ಉದ್ಯೋಗ ಯೋಜನೆಯ ಸಮರ್ಪಕ ಜಾರಿ ಏಕೆ ಸಾಧ್ಯವಾಗುತ್ತಿಲ್ಲ?
ನರೇಗಾ ಕಾನೂನಿನ ಪ್ರಕಾರ 15 ದಿನಗಳೊಳಗೆ ವೇತನ ಪಾವತಿಸಬೇಕು ಮತ್ತು ಇದಕ್ಕಿಂತ ವಿಳಂಬವಾದರೆ ಪರಿಹಾರ ರೂಪದಲ್ಲಿ ಹೆಚ್ಚುವರಿ ಪಾವತಿ ಮಾಡಬೇಕು. ಆದರೆ ಇದನ್ನು ಯಾವತ್ತೂ ನೀಡಲಾಗಿಲ್ಲ. ನರೇಗಾದಲ್ಲಿ ಸಕಾಲಿಕ ವೇತನದ ಸರಿಯಾದ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಇದಕ್ಕಾಗಿ ಸೂಕ್ತ ಬಜೆಟ್ ಅನ್ನು ಖಾತರಿಪಡಿಸುವ ತುರ್ತು ಅಗತ್ಯವಿದೆ.
ಭಾರತದಲ್ಲಿ ವ್ಯಾಪಕವಾಗಿ ಚರ್ಚಿಸಲಾಗುವ ಗ್ರಾಮೀಣ ಉಪಕ್ರಮಗಳಲ್ಲಿ ಒಂದಾದ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ನರೇಗಾ)ಯು ಗ್ರಾಮೀಣ ಅಭಿವೃದ್ಧಿಯ ವಿವಿಧ ಕಾರ್ಯದಲ್ಲಿ ಉದ್ಯೋಗದ ಖಾತರಿಯನ್ನು ನೀಡುತ್ತದೆ. ಹೆಚ್ಚು ಉಪಯುಕ್ತವಾದ ಕಾರ್ಯಗಳನ್ನು ನಿರ್ವಹಿಸುವಾಗ ಇದು ಕಾರ್ಮಿಕರು ಮತ್ತು ರೈತರಿಗೆ ನಿಜವಾದ ಪ್ರಯೋಜನಗಳನ್ನು ನೀಡುತ್ತದೆ(ಜಲ ಸಂರಕ್ಷಣೆಯ ರೀತಿ). ಪ್ರಾಯೋಗಿಕವಾಗಿ ಅದರ ಅನುಷ್ಠಾನವು ಬಜೆಟ್ ಹಂಚಿಕೆಗಿಂತ ಸಾಕಷ್ಟು ಕಡಿಮೆ ಇರುವುದರಿಂದ ಕಾನೂನುಬದ್ಧವಾಗಿ ಖಾತರಿಪಡಿಸಿದ ಉದ್ಯೋಗಕ್ಕಿಂತ ಕಡಿಮೆ ಲಭ್ಯತೆ, ಕಡಿಮೆ ವೇತನ ಮತ್ತು ಈ ವೇತನಗಳ ಪಾವತಿಯಲ್ಲಿ ದೀರ್ಘ ವಿಳಂಬವನ್ನು ಉಂಟು ಮಾಡುತ್ತದೆ. ಸೆಪ್ಟಂಬರ್ 21-23ರ ಅವಧಿಯಲ್ಲಿ ನರೇಗಾ ಕಾರ್ಯಕರ್ತರು ಮತ್ತು ಅವರ ಸಂಘಟನೆಗಳನ್ನು ಒಳಗೊಂಡ ಹಲವಾರು ಪ್ರದರ್ಶನಗಳು, ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳು ಭಾರತದ ವಿವಿಧೆಡೆ ನಡೆದವು. ದೇಶದಾದ್ಯಂತ ನರೇಗಾ ಕಾರ್ಯಕರ್ತರೊಂದಿಗೆ ಕೆಲಸ ಮಾಡುವ ನರೇಗಾ ಸಂಘರ್ಷ ಮೋರ್ಚಾ(ಎನ್ಎಸ್ಎಂ) ಕರೆಯಂತೆ ಈ ಪ್ರದರ್ಶನಗಳು ನಡೆದವು. ಎನ್ಎಸ್ಎಂ ಪ್ರಕಾರ ಈ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರದಿಂದ 2,800 ಕೋಟಿ ರೂ. ಮತ್ತು ಈ ಹಿಂದಿನ ಆರ್ಥಿಕ ವರ್ಷದಲ್ಲಿ 1,984 ಕೋಟಿ ರೂ. ಪಾವತಿಗೆ ಬಾಕಿಯಿದೆ. ಬಜೆಟ್ ಹಂಚಿಕೆ ಎಷ್ಟೊಂದು ಅಸಮರ್ಪಕವಾಗಿದೆ ಎಂದರೆ ಆರ್ಥಿಕ ವರ್ಷದ ಆರಂಭಿಕ 5 ತಿಂಗಳಲ್ಲೇ ಸುಮಾರು ಶೇ.77ರಷ್ಟು ಅನುದಾನ ಖರ್ಚಾಗಿದೆ. ಕಾನೂನು ನಿಬಂಧನೆಗಳಿಗೆ ವಿರುದ್ಧವಾಗಿ, ವೇತನ ಪಡೆಯುವಲ್ಲಿ ದೀರ್ಘ ವಿಳಂಬದಿಂದಾಗಿ ನರೇಗಾ ಕಾರ್ಯಕರ್ತರು ಸಮಸ್ಯೆಗೆ ಸಿಲುಕಿದ್ದಾರೆ. 3 ದಿನಗಳ ಪ್ರತಿಭಟನೆಯ ಬಳಿಕ ಎನ್ಎಸ್ಎಂ ಅನುಷ್ಠಾನ ಹಂತದಲ್ಲಿ ಪ್ರಮುಖ ಸುಧಾರಣೆಗಾಗಿ ಕೇಂದ್ರ ಸರಕಾರಕ್ಕೆ ಜ್ಞಾಪನ ಪತ್ರವನ್ನು ಸಲ್ಲಿಸಿದೆ. ಸುಮಾರು 16 ವರ್ಷಗಳ ಹಿಂದೆ ಜಾರಿಗೆ ಬಂದ ನರೇಗಾ ಯುಪಿಎ/ಕಾಂಗ್ರೆಸ್ ಸರಕಾರದ ಅತ್ಯಂತ ಮಹತ್ವದ ಸಾಧನೆ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. ಅನೇಕ ದೇಶಗಳಲ್ಲಿ ಆಡಳಿತವು ಅಂತಹ ಜವಾಬ್ದಾರಿಗಳಿಂದ ಹಿಂದೆ ಸರಿಯುವ ಸಮಯದಲ್ಲಿ, ಇದು ಅಂತರ್ರಾಷ್ಟ್ರೀಯವಾಗಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಜಗತ್ತಿನಲ್ಲಿ ಅತ್ಯಂತ ಮಹತ್ವದ ಉಪಕ್ರಮವೆಂದು ಪರಿಗಣಿಸಲಾಗಿದೆ. ಎನ್ಆರ್ಇಜಿಎ(ನರೇಗಾ) ಬಗ್ಗೆ ಎನ್ಡಿಎ/ಬಿಜೆಪಿ ಆಡಳಿತದ ಆರಂಭಿಕ ಪ್ರತಿಕ್ರಿಯೆ ನಿರುತ್ಸಾಹದಾಯಕವಾಗಿತ್ತು, ಆದರೆ ಇದರ ಮಹತ್ವವನ್ನು ತಿಳಿಸುವ ಸಲಹೆಯ ಕಾರಣ ಇದನ್ನು ಮುಂದುವರಿಸಲಾಯಿತು. ಕೋವಿಡ್ ಸಂದರ್ಭದಲ್ಲಿ, ವಲಸೆ ಕಾರ್ಮಿಕರು ತಮ್ಮ ತಮ್ಮ ಗ್ರಾಮಗಳಿಗೆ ಹತಾಶ ಸ್ಥಿತಿಯಲ್ಲಿ ಮರಳಿದಾಗ ಅವರಿಗೆ ಕಷ್ಟದ ಸಮಯದಲ್ಲಿ ಬದುಕುಳಿಯುವ ಪ್ರಮುಖ ಸಾಧನವಾಗಿ ಇದರ ಮಹತ್ವವನ್ನು ಬಹುತೇಕ ಎಲ್ಲರೂ ಅಂಗೀಕರಿಸಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ನರೇಗಾಕ್ಕೆ ಅನುದಾನ ಹಂಚಿಕೆಯನ್ನು ಹೆಚ್ಚಿಸಿದ್ದು ಸರಕಾರ ಘೋಷಿಸಿದ ವಿಶೇಷ ಕೋವಿಡ್ ಪ್ಯಾಕೇಜ್ನ ಪ್ರಮುಖ ಅಂಶವಾಗಿತ್ತು.
ಇದರ ಪರಿಣಾಮ, ಈ ವರ್ಷ ನರೇಗಾ ಹಂಚಿಕೆ 1,11,000 ಕೋಟಿ ರೂ.ಗೆ ತಲುಪಿದೆ. ಆದರೆ ಹೆಚ್ಚಿಸಿದ ಹಂಚಿಕೆಯನ್ನು 2020-21ರ ಆರ್ಥಿಕ ವರ್ಷದಲ್ಲೂ ಉಳಿಸಿಕೊಳ್ಳಬೇಕೆಂಬ ಬೇಡಿಕೆ ಹಾಗೂ ನಿರೀಕ್ಷೆಯಿತ್ತು. ಆದರೆ ಹಂಚಿಕೆಯನ್ನು ಕೇವಲ 73,000 ಕೋಟಿ ರೂ.ಗೆ ಇಳಿಸಲಾಗಿದೆ. ನಿರೀಕ್ಷಿಸಿದಂತೆಯೇ ಇದರಿಂದಾಗಿ ಪೂರೈಸದ ಬೇಡಿಕೆ ಹಾಗೂ ಕೂಲಿ ಪಾವತಿಯ ವಿಳಂಬದಂತಹ ಸಮಸ್ಯೆ ಸೃಷ್ಟಿಯಾಗಿದೆ. ಬಳಿಕ ಸರಕಾರ 25,000 ಕೋಟಿ ರೂ. ಹೆಚ್ಚುವರಿ ಹಂಚಿಕೆ ಮಾಡಿದ ಕಾರಣ 2021-22ರಲ್ಲಿ ಹಂಚಿಕೆ 98,000 ಕೋಟಿ ರೂ.ಗೆ ತಲುಪಿದೆ. ಹೀಗೆ, ಹೆಚ್ಚಿಸಿದ ಅಥವಾ ಪರಿಷ್ಕರಿಸಿದ ಹಂಚಿಕೆ ಮೊತ್ತವೂ ಈ ಹಿಂದಿನ ವರ್ಷ ಖರ್ಚು ಮಾಡಿದ ಮೊತ್ತಕ್ಕಿಂತ ಕಡಿಮೆಯಾಗಿದ್ದರೆ, ಹಂಚಿಕೆ ಹೆಚ್ಚಿಸುವಲ್ಲಿನ ವಿಳಂಬವು ವೇತನ ವಿಳಂಬದಂತಹ ತಪ್ಪಿಸಬಹುದಾಗಿದ್ದ ಸಮಸ್ಯೆಯನ್ನು ಸೃಷ್ಟಿಸಿದೆ. ಆರ್ಥಿಕ ವರ್ಷಾಂತ್ಯಕ್ಕೆ ವೇತನ ಪಾವತಿಯ ಬಾಕಿ ಅಥವಾ ಆಂಶಿಕ ವೇತನ ಪಾವತಿಯಂತಹ ಸಮಸ್ಯೆ ಉಂಟಾಗಿದೆ. ಈ ವರ್ಷವೂ ಬಜೆಟ್ ಮಂಡನೆಯ ಸಂದರ್ಭ ಕಳೆದ ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ, ಕೇವಲ 73,000 ಕೋಟಿ ರೂ. ಮೊತ್ತ ಹಂಚಿಕೆಯಾಗಿದೆ. ‘ಪೀಪಲ್ಸ್ ಆ್ಯಕ್ಷನ್ ಫಾರ್ ಎಂಪ್ಲಾಯ್ಮೆಂಟ್ ಗ್ಯಾರಂಟಿ(ಪಿಎಇಜಿ)’ ಎಂಬ ಸಂಸ್ಥೆ ನಡೆಸಿರುವ ಲೆಕ್ಕಾಚಾರದ ಪ್ರಕಾರ, ಹಿಂದಿನ ವರ್ಷದಂತೆ ಅಷ್ಟೇ ಸಂಖ್ಯೆಯ ಜನರು ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ಈ ಹಂಚಿಕೆಯು ವರ್ಷದಲ್ಲಿ ಕೇವಲ 21 ದಿನ ಉದ್ಯೋಗ ಒದಗಿಸಲು ಸಾಲುತ್ತದೆ(ಕಾನೂನಿನ ಪ್ರಕಾರ ವರ್ಷಕ್ಕೆ 100 ದಿನದ ಉದ್ಯೋಗ ಒದಗಿಸಬೇಕು). ಈ ಹಿನ್ನೆಲೆಯಲ್ಲಿ, ಈ ವರ್ಷದ ಮಾರ್ಚ್ ಮಧ್ಯಭಾಗದಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಗಾಗಿನ ಸಂಸತ್ನ ಸ್ಥಾಯಿ ಸಮಿತಿಯ ವರದಿಯನ್ನು ಗಮನಿಸುವ ಅಗತ್ಯವಿದೆ. ನರೇಗಾ ಜಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು ವೇತನ ಪಾವತಿಸುವಲ್ಲಿ ವಿಳಂಬವಾಗಿದೆ ಎಂದು ಸಮಿತಿ ಹೇಳಿದೆ. ಭ್ರಷ್ಟಾಚಾರದಿಂದಾಗಿ ‘ನಿಜವಾದ’ ಕೆಲಸಗಾರರಿಗೆ ಕಡಿಮೆ ಹಣ ದೊರಕುವ ಬಗ್ಗೆ ಹೇಳಿದೆ. ಮಸ್ಟರ್ ರೋಲ್(ಹಾಜರಾತಿ ಪಟ್ಟಿ)ನ್ನು ವಿಳಂಬವಾಗಿ ಅಪ್ಲೋಡ್ ಮಾಡುತ್ತಿರುವುದು ವೇತನ ವಿಳಂಬಕ್ಕೆ ಕಾರಣ, ಸೂಕ್ತ ಅನುದಾನ ಸಕಾಲಿಕವಾಗಿ ಲಭ್ಯವಾಗದಿರುವುದು ಹಲವು ಸಮಸ್ಯೆಗಳಿಗೆ ಕಾರಣ ಎಂದು ಹೇಳಿದೆ. ನರೇಗಾ ಕಾನೂನಿನ ಪ್ರಕಾರ 15 ದಿನಗಳೊಳಗೆ ವೇತನ ಪಾವತಿಸಬೇಕು ಮತ್ತು ಇದಕ್ಕಿಂತ ವಿಳಂಬವಾದರೆ ಪರಿಹಾರ ರೂಪದಲ್ಲಿ ಹೆಚ್ಚುವರಿ ಪಾವತಿ ಮಾಡಬೇಕು. ಆದರೆ ಇದನ್ನು ಯಾವತ್ತೂ ನೀಡಲಾಗಿಲ್ಲ. ನರೇಗಾದಲ್ಲಿ ಸಕಾಲಿಕ ವೇತನದ ಸರಿಯಾದ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಇದಕ್ಕಾಗಿ ಸೂಕ್ತ ಬಜೆಟ್ ಅನ್ನು ಖಾತರಿಪಡಿಸುವ ತುರ್ತು ಅಗತ್ಯವಿದೆ.
ಕೃಪೆ: countercurrents.org