ಮಹಿಷ ಮೂರ್ತಿಗೆ ಬಟ್ಟೆ ಮುಚ್ಚುವ ಮೂಲಕ ಸಂವಿಧಾನ, ಪ್ರಜಾಪ್ರಭುತ್ವದ ಕಗ್ಗೊಲೆ: ಜ್ಞಾನಪ್ರಕಾಶ್ ಸ್ವಾಮೀಜಿ ಆಕ್ರೋಶ
ವಿರೋಧದ ನಡುವೆಯೂ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ
ಮೈಸೂರು, ಸೆ.25: ಮಹಿಷನ ಹೆಸರಿನಲ್ಲೇ ಮೈಸೂರು ದಸರಾ ಆಚರಣೆ ಮಾಡುತ್ತಿದ್ದೇವೆ. ಆದರೆ ರಾಜ್ಯ ಸರಕಾರ ಅದೇ ಮಹಿಷ ಮೂರ್ತಿಗೆ ಬಟ್ಟೆ ಮುಚ್ಚುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತದ ವಿರೋಧದ ನಡುವೆಯೂ ನಗರದ ಅಶೋಕಪುರಂ ಉದ್ಯಾನವನದ ಅಂಬೇಡ್ಕರ್ ಪುತ್ಥಳಿ ಮುಂಭಾಗ ರವಿವಾರ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಹಿಷ ದಸರಾ ಉದ್ಘಾಟಿಸಿ ಫ್ಲೆಕ್ಸ್ ನಲ್ಲಿ ಮಾಡಿದ್ದ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದರು.
ಮಹಿಷ ಈ ನೆಲದ ಒಡೆಯನಾಗಿದ್ದು, ಆತನಿಗೆ ಗೌರವ ಕೊಡದ ಮೈಸೂರು ದಸರಾ ಅಪೂರ್ಣ. ಈ ನೆಲದ ಧರ್ಮವನ್ನು ಕಾಪಾಡುವುದು ನಮ್ಮ ಕರ್ತವ್ಯ. ಆದರೆ ಬಿಜೆಪಿ ಸರಕಾರ ಬಹುತ್ವ, ಸಂವಿಧಾನ ಮತ್ತು ಪ್ರಜಾಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರಕಾರ ಮಹಿಷ ದಸರಾ ಆಚರಣೆಗೆ ಅವಕಾಶ ನೀಡದೆ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚಿದ್ದಾರೆ. ಮುಖ್ಯಮಂತ್ರಿ, ರಾಷ್ಟ್ರಪತಿಯವರು ಚಾಮುಂಡೇಶ್ವರಿ ದರ್ಶನಕ್ಕೆ ಹೋಗುವಾಗ ಮಹಿಷನನ್ನು ದಾಟಿಕೊಂಡೇ ಹೋಗಬೇಕು ಎನ್ನುವುದು ನೆನಪಿರಲಿ ಎಂದರು. ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳು ಮಹಿಷ ದಸರಾ ಆಚರಣೆಗೆ ಅವಕಾಶ ನೀಡಿತ್ತು. ಬಿಜೆಪಿ ಸರಕಾರ ಪೊಲೀಸರನ್ನು ಮುಂದಿಟ್ಟು ಮಹಿಷ ದಸರಾ ಆಚರಣೆಗೆ ಅವಕಾಶ ನೀಡಿಲ್ಲ. ಎಷ್ಟು ದಿನ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚುತ್ತೀರಿ. ನಾಳೆಯೂ ಮುಚ್ಚುವಿರಾ? ಮುಂದೆ ಎಷ್ಟು ದಿನ ಮುಚ್ಚಿಸುತ್ತೀರಿ? ಎಂದು ಪ್ರಶ್ನಿಸಿದ ಜ್ಞಾನಪ್ರಕಾಶ್ ಸ್ವಾಮೀಜಿ, ಮೈಸೂರು ರಾಜರನ್ನು ಮಹಿಷ ಮಂಡಳಾಧೀಶ್ವರ ಬಹುಪರಾಕ್ ಎಂದು ಹೊಗಳಲಾಗುತ್ತಿತ್ತು. ಏಕೆ ಎನ್ನುವುದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ನಾವು ಚಾಮುಂಡಿಬೆಟ್ಟಕ್ಕೆ ಬಂದರೆ ತಡೆಯುತ್ತೀರಿ ಏಕೆ? ನೀವು ಅಸ್ಪೃಶ್ಯರು ಚಾಮುಂಡಿ ಬೆಟ್ಟಕ್ಕೆ ಬರಬೇಡಿ ಎಂದು ನೇರವಾಗಿ ಹೇಳಿಬಿಡಿ ನೋಡೋಣ. ಇಂದು ಮತ್ತು ನಾಳೆಯೂ ನಾವು ಚಾಮುಂಡಿಬೆಟ್ಟಕ್ಕೆ ಬರುತ್ತೇವೆ. ನಮ್ಮನ್ನು ತಡೆದರೆ ಪೊಲೀಸ್ ಆಯುಕ್ತರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಲ್ಲ ದೇವರು ಒಳ್ಳೆಯವರಲ್ಲ, ಎಲ್ಲ ರಾಕ್ಷಸರೂ ಕೆಟ್ಟವರಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಯ್ಯ ದೀಕ್ಷಿತ್ ಹೇಳಿದ್ದನ್ನು ಜ್ಞಾನಪ್ರಕಾಶ ಸ್ವಾಮೀಜಿ ಇದೇ ವೇಳೆ ನೆನಪಿಸಿದರು.
ಇದನ್ನೂ ಓದಿ: ಕರ್ತವ್ಯನಿರತ ಚಾಲಕ ವಿಶ್ರಾಂತಿಯಲ್ಲಿ ಸಾವನ್ನಪ್ಪಿದ್ದರೂ ವಿಮೆ: ಹೈಕೋರ್ಟ್
ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಉರಿಲಿಂಗಿ ಪೆದ್ದಿಮಠದ ಟಿ.ನರಸೀಪುರ ಶಾಖೆಯ ಸಿದ್ಧರಾಮ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಲೇಖಕ ಸಿದ್ದಸ್ವಾಮಿ, ಬಬಿತಾ, ನಗರಪಾಲಿಕೆ ಸದಸ್ಯೆ ಪಲ್ಲವಿ, ಬೇಗಂ, ಸೋಮಯ್ಯ ಮೆಲೆಯೂರು, ಜವರಪ್ಪಸೇರಿದಂತೆ ಹಲವರು ಉಪಸ್ಥಿತರಿದ್ದರು.
--------------------------------------------------------
''ಮಹಿಷ ಜೀವದ ವ್ಯಕ್ತಿ, ಚಾಮುಂಡೇಶ್ವರಿ ಕಾಲ್ಪನಿಕ ವ್ಯಕ್ತಿ, ಆ ಕಾಲ್ಪನಿಕ ವ್ಯಕ್ತಿ ಮನುಷ್ಯನನ್ನು ಕೊಲ್ಲಲು ಸಾಧ್ಯವೇ, ವೇದ ಪುರಾಣಗಳ ಮೂಲಕ ವೈದಿಕರು ಕಟ್ಟು ಕಥೆಯನ್ನು ಕಟ್ಟಿ ಮೂಲನಿವಾಸಿಗಳ ಆಚರಣೆಗೆ ಧಕ್ಕೆ ಉಂಟು ಮಾಡಿದ್ದಾರೆ. ಮಹಿ ಎಂದರೆ ಭೂಮಿ, ಸುರ ಎಂದರೆ ಶಿವ. ಮಹಿಷಾಸುರ ಈ ಮಂಡಲದ ರಾಜ''.
-ಪ್ರೊ.ಪಿ.ವಿ.ನಂಜರಾಜೇ ಅರಸು,ಇತಿಹಾಸ ತಜ್ಞ
----------------------------------------------------------------------
''ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಿ ಅವಮಾನ ಮಾಡಲಾಗಿತ್ತು. ಆದರೆ, ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಹೊಂದಿರುವ ಭಾರತದಲ್ಲಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಆಗಮಿಸುತ್ತಿರುವುದು ಸಂತೋಷದ ವಿಷಯ. ಇದು ನಮ್ಮ ಸಂವಿಧಾನದ ಶಕ್ತಿ. ದ್ರೌಪದಿ ಮುರ್ಮು ಕೂಡ ಬುಡಕಟ್ಟು ಜನಾಂಗದ ಮಹಿಳೆ ಅಂದರೆ, ನಮ್ಮ ಮಹಿಷಾಸುರನ ವಂಶಸ್ಥರು ಎನ್ನುವುದೂ ಕೂಡ ಹೆಮ್ಮೆಯ ವಿಷಯ''.
-ಜ್ಞಾನ ಪ್ರಕಾಶ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠ
----------------------------------------------------------------------------
''ಮಹಿಷ ಈ ಭೂಮಿಯ ಒಡೆಯ. ಅವನು ಕ್ರಿ.ಪೂ 3ನೇ ಶತಮಾನದಲ್ಲಿ ಮೈಸೂರನ್ನು ಆಳುತಿದ್ದ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ದಾಖಲೆಗಳಿವೆ. ಅವನು ಮೈಸೂರನ್ನು ಆಳುತ್ತಿದ್ದರಿಂದಲೇ ಮಹಿಷ ಮಂಡಲ ಎಂಬ ಹೆಸರು ಬಂತು. ಇವರು ಹೇಳುವ ಹಾಗೆ ಮಹಿಷ ರಾಕ್ಷಸ ಆಗಿದ್ದರೆ ದುಷ್ಟ ವ್ಯಕ್ತಿಯಾಗಿದ್ದರೆ ಮಹಿಷ ಮಂಡಲ ಎಂಬ ಹೆಸರನ್ನು ಇಡಲಾಗುತಿತ್ತೆ? ಎಲ್ಲಾದರೂ ಕೆಟ್ಟ ವ್ಯಕ್ತಿಯ ಹೆಸರನ್ನು ಒಂದು ಪ್ರದೇಶಕ್ಕೆ ಇಡುತಿದ್ದರೆ? ಇಂತಹ ವಿವೇಕ ನಮ್ಮನ್ನು ಆಳುವವರಿಗೆ ಇಲ್ಲವಲ್ಲ ಎಂಬ ನೋವಾಗುತ್ತದೆ''.
ಪ್ರೊ.ಕೆ.ಎಸ್.ಭಗವಾನ್, ಸಾಹಿತಿ