varthabharthi


ಬೆಂಗಳೂರು

ವಿಧಾನ ಸೌಧ ಮುತ್ತಿಗೆ ಯತ್ನ: ರೈತ ನಾಯಕರು ವಶಕ್ಕೆ

ವಾರ್ತಾ ಭಾರತಿ : 26 Sep, 2022

ಬೆಂಗಳೂರು, ಸೆ. 26: ‘2022ರ ವಿದ್ಯುತ್ ಕಾಯ್ದೆ ಖಾಸಗಿಕರಣ ತಿದ್ದುಪಡಿ ಕೈಬಿಡಬೇಕು ಹಾಗೂ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ವಿಧಾನಸೌಧ ಚಲೋ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ ರೈತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಸೋಮವಾರ ನಗರದ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದ ಬಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ರೈತ ನಾಯಕರು ವಿಧಾನಸೌಧ ಚಲೋ ನಡೆಸಿ, ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದ ಬಳಿಯಿಂದ ವಿಧಾನಸೌಧ ಮುತ್ತಿಗೆಗೆ ಯತ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ರೈತ ನಾಯಕರಾದ ಜಗಜೀತಸಿಂಗ್ ದಲ್ಲೇವಾಲ, ಶಿವಕುಮಾರ, ದೈವಸಿಗಾಮಣಿ, ಕೆ.ವಿ.ಬಿಜು, ಅಭಿಮನ್ಯುಕೊಹಾರ ಸೇರಿದಂತೆ ನೂರಾರು ರೈತರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು.

ಅತಿವೃಷ್ಟಿಯಿಂದ ರಾಜ್ಯದಲ್ಲಿ ಅಂದಾಜು 10 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಆದರೆ, ಕೇಂದ್ರ ತಂಡ ನಾಮಕಾವಸ್ತೆ ಪರಿಶೀಲನೆ ನಡೆಸಿದೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆ ಹಾನಿ ಆಗಿರುವ ಹಳ್ಳಿಗಳಿಗೆ ಭೇಟಿ ನೀಡಿ, ಬೆಳೆ ನಷ್ಟದ ಬಗ್ಗೆ ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸಿ, ನಷ್ಟದ ಅಂದಾಜಿನ ಸಂಪೂರ್ಣ ಪರಿಹಾರ ನೀಡಲು ಮುಂದಾಗಬೇಕು ಎಂದು ರೈತರು ಒತ್ತಾಯಿಸಿದರು.

ರೈತರಿಗೆ ಭಿಕ್ಷೆ ರೂಪದ ಪರಿಹಾರ ಬೇಡ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಯದರ್ಶಿಗಳು ಹಾನಿಗೆ ಒಳಗಾದ ಹಳ್ಳಿಗಳಿಗೆ ಕೂಡಲೇ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಹೋರಾಟಗಾರರು, ಅತಿವೃಷ್ಟಿ, ಮಳೆ ಹಾನಿ, ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರ ಸಾಲ ವಸೂಲಾತಿ ನಿಲ್ಲಿಸಿ, ಆರ್‍ಬಿಐ ನಿಯಮದಂತೆ ಇರುವ ಸಾಲದ ಮೇಲೆ ಶೇ.25ರಷ್ಟು ಹೆಚ್ಚುವರಿ ಸಾಲ ಕೊಡಿಸಬೇಕು ಎಂದು ಆಗ್ರಹಿಸಿದರು.

ವಿಧಾನಸೌಧ ಚಲೋ ಹೋರಾಟವನ್ನುದ್ದೇಶಿಸಿ ಮಾತನಾಡಿದ ಕುರಬುರು ಶಾಂತಕುಮಾರ್, ದೇಶದಲ್ಲಿ ಮೂರುವರೆ ಲಕ್ಷ ರೈತರು ಕೃಷಿ ಸಂಕಷ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಕೊರೊನಾ ಲಾಕ್‍ಡೌನ್, ಅತಿವೃಷ್ಟಿ, ಮಳೆ ಹಾನಿ ಸಂಕಷ್ಟದಿಂದ ನಲುಗಿದ್ದಾರೆ. ಆದಕಾರಣ ದೇಶದ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ರೀತಿಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಮಾಡಲು ಸಮಿತಿ ರಚಿಸಿದ್ದೇವೆ ಎನ್ನುತ್ತಲೇ ವರ್ಷಗಳ ಕಾಲ ಹೋರಾಟ ಮಾಡಿದ ರೈತ ಮುಖಂಡರನ್ನು ಹೊರಗಿಟ್ಟು ಸಮಿತಿ ರಚಿಸಿ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಎಲ್ಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಬೆಲೆ ಕಾತರಿ ಕಾನೂನು ಜಾರಿಗೆ ತಂದು, ಡಾ.ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು ಎಂದು ಆಗ್ರಹಿಸಿದರು.
 

ರೈತರ ಬಂಧನ ಖಂಡಿಸಿ ಹರಿಯಾಣ-ಪಂಜಾಬ್‍ನಲ್ಲಿ ರಸ್ತೆ ತಡೆ: ಕರ್ನಾಟಕದಲ್ಲಿ ಕಬ್ಬು ಬೆಳೆಗೆ ದರ ನಿಗದಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ಬಂಧಿಸಿದ್ದು, ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಹರಿಯಾಣ-ಪಂಚಾಬ್ ರೈತರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದಲ್ಲಿ ವಿಧಾನಸೌಧ ಚಲೋ ನಡೆಸಿದ ಪ್ರತಿಭಟನೆಯ ವೇಳೆ ಪೊಲೀಸರು ರೈತ ನಾಯಕರನ್ನು ಬಂಧಿಸಿದ್ದರು. ರಾಷ್ಟ್ರೀಯ ರೈತ ಮುಖಂಡ ಪಂಜಾಬಿನ ಜಗಜೀತ್ ಸಿಂಗ್ ದಲ್ಲೇವಾಲ, ಮಧ್ಯಪ್ರದೇಶದ  ಶಿವಕುಮಾರ ಕಕ್ಕಾಜಿ, ತಮಿಳುನಾಡಿನ ದೈವಸಿಗಾಮಣಿ ಮತ್ತು ರಾಮನ ಗೌಂಡರ್ ಸೇರಿದಂತೆ ಹಲವರನ್ನು ಬಂಧಿಸಿ ಕೋರಮಂಗಲದ ಆಡುಗೋಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಈ ವಿಚಾರ ತಿಳಿದ ಹರಿಯಾಣ ಮತ್ತು ಪಂಜಾಬ್ ಹಾಗೂ ಹಲವು ರಾಜ್ಯಗಳ ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)