varthabharthi


ದಸರಾ ವಿಶೇಷ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಿಸಿದ ರಾಷ್ಟ್ರಪತಿ‌ ದ್ರೌಪದಿ ಮುರ್ಮು

ವಾರ್ತಾ ಭಾರತಿ : 26 Sep, 2022

ಮೈಸೂರು: ವಿಶ್ವವಿಖ್ಯಾತ ‘ಮೈಸೂರು ದಸರಾ -2022’ರ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆ ಹಾಗೂ ಮೈಸೂರಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಡಿ ಸೋಮಶೇಖರ್ ಉಪಸ್ಥಿತರಿದ್ದರು. 

ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯದವರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ನೃತ್ಯದ ಮೂಲಕ ಗಮನ ಸೆಳೆದರು.

ನಡೆಯಲಿರುವ ಕಾರ್ಯಕ್ರಮದ ಸಂಪೂರ್ಣ ವಿವರ: 

ದಸರಾ ಕಾರ್ಯಕಾರಿ ಸಮಿತಿ ಈ ಬಾರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕೈಗಾರಿಕಾ ದಸರಾ, ಚಲನಚಿತ್ರೋತ್ಸವ, ಫಲ ಪುಷ್ಪ ಮೇಳ, ಕುಸ್ತಿ ಪಂದ್ಯಾಟ, ಕಲಾ ಪ್ರದರ್ಶನ, ಮೈಸೂರು ದೀಪಾಲಂಕಾರ, ದಸರಾ ವಸ್ತುಪ್ರದರ್ಶನಗಳು ಉದ್ಘಾಟನೆಗೊಳ್ಳಲಿವೆ.

ಇತರ ಪ್ರಮುಖ ಕಾರ್ಯಕ್ರಮಗಳಲ್ಲಿ ಮಹಿಳಾ ಉದ್ಯಮಿಗಳು ತಯಾರಿಸಿದ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ, ಅರಮನೆಯ ಎದುರು ಯೋಗ ಸಂಭ್ರಮ, ಕೋಟೆ ಆಂಜನೇಯ ದೇವಾಲಯದಲ್ಲಿ ದಸರಾ ದರ್ಶನ, ಟೌನ್‍ಹಾಲ್‍ನಲ್ಲಿ ಹೆರಿಟೇಜ್ ಸೈಕ್ಲಿಂಗ್, ಜಗನ್ಮೋಹನ ಪ್ಯಾಲೇಸ್‍ನಲ್ಲಿ ಮಕ್ಕಳ ದಸರಾ, ಕ್ಲಾಸಿಕ್ ಸಭಾಗೃಹದಲ್ಲಿ ಉರ್ದು ಕವಿಗೋಷ್ಠಿಯಂಥ ಕಾರ್ಯಕ್ರಮಗಳು ನಡೆಯಲಿವೆ.

ಸೆಪ್ಟೆಂಬರ್ 30ರಂದು ಸಾಂಪ್ರದಾಯಿಕ ಟೋಂಗಾ ಸವಾರಿ, ಅರಮನೆ ಆವರಣದಲ್ಲಿ ಯೋಗ ಪ್ರದರ್ಶನ ನಡೆಯಲಿದೆ. ಅಕ್ಟೋಬರ್ 2ರಂದು ಹೆರಿಟೇಜ್ ವಾಕ್, ಕೃಷಿಕರ ಕ್ರೀಡಾಕೂಟ, ಪೊಲೀಸ್ ಬ್ಯಾಂಡ್ ನಡೆಯಲಿದೆ. ಅಕ್ಟೋಬರ್ 30ರಂದು ಚಾಮುಂಡಿ ಬೆಟ್ಟದಲ್ಲಿ ಯೋಗ ಚಾರಣ ನಡೆಯಲಿದೆ. ಒಟ್ಟು 50 ಲಕ್ಷ ಮಂದಿ ಹತ್ತು ದಿನಗಳ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ದಸರಾ ವಿಶೇಷಾಧಿಕಾರಿ ಮತ್ತು ಜಿಲ್ಲಾಧಿಕಾರಿ ಬಗದಿ ಗೌತಮ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)