತ್ತದೆ. ನಾಟಕವೊಂದು ಪ್ರೇಕ್ಷಕರಿಗೆ ದಾಟಿದ ಹಾಗೆ. ಕುಮಾರವ್ಯಾಸನ ಕಾವ್ಯದ ಪಠಣ ಕೇಳುಗರಿಗೆ ದಾಟಿದ ಹಾಗೆ.
ಕೊನೆಯ ಮಾತು -
ನನಗೆ ಶಿವರಾಮ ಕಾರಂತ, ಕುವೆಂಪು, ಶೇಕ್ಸ್‌ಪಿಯರ್, ಬ್ರೆಕ್ಟ್, ನೆರೂಡ ಮುಂತಾದವರು ಯಾರೋ ಶ್ರೇಷ್ಠರೆಂದು ಹೇಳಿದ್ದರಿಂದ ಇಷ್ಟವಾದವರಲ್ಲ . ಓದುತ್ತಾ ಓದುತ್ತಾ ಇಷ್ಟವಾದವರು. ಯಾವುದೋ ಒಂದು ಕೃತಿಯಿಂದ ಹತ್ತಿರಾದವರಲ್ಲ. ಅವರ ಒಟ್ಟು ಕೃತಿಗಳು ಹೊರಡಿಸುವ ಚಿಂತನೆಯಿಂದ ಇಷ್ಟವಾದವರು.